varthabharthi


ಕಾಲಂ 9

UAPA ರದ್ದಾಗದೆ ಈ ದೇಶದಲ್ಲಿ ಪ್ರಜಾತಂತ್ರ ಉಳಿಯದು!

ವಾರ್ತಾ ಭಾರತಿ : 28 Oct, 2020
ಶಿವಸುಂದರ್

UAPAಯು ಸಹಜ ನ್ಯಾಯ ಸಿದ್ಧಾಂತದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪೊಲೀಸರ/ಆಳುವ ಸರಕಾರದ ಸರ್ವಾಧಿಕಾರಕ್ಕೆ ಹಾಗೂ ತನ್ನದೇ ನಾಗರಿಕರ ಮೇಲೆ ಶಾಸನಬದ್ಧ ಭಯೋತ್ಪಾದನೆಗೆ ಅವಕಾಶ ಮಾಡಿಕೊಟ್ಟಿದೆ. ಹಿಂದಿನ ಸರಕಾರಗಳು ಹಾಗೂ ವಿಶೇಷವಾಗಿ ಇಂದು ಅಧಿಕಾರದಲ್ಲಿರುವ ಬಿಜೆಪಿ ಸರಕಾರ ತನ್ನ ಹಿಂದುತ್ವ-ಕಾರ್ಪೊರೇಟ್ ಪರ ಆಳ್ವಿಕೆಗೆ ಅಡ್ಡಿಯಾಗಿರುವ ಎಲ್ಲ ಧ್ವನಿಗಳನ್ನೂ ಸಂವಿಧಾನ ಬಾಹಿರವಾಗಿ ಸೆರೆಮನೆಗೆ ದೂಡಲೆಂದೇ UAPA ರೂಪಿಸಿದೆ ಮತ್ತು ಬಳಸಿಕೊಳ್ಳುತ್ತದೆ.


ಸ್ವೀಡನ್‌ನ ಗೊಥೆನ್‌ಬರ್ಗ್ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗವು ಜಗತ್ತಿನ ಮೂರು ಸಾವಿರಕ್ಕೂ ಹೆಚ್ಚು ರಾಜಕೀಯ ವಿದ್ವಾಂಸರ ಸಹಕಾರದೊಂದಿಗೆ ಪ್ರತಿವರ್ಷ ಜಗತ್ತಿನಲ್ಲಿ ಪ್ರಜಾತಂತ್ರದ ಸ್ಥಿತಿಗತಿಗಳ ಬಗ್ಗೆ V-Dem – Varieties of Democracy– ಪ್ರಜಾತಂತ್ರದ ವಿವಿಧತೆಗಳು-ಎಂಬ ವರದಿಯನ್ನು ಬಿಡುಗಡೆ ಮಾಡುತ್ತದೆ. ಒಂದು ದೇಶ ಎಷ್ಟರ ಮಟ್ಟಿಗೆ ಪ್ರಜಾತಾಂತ್ರಿಕವಾಗಿದೆ ಎಂದು ಪರಿಗಣಿಸಲು ಆ ದೇಶದಲ್ಲಿ ಕಾಲಕಾಲಕ್ಕೆ ಚುನಾವಣೆ ನಡೆಯುವುದು ಮಾತ್ರವಲ್ಲದೆ ಸಮಾಜದಲ್ಲಿ ನಾಗರಿಕ ಹಕ್ಕುಗಳ ರಕ್ಷಣೆ, ಭಿನ್ನಮತದ ಸ್ವಾತಂತ್ರ್ಯ, ಸ್ವತಂತ್ರ ನ್ಯಾಯಾಂಗ, ರಾಜಕೀಯ ಪ್ರಕ್ರಿಯೆಗಳಲ್ಲಿ ವಿವಿಧ ಹಿನ್ನೆಲೆಯ ಜನರ ಸರಿಸಮಾನ ಭಾಗವಹಿಸುವಿಕೆ ಇದೆಯೇ ಎಂಬ ಅಂಶಗಳನ್ನು ಅದು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಈ ಅಂಶಗಳ ಹಿನ್ನೆಲೆಯಲ್ಲಿ ನೋಡಿದಾಗ ಆಫ್ರಿಕಾವನ್ನು ಹೊರತುಪಡಿಸಿ ಇಡೀ ಜಗತ್ತಿನಲ್ಲಿ ಸರ್ವಾಧಿಕಾರದ ಮೂರನೇ ಅಲೆಯು ಬೀಸುತ್ತಿದೆ ಎಂದು ಆ ವರದಿ ಕಳವಳವನ್ನು ವ್ಯಕ್ತಪಡಿಸಿದೆ. ಆ ಸರ್ವಾಧಿಕಾರದ ಮೂರನೇ ಅಲೆಯು ಮೋದಿ ನೇತೃತ್ವದ ಭಾರತದಲ್ಲಿ ಅತ್ಯಂತ ವಿನಾಶಕಾರಿಯಾಗಿ ಪರಿಣಮಿಸಿದೆ. ಇದೇ ದಿಕ್ಕಿನಲ್ಲಿ ನಡೆದರೆ ಬಹಳ ಬೇಗ ಭಾರತವು ‘ಪ್ರಜಾತಂತ್ರ ದೇಶ’ವೆಂಬ ಸ್ಥಾನಮಾನವನ್ನೂ ಕಳೆದುಕೊಂಡು ‘ಚುನಾಯಿತ ಸರ್ವಾಧಿಕಾರ ದೇಶ’ವಾಗುವ ದಿನಗಳು ದೂರವಿಲ್ಲ ಎಂದು ಅದರ 2020ರ ವರದಿ ಎಚ್ಚರಿಸುತ್ತದೆ. ಈ ನಿಟ್ಟಿನಲ್ಲಿ ಆ ವರದಿಯು ಟ್ರಂಪ್‌ನ ಅಮೆರಿಕ, ಬೊಲ್ಸೊನಾರೋನ ಬ್ರೆಝಿಲ್, ಎರ್ದೊಗಾನ್‌ರ ಟರ್ಕಿ, ಒರ್ಬಾನ್ ನೇತೃತ್ವದ ಹಂಗೇರಿ ಹಾಗೂ ಪುಟಿನ್ ನೇತೃತ್ವದ ರಶ್ಯದ ಸಾಲಿನಲ್ಲೇ ಮೋದಿಯವರ ಭಾರತವನ್ನೂ ಸಹ ‘ಕಳವಳಕಾರಿ ಪ್ರಜಾತಂತ್ರ’ಗಳ ಸಾಲಿನಲ್ಲಿ ಇರಿಸುತ್ತದೆ.

ಅದರಲ್ಲೂ ಮೋದಿಯವರ ಭಾರತದಲ್ಲಿ ಕಳೆದೆರಡು ವರ್ಷಗಳಲ್ಲಿ ಅತ್ಯಂತ ತೀವ್ರವಾಗಿ ನಾಗರಿಕ ಸ್ವಾತಂತ್ರ್ಯ ಹಾಗೂ ಸಾಂಸ್ಥಿಕ ಸ್ವಾಯತ್ತತೆಗಳು ಹರಣವಾಗುತ್ತಿರುವ ಬಗ್ಗೆ ಆ ವರದಿಯು ವಿಸ್ತೃತವಾದ ಉದಾಹರಣೆಗಳನ್ನು ಒದಗಿಸುತ್ತದೆ. ಭಯೋತ್ಪಾದನೆಯ ನಿಗ್ರಹಕ್ಕೆಂದು ರಚಿತವಾದ Unlawful Activities Prevention Act- UAPA- ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹಕಾಯ್ದೆ-ಯನ್ನು ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಹಾಗೂ ದಿಲ್ಲಿ ಹಿಂಸಾಚಾರಳ ಪ್ರಕರಣಗಳಲ್ಲಿ ಮೋದಿ ಸರಕಾರದ ಜನವಿರೋಧಿ ನೀತಿಗಳನ್ನು ಟೀಕಿಸುತ್ತಿದ್ದ ವಿದ್ವಾಂಸರು, ವಕೀಲರು, ಮಾನವ ಹಕ್ಕುಗಳ ಕಾರ್ಯಕರ್ತರು, ಕವಿಗಳು, ಪತ್ರಕರ್ತರನ್ನ್ನು, CAA-NRC ವಿರೋಧಿ ಹೋರಾಟಗಾರರನ್ನು ಬಗ್ಗುಬಡಿಯಲು ಬಳಸಿಕೊಳ್ಳುತ್ತಿದೆ ಎಂಬುದನ್ನು ವರದಿಯು ವಿಶೇಷವಾಗಿ ಪ್ರಸ್ತಾಪಿಸುತ್ತದೆ. ಈ ಎಲ್ಲಾ ಕಾರಣದಿಂದಾಗಿಯೇ ಕಳೆದ ಒಂದು ವರ್ಷದಲ್ಲಿ ಭಾರತದ ಪ್ರಜಾತಂತ್ರದ ಸೂಚ್ಯಂಕವು ಇನ್ನೂ ತೀವ್ರವಾಗಿ ಕುಸಿದಿದೆ. ಭಾರತವನ್ನು ಚುನಾಯಿತ ಸರ್ವಾಧಿಕಾರದ ಅಂಚಿಗೆ ತಂದು ನಿಲ್ಲಿಸಿದೆ. (ಆಸಕ್ತರು ಪೂರ್ಣ ವರದಿಯನ್ನು ಈ ವೆಬ್ ವಿಳಾಸದಲ್ಲಿ ಪಡೆದುಕೊಳ್ಳಬಹುದು: https://www.v-dem.net/media/filer_public/de/39/de39af54-0bc5-4421-89ae-fb20dcc53dba/democracy_report.pdf)

UAPA ಮತ್ತು ಸರಕಾರಿ ಭಯೋತ್ಪಾದನೆ

ಮೋದಿ ಆಳ್ವಿಕೆಯಲ್ಲಿ ಭಾರತದ ಪ್ರಜಾತಂತ್ರಕ್ಕೆ ಹಾಗೂ ಈ ದೇಶದ ಜನರ ನಾಗರಿಕ ಸ್ವಾತಂತ್ರ್ಯಕ್ಕೆ ಅತ್ಯಂತ ಆಪತ್ತು ತಂದೊಡ್ಡಿರುವ ಹಲವಾರು ಕರಾಳ ಕಾಯ್ದೆಗಳಲ್ಲಿ ಅತ್ಯಂತ ಅನಾಗರಿಕ ಹಾಗೂ ಅಪ್ರಜಾತಾಂತ್ರಿಕವಾದದ್ದು UAPA ಕಾಯ್ದೆ.

ಈ ಕಾಯ್ದೆಯಡಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಬಂಧಿತರಾಗಿರುವ ಕೆಲವು ಪ್ರಮುಖ ಹೆಸರುಗಳನ್ನು ಗಮನಿಸಿ. ಸರಕಾರವೇ ರೂಪಿಸಿದ ಸಂಚಾದ ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಮಹಾರಾಷ್ಟ್ರದ ದಲಿತ್ ರಿಪಬ್ಲಿಕ್ ಸಂಘಟನೆಯ ಸುಧೀರ್‌ಧವಾಲೆ, ಮಾನವ ಹಕ್ಕು ಹೋರಾಟಗಾರರಾದ ರೋನಾ ವಿಲ್ಸನ್ ಹಾಗೂ ಮಹೇಂದ್ರ ರಾವತ್, ವಕೀಲ ಸುರೇಂದ್ರ ಗಾಡ್ಲಿಂಗ್, ದಮನಿತ ಸ್ತ್ರೀವಾದಿ ಅಧ್ಯಾಪಕಿ ಶೋಮಾ ಸೇನ್, ಪ್ರಖ್ಯಾತ ವಕೀಲ ಮತ್ತು ವಿದ್ವಾಂಸರೂ ಆಗಿರುವ ಸುಧಾ ಭಾರದ್ವಾಜ್, ಮಾನವ ಹಕ್ಕು ಹೋರಾಟಗಾರರಾದ ಅರುಣ್ ಫೆರೇರ, ವರ್ನೆನ್‌ಗೋನ್ಸಾಲ್ವೆಸ್, ಅಂತರ್‌ರಾಷ್ಟ್ರೀಯ ಖ್ಯಾತಿಯ ಚಿಂತಕ, ಲೇಖಕ ಆನಂದ್‌ ತೇಲ್ತುಂಬ್ಡೆ, EPW ಪತ್ರಿಕೆಯ ಗೌರವ ಸಂಪಾದಕ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವ್ಲಾಖ, ಈ ದೇಶ ಕಂಡ ಅಪರೂಪದ ಕ್ರಾಂತಿಕಾರಿ ಕವಿ ವರವರರಾವ್, ದಿಲ್ಲಿ ವಿಶ್ವವಿದ್ಯಾನಿಲಯದ ಬಹುಜನ ವಿದ್ವಾಂಸ, ಅಧ್ಯಾಪಕ ಹನಿ ಬಾಬು, ಕಬೀರ್ ಕಲಾ ಮಂಚ್‌ನ ಸಾಂಸ್ಕೃತಿಕ ಕಾರ್ಯಕರ್ತರಾದ ಸಾಗರ್, ಜ್ಯೋತಿ ಮತ್ತು ರಮೇಶ್ ಹಾಗೂ ಮೊನ್ನೆ ಮೊನ್ನೆ ಬಂಧಿತರಾದ ತಮ್ಮ 83ನೇ ವಯಸ್ಸಿನಲ್ಲೂ ಜಾರ್ಖಂಡ್‌ನ ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಅತ್ಯಂತ ಪರೋಪಕಾರಿ ಸಂತ ಪಾದ್ರಿ ಸ್ಟಾನ್ ಸಾಮಿ, ಅಸ್ಸಾಮ್‌ನ ಆದಿವಾಸಿಗಳ ಆಶಾಕಿರಣವಾಗಿ ಬೆಳೆಯುತ್ತಿರುವ ಯುವ ಹೋರಾಟಗಾರ ಅಖಿಲ್ ಗೊಗೊಯಿ, ಮಾನವ ಹಕ್ಕು ಹೋರಾಟಗಾರ ಹಾಗೂ ಶೇ. 90ರಷ್ಟು ಅಪಾಂಗಕ್ಕೆ ತುತ್ತಾಗಿರುವ ದಿಲ್ಲಿ ವಿಶ್ವವಿದ್ಯಾನಿಲಯದ ಇಂಗ್ಲಿಷ್ ಪ್ರೊ. ಜಿ. ಎನ್.ಸಾಯಿಬಾಬಾ, ದಿಲ್ಲಿ ಗಲಭೆಯ ಹಿನ್ನೆಲೆಯಲ್ಲಿ ಸುಳ್ಳು ಕೇಸುಗಳಡಿ ಬಂಧಿತರಾಗುತ್ತಿರುವ ವಿದ್ಯಾರ್ಥಿ ನಾಯಕರಾದ ಉಮರ್ ಖಾಲಿದ್, ಸಫೂರಾ ಜರ್ಗಾರ್, ಗುಲ್ಫಿಶಾ, ದೇವಾಂಗನಿ, ನತಾಶಾ ನರ್ವಾಲ್, ಶರ್ಜಿಲ್ ಇಮಾಮ್‌ರಂತಹ ನಿಸ್ವಾರ್ಥ ಹಾಗೂ ರಾಜಿರಹಿತ ಜನಪರ ಹೋರಾಟಗಾರನ್ನು ಹಾಗೂ ದೇಶಾದ್ಯಂತ ನೂರಾರು ಆದಿವಾಸಿಗಳನ್ನು, CAA ವಿರೋಧಿ, ಕಾರ್ಪೊರೇಟ್ ಪರ ಪರಿಸರ ನೀತಿಯ ವಿರೋಧಿ ಹೋರಾಟಗಾರರನ್ನು, ಆರ್‌ಟಿಐ ಹೋರಾಟಗಾರರನ್ನು ಹಾಗೂ ತೀರಾ ಇತ್ತೀಚೆಗೆ ಹಾಥರಸ್‌ನಲ್ಲಿ ಮೇಲ್ಜಾತಿ ಠಾಕೂರರಿಂದ ಅತ್ಯಾಚಾರ ಮತ್ತು ಕೊಲೆಗೆ ಈಡಾದ ಮಹಿಳೆಯ ಪರವಾಗಿ ದನಿ ಎತ್ತಿದ ಪತ್ರಕರ್ತರನ್ನು, ವಕೀಲರನ್ನ್ನು ಕೂಡಾ ಈ UAPA  ಕಾನೂನಿನಡಿ ಬಂಧಿಸಿ ಜೈಲಿಗಟ್ಟಲಾಗಿದೆ. ಸಾರಾಂಶದಲ್ಲಿ ನಮ್ಮ ಸಂವಿಧಾನದಲ್ಲಿ ಅಭಿವ್ಯಕ್ತಗೊಂಡಿರುವ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳಿಗಾಗಿ ಹೋರಾಡುತ್ತಿರುವ ಭಾರತದ ನಿಜವಾದ ಜನನಾಯಕರನ್ನೆಲ್ಲಾ ಮೋದಿ ಸರಕಾರ ಬಂಧಿಸುತ್ತಿದೆ.

UAPA  ಅನಾಗರಿಕ, ಅಸಾಂವಿಧಾನಿಕ

ಹಾಗೆ ನೋಡಿದರೆ ಒಂದು ಪ್ರಜಾತಂತ್ರದೇಶಕ್ಕೆ UAPA ಎಂಬಂತಹ ಕರಾಳ ಕಾನೂನುಗಳೇ ಕಪ್ಪುಚುಕ್ಕೆಯಿದ್ದಂತೆ. ನಮ್ಮ ಸಂವಿಧಾನವು ಭಾರತವನ್ನು ಕಲ್ಯಾಣರಾಜ್ಯದ ಆಶಯಗಳನ್ನು ಹೊಂದಿರುವ ಒಂದು ಉದಾರವಾದಿ ಪ್ರಜಾಪ್ರಭುತ್ವವಾಗಿ ಕಲ್ಪಿಸಿಕೊಂಡಿದೆ. ಇಲ್ಲಿ ಉದಾರವಾದಿ ಎಂದರೆ ನಾಗರಿಕರ ಜೀವನದಲ್ಲಿ ಮತ್ತು ಅವರ ಸ್ವಾತಂತ್ರ್ಯಗಳಲ್ಲಿ ಪ್ರಭುತ್ವದ ಮಧ್ಯಪ್ರವೇಶ ಸಾಧ್ಯವಾದಷ್ಟು ಕಡಿಮೆ ಇರತಕ್ಕದ್ದು ಎಂದು ಗ್ರಹಿಸಲಾಗುತ್ತದೆ. ಅಂದರೆ ನಾಗರಿಕರಿಗೆ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ಸರಕಾರಗಳು ಹತ್ತಿಕ್ಕುವಂತಿಲ್ಲ.

ಉದಾಹರಣೆಗೆ ಒಬ್ಬ ವ್ಯಕ್ತಿಯನ್ನು ಯಾವುದಾದರೂ ಆರೋಪದ ಮೇಲೆ ಪೊಲೀಸರು ಬಂಧಿಸುವಾಗ ಅಥವಾ ಸರಕಾರವು ಜನರ ಸ್ವಾತಂತ್ರ್ಯಗಳ ಮೇಲೆ ಯಾವುದಾದರೂ ಕಾರಣಕ್ಕಾಗಿ ನಿರ್ಬಂಧಗಳನ್ನು ವಿಧಿಸುವಾಗ ಸರಕಾರ ಮತ್ತು ಪೊಲೀಸರು ಬೇಕಾಬಿಟ್ಟಿಯಾಗಿ ವ್ಯಕ್ತಿಗಳ ಸ್ವಾತಂತ್ರ್ಯವನ್ನು ಹರಣ ಮಾಡದಂತೆ ಹಲವಾರು ಪ್ರಕ್ರಿಯೆಗಳನ್ನೂ ಹಾಗೂ ಶರತ್ತುಗಳನ್ನೂ ನಮ್ಮ ಸಂವಿಧಾನವು ವಿಧಿಸುತ್ತದೆ. ಸರಕಾರವು ಅವುಗಳನ್ನು ಪಾಲಿಸದಿದ್ದರೆ ಅಂತಹ ಕಾನೂನುಗಳನ್ನು ಹಾಗೂ ಪ್ರಕ್ರಿಯೆಗಳನ್ನು ಸ್ವತಂತ್ರ ನ್ಯಾಯಾಲಯವು ಖೈದು ಮಾಡುತ್ತದೆ. ಇದು ಒಂದು ಉದಾರವಾದಿ ಪ್ರಜಾತಂತ್ರದ ಪ್ರಮುಖ ಗುಣಲಕ್ಷಣ. ಹೀಗಾಗಿಯೇ ಪೊಲೀಸರು ಯಾವುದೇ ವ್ಯಕ್ತಿಯನ್ನು ಬೇಕಾಬಿಟ್ಟಿಯಾಗಿ ಬಂಧಿಸುವಂತಿಲ್ಲ. ಪೊಲೀಸರು Criminal Procedure Code (Cr.P.C)- ಅಪರಾಧ ಪ್ರಕ್ರಿಯೆ ಸಂಹಿತೆ-ಯಲ್ಲಿ ನಿಗದಿ ಮಾಡಿರುವ ಪ್ರಕ್ರಿಯೆಯನುಸಾರವಾಗಿಯೇ ಬಂಧನಗಳನ್ನು ಮಾಡಬೇಕಿರುತ್ತದೆ.

ಉದಾಹರಣೆಗೆ: -ವಾರೆಂಟ್ ಇಲ್ಲದೆ ಯಾರನ್ನೂ ಬಂಧಿಸುವಂತಿಲ್ಲ.

-ಬಂಧಿಸಿದವರನ್ನು ನ್ಯಾಯಾಲಯದ ಅನುಮತಿಯಿಲ್ಲದೆ ಪೊಲೀಸ್ ಬಂಧನದಲ್ಲಿ ಇರಿಸಿಕೊಳ್ಳುವಂತಿಲ್ಲ.

-ಒಬ್ಬ ಆರೋಪಿಯನ್ನು ನ್ಯಾಯಾಧೀಶರು ಪೊಲೀಸ್ ರಿಮ್ಯಾಂಡಿಗೆ ಹೆಚ್ಚು ದಿನಗಳ ಕಾಲ ಕೊಡುವಂತಿಲ್ಲ. (ಸಾಮಾನ್ಯ ಕಾನೂನುಗಳಡಿಯಲ್ಲಿ ಹೆಚ್ಚೆಂದರೆ 14 ದಿನಗಳ ಪೊಲೀಸ್ ಕಸ್ಟಡಿಯನ್ನು ಮಾತ್ರ ಕೊಡಬಹುದು).

-ಎಫ್‌ಐಆರ್ ದಾಖಲಾದ 60 ದಿನಗಳಲ್ಲಿ ಅಥವಾ ಗಂಭೀರವಾದ ಅಪರಾಧಗಳ ಸಂದರ್ಭದಲ್ಲಿ 90 ದಿನಗಳೊಳಗೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಬೇಕು. ಹಾಗೆ ಅವಧಿಯೊಳಗೆ ಚಾರ್ಜ್ ಶೀಟ್ ಸಲ್ಲಿಸದಿದ್ದಲ್ಲಿ ಆರೋಪಿಗೆ ಜಾಮೀನು ಪಡೆದುಕೊಳ್ಳುವ ಹಕ್ಕಿರುತ್ತದೆ.

-ಅಷ್ಟು ಮಾತ್ರವಲ್ಲ. ಆರೋಪಿಗೆ ಜಾಮೀನು ಕೊಡಬೇಕಾದದ್ದೇ ಸಾಮಾನ್ಯ ನಿಯಮ. ಜೈಲು ಅಪರೂಪದ ಪ್ರಕರಣಗಳಲ್ಲಿ ಮಾತ್ರ ಎಂದು ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿದ್ದ ಕೃಷ್ಣ ಅಯ್ಯರ್ ಅವರು ಸ್ಪಷ್ಟಪಡಿಸಿದ್ದಾರೆ.

-ವಿಚಾರಣೆಯ ಪ್ರಕ್ರಿಯೆಯಲ್ಲಿ ಆರೋಪಿಯ ಮೇಲಿನ ಆರೋಪವನ್ನು ಸಾಬೀತುಪಡಿಸಬೇಕಾದ ಜವಾಬ್ದಾರಿ ಪೊಲೀಸರದ್ದು ಮತ್ತು ಸರಕಾರಿ ಅಭಿಯೋಜಕರದ್ದು.

-ಆರೋಪ ಸಾಬೀತಾಗುವ ತನಕ ಆರೋಪಿಯನ್ನು ನಿರಪರಾಧಿಯೆಂದೇ ಪರಿಗಣಿಸಬೇಕು. ಹೀಗೆ ಒಂದು ಅಪರಾಧ ವಿಚಾರಣಾ ಪ್ರಕ್ರಿಯೆಗಳಲ್ಲಿ ಸಕಲ ಅಧಿಕಾರವನ್ನು ಹೊಂದಿರುವ ಪ್ರಭುತ್ವವು ನಿರ್ಬಲರಾದ ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸಬಾರದು ಎಂಬ ಉದ್ದೇಶದಿಂದಲೇ ಒಂದು ಉದಾರವಾದಿ ಪ್ರಜಾತಂತ್ರದೇಶವು ಈ ಪ್ರಕ್ರಿಯೆಗಳನ್ನು ಅನುಸರಿಸುತ್ತದೆ. ಆದರೆ ಈ ದೇಶದ ಮುಕ್ಕಾಲುವಾಸಿ ಜನರಿಗೆ ತಮಗಿರುವ ಈ ಅಧಿಕಾರಗಳ ಬಗ್ಗೆ ಮಾಹಿತಿಯೂ ಇಲ್ಲ. ಇದ್ದರೂ ಅವರ ಬದುಕಿನ ವಾಸ್ತವತೆಗಳು ಮತ್ತು ಅಸಹಾಯಕತೆಗಳು ಈ ಹಕ್ಕುಗಳನ್ನು ಚಲಾಯಿಸಲು ಬೇಕಾದಷ್ಟು ವಾತಾವರಣವನ್ನು ಒದಗಿಸುವುದಿಲ್ಲ. ಹೀಗಾಗಿ ಈ ದೇಶದ ಬಹುಸಂಖ್ಯಾತ ವಂಚಿತ ಸಮುದಾಯದ ಜನರಿಗೆ ಉದಾರವಾದಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರುವುದೇ ಇಲ್ಲ.

ಆದರೂ ಕನಿಷ್ಠ ರೂಲ್‌ಬುಕ್ಕುಗಳಲ್ಲಾದರೂ ಈ ಕಾನೂನುಗಳು ಅಸ್ತಿತ್ವದಲ್ಲಿದ್ದವು. ಆದರೆ ಭಯೋತ್ಪಾದಕ ನಿಗ್ರಹ ಹಾಗೂ ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ UAPA ಎಂಬಂತಹ ಆಸಾಧಾರಣ ಕಾನೂನುಗಳು ಜಾರಿಯಾಗ ತೊಡಗಿ ದೊಡನೆ ಸಂವಿಧಾನವು ಕೊಟ್ಟ ಈ ಎಲ್ಲಾ ಭದ್ರತೆಗಳನ್ನು ಆಳುವ ಸರಕಾರಗಳು ಶಾಸನಾತ್ಮಕವಾಗಿಯೇ ರದ್ದುಗೊಳಿಸುತ್ತವೆ.

UAPA ಕರಾಳ ಕಾನೂನಿನ ಕರಾಳ ಇತಿಹಾಸ

UAPA ಮೊದಲು ಜಾರಿಯಾದದ್ದು 1967ರಲ್ಲಿ. ಆಗ ಇಡೀ ದೇಶ ಸರಕಾರಗಳ ವಿರುದ್ಧ ಕುದಿಯಲಾರಂಭಿಸಿತ್ತು. ದಲಿತರು, ರೈತಾಪಿ, ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಬೀದಿಗೆ ಬಂದು ಸರಕಾರದ ಜನವಿರೋಧಿ ನೀತಿ ಮತ್ತು ಶಾಸನಗಳ ವಿರುದ್ಧ ಬಂಡೆದ್ದಿದ್ದರು. ಸರಕಾರದ ವಿರುದ್ಧದ ಮತ್ತು ಸರಕಾರವು ರಕ್ಷಿಸುತ್ತಿದ್ದ ಭೂಮಾಲಕ ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಗಳ ವಿರುದ್ಧ ನಡೆಯುತ್ತಿದ್ದ ಎಲ್ಲಾ ಸಾಂವಿಧಾನಿಕ ಪ್ರತಿಭಟನೆಗಳನ್ನೂ ‘‘ಕಾನೂನು ಬಾಹಿರ ಕೂಟದ ಕಾನೂನು ಬಾಹಿರ ಚಟುವಟಿಕೆಗಳು’’ ಎಂದು ಈ ಕಾನೂನು ಘೋಷಿಸಿತು. ಆದರೆ 70ರ ದಶಕದಲ್ಲಿ ಇದರ ಬಳಕೆ ಹೆಚ್ಚಾಗಲಿಲ್ಲ. ತುರ್ತುಪರಿಸ್ಥಿತಿಯ ಕಾಲದಲ್ಲಿ ಎಲ್ಲಾ ರಾಜಕೀಯ ಪ್ರತಿರೋಧವನ್ನು ಹತ್ತಿಕ್ಕುವ ""Maintenance Of Internal Security Act–MISA” ಎಂಬ ಕರಾಳ ಕಾಯ್ದೆಯನ್ನೇ ಹೆಚ್ಚು ಬಳಸಿ ಆಗಿನ ಸರ್ವಾಧಿಕಾರಿ ಇಂದಿರಾಗಾಂಧಿ ಸರಕಾರ ಲಕ್ಷಾಂತರ ಜನರನ್ನು ಜೈಲಿಗೆ ಮತ್ತು ಸಾವಿಗೆ ದೂಡಿತು. ತುರ್ತುಪರಿಸ್ಥಿತಿಯ ನಂತರ ಆ ಕಾನೂನು ರದ್ದಾಯಿತು.

1980ರ ದಶಕದಲ್ಲಿ ಪಂಜಾಬ್‌ನಲ್ಲಿ ಭುಗಿಲೆದ್ದ ಪ್ರತ್ಯೇಕತಾವಾದಿ ಹೋರಾಟವನ್ನು ಬಗ್ಗುಬಡಿಯುವ ಹೆಸರಿನಲ್ಲಿ 1985ರಲ್ಲಿ ಜಾರಿಯಾದ TADA - Terrorist and Disruptive Activities (Prevention) Act ಎಂಬ ಕರಾಳ ಕಾಯ್ದೆ 1995ರ ತನಕ ಅಸ್ತಿತ್ವದಲ್ಲಿತ್ತು. ಇದೊಂದು ತಾತ್ಕಾಲಿಕ ವಿಶೇಷ ಕಾಯ್ದೆಯಾಗಿ ಜಾರಿಯಾಗಿದ್ದರಿಂದ ಅವಧಿ ಮುಗಿದಾಗಲೆಲ್ಲಾ ಅದನ್ನು ಸಂಸತ್ತು ನವೀಕರಿಸಬೇಕಿತ್ತು. ಇದರಡಿಯಲ್ಲಿ ಭಯೋತ್ಪಾದಕರಿಗಿಂತ ಜಾಸ್ತಿ ಬಂಧನಕ್ಕೊಳಗಾದದ್ದು 1991ರ ನಂತರ ಜಾರಿಯಾದ ಜಾಗತೀಕರಣದ ನೀತಿಯ ಭಾಗವಾಗಿ ಕಾರ್ಪೊರೇಟ್ ಬಂಡವಾಳಿಗರ ಲಾಭಕ್ಕಾಗಿ ತಮ್ಮ ಪಾರಂಪರಿಕ ಜೀವನ ಮತ್ತು ಜೀವನೋಪಾಯಗಳನ್ನು ಕಳೆದುಕೊಂಡ ಆದಿವಾಸಿಗಳು, ದಲಿತರು ಮತ್ತು ಮುಸ್ಲಿಮರು.

ಏಕೆಂದರೆ 1991ರ ನಂತರ ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಕಾರ್ಪೊರೇಟ್ ಬಂಡವಾಳಶಾಹಿಗಳ ಆಸಕ್ತಿಯೇ ದೇಶದ ಹಿತಾಸಕ್ತಿ ಎಂದೂ, ಅವರ ಲಾಭದ ಭದ್ರತೆಗೆ ಒದಗುವ ಆತಂಕವೇ ರಾಷ್ಟ್ರದ ಭದ್ರತೆಗೆ ಒದಗುವ ಆತಂಕವೆಂತಲೂ ರಾಷ್ಟ್ರದ ವ್ಯಾಖ್ಯಾನವೇ ಬದಲಾಗಿದೆ.

ಆದರೂ, ದೇಶಾದ್ಯಂತ ಈ ಕಾಯ್ದೆಯ ವಿರುದ್ಧ ಭುಗಿಲೆದ್ದ ಹೋರಾಟಗಳ ಭಾಗವಾಗಿ ಕಾಂಗ್ರೆಸ್ ಪಕ್ಷ ಜಾರಿಗೆ ತಂದ TADA ರದ್ದಾಯಿತು.

ಆದರೆ ಅದರ ಜಾಗದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ POTA- Prevention Of Terrorism Act ಎಂಬ TADAಗಿಂತಲೂ ಕರಾಳವಾದ ಕಾನೂನನ್ನು ಜಾರಿ ಮಾಡಿತು. 2004ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರಕಾರ ಅ ವನ್ನೇನೋ ರದ್ದುಮಾಡಿತು. ಆದರೆ ಅದರ ಜಾಗದಲ್ಲಿ 1967ರ Unlawful Activities Prevention Act- UAPA- ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆಗೆ ಹೊಸಜೀವ ಕೊಟ್ಟು ಜಾರಿಗೆ ತಂದಿತು. ಅದು ಈ ಹಿಂದಿನ POTA ಮತ್ತು TADAಗಳಲ್ಲಿದ್ದ ಎಲ್ಲಾ ಕರಾಳ ಅಂಶವನ್ನೂ ಒಳಗೊಂಡಿತ್ತು.

ಮಾತ್ರವಲ್ಲ. POTA ಮತ್ತು TADA ತಾತ್ಕಾಲಿಕ ಹಾಗೂ ವಿಶೇಷ ಕಾಯ್ದೆಗಳಾಗಿದ್ದವು, ಆದರೆ ಈ ಹೊಸರೂಪದ UAPA ಒಂದು ಶಾಶ್ವತ ಕಾಯ್ದೆಯಾಗಿರುವುದರಿಂದ ತಾತ್ಕಾಲಿಕವಾಗಿ ಜನರನ್ನು ಚಿತ್ರಹಿಂಸೆಗೊಳಪಡಿಸಿದ್ದ ಕರಾಳ ಅಂಶಗಳೆಲ್ಲಾ ಈಗ ಶಾಶ್ವತ ಸ್ವರೂಪವನ್ನು ಪಡೆದುಕೊಂಡುಬಿಟ್ಟಿತು. ಕೇವಲ ಸರಕಾರ ವಿರೋಧಿ ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹಕ್ಕಾಗಿ ರೂಪಿತವಾಗಿದ್ದ ಈ ಕಾಯ್ದೆಗೆ 2008ರಲ್ಲಿ ತಂದ ತಿದ್ದುಪಡಿಯ ಮೂಲಕ ವಿಸ್ತಾರವಾದ ಹಾಗೂ ಯಾವುದನ್ನು ಬೇಕಾದರೂ ಭಯೋತ್ಪಾದನೆ ಎಂದು ಕರೆಯಬಹುದಾದ ತಿದ್ದುಪಡಿಗಳನ್ನು ಸೇರಿಸಲಾಯಿತು. 2012ರಲ್ಲಿ ತಂದ ತಿದ್ದುಪಡಿಗಳ ಪ್ರಕಾರ ಯಾವುದೇ ಕಂಪೆನಿಯನ್ನು, ಎನ್‌ಜಿಒಗಳನ್ನು ಭಯೋತ್ಪಾದಕ ಎಂದು ಘೋಷಿಸಬಹುದು ಎಂದಾಯಿತು. 2019ರಲ್ಲಿ ಮೋದಿ ಸರಕಾರ ತಂದ ತಿದ್ದುಪಡಿಯ ಪ್ರಕಾರ ಸಂಘಟನೆಗಳನ್ನು ಮಾತ್ರವಲ್ಲದೆ ಯಾವುದೇ ವ್ಯಕ್ತಿಯನ್ನೂ ಸಹ ಭಯೋತ್ಪಾದಕ ಎಂದು ಘೋಷಿಸಬಹುದು ಎಂದಾಗಿದೆ.

UAPA-ಪೊಲೀಸ್ ಸರ್ವಾಧಿಕಾರ

ಮೇಲಿನ ಎಲ್ಲಾ ತಿದ್ದುಪಡಿಗಳ ನಂತರ ಈಗ ಈ UAPA ಜಗತ್ತಿನಲ್ಲೇ ಅತ್ಯಂತ ಕರಾಳ ಕಾನೂನುಗಳಲ್ಲಿ ಒಂದಾಗಿದೆ. - UAPA ಕಾಯ್ದೆಯ ಸೆಕ್ಷನ್ 15 ಮತ್ತು 18ರ ಪ್ರಕಾರ ಭಯೋತ್ಪಾದನೆ ಹಾಗೂ ಭಯೋತ್ಪಾದನಾ ಚಟುವಟಿಕೆಗಳೆಂದರೆ ದೇಶದ ಭದ್ರತೆಗೆ ಹಾಗೂ ಸಮಗ್ರತೆಗೆ ಧಕ್ಕೆ ತರುವ ಉದ್ದೇಶವಿರುವ ಕೃತ್ಯಗಳು ಮಾತ್ರವಲ್ಲ, ಸರಕಾರದ ಬಗ್ಗೆ ಅವಿಶ್ವಾಸ ಮೂಡಿಸುವ ಯಾವುದೇ ಕೃತ್ಯಗಳು, ಬರಹ ಹಾಗೂ ಭಾಷಣಗಳೂ ಸಹ ಭಯೋತ್ಪಾದನೆಯಾಗುತ್ತದೆ. ಅಷ್ಟು ಮಾತ್ರವಲ್ಲ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಒಂದು ಭಯೋತ್ಪಾದನಾ ಕೃತ್ಯದ ತಯಾರಿಗೆ ಪೂರಕವಾದ ಸಹಕಾರಗಳನ್ನು ಭಯೋತ್ಪಾದನೆಯೆಂದೇ ಪರಿಗಣಿಸಲಾಗುತ್ತದೆ. ಅಂತಹ ಸಂಘಟನೆಗಳ ಸದಸ್ಯರಾಗುವುದು ಅಥವಾ ಅದರ ಸಭೆಗಳಲ್ಲಿ ಭಾಗವಹಿಸುವುದೂ ಸಹ ಭಯೋತ್ಪಾದನೆಯೆಂದು ಈ ಕಾಯ್ದೆ ಹೇಳುತ್ತದೆ.

-ಈ ಕಾಯ್ದೆಯಡಿಯಲ್ಲಿ ಯಾರನ್ನಾದರೂ ಬಂಧಿಸಲು ಪೊಲೀಸರಿಗೆ ವಾರೆಂಟಿನ ಅಗತ್ಯವಿಲ್ಲ.

-ಇತರ ಕಾನೂನುಗಳಲ್ಲಿ ಪೊಲೀಸ್ ಕಸ್ಟಡಿಗೆ ಗರಿಷ್ಠ ಅವಧಿ 14 ದಿನಗಳಾಗಿದ್ದರೆ, UAPA ಅಡಿ 30 ದಿನಗಳ ಕಾಲ ಆರೋಪಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಳ್ಳಬಹುದು.

-ಇತರ ಕಾನೂನುಗಳಲ್ಲಿ ಚಾರ್ಜ್ ಶೀಟ್ ದಾಖಲಿಸಲು ಪೊಲೀಸರಿಗೆ ಹೆಚ್ಚೆಂದರೆ 90 ದಿನಗಳ ಕಾಲ ಅವಕಾಶವಿದ್ದರೆ UAPA  ಅಡಿ 180 ದಿನಗಳ ಕಾಲ ಅವಕಾಶವನ್ನು ಒದಗಿಸಲಾಗಿದೆ.

-ಇತರ ಕಾನೂನುಗಳಲ್ಲಿ ನ್ಯಾಯಾಲಯವು ಜಾಮೀನು ನೀಡುವಾಗ ಆರೋಪಿಯ ಮೇಲೆ ಮೇಲ್ನೋಟಕ್ಕೆ ಅಪಾರಾಧ ಸಾಬೀತಾಗುವಂತಿದೆಯೇ ಎಂದೇನೂ ಪರಿಗಣಿಸುವುದಿಲ್ಲ. ಬದಲಿಗೆ ಆರೋಪಿಯು ಹವ್ಯಾಸಿ ಅಪರಾಧಿಯೇ, ಸಾಕ್ಷ್ಯ ಪುರಾವೆಗಳನ್ನು ನಾಶಮಾಡಬಲ್ಲನೇ ಎಂಬುದನ್ನು ಮಾತ್ರ ಪರಿಗಣಿಸುತ್ತದೆ.
ಆದರೆ UAPAಯ ಸೆಕ್ಷನ್ 43(5)ಡಿಯ ಪ್ರಕಾರ ನ್ಯಾಯಾಲಯವು ಚಾರ್ಜ್‌ಶೀಟ್ ಸಲ್ಲಿಕೆಯಾದ ನಂತರ ಅಥವಾ ಅದಕ್ಕೆ ಪೂರ್ವದಲ್ಲಿ ಜಾಮೀನು ಅರ್ಜಿಯನ್ನು ನಿರ್ವಹಿಸುವಾಗ ಸಾಕ್ಷಿ ನಾಶದ ಸಂಭಾವ್ಯತೆಯನ್ನು ಮಾತ್ರವಲ್ಲದೆ ಮೇಲ್ನೋಟಕ್ಕೆ ಆರೋಪಿಯ ಮೇಲೆ ಕೇಸಿದೆಯೇ ಎಂದು ಪರಿಶೀಲಿಸಬೇಕು.

2019ರಲ್ಲಿ ವತಾಲಿ ವರ್ಸಸ್ ಎನ್‌ಐಎ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸಹ ಇದನ್ನೇ ಎತ್ತಿಹಿಡಿದಿರುವುದು ಮಾತ್ರವಲ್ಲದೆ ಮೇಲ್ನೋಟಕ್ಕೆ ಆರೋಪಿಯ ಮೇಲೆ ಕೇಸಿದೆಯೇ ಇಲ್ಲವೇ ಎಂದು ಪರಿಗಣಿಸುವಾಗ ನ್ಯಾಯಾಲಯವು ಪೊಲೀಸರು ಸಲ್ಲಿಸುವ ಕೇಸ್‌ಡೈರಿ ಮತ್ತು ಪೂರಕ ಪೊಲೀಸ್ ವಾದಗಳನ್ನು ಮಾತ್ರ ಗಮನಿಸಿದರೆ ಸಾಕು ಎಂದು ಆದೇಶವಿತ್ತಿದೆ. ಆರೋಪಿಯ ಪರವಾದ ಸಾಕ್ಷ್ಯಗಳನ್ನು ಗಮನಿಸುವ ಅಗತ್ಯವಿಲ್ಲ ಎಂಬುದು ಅದರ ತಾತ್ಪರ್ಯ. ಅಂದರೆ ಪೊಲೀಸರು ಹೇಳಿದ್ದನ್ನು ನ್ಯಾಯಾಲಯವು ಯಥಾವತ್ ಒಪ್ಪಿಕೊಂಡು ಆರೋಪಿಗೆ ಜಾಮೀನು ನಿರಾಕರಿಸಬೇಕು ಎಂಬುದು ಅದರ ಅರ್ಥ.
ಅಂದರೆ ಒಮ್ಮೆ UAPA ಅಡಿ ಬಂಧನವಾದರೆ ವಿಚಾರಣೆ ಮುಗಿಯುವ ತನಕ ಜಾಮೀನು ಸಿಗುವುದು ಕನಸಿನ ಮಾತಾಗುವಂತೆ ಮಾಡಲಾಗಿದೆ. ವಿಚಾರಣೆಗಳು ಕನಿಷ್ಠ 4-10 ವರ್ಷಗಳ ಕಾಲ ಎಳೆಯಲಿದೆ. ಈವರೆಗಿನ UAPA ಪ್ರಕರಣಗಳಲ್ಲಿ ಶೇ.27ರಷ್ಟು ಆರೋಪಿಗಳಿಗೆ ಮಾತ್ರ ಶಿಕ್ಷೆಯಾಗಿದೆ. ಅಂದರೆ ಇನ್ನುಳಿದ ಶೇ.73 ಜನ ಅಮಾಯಕರನ್ನು ಸರಕಾರ ದುರುದ್ದೇಶದ ಅಜೆಂಡಾಗಳ ಭಾಗವಾಗಿಯೇ ಹಲವಾರು ವರ್ಷ ವಿನಾಕಾರಣ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತಿದೆ ಎಂದರ್ಥ.

-ಎಲ್ಲಕ್ಕಿಂತ ಹೆಚ್ಚಾಗಿ ಇತರ ಕಾನೂನುಗಳಡಿಯಲ್ಲಿ ಆರೋಪವನ್ನು ಸಾಬೀತು ಮಾಡಬೇಕಾದ ಜವಾಬ್ದಾರಿ ಪೊಲೀಸ್/ಸರಕಾರಿ ಅಭಿಯೋಜಕರದ್ದಾಗಿದ್ದರೆ UAPA ಅಡಿ ತನ್ನ ಮೇಲಿನ ಆರೋಪವು ಸುಳ್ಳೆಂದು ಸಾಬೀತು ಮಾಡಬೇಕಾದ ಜವಾಬ್ದಾರಿ ಆರೋಪಿಯದ್ದೇ ಆಗಿರುತ್ತದೆ!

ಇತರ ಕಾನೂನುಗಳಡಿ ಅಪರಾಧ ಸಾಬೀತಾಗುವ ತನಕ ಆರೋಪಿಯನ್ನು ನ್ಯಾಯಾಲಯ ನಿರಪರಾಧಿಯೆಂದೇ ಪರಿಗಣಿಸಿದರೆ UAPA ಅಡಿ ಆರೋಪಿಯು ತನ್ನ ನಿರಪರಾಧಿತ್ವವನ್ನು ಸಾಬೀತು ಮಾಡುವ ತನಕ ನ್ಯಾಯಾಲಯ ಆತನನ್ನು ಅಪರಾಧಿ ಎಂಬ ಕಣ್ಣಿನಿಂದಲೇ ನಿರ್ವಹಿಸುತ್ತದೆ. ಹೀಗೆ UAPAಯು ಸಹಜ ನ್ಯಾಯ ಸಿದ್ಧಾಂತದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪೊಲೀಸರ/ಆಳುವ ಸರಕಾರದ ಸರ್ವಾಧಿಕಾರಕ್ಕೆ ಹಾಗೂ ತನ್ನದೇ ನಾಗರಿಕರ ಮೇಲೆ ಶಾಸನಬದ್ಧ ಭಯೋತ್ಪಾದನೆಗೆ ಅವಕಾಶ ಮಾಡಿಕೊಟ್ಟಿದೆ. ಹಿಂದಿನ ಸರಕಾರಗಳು ಹಾಗೂ ವಿಶೇಷವಾಗಿ ಇಂದು ಅಧಿಕಾರದಲ್ಲಿರುವ ಬಿಜೆಪಿ ಸರಕಾರ ತನ್ನ ಹಿಂದುತ್ವ-ಕಾರ್ಪೊರೇಟ್ ಪರ ಆಳ್ವಿಕೆಗೆ ಅಡ್ಡಿಯಾಗಿರುವ ಎಲ್ಲ ಧ್ವನಿಗಳನ್ನೂ ಸಂವಿಧಾನ ಬಾಹಿರವಾಗಿ ಸೆರೆಮನೆಗೆ ದೂಡಲೆಂದೇ UAPA ರೂಪಿಸಿದೆ ಮತ್ತು ಬಳಸಿಕೊಳ್ಳುತ್ತದೆ.
ಆದ್ದರಿಂದಲೇ ಪ್ರಖ್ಯಾತ ಮಾನವ ಹಕ್ಕು ಹೋರಾಟಗಾರ ಕೆ. ಬಾಲಗೋಪಾಲ್ ಹೇಳುತ್ತಿದ್ದಂತೆ ‘‘UAPAಯ ದುರ್ಬಳಕೆ’’ ಎಂಬ ಪದಬಳಕೆಯೇ ತಪ್ಪು. ‘‘UAPA ಎಂಬ ಕಾನೂನೇ ಶಾಸನಾತ್ಮಕ ಅಧಿಕಾರದ ದುರ್ಬಳಕೆ.’’ ಅಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)