varthabharthi


ಓ ಮೆಣಸೇ

ಓ ಮೆಣಸೇ ...

ವಾರ್ತಾ ಭಾರತಿ : 2 Nov, 2020
ಪಿ.ಎ.ರೈ

ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಕಾಂಗ್ರೆಸ್ ನಾಯಕರು ಬಡಿದಾಟ ಮಾಡುತ್ತಲೇ ಇರುತ್ತಾರೆ -ಶೋಭಾ ಕರಂದ್ಲಾಜೆ, ಸಂಸದೆ

ಜನಸಾಮಾನ್ಯರನ್ನು ಬಡಿದಾಡಿಸುವ ನಿಮ್ಮ ರಾಜಕಾರಣಕ್ಕಿಂತ ವಾಸಿ.


ಹೆಣದ ಮೇಲೆ ರಾಜಕಾರಣ ಮಾಡುವುದು ಬಿಜೆಪಿಗೆ ಅಭ್ಯಾಸವಾಗಿದೆ -ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ

ಕಾಂಗ್ರೆಸ್‌ನದ್ದೇನಿದ್ದರೂ ಹಣದ ಮೇಲಿನ ರಾಜಕಾರಣ. ಸಂಸದ ನಳಿನ್‌ಕುಮಾರ್ ಕಟೀಲು ಒಬ್ಬ ಕಾಡು ಮನುಷ್ಯ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ


ಕಾಡು ಮನುಷ್ಯರೆಲ್ಲ ನಾಡಿಗೆ ಬಂದು ನಿಮ್ಮ ವಿರುದ್ಧ ಧರಣಿ ನಡೆಸಲಿದ್ದಾರಂತೆ. ಪಕ್ಷದ ತತ್ವ - ಸಿದ್ಧಾಂತ ಒಪ್ಪಿ ಬಿಜೆಪಿಗೆ ಬರುವವರಿಗೆ ಮುಕ್ತ ಅವಕಾಶವಿದೆ -ಅಶ್ವತ್ಥನಾರಾಯಣ, ಡಿಸಿಎಂ

ಹಣದ ತತ್ವ, ಹೆಣದ ಸಿದ್ಧಾಂತಕ್ಕೆ ಒಪ್ಪಿದರೆ ಮಾತ್ರವಿರಬೇಕು.


ವಿಪಕ್ಷಗಳು ಮತ್ತು ಟುಕ್ಡೇ ಟುಕ್ಡೇ ಗ್ಯಾಂಗ್ ದೇಶ ಒಡೆಯಲು ಯತ್ನಿಸುತ್ತಿದೆ -ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಆರೆಸ್ಸೆಸ್ ಇರುವಾಗ ಹೊಸ ಗ್ಯಾಂಗ್‌ನ ಅಗತ್ಯವಿದೆಯೇ?


ನನ್ನ ಜಾತ್ಯತೀತ ನಿಲುವನ್ನು ಯಾರೂ ಪ್ರಶ್ನಿಸುವಂತಿಲ್ಲ -ದೇವೇಗೌಡ, ಮಾಜಿ ಪ್ರಧಾನಿ

ಪ್ರಶ್ನಿಸಿದರೆ ತಮ್ಮಲ್ಲಿ ಉತ್ತರವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.


ಮುಂದಿನ ಮೂರು ವರ್ಷ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಪೂರ್ಣಗೊಳಿಸುವುದು ಸೂರ್ಯ-ಚಂದ್ರರಷ್ಟೇ ಖಚಿತ -ಬಿ.ಎಸ್.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ಸೂರ್ಯ, ಚಂದ್ರರು ಮುಂದಿನ ಮೂರು ವರ್ಷ ಮಾತ್ರ ಅಸ್ತಿತ್ವದಲ್ಲಿರುತ್ತಾರೆಯೇ?


ನಮ್ಮ ದೇಶಕ್ಕೆ ಆರೆಸ್ಸೆಸ್‌ನ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ -ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ

ಕಾಂಗ್ರೆಸ್‌ನ ಅಗತ್ಯ ಮುಗಿದ ಬಳಿಕ, ಇದೀಗ ನಿಮ್ಮ ಕುಟುಂಬಕ್ಕೆ ಆರೆಸ್ಸೆಸ್‌ನ ಅಗತ್ಯ ಬಿದ್ದಂತಿದೆ. ಕಾಂಗ್ರೆಸ್‌ನಲ್ಲಿ ಖಾಲಿ ಇಲ್ಲದ ಕುರ್ಚಿ(ಮುಖ್ಯಮಂತ್ರಿ)ಗಾಗಿ ತಿಕ್ಕಾಟ ನಡೆಯುತ್ತಿದೆ -ಜಗದೀಶ್ ಶೆಟ್ಟರ್, ಸಚಿವ
ಬಿಜೆಪಿಯೊಳಗೆ ನಡೆಯುತ್ತಿರುವ ತಿಕ್ಕಾಟ ಯಾವ ರಾಜ್ಯದ ಮುಖ್ಯಮಂತ್ರಿ ಕುರ್ಚಿಗಾಗಿ?


ಮಾರುತಿ ಮಾನ್ಪಡೆ ಸಾವಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಾರಣ -ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ಎಡ ಪಕ್ಷಗಳ ಸಾವಿಗೆ ಕಾರಣರಾದವರ ಹೆಸರನ್ನೂ ಅದರ ನಾಯಕರು ಹುಡುಕುತ್ತಿದ್ದಾರೆ.


ಚೀನಾ ಮತ್ತು ಪಾಕ್‌ನೊಂದಿಗೆ ಯಾವಾಗ ಯುದ್ಧಮಾಡಬೇಕು ಎಂಬ ದಿನಾಂಕವನ್ನು ಪ್ರಧಾನಿ ಮೋದಿ ಈಗಾಗಲೇ ನಿರ್ಧರಿಸಿದ್ದಾರೆ -ಸ್ವತಂತ್ರ ದೇವ್ ಸಿಂಗ್, ಉ.ಪ್ರ.ಬಿಜೆಪಿ ಅಧ್ಯಕ್ಷ

ಬಹುಶಃ ಗಿಳಿಗಳ ಜೊತೆಗೆ ಮಾತುಕತೆ ನಡೆಸಿರುವುದು, ದಿನಾಂಕ ಗೊತ್ತು ಮಾಡುವುದಕ್ಕಾಗಿಯೇ ಇರಬೇಕು.


ಉಪಚುನಾವಣೆಯ ನಂತರ ನಾನು ಮಂತ್ರಿಯಾಗುತ್ತೇನೆ -ಎಂ.ಟಿ.ಬಿ.ನಾಗರಾಜ್, ವಿ.ಪ.ಸದಸ್ಯ
ನೀವು ಮಂತ್ರಿಯಾಗುವುದಕ್ಕಾಗಿ ಉಪಚುನಾವಣೆ ನಡೆಯುತ್ತಿರುವುದೇ?


ಚುನಾವಣೆಗಳಲ್ಲಿ ಹಣ, ಹೆಂಡ ಹಂಚುವ ಸಂಸ್ಕೃತಿ ನಮ್ಮ ಪಕ್ಷದ್ದಲ್ಲ -ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

ನಿಮ್ಮ ಪಕ್ಷದ ಸಂಸ್ಕೃತಿಯೇನಿದ್ದರೂ ಹೆಣ ಮತ್ತು ಹೊಂಡಕ್ಕೆ ಸಂಬಂಧಿಸಿದ್ದು.


ನಾನು ಗೆದ್ದರೆ ಅಮೆರಿಕ ಜಯಗಳಿಸಿದಂತೆ, ಬೈಡೆನ್ ಗೆದ್ದರೆ ಚೀನಾ ಗೆದ್ದಂತೆ -ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ಅಮೆರಿಕ ಸೋತರೆ, ವಿಶ್ವ ಗೆದ್ದಂತೆ.


ಕೌಟುಂಬಿಕ ಭ್ರಷ್ಟಾಚಾರ ದೇಶಕ್ಕೆ ಅಂಟಿದ ಗೆದ್ದಲು -ನರೇಂದ್ರ ಮೋದಿ, ಪ್ರಧಾನಿ
ಅದಕ್ಕಾಗಿ ಕುಟುಂಬವೇ ಇಲ್ಲದ ತಾವು ಅಂಬಾನಿ, ಅದಾನಿ ಮೂಲಕ ಭ್ರಷ್ಟಾಚಾರಕ್ಕೆ ಇಳಿದಿದ್ದೀರಿ.


ಇಡೀ ದೇಶದಲ್ಲಿ ಸಾರ್ವಜನಿಕವಾಗಿ ಕಣ್ಣೀರು ಹಾಕಿರುವ ಮುಖ್ಯಮಂತ್ರಿಯೊಬ್ಬ ಇದ್ದರೆ ಅದು ನಾನು ಮಾತ್ರ -ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಕಣ್ಣೀರು ಹಾಕುವ ಮುಖ್ಯಮಂತ್ರಿಯಲ್ಲ, ಕಣ್ಣೀರು ಒರೆಸುವ ಮುಖ್ಯಮಂತ್ರಿ ಬೇಕಾಗಿದೆ.


ಬೇರೆ ಪಕ್ಷಗಳ ಮುಖಂಡರು ಬಿಜೆಪಿ ಸೇರುವುದರಿಂದ ಹಾಲು - ಸಕ್ಕರೆ ಸೇರಿದಂತಾಗುತ್ತದೆ -ನಳಿನ್‌ಕುಮಾರ್ ಕಟೀಲು, ಸಂಸದ

ಆಲ್ಕೋಹಾಲಿಗೆ ಉಪ್ಪಿನಕಾಯಿ ಬೆಸೆದಂತೆ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ.


ರಾಜಕಾರಣಿಗಳ ಕಷ್ಟ, ಸಂಕಟಗಳು ಸಾರ್ವಜನಿಕರಿಗೆ ಗೊತ್ತಿರುವುದಿಲ್ಲ -ಗೋವಿಂದ ಕಾರಜೋಳ, ಡಿಸಿಎಂ

ಚುನಾವಣೆಗಳು ನಡೆಯುವುದು ರಾಜಕಾರಣಿಗಳ ಕಷ್ಟ, ಸಂಕಟಗಳ ಪರಿಹಾರಕ್ಕೆ ಎನ್ನುವುದು ಗೊತ್ತಾಗಿ ಬಿಟ್ಟಿದೆ.


ಕರ್ನಾಟಕದಲ್ಲಿ ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಕಾಲ ದೂರವಿಲ್ಲ -ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಒಟ್ಟು ಕರ್ನಾಟಕಕ್ಕೆ ಆಪತ್ಕಾಲ.


ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕ -ಬಸವರಾಜ ಬೊಮ್ಮಾಯಿ, ಸಚಿವ
ಉತ್ತರಗಳೇ ಅವರಲ್ಲಿಲ್ಲ ಎಂದ ಮೇಲೆ ಪ್ರಶ್ನೆ ಕೇಳಿ ಏನು ಮಾಡುತ್ತೀರಿ?


ಸದ್ಯ ಕೊನೆಗೊಂಡಿರುವುದು ಲಾಕ್‌ಡೌನ್ ಮಾತ್ರ, ಕೊರೋನ ವೈರಾಣು ಇನ್ನೂ ಇದೆ -ನರೇಂದ್ರ ಮೋದಿ, ಪ್ರಧಾನಿ
ಹಾಗಾದರೆ ಲಾಕ್‌ಡೌನ್ ವಿಧಿಸಿದ್ದಾದರೂ ಯಾಕೆ?


ನಮ್ಮ ಸೇನೆ ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನು ಹೊಡೆದುರಳಿಸುವ ಸಾಮರ್ಥ್ಯ ಹೊಂದಿದೆ -ಯೋಗಿ ಆದಿತ್ಯನಾಥ್, ಉ.ಪ್ರ. ಮುಖ್ಯಮಂತ್ರಿ

ಚೀನಾಕ್ಕೆ ನುಗ್ಗುವ ಬಗ್ಗೆಯೂ ಹೇಳಿ.


ನಾನು ಕಾಗಕ್ಕ, ಗುಬ್ಬಕ್ಕನ ಕಥೆ ಬರೆಯುವವನಲ್ಲ -ಎಚ್.ವಿಶ್ವನಾಥ್, ಎಂಎಲ್‌ಸಿ

ಅವೆಲ್ಲ ಹಳೆಯ ಹಳ್ಳಿ ಹಕ್ಕಿಯ ಕತೆ ಎನ್ನುವುದು ರಾಜ್ಯದ ಜನರಿಗೆ ಗೊತ್ತಾಗಿದೆ.


ಮುಂಬರುವ ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಬಿಜೆಪಿಗೆ ಮತ ಹಾಕಲೂ ಸಿದ್ಧ -ಮಾಯಾವತಿ, ಬಿಎಸ್‌ಪಿ ನಾಯಕಿ
ಬಿಎಸ್‌ಪಿ ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೇ?


ಕಾಂಗ್ರೆಸ್‌ನಲ್ಲಿರುವಂತೆ ನೂರಾರು ಹುಲಿಗಳು ನಮ್ಮಲ್ಲಿಲ್ಲ, ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರೇ ರಾಜಾ ಹುಲಿ -ಆರ್.ಅಶೋಕ್, ಸಚಿವ

ಅದು ಹಲ್ಲು, ಉಗುರು ಕಿತ್ತ ಹುಲಿ.


ಕರ್ನಾಟಕದಲ್ಲಿ ನಿಷ್ಪಕ್ಷಪಾತ ಚುನಾವಣೆ ನಡೆಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ -ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಅಂದರೆ ಈವರೆಗೆ ನಡೆದಿರುವುದೆಲ್ಲ ಪಕ್ಷಪಾತ ಚುನಾವಣೆಯೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು

ಟಾಪ್ ಸುದ್ದಿಗಳು