ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆ ನ.30ಕ್ಕೆ ವಿಸ್ತರಣೆ
ಮಣಿಪಾಲ, ನ.2: ಸಾರ್ವಜನಿಕ ಬೇಡಿಕೆಯಂತೆ ಮಣಿಪಾಲ ಆರೋಗ್ಯ ಕಾರ್ಡ್-2020ರ ನೋಂದಾವಣೆಯನ್ನು ನ.30ರವರೆಗೆ ವಿಸ್ತರಿಸಲಾಗಿದೆ ಎಂದು ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.
ಯೋಜನೆಯ 20ನೇ ವರ್ಷದಲ್ಲಿ ನಾವು ಕಾರ್ಡನ್ನು ಸುಲಭವಾಗಿ ನೋಂದಾ ಯಿಸಲು, ಸರಳ ಹಾಗೂ ಪೂರ್ವ ಸಂಖ್ಯಾ ಮುದ್ರಿತ ಸ್ಮಾರ್ಟ್ ಕಾರ್ಡನ್ನು ಪರಿಚಯಿಸಿದ್ದೇವೆ. ಈ ಸಂಖ್ಯಾ ಮುದ್ರಿತ ಸ್ಮಾರ್ಟ್ ಕಾರ್ಡನ್ನು ಕಾರ್ಡುದಾರರಿಗೆ ಸ್ಥಳದಲ್ಲೇ ನೀಡಲಾಗುವುದು. ಇವುಗಳನ್ನು ಸುಲಭದಲ್ಲಿ ಕೊಂಡೊಯ್ಯ ಬಹುದಾಗಿದೆ ಎಂದವರು ಹೇಳಿದ್ದಾರೆ.
ಸದಸ್ಯತ್ವ ಶುಲ್ಕವಾಗಿ ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಯಾರೂ ಸಹ ಸದಸ್ಯತ್ವವನ್ನು ಪಡೆಯಬಹುದು. ಮಣಿಪಾಲ ಆರೋಗ್ಯಕಾರ್ಡ್ ಒಂದು ವರ್ಷ ಮತ್ತು ಎರಡು ವರ್ಷದ ಯೋಜನೆಯ ಜೊತೆಗೆ ಕಟೀಲಿನ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯನ್ನು ಈ ಸಲದಿಂದ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದರು.
ಆರೋಗ್ಯ ಕಾರ್ಡ್‌ನ್ನು ಒಂದು ಅಥವಾ ಎರಡು ವರ್ಷದ ಅವಧಿಗೆ ಎಷ್ಟು ಬಾರಿಯಾದರೂ ಉಪಯೋಗಿಸಬಹುದು. ಕಾರ್ಡ್ ಹೊಂದಿರುವವರು ಮಣಿಪಾಲ, ಉಡುಪಿ, ಕಾರ್ಕಳ, ಮಂಗಳೂರು, ಗೋವಾ ಮತ್ತು ಕಟೀಲಿ ನಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ದಂತ ಸೇವೆಗಳ ಪ್ರಯೋಜನಗಳನ್ನು ಪಡೆಯಬಹುದು ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.