varthabharthi


ಕಾಲಂ 9

ರಾಜ್ಯಗಳ ಒಕ್ಕೂಟವೋ? ಮೋದಿ ಸರಕಾರದ ಸರ್ವಾಧಿಕಾರವೋ?

ವಾರ್ತಾ ಭಾರತಿ : 4 Nov, 2020
ಶಿವಸುಂದರ್

ಇದು ಕೇವಲ ಭಾರತದ ಫೆಡರಲ್ ಸ್ವರೂಪದ ಮೇಲಿನ ಅಮೂರ್ತ ದಾಳಿಯಲ್ಲ ಅಥವಾ ಒಂದು ಪಕ್ಷವು ಅಧಿಕಾರವನ್ನು ತನ್ನಡಿಯಲ್ಲಿ ಕೇಂದ್ರೀಕರಿಸಿಕೊಳ್ಳುವ ಕೇಂದ್ರೀಕರಣದ ಪ್ರಶ್ನೆಯಲ್ಲ.

ಬದಲಿಗೆ ಇದು ಭಾರತದ ದಮನಿತ ಜನರ ಬದುಕು ಮತ್ತು ಭವಿಷ್ಯಗಳ ಮೇಲೆ ಸ್ವಾತಂತ್ರ್ಯ ಹೋರಾಟದ ಆಶಯಗಳ ಮೇಲೆ, ಭಾರತದ ನಾಗರಿಕತೆಯ ಬಹುತ್ವದ ಅಸ್ಮಿತೆಯ ಮೇಲೆ ನಡೆದಿರುವ ದಾಳಿಯಾಗಿದೆ. ಭಾರತವನ್ನು ಕಾರ್ಪೊರೇಟ್ ಸರ್ವಾಧಿಕಾರಕ್ಕೆ ಒಳಪಡಿಸುವ ಹಾಗೂ ಬ್ರಾಹ್ಮಣೀಯ ಆಧಿಪತ್ಯಕ್ಕೆ ಒಗ್ಗಿಸುವ ಬೃಹತ್ ಫ್ಯಾಶಿಸ್ಟ್ ಕಾರ್ಯತಂತ್ರದ ಭಾಗವಾಗಿದೆ.


ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಭಾರತವು ಫೆಡರಲ್-ಒಕ್ಕೂಟ ಸ್ವರೂಪವನ್ನು ಹೊಂದಿರಬೇಕೋ ಅಥವಾ ಏಕಪ್ರಭುತ್ವರಚನೆಯನ್ನು -ಯೂನಿಟರಿ-ಸ್ವರೂಪವನ್ನು ಹೊಂದಿರಬೇಕೋ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಸತತ ನಾಲ್ಕು ದಿನಗಳ ಕಾಲ ನಡೆದ ಬಿರುಸಿನ ಚರ್ಚೆಗಳ ನಂತರ ಅಂತಿಮವಾಗಿ 1949ರ ಸೆಪ್ಟಂಬರ್ 18ರಂದು ಭಾರತವನ್ನು ‘ರಾಜ್ಯಗಳ ಒಕ್ಕೂಟ’ವೆಂದು ಅಂಗೀಕರಿಸಲಾಯಿತು. ಅದೇ ಭಾರತದ ಸಂವಿಧಾನದ ಅರ್ಟಿಕಲ್ 1 ಕೂಡಾ ಆಯಿತು. ಮುಂದೆ 1973ರಲ್ಲಿ ಪ್ರಖ್ಯಾತ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ 13 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವೂ ಸಹ ಭಾರತದ ‘ಫೆಡರಲ್’ ಸ್ವರೂಪವನ್ನು ಸಂಸತ್ತು ಕೂಡಾ ಬದಲಿಸಲಾಗದ ‘‘ಭಾರತದ ಸಂವಿಧಾನದ ಮೂಲರಚನೆಯಾಗಿದೆ’’ ಎಂದು ತೀರ್ಪನ್ನಿತ್ತಿತು. ಆ ನಂತರ 1989ರ ಬೊಮ್ಮಾಯಿ ಪ್ರಕರಣವನ್ನೂ ಒಳಗೊಂಡಂತೆ ಹಲವಾರು ಪ್ರಕರಣಗಳಲ್ಲಿ ಸುಪ್ರೀಂಕೋರ್ಟು ಭಾರತದ ಫೆಡರಲ್ ಸ್ವರೂಪವು ಭಾರತದ ಸಂವಿಧಾನದ ಮೂಲರಚನೆಯೆಂದು ಹಲವರು ಬಾರಿ ಪುನುರುಚ್ಚರಿಸಿದೆ.

ಸಾರ್ವಭೌಮತ್ವದ ಸಮಾನ ಹಂಚಿಕೆ

ಫೆಡರಲ್ ಎಂದರೆ ಏನು ಮತ್ತು ಹೇಗೆ ಎಂಬುದನ್ನೂ ಸಹ ಭಾರತದ ಸಂವಿಧಾನದ ಏಳನೇ ಶೆಡ್ಯೂಲ್ ಸ್ಪಷ್ಟಪಡಿಸುತ್ತದೆ. ಅದರ ಪ್ರಕಾರ ಭಾರತದ ಸಾರ್ವಭೌಮತೆಯು ಕೇಂದ್ರ ಹಾಗೂ ರಾಜ್ಯಗಳ ನಡುವೆ ಹಂಚಿಕೊಂಡಿರುವ ಸಾರ್ವಭೌಮತೆಯಾಗಿದೆ. ಸಾರ್ವಭೌಮತೆಯು ಪ್ರಧಾನವಾಗಿ ಇರುವುದು ಶಾಸನಗಳನ್ನು ಮಾಡುವ ಹಾಗೂ ತೆರಿಗೆಗಳನ್ನು ಹಾಕುವ ಪರಮಾಧಿಕಾರದಲ್ಲಿ. ಈ ಪರಮಾಧಿಕಾರವನ್ನು ಏಳನೇ ಶೆಡ್ಯೂಲಿನಲ್ಲಿ ಮೂರು ಬಗೆಯಲ್ಲಿ ವರ್ಗೀಕರಿಸಲಾಗಿದೆ. ಮೊದಲನೇ ಪಟ್ಟಿಯಲ್ಲಿ ಭಾರತ ಸಂಸತ್ತು ಮಾತ್ರ ಶಾಸನಗಳನ್ನು ಮಾಡಿ ಕೇಂದ್ರ ಸರಕಾರ ಜಾರಿ ಮಾಡುವ ಪಟ್ಟಿ. ಇದರಲ್ಲಿ ರಕ್ಷಣೆ, ಆಂತರಿಕ ಭದ್ರತೆ, ಹಣಕಾಸು, ವಿದೇಶ ವ್ಯವಹಾರಗಳಂತಹ 97 ಬಾಬತ್ತುಗಳಿವೆ. ಎರಡನೆಯ ಪಟ್ಟಿಯಲ್ಲಿ ರಾಜ್ಯಗಳ ಶಾಸನಸಭೆಗಳು ಮಾತ್ರ ಶಾಸನ ಮಾಡಬಲ್ಲ ಹಾಗೂ ರಾಜ್ಯ ಸರಕಾರಗಳು ಮಾತ್ರ ಜಾರಿ ಮಾಡುವ ಅಧಿಕಾರವುಳ್ಳ ಸಾರ್ವಜನಿಕ ಆರೋಗ್ಯ, ರಾಜ್ಯದೊಳಗಿನ ಕಾನೂನು ಸುವ್ಯವಸ್ಥೆ, ಕೃಷಿ, ಕೈಗಾರಿಕೆ ಗಳಂತಹ 66 ಬಾಬತ್ತುಗಳಿವೆ. ಇವಲ್ಲದೆ ಕೇಂದ್ರ ಹಾಗೂ ರಾಜ್ಯಗಳೆರಡೂ ಪರಸ್ಪರ ಸಮಾಲೋಚನೆ ಮಾಡಿ ಶಾಸನ ಮಾಡಬಲ್ಲ ಹಾಗೂ ದೇಶಾದ್ಯಂತ ಏಕರೂಪಿಯಾದ ರೂಪ-ರಚನೆಗಳು ಬೇಕಾದಂತಹ ಕ್ರಿಮಿನಲ್ ಪ್ರೊಸೀಜರ್ ಕೋಡ್, ಸಿವಿಲ್ ಪ್ರೊಸೀಜರ್ ಕೋಡ್, ಅಂತರ್‌ರಾಜ್ಯ ಸಾಗಾಟದಂತಹ ವಿಷಯಗಳನ್ನುಳ್ಳ 47 ಬಾಬತ್ತುಗಳನ್ನು ಮೂರನೇ- ಸಮವರ್ತಿ ಪಟ್ಟಿಯಲ್ಲಿ ಇರಿಸಲಾಗಿದೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಶಿಕ್ಷಣವನ್ನೂ ರಾಜ್ಯಗಳ ಪಟ್ಟಿಯಿಂದ ತೆಗೆದು ಸಮವರ್ತಿ ಪಟ್ಟಿಗೆ ಸೇರಿಸಲಾಯಿತು.

ಈ ಹಂಚಿಕೊಂಡ ಸಾರ್ವಭೌಮಿ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳೆರಡೂ ಜನರ ಮೇಲೆ ತೆರಿಗೆ ವಿಧಿಸುತ್ತವೆ. ಜಿಎಸ್‌ಟಿ ಪದ್ಧತಿ ಜಾರಿಯಾದ ಮೇಲೆ ಸ್ವತಂತ್ರವಾಗಿ ರಾಜ್ಯಗಳು ತೆರಿಗೆ ವಿಧಿಸಬಹುದಾದ ಅಧಿಕಾರ ಬಹುಮಟ್ಟಿಗೆ ಮೊಟಕಾಗಿದೆ. ಆದರೆ ಕೇಂದ್ರವು ರಾಜ್ಯಗಳ ಜನರ ಮೇಲೆ ವಿಧಿಸುವ ತೆರಿಗೆಯಲ್ಲಿ ರಾಜ್ಯಗಳ ಪಾಲು ಇರುತ್ತದೆಯಾದ್ದರಿಂದ ಅದನ್ನು ಯಾವ ಪ್ರಮಾಣದಲ್ಲಿ ಹಂಚಬೇಕೆಂಬ ಸೂತ್ರವನ್ನು ನಿರ್ಧರಿಸಲು ಸಾಂವಿಧಾನಾತ್ಮಕವಾದ ಹಣಕಾಸು ಆಯೋಗವು ಕಾಲಕಾಲಕ್ಕೆ ನೇಮಕವಾಗುತ್ತದೆ. ಅದರ ಜೊತೆಗೆ ಮೋದಿ ಸರಕಾರ ಅಧಿಕಾರಕ್ಕೆ ಬರುವವರೆಗೆ ರಾಜ್ಯಗಳ ಯೋಜನಾ ಸಮಾಲೋಚನೆಯನ್ನ್ನು ಹಾಗೂ ರಾಜ್ಯಗಳ ಅನುದಾನಗಳನ್ನು ನಿರ್ಧರಿಸುವ ಸಲುವಾಗಿ ‘ಯೋಜನಾ ಆಯೋಗ’ ಎಂಬುದೊಂದಿತ್ತು.

ಅಶಕ್ತ ಫೆಡರಲಿಸಂ- ಬಡಕಲು ರಾಜ್ಯಗಳು
ಅವೆಲ್ಲಾ ಏನೇ ಇದ್ದರೂ, ಪ್ರಾರಂಭದಿಂದಲೂ ರಾಜ್ಯಗಳಿಗೆ ಹೆಚ್ಚಿನ ಸ್ಥಾನಮಾನವನ್ನು ಹಾಗೂ ಸ್ವಾಯತ್ತತೆಯನ್ನು ಕೊಡುವುದರ ಬಗ್ಗೆ ಕೇಂದ್ರದಲ್ಲಿ ಈವರೆಗೆ ಆಳ್ವಿಕೆ ಮಾಡಿರುವ ಯಾವುದೇ ಸರಕಾರಗಳಿಗೂ, ವಿಶೇಷವಾಗಿ ಕಾಂಗ್ರೆಸ್‌ಗೂ ಹೃತ್ಪೂರ್ವಕವಾದ ಸಮ್ಮತಿಯೇನೂ ಇರಲಿಲ್ಲ. ವಾಸ್ತವವಾಗಿ ಭಾಷಾವಾರು ರಾಜ್ಯಗಳ ರಚನೆಯ ಬಗ್ಗೆ ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ಭರವಸೆಯನ್ನು ನೀಡಿದ್ದರೂ ಸ್ವಾತಂತ್ರ್ಯಾನಂತರ ಕರ್ನಾಟಕವನ್ನೂ ಒಳಗೊಂಡಂತೆ ಆಂಧ್ರ, ಮಹಾರಾಷ್ಟ್ರ, ಗುಜರಾತ್, ಒಡಿಶಾಗಳಲ್ಲಿ ಒಂದು ದಶಕಗಳ ಕಾಲ ಜನಚಳವಳಿಗಳು ನಡೆದು ನೂರಾರು ಹೋರಾಟಗಾರರು ಹುತಾತ್ಮರಾದ ನಂತರವೇ ಭಾಷಾವಾರು ಪ್ರಾಂತಗಳು ರಚನೆಯಾದವು. ವಾಸ್ತವದಲ್ಲಿ ಈಗ ಅಧಿಕಾರದಲ್ಲಿರುವ ಬಿಜೆಪಿಯ ಗುರುಪೀಠವಾದ ಆರೆಸ್ಸೆಸ್ ಭಾಷಾವಾರು ಪ್ರಾಂತ ರಚನೆಗೂ ಹಾಗೂ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಕೊಡುವುದಕ್ಕೂ ಸದಾ ವಿರೋಧ ವ್ಯಕ್ತಪಡಿಸುತ್ತಲೇ ಇದ್ದವು. ಅವರ ಮುಖವಾಣಿಯಾದ ‘ಆರ್ಗನೈಸರ್’ ಪತ್ರಿಕೆಯಂತೂ 1949ರ ನವೆಂಬರ್ 30ರ ಸಂಚಿಕೆಯಲ್ಲೇ ಭಾರತದ ಸಂವಿಧಾನಕ್ಕೆ ಮತ್ತು ಅದರ ಫೆಡರಲ್ ಸ್ವರೂಪಕ್ಕೆ ಸಂಪೂರ್ಣ ವಿರೋಧವನ್ನು ವ್ಯಕ್ತಪಡಿಸಿತ್ತು.

ಆ ನಂತರವೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರಗಳು ಸಾಂವಿಧಾನಿಕವಾದ ರಾಷ್ರಪತಿ ಹಾಗೂ ರಾಜ್ಯಪಾಲರ ಹುದ್ದೆಗಳನ್ನು ರಾಜ್ಯಗಳನ್ನು ರಾಜಕೀಯವಾಗಿ ಹತೋಟಿಯಲ್ಲಿಟ್ಟುಕೊಳ್ಳುವ ಕೇಂದ್ರ ಸರಕಾರದ ಕಚೇರಿಯನ್ನಾಗಿ ಬಳಸಿಕೊಳ್ಳುತ್ತಾ ಬಂದಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ.

ಭಾರತದ ಫೆಡರಲಿಸಂನ ಕಾರ್ಪೊರೇಟೀಕರಣ!
ಆದರೆ 1991ರ ನಂತರದಲ್ಲಿ ಭಾರತದ ಆರ್ಥಿಕತೆಯ ನಾಯಕತ್ವವನ್ನು ಸರಕಾರದ ಬದಲಿಗೆ ದೇಶೀ ಹಾಗೂ ವಿದೇಶೀ ದೈತ್ಯಕಾರ್ಪೊರೇಟ್ ಬಂಡವಾಳಿಗರಿಗೆ ವಹಿಸಿಕೊಡಲಾಯಿತಷ್ಟೇ. ಕಾರ್ಪೊರೇಟ್ ಲಾಭಾಸಕ್ತಿಗಳಿಗೆ ಭಾರತವು ಆವರೆಗೂ ಆರ್ಥಿಕತೆ ಮತ್ತು ರಾಜಕೀಯದಲ್ಲಿ ಅನುಸರಿಸಿಕೊಂಡು ಬಂದಿದ್ದ ಅರೆಮನಸ್ಸಿನ ರಾಷ್ಟ್ರೀಕರಣ ಹಾಗೂ ಫೆಡರಲ್ ಪದ್ಧತಿಗಳು ಅಡ್ಡಿಯಾಗಲಾರಂಭಿಸಿದವು. ಕಾರ್ಪೊರೇಟುಗಳಿಗೆ ಇಡೀ ಭಾರತವೇ ಒಂದು ದೇಶ-ಒಂದು ಮಾರುಕಟ್ಟೆಯಾದರೆ ಮಾತ್ರ ಲಾಭದಾಯಕ. ಪ್ರತಿ ರಾಜ್ಯಗಳೂ ಭಿನ್ನಭಿನ್ನವಾದ ತೆರಿಗೆ ನೀತಿ, ಕಾರ್ಮಿಕ, ಬಂಡವಾಳ ಹೂಡಿಕೆ, ಪರಿಸರ, ಭೂ-ಹಿಡುವಳಿ, ಖನಿಜ ಹಾಗೂ ಜಲ ನೀತಿಗಳನ್ನು ಹೊಂದಿದ್ದರೆ ಒಂದು ಕಾರ್ಪೊರೇಟ್ ಉದ್ದಿಮೆಗೆ ಲಾಭದ ಸುಲಿಗೆ ಸುಲಭವಲ್ಲ. ಹೀಗಾಗಿ ಅವುಗಳು ಈ ಎಲ್ಲಾ ವಲಯಗಳಲ್ಲಿ ಒಂದೇ ಬಗೆಯ ಮಾತ್ರವಲ್ಲ ಕಾರ್ಪೊರೇಟ್ ಪರವಾದ ನೀತಿಗಳನ್ನು ತರುವ ಒತ್ತಡವನ್ನು ಹಾಕುತ್ತಿದ್ದವು. ಆದರೆ 90ರ ದಶಕದಲ್ಲಿ ಭಾರತದ ರಾಜಕೀಯದಲ್ಲಿ ಅಸ್ಥಿರತೆ ತಲೆದೋರಿತ್ತು. ಆ ಕಾರಣದಿಂದಾಗಿ 1991-2014ರವರೆಗೆ ಕಾಂಗ್ರೆಸ್ ನೇತೃತ್ವದ ಸರಕಾರಗಳಿಗಾಗಲೀ, ಬಿಜೆಪಿ ನೇತೃತ್ವದ ಸರಕಾರಗಳಿಗಾಲೀ, ಎರಡನ್ನೂ ಹೊರತುಪಡಿಸಿದ ಖಿಚಡಿ ಸರಕಾರಗಳಿಗಾಗಲೀ ಫೆಡರಲ್ ಸ್ವರೂಪಕ್ಕೇ ಧಕ್ಕೆ ತರುವ ಮೂಲಭೂತ ತಿದ್ದುಪಡಿ ತರುವ ಆಶಯವಿದ್ದರೂ, ಅನುಷ್ಠಾನಗೊಳಿಸಲು ಬೇಕಾದಷ್ಟು ಶಾಸಕರ ಬಲ ದಕ್ಕಿಸಿಕೊಳ್ಳಲಾಗಿರಲಿಲ್ಲ. ಭಾರತದಲ್ಲಿ ಜಾಗತೀಕರಣ ನೀತಿಗಳು ಅಧಿಕೃತವಾಗಿ ಅನುಷ್ಠಾನಗೊಳ್ಳಲು ಪ್ರಾರಂಭಿಸಿದ 25 ವರ್ಷಗಳ ನಂತರ ಪ್ರಥಮ ಬಾರಿಗೆ 2014ರಲ್ಲಿ ಲೋಕಸಭೆಯಲ್ಲಿ ಬಿಜೆಪಿಗೆ ತನ್ನದೇ ಬಹುಮತವಿರುವಷ್ಟು ಸದಸ್ಯ ಬಲ ದಕ್ಕಿತು ಹಾಗೂ ಅದಕ್ಕೆ ಪ್ರತಿಯಾಗಿ ಕಾಂಗ್ರೆಸನ್ನೂ ಒಳಗೊಂಡಂತೆ ಇತರ ಎಲ್ಲಾ ವಿರೋಧ ಪಕ್ಷಗಳು ಅತ್ಯಂತ ದುರ್ಬಲ ಪರಿಸ್ಥಿತಿ ತಲುಪಿದವು. 2019ರ ಚುನಾವಣೆಯಲ್ಲಿ ಬಿಜೆಪಿಯ ಸಂಖ್ಯಾ ಪರಿಸ್ಥಿತಿ ಇನ್ನಷ್ಟು ಹೆಚ್ಚಿತು ಮತ್ತು ರಾಜ್ಯಸಭೆಯಲ್ಲೂ ಕೂಡ ಅದು ಬಹುಮತವಿಲ್ಲದಿದ್ದರೂ ಅತಿಹೆಚ್ಚು ಸಂಖ್ಯಾಬಲವಿರುವ ಪಕ್ಷವಾಗಿದೆ. ಮುಂದಿನ ಎರಡು-ಮೂರು ತಿಂಗಳಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಗಳಲ್ಲಿ ಅದು ರಾಜ್ಯಸಭೆಯಲ್ಲೂ ಬಹುಮತವನ್ನು ಪಡೆಯುವ ಹೊಸ್ತಿಲಲ್ಲಿದೆ.

ಮೋದಿ ಸರಕಾರ- ಕಾರ್ಪೊರೇಟ್ ಮತ್ತು ಮನುವಾದಿ ಸರ್ವಾಧಿಕಾರ

ಬಿಜೆಪಿಯ ಆರ್ಥಿಕ ನೀತಿ ಎಗ್ಗುಸಿಗ್ಗಿಲ್ಲದ ದೇಶಿ-ವಿದೇಶೀ ಕಾರ್ಪೊರೇಟ್‌ದೈತ್ಯರ ಪರವಾದ ನೀತಿಗಳಾಗಿವೆ. ಅದಕ್ಕೆ ಅಡ್ಡಿಯಾಗುತ್ತಿರುವ ಈ ಫೆಡರಲ್ ಸ್ವರೂಪದ ಸಂವಿಧಾನವನ್ನು ಅವರು ಅಸಹ್ಯಿಸಿಕೊಳ್ಳುತ್ತಾರೆ. ಬಿಜೆಪಿಯ ಗುರುಪೀಠವಾದ ಆರೆಸ್ಸೆಸಂತೂ ಅಸ್ತಿತ್ವಕ್ಕೆ ಬಂದಿರುವುದೇ ಭಾರತದ ಬಹುಭಾಷಿಕ, ಬಹುಧಾರ್ಮಿಕ ಅನನ್ಯತೆಗಳನ್ನು ನಾಶಮಾಡಿ ಒಂದೇ ಧರ್ಮ, ಒಂದೇ ಭಾಷೆ ಮತ್ತು ಒಂದು ಸಂಸ್ಕೃತಿಯನ್ನು ಜಾರಿ ಮಾಡಲು. ಹೀಗೆ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಹುತ್ವ ಮತ್ತು ಪೆಡರಲ್ ತತ್ವಗಳನ್ನು ನಾಶಮಾಡಿ ಆರ್ಥಿಕ ಹಾಗೂ ಸಾಂಸ್ಕೃತಿಕ ಏಕರೂಪತೆಯನ್ನು ಹೇರುವ ಸಿದ್ಧಾಂತ ಹಾಗೂ ಉದ್ದೇಶವುಳ್ಳ ಬಿಜೆಪಿ ಸರಕಾರಕ್ಕೆ ಅಗತ್ಯ ಸಂಖ್ಯಾಬಲದ ರಾಜಕೀಯ ಅಧಿಕಾರವೂ ಸಿಕ್ಕ ಮೇಲೆ ಮೋದಿ ಸರಕಾರದ ಭಾರತದ ಫೆಡರಲ್ ರಚನೆಗಳ ಮೇಲೆ ಬಹಿರಂಗ ಯುದ್ಧವನ್ನು ಸಾರಿದೆ. ಕಾರ್ಪೊರೇಟ್ ಮತ್ತು ಹಿಂದುತ್ವವಾದಿ ಸರ್ವಾಧಿಕಾರವನ್ನು ಹೇರುತ್ತಿದೆ. ರಾಜ್ಯಗಳನ್ನು ಗುಲಾಮರನ್ನಾಗಿ ನಡೆಸಿಕೊಳ್ಳುತ್ತಿದೆ.

ರಾಜ್ಯಗಳ ಗುಲಾಮಗಿರಿಯ ಆಯಾಮಗಳು
ಈಗಾಗಲೇ ಚರ್ಚಿಸಿದಂತೆ ಕೇಂದ್ರವು ಸಂಗ್ರಹಿಸುವ ತೆರಿಗೆಗಳಲ್ಲಿ ರಾಜ್ಯಗಳ ಅಧಿಕೃತ ಪಾಲೂ ಇರುತ್ತದೆ. ಅದರ ಪ್ರಮಾಣವನ್ನು ತೀರ್ಮಾನಿಸುವ ಸಾಂವಿಧಾನಿಕ ಅಧಿಕಾರವನ್ನು ಹಣಕಾಸು ಆಯೋಗಕ್ಕೆ ಕೊಡಲಾಗಿದೆ. ಮೋದಿ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದಾಗ ರಾಜ್ಯಗಳ ತೆರಿಗೆಯೆ ಪಾಲನ್ನು ಶೇ. 32ರಿಂದ ಶೇ.42ಕ್ಕೆ ಏರಿಸಲಾಗುವುದೆಂದು ಹಾಗೂ ತಮ್ಮ ಸರಕಾರ ‘ಸಹಕಾರಿ ಒಕ್ಕೂಟ ತತ್ವ’ದಲ್ಲಿ ನಂಬಿಕೆ ಹೊಂದಿರುವುದಾಗಿಯೂ ಹೇಳಿತ್ತು. ಆದರೆ ವಾಸ್ತವದಲ್ಲಿ ರಾಜ್ಯಗಳ ಪಾಲೂ ಹೆಚ್ಚಲಿಲ್ಲ. ಮೋದಿ ಸರಕಾರ ಸಹಕಾರಿ ತತ್ವವನ್ನೂ ಪಾಲಿಸಲಿಲ್ಲ. ಈಗಾಗಲೇ ಸಾಕಷ್ಟು ಚರ್ಚೆಯಾಗಿರುವಂತೆ ಕೇಂದ್ರ ಸರಕಾರವು ಸೆಸ್-ಮೇಲ್ತೆರಿಗೆಗಳ ಮೂಲಕ ಕಳೆದ ವರ್ಷವೊಂದರಲ್ಲೇ 3ಲಕ್ಷಕೋಟಿ ರೂಪಾಯಿಗಳಿಗೂ ಹೆಚ್ಚಿನ ಸಂಪನ್ಮೂಲವನ್ನು ಸಂಗ್ರಹ ಮಾಡಿದೆ. ಶಾಸನಾತ್ಮಕವಾಗಿ ಈ ಹೆಚ್ಚುವರಿ ಹಾಗೂ ಮೇಲ್ತೆರಿಗೆಗಳು ರಾಜ್ಯಗಳೊಡನೆ ಹಂಚಿಕೊಳ್ಳಬೇಕಾದ ಡಿವಿಸಬಲ್ ಪೂಲ್‌ನ ಭಾಗವಾಗುವುದಿಲ್ಲ. ಅದು ಇಡಿಯಾಗಿ ಕೇಂದ್ರಕ್ಕೆ ಸೇರುತ್ತದೆ. ಇದು ಕಾಂಗ್ರೆಸ್ ಕಾಲದಲ್ಲೂ ಆಗಾಗ ಆಗುತ್ತಿತ್ತು. ಆದರೆ, ರಾಜ್ಯಗಳೊಂದಿಗೆ ಹಣಕಾಸನ್ನು ಹಂಚಿಕೊಳ್ಳುವ ವಿಷಯದಲ್ಲಿ ಅದಕ್ಕಿಂತ ಮೋದಿ ಸರಕಾರವು ಅತ್ಯಂತ ಅಪಾಯಕಾರಿಯಾದ ಅಸಾಂವಿಧಾನಿಕ ತಿದ್ದುಪಡಿಯನ್ನು ಮಾಡಿದೆ.

ಕೇಂದ್ರ ಸರಕಾರದ ತೆರಿಗೆಗಳಲ್ಲಿ ಕೇಂದ್ರವು ತನ್ನ ಖರ್ಚಿನ ಬಾಬತ್ತುಗಳಿಗೆ ಬೇಕಾದ ಸಂಪನ್ಮೂಲವನ್ನು ಎತ್ತಿಟ್ಟುಕೊಂಡು ಉಳಿದ ಮೊತ್ತವನ್ನು ರಾಜ್ಯಗಳಿಗೆ ಹಂಚಲು ತೆಗೆದಿರಿಸುತ್ತದೆಯಷ್ಟೇ..ಅದನ್ನು ‘ಡಿವಿಸಬಲ್ ಪೂಲ್’ ಎಂದು ಕರೆಯಲಾಗುತ್ತದೆ. ಅದರೆ 2019ರಲ್ಲಿ ಮೋದಿ ಸರಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಕೇಂದ್ರ ಸರಕಾರದ ಬಾಬತ್ತಿಗೆ ಒಳಪಡುವ ರಕ್ಷಣೆ ಮತ್ತು ಆಂತರಿಕ ಭದ್ರತೆಯ ಹಣವನ್ನೂ ಸಹ ರಾಜ್ಯಗಳಿಗೆ ಸಲ್ಲಬೇಕಾದ ಡಿವಿಸಬಲ್ ಪೂಲ್‌ನಿಂದ ಕಿತ್ತುಕೊಳ್ಳಲು ರಾಷ್ಟ್ರೀಯ ಸುರಕ್ಷಾ ನಿಧಿಯೊಂದನ್ನು ರಚಿಸಲು ಪೂರಕವಾಗುವಂತೆ ಹಣಕಾಸು ಆಯೋಗದ ಕಾಯ್ದೆಗೆ ತಿದ್ದುಪಡಿ ತಂದಿದೆ. ಇದರಿಂದಾಗಿ ಇನ್ನು ಮುಂದೆ ಕೇಂದ್ರ ತೆರಿಗೆಯಲ್ಲಿ ರಾಜ್ಯಗಳ ಪಾಲು ಇನ್ನೂ ಕಡಿಮೆಯಾಗುತ್ತದೆ. ಆದರೆ ಅದರ ಬದಲಾಗಿ ರಕ್ಷಣೆ ಹಾಗೂ ಆಂತರಿಕ ಭದ್ರತೆಗಳ ವಿಷಯದಲ್ಲಿ ಶಾಸನ ಮಾಡುವ ವಿಷಯದಲ್ಲಿ ಮಾತ್ರ ರಾಜ್ಯಗಳ ಪಾತ್ರ ಏನೇನೂ ಇರುವುದಿಲ್ಲ. ಅಂದರೆ ರಾಜ್ಯಗಳು ಮೋದಿ ಸಾಮ್ರಾಟರಿಗೆ ಕಪ್ಪಕೊಡುವ ಸಾಮಂತರಷ್ಟೇ.

ಅದೇ ರೀತಿ ಕೇಂದ್ರದಿಂದ ರಾಜ್ಯಗಳಿಗೆ ಸಂಪನ್ಮೂಲಗಳು ಹರಿದು ಬರಬೇಕಾದ ಇತರ ಎರಡು ಮೂಲಗಳಾದ ಕೇಂದ್ರೀಯ ಯೋಜನೆಗಳು ಹಾಗೂ ಅನುದಾನಗಳ ಮೊತ್ತದಲ್ಲೂ ಮೋದಿ ಸರಕಾರ ದೊಡ್ಡಕಡಿತವನ್ನು ಮಾಡಿದೆ. ಹೀಗಾಗಿ ಸಾರಾಂಶದಲ್ಲಿ ಮಾಧ್ಯಮಗಳ ಮುಂದೆ ಮೋದಿ ಸರಕಾರ ದೊಡ್ಡದಾಗಿ ರಾಜ್ಯಗಳ ಪಾಲನ್ನು ಶೇ. 10ರಷ್ಟು ಹೆಚ್ಚಿಸಿರುವುದಾಗಿ ಪುಕ್ಕಟೆ ಪ್ರಚಾರ ತೆಗೆದುಕೊಂಡಿದ್ದರೂ ವಾಸ್ತವದಲ್ಲಿ ಮೊದಲಿನಷ್ಟೆ ಅಥವಾ ಮೊದಲಿಗಿಂತಲೂ ಕಡಿಮೆ ಪಾಲನ್ನೇ ರಾಜ್ಯಗಳು ಪಡೆದುಕೊಳ್ಳುತ್ತಿವೆ.

ಆದರೆ ಮೋದಿ ಸರಕಾರದ ಸರ್ವಾಧಿಕಾರ ಇರುವುದು ಇಂತಹ ವಂಚನೆಯಲ್ಲಿ ಮಾತ್ರವಲ್ಲ..ಬದಲಿಗೆ ರಾಜ್ಯಗಳನ್ನು ಶಾಸನಾತ್ಮಕವಾಗಿ ಗುಲಾಮಗಿರಿಗೆ ತಳ್ಳುತ್ತಿರುವುದರಲ್ಲಿ.. ಮೋದಿ ಸರಕಾರದಲ್ಲಿ ರಾಜ್ಯಗಳ ಪಾಲು ಮಾತ್ರಕಡಿಮೆಯಾಗುತ್ತಿರುವುದಲ್ಲ.. ಬದಲಿಗೆ ತಮ್ಮ ಪಾಲನ್ನು ಪಡೆದುಕೊಳ್ಳಲು ರಾಜ್ಯಗಳು ಮೋದಿ ಸರಕಾರ ವಿಧಿಸುವ ಶರತ್ತುಗಳನ್ನೆಲ್ಲ ಪಾಲಿಸಲೇ ಬೇಕಾಗಿದೆ..

ಮೋದಿ ಸರಕಾರ 15ನೇ ಹಣಕಾಸು ಆಯೋಗಕ್ಕೆ ರಾಜ್ಯಗಳನ್ನು ಆರ್ಥಿಕ ಗುಲಾಮಗಿರಿಗೆ ತಳ್ಳುವಂತೆ ಮಾಡುವ ಹೊಸ ಸೂಚನೆಯೊಂದನ್ನು ನೀಡಿದೆ. ಆಯೋಗಕ್ಕೆ ಮಾರ್ಗದರ್ಶನ ಮಾಡುವ ಟರ್ಮ್ಸ್ ಆಫ್ ರೆಫರೆನ್ಸ್- ಣ್ಕ-ಗಳ 7(ಜಿಜಿ)ನೇ ಸೆಕ್ಷನ್ ನಲ್ಲಿಯಾವುದಾದರೂ ರಾಜ್ಯ ಸರಕಾರವು ಕೇಂದ್ರ ಸರಕಾರದ ಸೂಚನೆಗಳಿಗೆ ಭಿನ್ನವಾಗಿ ‘ಜನಪ್ರಿಯ’ (ಪಾಪ್ಯುಲಿಸ್ಟ್) ಯೋಜನೆಗಳನ್ನು ಅನುಸರಿಸುತ್ತಿದ್ದರೆ ಆ ರಾಜ್ಯಗಳಿಗೆ ಅನುದಾನಕಡಿತ ಮಾಡುವ ಬಗೆಯನ್ನು ಸೂಚಿಸಲುಕೋರಿದೆ. ಹಾಗೆಯೇ ಕೇಂದ್ರದ ಅನುದಾನವನ್ನು ಪಡೆಯಲು ರಾಜ್ಯ ಸರಕಾರಗಳು ಎಷ್ಟರ ಮಟ್ಟಿಗೆ ತಮ್ಮ ‘‘ಬಂಡವಾಳ ವೆಚ್ಚವನ್ನು ಹೆಚ್ಚಿಸಿಕೊಂಡಿವೆ, ವಿದ್ಯುತ್ ಕ್ಷೇತ್ರದ ನಷ್ಟಗಳನ್ನು ಕಡಿತಗೊಳಿಸಿವೆ, ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುವಂತಹ ಕ್ರಮಗಳ ಮೂಲಕ ಎಷ್ಟರ ಮಟ್ಟಿಗೆ ‘ಉಳಿತಾಯ’ವನ್ನು ಸಾಧಿಸಿವೆ, ಎಷ್ಟರ ಮಟ್ಟಿಗೆ ಡಿಜಿಟಲ್ ಆರ್ಥಿಕತೆಯನ್ನು ಸಾಧಿಸಿವೆ’’ ಎಂಬವುಗಳನ್ನು ಮಾನದಂಡಗಳಾಗಿ ಇಟ್ಟುಕೊಳ್ಳಲು ಕೂಡಾ ಆದೇಶಿಸಿದೆ.

ಅದೇ ರೀತಿ ಕೋವಿಡ್ ಸಂದರ್ಭದಲ್ಲಿ ರಾಜ್ಯಗಳು ಕೇಂದ್ರದಿಂದ ಬಿಕ್ಕಟ್ಟಿನ ಹೆಚ್ಚುವರಿ ಅನುದಾನವನ್ನು ಪಡೆದುಕೊಳ್ಳಲು ಹಾಗೂ ಬ್ಯಾಂಕುಗಳಿಂದ ಸಾರ್ವಭೌಮಿ ಗ್ಯಾರಂಟಿಯ ಸಾಲಗಳನ್ನು ಪಡೆದುಕೊಳ್ಳಲೂ ಸಹ ವಿದ್ಯುತ್‌ವಿತರಣಾ ನಷ್ಟ ತಡೆ, ಎಪಿಎಂಸಿ ಕಾಯ್ದೆ ತಿದ್ದುಪಡಿಗಳನ್ನು ಮಾಡುವುದು ಹಾಗೂ ಒಂದು ದೇಶ ಒಂದು ರೇಷನ್‌ಕಾರ್ಡ್ ಪದ್ಧತಿಯನ್ನು ಜಾರಿ ಮಾಡಿರುವುದನ್ನು ಕಡ್ಡಾಯಗೊಳಿಸಿದೆ


ಈ ಶರತ್ತುಗಳೆಲ್ಲವೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರ್ಪೊರೇಟ್ ವಲಯದ ಲಾಭಗಳನ್ನು ಹೆಚ್ಚಿಸುವ ಶರತ್ತುಗಳೇ ಆಗಿದ್ದು ಮೋದಿ ಸರಕಾರ ಮೇಲಿನ ರೀತಿ ಈವರೆಗೆ ಪಾಲಿಸಿಕೊಂಡು ಬಂದಿದ್ದ ಫೆಡರಲ್ ತತ್ವಗಳನ್ನೆಲ್ಲಾ ಗಾಳಿಗೆ ತೂರಿ ರಾಜ್ಯಗಳನ್ನು ಕಾರ್ಪೊರೇಟ್ ಗುಲಾಮಗಿರಿಗೆ ತಳ್ಳುವ ಸರ್ವಾಧಿಕಾರವನ್ನು ಹೇರುತ್ತಿದೆ. ರಾಜ್ಯಗಳಿಗೆ ಸೀಮಿತವಾದ ವಲಯಗಳ ಆಕ್ರಮಣ


ಕೋವಿಡ್ ಸಂದರ್ಭದಲ್ಲಿ ಮೊದಲು ಸುಗ್ರೀವಾಜ್ಞೆಯ ಮೂಲಕ ಆ ನಂತರ ಸಾಮ, ಭೇದ ನೀತಿಗಳ ಮೂಲಕ ಸಂಸತ್ತಿನಲ್ಲಿ ಮೋದಿ ಸರಕಾರ ಜಾರಿ ಮಾಡಿದ ಮೂರೂ ಕೃಷಿ ನೀತಿಗಳು ಕೂಡಾ ರಾಜ್ಯಗಳ ಹಕ್ಕುಗಳ ಹರಣವಾಗಿದೆ. ಕೃಷಿಯೆಂಬುದು ಸಂಪೂರ್ಣವಾಗಿ ರಾಜ್ಯಗಳ ಪಟ್ಟಿಯಲ್ಲಿದ್ದು ಕೃಷಿ ಮಾರಾಟದ ಒಂದೆರಡು ಅಂಶಗಳನ್ನು ಮಾತ್ರ ಸಮವರ್ತಿ ಪಟ್ಟಿಯ 33ನೇ ಅಂಶದಲ್ಲಿ ಹೆಸರಿಸಲಾಗಿದೆ. ಕೇಂದ್ರಕ್ಕಂತೂ ಕೃಷಿಗೆ ಸಂಬಂಧಪಟ್ಟ ಯಾವುದೇ ಅಂಶಗಳ ಬಗ್ಗೆ ಏಕಪಕ್ಷೀಯವಾಗಿ ನೀತಿ ಅಥವಾ ಕಾಯ್ದೆ ಮಾಡುವ ಅಧಿಕಾರವಿಲ್ಲ. ಆದರೂ ಕೇಂದ್ರ ಸರಕಾರ ಕೃಷಿಯ ಹಿಡುವಳಿ ಸ್ವರೂಪ ಹಾಗೂ ಮಾರಾಟಗಳಲ್ಲಿ ಕಾರ್ಪೊರೇಟ್ ಪರ ನೀತಿಗಳನ್ನು ಏಕಪಕ್ಷೀಯವಾಗಿ ಜಾರಿಗೆ ತಂದು ರಾಜ್ಯಗಳನ್ನು ಹಾಗೂ ರೈತಾಪಿಯನ್ನು ಕಾರ್ಪೊರೇಟ್ ಗುಲಾಮಗಿರಿಗೆ ದೂಡಿದೆ. ಹಾಗೆಯೇ ಕಾರ್ಮಿಕ ಕಾನೂನು ಮತ್ತು ಕಾರ್ಮಿಕ ಹಿತರಕ್ಷಣೆಗಳು ರಾಜ್ಯಗಳ ಹಾಗೂ ರಾಜ್ಯ-ಕೇಂದ್ರಗಳ ಸಮಾಲೋಚನೆಗಳಿಗೊಳಪಟ್ಟ ಸಮವರ್ತಿ ಪಟ್ಟಿಗೆ ಸೇರಿರುವ ಬಾಬತ್ತಾಗಿದೆ. ಜಾಗತೀಕರಣ ನೀತಿಗಳು ಜಾರಿಯಾದಾಗಲಿಂದಲೂ ಕಾರ್ಮಿಕ ನೀತಿಗಳನ್ನು ಕಾರ್ಪೊರೇಟ್ ಪರವಾಗಿ ಬದಲಿಸಬಹುದಾದ ಸಂಖ್ಯಾಬಲ ಯಾವುದೇ ಪಕ್ಷಗಳಿಗಿರಲಿಲ್ಲ. ಈಗ ಅಂತಹ ಸಂಖ್ಯಾಬಲವನ್ನು ಪಡೆದುಕೊಂಡಿರುವ ಬಿಜೆಪಿ ಸರಕಾರ, ರಾಜ್ಯ ಸರಕಾರಗಳು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸುವ ಮುನ್ನವೇ ಕಾರ್ಪೊರೇಟ್ ಪರವಾದ ಹಾಗೂ ಅತ್ಯಂತ ಕಾರ್ಮಿಕ ವಿರೋಧಿಯಾದ ಕಾಯ್ದೆಗಳನ್ನು ವಿರೋಧಪಕ್ಷಗಳ ಅನುಪಸ್ಥಿತಿಯಲ್ಲಿ ಜಾರಿ ಮಾಡಿದೆ. ಏಳನೇ ಶೆಡ್ಯೂಲಿನ ಪ್ರಕಾರ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದೆ. ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಕೇಂದ್ರವು ರಾಜ್ಯಗಳೊಂದಿಗೆ ಸಲಹೆ ಮತ್ತು ಸಮಾಲೊಚನೆಯ ಮಾರ್ಗಗಳನ್ನು ಅನುಸರಿಸಬೇಕು. ಈವರೆಗೆ ಭಾರತದಲ್ಲಿ ಜಾರಿಯಾದ ಶಿಕ್ಷಣ ನೀತಿಗಳಾದ 1967ರ ಕೊಠಾರಿ ಆಯೋಗದ ಸಲಹೆಯಾಧಾರಿತ ನೀತಿ ಹಾಗೂ 1986ರಲ್ಲಿ ಜಾರಿಯಾದ ಶಿಕ್ಷಣ ನೀತಿಗಳು ರಾಜ್ಯಗಳೊಂದಿಗೆ ವಿಸ್ತೃತವಾದ ಸಮಾಲೋಚನೆಯ ನಂತರವೇ ಜಾರಿಯಾಗಿದ್ದವು. ಅದರೆ ಮೋದಿ ಸರಕಾರ ಜಾರಿ ಮಾಡಿದ 2020ರ ಕಾರ್ಪೊರೇಟ್ ಹಾಗೂ ಮನುವಾದಿ ಪರ ಶಿಕ್ಷಣ ನೀತಿಯು ರಾಜ್ಯ ಸರಕಾರಗಳ ಜೊತೆ ಯಾವುದೇ ಸಮಾಲೋಚನೆಯಿಲ್ಲದೆ ಜಾರಿಯಾಗಿವೆ. ವಿದ್ಯುತ್ತಿಗೆ ಸಂಬಂಧಪಟ್ಟ ಎಲ್ಲಾ ಮೂಲಭೂತ ಅಂಶಗಳು ಅದರಲ್ಲೂ ಅದರ ಹಂಚಿಕೆ ಹಾಗೂ ದರ ನಿಗದಿಗಳಿಗೆ ಸಂಬಂಧಪಟ್ಟ ಅಂಶಗಳಂತೂ ಸಂಪೂರ್ಣವಾಗಿ ರಾಜ್ಯದ ಸುಪರ್ದಿಗೆ ಸೇರಿದ ವಿಷಯ. ಆದರೆ ಮೋದಿ ಸರಕಾರ ಕೋವಿಡ್ ಸಂದರ್ಭದಲ್ಲಿ ಮುಂದಿಟ್ಟಿರುವ ಹೊಸ ವಿದ್ಯುತ್ ನೀತಿಯು ವಿದ್ಯುತ್ ವಿತರಣೆ ಹಾಗೂ ದರ ನಿಗದಿ ಅಧಿಕಾರವನ್ನು ರಾಜ್ಯಗಳಿಂದ ಕಸಿದಿರುವುದಲ್ಲದೆ ವಿದ್ಯುತ್ ಕ್ಷೇತ್ರದಲ್ಲಿರುವ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭವಾಗುವ ರೀತಿ ಪರಿಷ್ಕರಿಸಿದೆ. ಇದು ಕೇವಲ ಕೆಲವು ಉದಾಹರಣೆಗಳಷ್ಟೇ. ಹಾಗೆಯೇ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಹಿಂದಿ ಮತ್ತು ಸಂಸ್ಕೃತ ಹೇರುವ ಶಿಕ್ಷಣ ಹಾಗೂ ಇತರ ಸಾಂಸ್ಕೃತಿಕ ನೀತಿಗಳು, ಪರಂಪರೆಯ ಹೆಸರಲ್ಲಿ ಕೇವಲ ಮನುಸ್ಮತಿಯ ಬ್ರಾಹ್ಮಣೀಯ ಮೇಲರಿಮೆ ಬಿತ್ತುವ ಮತ್ತು ಉಳಿದ ಪರಂಪರೆಯನ್ನು ಅನ್ಯಗೊಳಿಸುವ ಅಥವಾ ಅಧೀನಗೊಳಿಸುವ ಆರ್ಯಭಾರತ ಯೋಜನೆಯೂ ಸಹ ಈ ಮೋದಿ ಸರ್ವಾಧಿಕಾರದ ಇತರ ಆಯಾಮಗಳಾಗಿವೆ. ಹೀಗಾಗಿ ಇದು ಕೇವಲ ಭಾರತದ ಫೆಡರಲ್ ಸ್ವರೂಪದ ಮೇಲಿನ ಅಮೂರ್ತ ದಾಳಿಯಲ್ಲ ಅಥವಾ ಒಂದು ಪಕ್ಷವು ಅಧಿಕಾರವನ್ನು ತನ್ನಡಿಯಲ್ಲಿ ಕೇಂದ್ರೀಕರಿಸಿಕೊಳ್ಳುವ ಕೇಂದ್ರೀಕರಣದ ಪ್ರಶ್ನೆಯಲ್ಲ.
ಬದಲಿಗೆ ಇದು ಭಾರತದ ದಮನಿತ ಜನರ ಬದುಕು ಮತ್ತು ಭವಿಷ್ಯಗಳ ಮೇಲೆ ಸ್ವಾತಂತ್ರ್ಯ ಹೋರಾಟದ ಆಶಯಗಳ ಮೇಲೆ, ಭಾರತದ ನಾಗರಿಕತೆಯ ಬಹುತ್ವದ ಅಸ್ಮಿತೆಯ ಮೇಲೆ ನಡೆದಿರುವ ದಾಳಿಯಾಗಿದೆ. ಭಾರತವನ್ನು ಕಾರ್ಪೊರೇಟ್ ಸರ್ವಾಧಿಕಾರಕ್ಕೆ ಒಳಪಡಿಸುವ ಹಾಗೂ ಬ್ರಾಹ್ಮಣೀಯ ಆಧಿಪತ್ಯಕ್ಕೆ ಒಗ್ಗಿಸುವ ಬೃಹತ್ ಫ್ಯಾಶಿಸ್ಟ್ ಕಾರ್ಯತಂತ್ರದ ಭಾಗವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)