ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತಎಣಿಕೆ ಹೇಗೆ ನಡೆಯುತ್ತದೆ, ಅದಕ್ಕೆ ಇಷ್ಟೊಂದು ವಿಳಂಬವೇಕೆ?
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಇನ್ನೂ ಹೊರಬಿದ್ದಿಲ್ಲ. ಪ್ರಮುಖ ನಿರ್ಣಾಯಕ ರಾಜ್ಯಗಳಲ್ಲಿ ಇನ್ನೂ ಮತ ಎಣಿಕೆ ಪ್ರತ್ಯೇಕವಾಗಿ ನಡೆಯುತ್ತಿದೆ. ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ದೇಶದಲ್ಲಿ ಮತಗಳ ಎಣಿಕೆ ಹೇಗೆ ನಡೆಯುತ್ತದೆ ಮತ್ತು ಫಲಿತಾಂಶವೇಕೆ ವಿಳಂಬವಾಗುತ್ತದೆ ಎನ್ನುವುದರ ಬಗ್ಗೆ ಇಣುಕು ನೋಟವೊಂದು ಇಲ್ಲಿದೆ......
ಅಮೆರಿಕದಲ್ಲಿ ಒಕ್ಕೂಟದ,ರಾಜ್ಯಗಳ ಮತ್ತು ಸ್ಥಳೀಯ ಸಂಸ್ಥೆಗಳ,ಹೀಗೆ ಎಲ್ಲ ಚುನಾವಣೆಗಳನ್ನು ನೇರವಾಗಿ ಆಯಾ ರಾಜ್ಯಗಳ ಆಡಳಿತಾರೂಢ ಸರಕಾರಗಳೇ ನಡೆಸುತ್ತವೆ. ಚುನಾವಣೆಗಳನ್ನು ಹೇಗೆ ನಡೆಸಬೇಕೆನ್ನುವ ವ್ಯಾಪಕ ಅಧಿಕಾರವನ್ನು ಅಮೆರಿಕದ ಸಂವಿಧಾನವು ರಾಜ್ಯಗಳಿಗೆ ನೀಡಿದೆ,ಪರಿಣಾಮವಾಗಿ ದೇಶಾದ್ಯಂತ ವಿಭಿನ್ನ ಕಾನೂನುಗಳು ಅಸ್ತಿತ್ವದಲ್ಲಿವೆ. ಅಮೆರಿಕದ ಹಲವಾರು ರಾಜ್ಯಗಳಲ್ಲಿ ಚುನಾವಣೆಗಳನ್ನು ನಡೆಸುವ ಹೊಣೆಗಾರಿಕೆಯನ್ನು ಆಯಾ ರಾಜ್ಯದ ವಿದೇಶಾಂಗ ಸಚಿವರು ಹೊಂದಿರುತ್ತಾರೆ.
ಚುನಾವಣಾ ಪ್ರಕ್ರಿಯೆ ಭಾರತಕ್ಕಿಂತ ಹೇಗೆ ಭಿನ್ನ?
ಭಾರತದಲ್ಲಿ ಸಂವಿಧಾನದ ವಿಧಿ 324ರಡಿ ಪ್ರತ್ಯೇಕ ನಿಯಮವು ಚುನಾವಣಾ ಆಯೋಗವನ್ನು ಸ್ವತಂತ್ರ ಸಂಸ್ಥೆಯನ್ನಾಗಿಸಿದ್ದು, ಸರಕಾರದ ಕಾರ್ಯಾಂಗವು ಅದರ ಮೇಲೆ ಅಧಿಕಾರವನ್ನು ಚಲಾಯಿಸುವಂತಿಲ್ಲ. 1950ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಚುನಾವಣಾ ಆಯೋಗವು ರಾಷ್ಟ್ರಪತಿ,ಉಪರಾಷ್ಟ್ರಪತಿ,ಸಂಸತ್ತು,ರಾಜ್ಯ ವಿಧಾನಸಭೆಗಳು ಮತ್ತು ವಿಧಾನ ಪರಿಷತ್‌ಗಳಿಗೆ ಚುನಾವಣೆಯನ್ನು ನಡೆಸುವ ಹೊಣೆಗಾರಿಕೆಯನ್ನು ಹೊಂದಿದೆ.
ಭಾರತದಲ್ಲಿ ದೇಶದ ಸ್ಥಾಪಕ ನಾಯಕರ ಆಶಯದಂತೆ ಚುನಾವಣಾ ಆಯೋಗವನ್ನು ರಾಜಕೀಯೇತರ ಸಂಸ್ಥೆಯನ್ನಾಗಿ ರೂಪಿಸಲಾಗಿದೆ.
1949,ಜೂ.15ರಂದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ವಿಧಿ 124ನ್ನು ಮಂಡಿಸುವಾಗ,ಇಡೀ ಚುನಾವಣಾ ಯಂತ್ರವು ಚುನಾವಣಾ ಆಯೋಗದ ಅಧೀನದಲ್ಲಿರಬೇಕು. ಅದು ಮಾತ್ರ ಚುನಾವಣಾಧಿಕಾರಿಗಳು, ಮತಗಟ್ಟೆ ಅಧಿಕಾರಿಗಳು ಮತ್ತು ಇತರರಿಗೆ ನಿರ್ದೇಶಗಳನ್ನು ಹೊರಡಿಸುವ ಅಧಿಕಾರವನ್ನು ಹೊಂದಿರುತ್ತದೆ ಎಂದು ಹೇಳಿದ್ದರು.
ಮತ ಎಣಿಕೆ,ಅಂಚೆ ಮತದಾನ ಮತ್ತು ಕ್ಷೇತ್ರಗಳ ರಚನೆಯಂತಹ ಪ್ರಮುಖ ಚುನಾವಣಾ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಅಮೆರಿಕದ ರಾಜ್ಯಗಳು ವಿಭಿನ್ನ ನಿಯಮಗಳನ್ನು ಹೊಂದಿವೆ. ಹಲವೊಮ್ಮೆ ಅಮೆರಿಕದ ರಾಜ್ಯಗಳು ಹಸ್ತಕ್ಷೇಪ ಇತ್ಯಾದಿಗಳ ಮೂಲಕ ಒಂದು ರಾಜಕೀಯ ಪಕ್ಷಕ್ಕೆ ಅನುಚಿತ ಲಾಭವನ್ನು ಕಲ್ಪಿಸಿದ ಆರೋಪಗಳನ್ನೂ ಎದುರಿಸಿವೆ. ಜಿಮ್ ಕ್ರೋ ಯುಗದಲ್ಲಿ (19ನೇ ಶತಮಾನದ ಕೊನೆಯಲ್ಲಿ ಮತ್ತು 20ನೇ ಶತಮಾನದ ಆರಂಭದಲ್ಲಿ) ಅಮೆರಿದ ದಕ್ಷಿಣದ ರಾಜ್ಯಗಳಲ್ಲಿ ಕಪ್ಪು ವರ್ಣೀಯರಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಗಿತ್ತು. 1965ರ ಮತದಾನ ಹಕ್ಕುಗಳ ಕಾಯ್ದೆಯು ಈ ಅಸಮಾನತೆಯನ್ನು ನಿವಾರಿಸಿದೆ.
2020ರ ಚುನಾವಣೆಯ ಮತ ಎಣಿಕೆ ಏಕೆ ವಿಳಂಬವಾಗುತ್ತಿದೆ?
ಹೆಚ್ಚಿನ ಅಮೆರಿಕನ್ ರಾಜ್ಯಗಳು ವಿದ್ಯುನ್ಮಾನ ಪದ್ಧತಿಗಳಿಗೆ ಅವಕಾಶ ನೀಡಿವೆಯಾದರೂ ದೇಶಾದ್ಯಂತ ಮತಪತ್ರಗಳ ಬಳಕೆ ಸಾಮಾನ್ಯ ನಿಯಮವಾಗಿದೆ. ಮತ ಎಣಿಕೆಗೆ ಮುನ್ನ ಮತಪತ್ರಗಳ ಸಂಸ್ಕರಣೆ ನಡೆಯುತ್ತದೆ. ಸಹಿಗಳ ಪರಿಶೀಲನೆ,ದಾಖಲೆಗಳ ದೃಢೀಕರಣ, ಮತ್ತು ಬಹುಶಃ ಮತಪತ್ರಗಳ ಸ್ಕಾನಿಂಗ್‌ನ್ನು ಕೂಡ ಈ ಹಂತದಲ್ಲಿ ನಡೆಸಲಾಗುತ್ತದೆ. ಮತ ಎಣಿಕೆಯು ಪ್ರತ್ಯೇಕ ಮತ್ತು ನಂತರದ ಪ್ರಕ್ರಿಯೆಯಾಗಿದೆ. ಖುದ್ದು ಮತದಾನ ಅಥವಾ ಅಂಚೆ ಮೂಲಕ ಮತದಾನದ ಆರಂಭ,ಅಂಚೆಮೂಲಕ ಮತಪತ್ರಗಳ ಸ್ವೀಕೃತಿಗೆ ಗಡುವು, ಮತಪತ್ರಗಳ ಸಂಸ್ಕರಣೆ ಮತ್ತು ಮತ ಎಣಿಕೆಗೆ ಸಂಬಂಧಿಸಿದಂತೆ ಪ್ರತಿಯೊಂದೂ ರಾಜ್ಯವು ತನ್ನದೇ ಆದ ದಿನಾಂಕಗಳನ್ನು ಹೊಂದಿರುತ್ತದೆ.
ಉದಾಹರಣೆಗೆ ಅರಿರೆನಾದಲ್ಲಿ ಅಂಚೆ ಮೂಲಕ ಮತಪತ್ರಗಳ ರವಾನೆ ಅ.7ರಿಂದ ಆರಂಭಗೊಂಡಿದ್ದು ಮತದಾನದ ದಿನಾಂಕದವರೆಗೂ ಸ್ವೀಕರಿಸಲಾಗುತ್ತಿತ್ತು. ಇಲ್ಲಿ ಮತ ಎಣಿಕೆ ಅ.20ರಿಂದ ನಡೆಯುತ್ತಿದೆ. ಇದೇ ರೀತಿ ಓಹಿಯೊದಲ್ಲಿ ಚುನಾವಣಾ ಪ್ರಕ್ರಿಯೆ ಅ.6ರಿಂದ ಆರಂಭಗೊಂಡಿದ್ದು,ಅಂಚೆ ಮೂಲಕ ಮತಪತ್ರಗಳನ್ನು ನ.13ರವರೆಗೆ ಸ್ವೀಕರಿಸಲಾ ಗುವುದು. ಆದರೆ ಅವು ನ.2ರವರೆಗಿನ ಅಂಚೆಮುದ್ರೆಯನ್ನು ಮಾತ್ರ ಹೊಂದಿರಬೇಕಿತ್ತು. ಇಲ್ಲಿ ಮತ ಎಣಿಕೆ ನ.3ರಿಂದ ಆರಂಭಗೊಂಡಿದೆ.
ಅಮೆರಿದಲ್ಲಿ ಮತ ಎಣಿಕೆ ಮೂರನೇ ದಿನವನ್ನು ಪ್ರವೇಶಿಸಿರುವ ಸಂದರ್ಭದಲ್ಲಿ ಭಾರತೀಯ ಚುನಾವಣಾ ಆಯೋಗದ ಬಗ್ಗೆ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗಳನ್ನು ವ್ಯಕ್ತಪಡಿಸಿದ್ದಾರೆ. ಚುನಾವಣಾ ಪ್ರಕ್ರಿಯೆಗಳು ಸಾಕಷ್ಟು ಭಿನ್ನವಾಗಿದ್ದರೂ ಉಭಯ ದೇಶಗಳನ್ನು ಹೋಲಿಸಲು ಪ್ರಯತ್ನಿಸಿದ್ದಾರೆ.
‘2019ರಲ್ಲಿ 650 ರಾಜಕೀಯ ಪಕ್ಷಗಳು,8,000 ಅಭ್ಯರ್ಥಿಗಳು ಮತ್ತು 60.3 ಕೋಟಿ ಮತದಾರರ ಉಸ್ತುವಾರಿ ನಡೆಸಿರುವ ನಮ್ಮ ಚುನಾವಣಾ ಆಯೋಗದ ಬಗ್ಗೆ ಭಾರತೀಯರಾಗಿ ನಮಗೆ ಹೆವ್ಮೆುಯಿರಬೇಕು ’ಎಂದು ಮಾಜಿ ಕೇಂದ್ರ ಸಚಿವ ಮಿಲಿಂದ ದೇವ್ರಾ ಟ್ವೀಟಿಸಿದ್ದಾರೆ.