ವಿಟಾಮಿನ್ ಡಿ ಅತಿಸೇವನೆ ಆರೋಗ್ಯಕ್ಕೆ ಹಾನಿಕರ ಎನ್ನುವುದು ನಿಮಗೆ ಗೊತ್ತಿರಲಿ
ವಿಟಾಮಿನ್ ಡಿ ಆರೋಗ್ಯಕ್ಕೆ ಮುಖ್ಯವಾಗಿದೆ, ಆದರೆ ಅದರ ಅತಿಯಾದ ಸೇವನೆ ಶರೀರದಲ್ಲಿ ನಂಜಿಗೆ ಕಾರಣವಾಗಬಲ್ಲದು. ಈ ಕೋವಿಡ್ ಕಾಲದಲ್ಲಿ ಜನರು ತಮ್ಮ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಿಕ್ಕಸಿಕ್ಕ ವಿಟಾಮಿನ್ ಮಾತ್ರೆಗಳನ್ನು ಸೇವಿಸುತ್ತಿದ್ದಾರೆ. ಇವುಗಳಲ್ಲಿ ವಿಟಾಮಿನ್ ಡಿ ಕೂಡ ಸೇರಿದೆ.
ವಿಟಾಮಿನ್ ಡಿ ನಿರೋಧಕ ವ್ಯವಸ್ಥೆಗೆ, ಸ್ನಾಯುಗಳಿಗೆ ಮತ್ತು ಜೀವಕೋಶಗಳ ಬೆಳವಣಿಗೆಗೆ ಒಳ್ಳೆಯದು ಹೌದು. ಅದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುತ್ತದೆ. ಅದು ಹೃದಯವನ್ನೂ ರಕ್ಷಿಸುತ್ತದೆ. ವಿಟಾಮಿನ್ ಡಿ ಉಪಸ್ಥಿತಿಯಲ್ಲಿ ಮಾತ್ರ ಶರೀರವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುತ್ತದೆ. ಹೀಗೆ ಕ್ಯಾಲ್ಸಿಯಂ ಚಯಾಪಚಯದಲ್ಲಿ ವಿಟಾಮಿನ್ ಡಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಅತಿಯಾಗಿ ವಿಟಾಮಿನ್ ಡಿ ಸೇವನೆಯ ಅಡ್ಡಪರಿಣಾಮಗಳು
► ವಾಕರಿಕೆ ಮತ್ತು ವಾಂತಿ
ಇವು ವಿಟಾಮಿನ್ ಡಿ ನಂಜಿನ ಅತ್ಯಂತ ಸಾಮಾನ್ಯ ಲಕ್ಷಣಗಳಾಗಿವೆ. ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟ ಹೆಚ್ಚಾದಾಗ ವಾಕರಿಕೆ ಮತ್ತು ವಾಂತಿ ಉಂಟಾಗುತ್ತವೆ. ಆದರೆ ಪ್ರತಿಯೊಬ್ಬರಿಗೂ ಹೀಗೆ ಆಗುವುದಿಲ್ಲ.
► ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟ ಏರಿಕೆ
ಶರೀರದಲ್ಲಿ ಅತಿಯಾದ ವಿಟಾಮಿನ್ ಡಿ ಅತಿಯಾದ ಕ್ಯಾಲ್ಸಿಯಮ್‌ಗೂ ಕಾರಣವಾಗುತ್ತದೆ. ಇದರಿಂದಾಗಿ ಅಂಗಾಂಶಗಳು ಮತ್ತು ಚರ್ಮದ ಮೇಲೆ ಕ್ಯಾಲ್ಸಿಯಂ ಸಂಗ್ರಹವಾಗುತ್ತದೆ. ಇಷ್ಟೇ ಅಲ್ಲ,ಅದು ಮೂಳೆಗಳ ಮೇಲೂ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟ ಹೆಚ್ಚಿದಾಗ ಅದು ಅಧಿಕ ರಕ್ತದೊತ್ತಡ,ಮೂಳೆ ನಷ್ಟ,ಮೂತ್ರಪಿಂಡ ಹಾನಿ,ಬಳಲಿಕೆ ಮತ್ತು ತಲೆಸುತ್ತು ಇತ್ಯಾದಿಗಳಿಗೂ ಕಾರಣವಾಗುತ್ತದೆ.
► ಮೂಳೆ ನಷ್ಟ
ಮೂಳೆಗಳ ಆರೋಗ್ಯಕ್ಕೆ ಅಗತ್ಯವಾಗಿರುವ ಕ್ಯಾಲ್ಸಿಯಂ ಚಯಾಪಚಯಕ್ಕೆ ವಿಟಾಮಿನ್ ಡಿ ನೆರವಾಗುತ್ತದೆ. ಆದರೆ ಪೋಷಕಾಂಶದ ರೂಪದಲ್ಲಿ ಅತಿಯಾಗಿ ವಿಟಾಮಿನ್ ಡಿ ಸೇವನೆಯು ರಕ್ತದಲ್ಲಿ ವಿಟಾಮಿನ್ ಕೆ2 ಮಟ್ಟ ಕಡಿಮೆಯಾಗಲು ಕಾರಣವಾಗುತ್ತದೆ. ಮೂಳೆಗಳ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ವಿಟಾಮಿನ್ ಕೆ2 ಪ್ರಮುಖ ಪಾತ್ರವನ್ನು ವಹಿಸುತ್ತದೆ.
► ಮೂತ್ರಪಿಂಡ ವೈಫಲ್ಯ
ಮೂತ್ರಪಿಂಡಗಳು ನಮ್ಮ ಶರೀರದಿಂದ ತ್ಯಾಜ್ಯಗಳನ್ನು ಹೊರಗೆ ಹಾಕುವ ಕೆಲಸವನ್ನು ಮಾಡುತ್ತವೆ. ಅತಿಯಾದ ವಿಟಾಮಿನ್ ಡಿ ಮೂಳೆಗಳ ಕಾರ್ಯ ನಿರ್ವಹಣೆಗೆ ವ್ಯತ್ಯಯವನ್ನುಂಟು ಮಾಡುವುದರಿಂದ ಅವು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದು ದೀರ್ಘಕಾಲ ಮುಂದುವರಿದರೆ ಮೂತ್ರಪಿಂಡ ವೈಫಲ್ಯದ ಅಪಾಯವು ಹೆಚ್ಚುತ್ತದೆ.
► ಹೊಟ್ಟೆನೋವು,ಮಲಬದ್ಧತೆ ಅಥವಾ ಅತಿಸಾರ
ಇವು ಹೆಚ್ಚಾಗಿ ಜೀರ್ಣ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳಾಗಿವೆ. ವಿಟಾಮಿನ್ ಡಿ ಅತಿ ಸೇವನೆಯು ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇದೂ ಇಂತಹ ಲಕ್ಷಣಗಳಿಗೆ ಕಾರಣವಾಗಬಲ್ಲದು.
ನಮ್ಮ ಒಟ್ಟಾರೆ ಆರೋಗ್ಯಕ್ಕೆ ವಿಟಾಮಿನ್ ಡಿ ಅತ್ಯಂತ ಮುಖ್ಯವಾಗಿದೆ. ಆದರೆ ಯಾವುದೇ ಪೋಷಕಾಂಶವನ್ನು ಅತಿಯಾಗಿ ಅಥವಾ ಕಡಿಮೆಯಾಗಿ ಸೇವಿಸಿದರೆ ಅದು ಶರೀರಕ್ಕೆ ಹಾನಿಯನ್ನುಂಟು ಮಾಡುತ್ತದೆ. ವಿಟಾಮಿನ್ ಡಿ ಪಡೆಯಲು ಸೂರ್ಯನ ಬಿಸಿಲು ಮತ್ತು ಆಹಾರಗಳಂತಹ ನೈಸರ್ಗಿಕ ಮೂಲಗಳನ್ನು ನೆಚ್ಚಿಕೊಳ್ಳುವುದು ಒಳ್ಳೆಯದು. ಆದರೆ ಶರೀರದಲ್ಲಿ ವಿಟಾಮಿನ್ ಡಿ ಕೊರತೆಯಿದ್ದರೆ ಪೂರಕಗಳನ್ನು ಸೇವಿಸಬೇಕಾಗಬಹುದು. ಆದರೆ ಇಂತಹ ಪೂರಕಗಳನ್ನು ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಕೋರುವುದು ಒಳ್ಳೆಯದು.