ಸಮಸ್ಯೆಗಳ ಸುಳಿಯಲ್ಲಿ ಅಪರಾಧ ತನಿಖಾ ಸಂಸ್ಥೆಗಳು
ತನಿಖಾ ಸಂಸ್ಥೆಗಳ ಆಮೂಲಾಗ್ರ ಸಾಂಸ್ಥಿಕ ಬದಲಾವಣೆ ಸರಕಾರದ ಪ್ರಮುಖ ಮತ್ತು ಆದ್ಯತೆಯ ಕೆಲಸವಾಗಬೇಕಿದೆ. ಎಲ್ಲಾ ತನಿಖಾ ಸಂಸ್ಥೆಗಳಿಗೆ ದೇಶ-ವಿದೇಶಗಳಲ್ಲಿ ತರಬೇತಿ ಪಡೆದಿರುವ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳ ನೇಮಕವಾಗಬೇಕು. ಶಿಕ್ಷೆಯ ರೂಪದಲ್ಲಿ ಅಧಿಕಾರಿಗಳನ್ನು ವರ್ಗಾಯಿಸುವುದರ ಬದಲಾಗಿ ಆಸಕ್ತಿ ಇರುವ ಅಧಿಕಾರಿಗಳನ್ನು ಇಲ್ಲಿಗೆ ತರಬೇಕು. ಸೈಬರ್‌ಕ್ರೈಂ, ವಿಧಿವಿಜ್ಞಾನ, ಕ್ರಿಮಿನಾಲಜಿ ವಿಚಾರಗಳಲ್ಲಿ ಜ್ಞಾನ ಮತ್ತು ಅನುಭವ ಇರುವವರಿಗೆ ತನಿಖಾ ಸಂಸ್ಥೆಗಳಲ್ಲಿ ಆದ್ಯತೆ ನೀಡಬೇಕು. ಎಲ್ಲಾ ಸಂಸ್ಥೆಗಳಿಗೆ ಅಗತ್ಯ ರೀತಿಯ ಆಧುನಿಕ ಮೂಲಭೂತ ಸೌಕರ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸಲು ಸರಕಾರ ಕ್ರಮ ಕೈಗೊಳ್ಳಬೇಕು.
ಅಪರಾಧ ಮತ್ತು ಸಮಾಜ ಒಂದೇ ನಾಣ್ಯದ ಎರಡು ಮುಖಗಳು. ಸಮಾಜ ಬೆಳೆಯುತ್ತಿದಂತೆ ವಿವಿಧ ರೀತಿಯ ಅಪರಾಧಗಳು ಮತ್ತು ಅಪರಾಧಿಗಳು ಸಹ ಹುಟ್ಟಿಕೊಳ್ಳುತ್ತಾರೆ. ಸ್ಥಾಪಿತ ಸರಕಾರಗಳಿಗೆ ಅಪರಾಧಗಳನ್ನು ತಡೆಯುವುದೇ ಒಂದು ಬಹಳ ದೊಡ್ಡ ಕೆಲಸವಾಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಅಪರಾಧ ಮತ್ತು ಅಪರಾಧಿಗಳ ಬಗ್ಗೆ ಸಂಬಂಧಪಟ್ಟವರಿಗೆ ಪೂರ್ವಭಾವಿ ಮಾಹಿತಿ ಇರುತ್ತದೆೆ. ಕೆಲವೊಮ್ಮೆ ಇರುವುದಿಲ್ಲ. ಸಮಾಜವು ದಿನೇ ದಿನೇ ಸಂಕೀರ್ಣತೆಯೆಡೆಗೆ ನಡೆಯುತ್ತಿರುವುದರಿಂದ ತನಿಖಾ ಸಂಸ್ಥೆಗಳು ಸದಾ ಒಂದು ಹೆಜ್ಜೆ ಮುಂದೆ ಇರಬೇಕಾಗುತ್ತದೆ. ಇಲ್ಲದಿದ್ದರೆ ಅಪರಾಧಿಗಳ ಕೈ ಮೇಲಾಗಿ ಸಮಾಜದ ದಿಕ್ಕು ಬದಲಾಗುವ ಸಾಧ್ಯತೆಗಳು ಇದ್ದೇ ಇರುತ್ತವೆ. ಇದರಿಂದ ಅಮಾಯಕರು ವಿವಿಧ ರೀತಿಯ ತೊಂದರೆಗಳಿಗೆ ಈಡಾಗುವ ಪ್ರಸಂಗ ಇರುತ್ತದೆ.
ಒಂದು ದೇಶವೆಂದ ಮೇಲೆ ಹಲವಾರು ಗುಪ್ತಚರ ಸೇವಾ ಸಂಸ್ಥೆಗಳು ಮತ್ತು ತನಿಖಾ ಸಂಸ್ಥೆಗಳು ಇರುತ್ತವೆ. ಗುಪ್ತಚರಸಂಸ್ಥೆಗಳು ಅಪರಾಧ ಮತ್ತು ಅಪರಾಧಿಗಳ ಜಾಡನ್ನು ಮುಂಚಿತವಾಗಿ ಕಂಡುಹಿಡಿಯಲು ಶ್ರಮಿಸುತ್ತವೆ. ಆದರೆ ತನಿಖಾ ಸಂಸ್ಥೆಗಳು ಹೆಚ್ಚಿನ ಸಂದರ್ಭಗಳಲ್ಲಿ ಅಪರಾಧ ನಡೆದ ನಂತರ ಅದರ ಹಿಂದಿರುವ ವ್ಯಕ್ತಿಗಳ ಮತ್ತು ಸಂಘಟನೆಯ ಕುರಿತಾಗಿ ಮಾಹಿತಿಯನ್ನು ಹೊರತರುತ್ತವೆ. ಸಾಮಾನ್ಯವಾಗಿ ಇಂತಹ ಸಂಸ್ಥೆಗಳು ನೀಡುವ ಸಾಕ್ಷಿಗಳ ಆಧಾರದ ಮೇಲೆ ಕೋರ್ಟ್‌ನಲ್ಲಿ ಸಂಬಂಧಪಟ್ಟವರಿಗೆ ಶಿಕ್ಷೆಯಾಗುತ್ತದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಅಪರಾಧಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಇದಕ್ಕೆ ಕಾರಣ ತನಿಖಾ ಸಂಸ್ಥೆಗಳು ಕಲೆಹಾಕುವ ಸಾಕ್ಷಿಯಲ್ಲಿ ಇರುವಂತಹ ಸಮಸ್ಯೆಗಳು. ದೊಂಬಿಗಳು, ಕೋಮುಗಲಭೆ, ಮಾದಕ ವಸ್ತುಗಳ ಜಾಲಗಳು, ರಾಜಕೀಯ ಕೊಲೆಗಳು ಮುಂತಾದ ಅಪರಾಧಗಳು ಇಂದು ಹೆಚ್ಚಾಗುತ್ತಿದ್ದು ಇಂತಹ ಸಮಯದಲ್ಲಿ ತನಿಖಾ ಸಂಸ್ಥೆಗಳ ಪಾತ್ರ ಪ್ರಮುಖವಾಗಿರುತ್ತದೆ.
ದೇಶದಲ್ಲಿ ತನಿಖಾ ಸಂಸ್ಥೆಗಳು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿವೆ. ಏಕೆಂದರೆ ಬೇರೆ ಇಲಾಖೆ ಸಂಸ್ಥೆಗಳಿಗೆ ಇರುವಷ್ಟು ಸೌಲಭ್ಯಗಳು, ಮಾನವ ಸಂಪನ್ಮೂಲ, ತಂತ್ರಜ್ಞಾನದ ಲಭ್ಯತೆ ಇತ್ಯಾದಿಗಳನ್ನು ಬಹಳಷ್ಟ್ಟು ವರ್ಷಗಳಿಂದ ಇಲ್ಲಿ ಕಡೆಗಣಿಸಲಾಗುತ್ತಿದೆ. ಹೆಚ್ಚಿನ ಸಮಯದಲ್ಲಿ ಇವುಗಳಿಗೆ ಸೂಕ್ತ ಅನುದಾನವನ್ನು ಸಹ ಸರಕಾರ ಬಿಡುಗಡೆ ಮಾಡುವುದಿಲ್ಲ ಎಂಬ ಆರೋಪವಿದೆ. ಸಾಮಾನ್ಯವಾಗಿ ರಾಜ್ಯಮಟ್ಟದಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ), ಸಿಐಡಿ, ರಾಜ್ಯಗುಪ್ತಚರ ವಿಭಾಗ, ಸೈಬರ್‌ಕ್ರೈಂ ವಿಭಾಗ, ಆಂತರಿಕ ಭದ್ರತಾ ದಳ, ರಾಷ್ಟ್ರೀಯ ತನಿಖಾ ಸಂಸ್ಥೆ, ಜಾರಿ ನಿರ್ದೇಶನಾಲಯ, ವಿಶೇಷ ತನಿಖಾ ತಂಡ(ಎಸ್‌ಐಟಿ) ಮುಂತಾದ ಸಂಸ್ಥೆಗಳು ಇರುತ್ತವೆ ಮತ್ತು ಇವುಗಳ ಮೇಲೆ ಬಹಳಷ್ಟು ಜವಾಬ್ದಾರಿಗಳು ಇರುತ್ತವೆ.
ನಮ್ಮಲ್ಲಿ ಬೇಕಾದಷ್ಟು ತನಿಖಾ ಸಂಸ್ಥೆಗಳು ಇರುವುದಂತೂ ಸತ್ಯ. ಆದರೆ ಅವುಗಳ ಸಮಸ್ಯೆಗಳ ಬಗ್ಗೆ ಇದುವರೆಗೂ ಯಾರೂ ಗಮನ ನೀಡಿದಂತೆ ಕಾಣುವುದಿಲ್ಲ. ಕೆಲವು ಜಿಲ್ಲೆಗಳಲ್ಲಿ ಗುಪ್ತಚರ ವಿಭಾಗಗಳು ಬಾಡಿಗೆ ಮನೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದರೆ ನಾವು ನಂಬಲೇಬೇಕು. ರಾಜ್ಯದಲ್ಲಿ ಸಿಸಿಬಿ ಬಿಟ್ಟರೆ ಸಾಮಾನ್ಯವಾಗಿ ಯಾವ ತನಿಖಾ ಸಂಸ್ಥೆಗಳಿಗೂ ಸರಿಯಾದ ಮೂಲಭೂತ ಸೌಕರ್ಯವನ್ನು ಇದುವರೆಗೂ ನೀಡಿಲ್ಲ ಎನ್ನುವ ವರದಿ ಇದೆ. ಕೆಲ ತನಿಖಾಸಂಸ್ಥೆಗಳಿಗೆ ಸೂಕ್ತವಾದ ಕಚೇರಿ ಮತ್ತು ಕಚೇರಿಗೆ ಸಂಬಂಧಪಟ್ಟ ಸೌಲಭ್ಯಗಳನ್ನು ನೀಡಲಾಗಿಲ್ಲ. ಅದಕ್ಕಿಂತ ಮುಖ್ಯ ಸಮಸ್ಯೆಯೆಂದರೆ ಇನ್ನು ಕೆಲವು ತನಿಖಾ ಸಂಸ್ಥೆಗಳ ಕಚೇರಿಗಳಿಗೆ ಸರಿಯಾದ ದೂರವಾಣಿ ಸೌಲಭ್ಯವೂ ಇಲ್ಲವೆಂದು ಇತ್ತೀಚೆಗೆ ಕೆಲವು ಪತ್ರಿಕೆಗಳಲ್ಲಿ ವರದಿ ಆಗಿರುವುದನ್ನು ನಾವು ಇಲ್ಲಿ ನೆನಪು ಮಾಡಿಕೊಳ್ಳಬೇಕು. ಇನ್ನೊಂದು ಬೇಸರದ ಸಂಗತಿಯೆಂದರೆ ಹೆಚ್ಚಿನ ತನಿಖಾ ಸಂಸ್ಥೆಗಳಲ್ಲಿ ಅಗತ್ಯಕ್ಕೆ ಬೇಕಾದ ವಾಹನಗಳ ಸೌಲಭ್ಯ ಸಹ ಇಲ್ಲವೆಂದು ವರದಿಯಾಗುತ್ತಿದೆ. ಕೆಲವೊಮ್ಮೆ ಸಿಬ್ಬಂದಿಯ ವಾಹನಗಳಲ್ಲಿ ಅಥವಾ ಬಾಡಿಗೆ ವಾಹನಗಳಲ್ಲಿ ತನಿಖೆಗೆ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ ಎನ್ನಲಾಗುತ್ತಿದೆ. ಸೂಕ್ತ ಚಾಲಕರ ಲಭ್ಯತೆ ಇಲ್ಲದೆ ಹೆಚ್ಚಿನ ಸಂದರ್ಭಗಳಲ್ಲಿ ಆಯಾ ವಿಭಾಗಗಳ ಉನ್ನತ ಅಧಿಕಾರಿಗಳು ತಾವೇ ವಾಹನ ಚಲಾಯಿಸಬೇಕಾದ ಪರಿಸ್ಥಿತಿ ರಾಜ್ಯದಲ್ಲಿ ಇದೆ ಎನ್ನುವ ವರದಿಗಳು ಬರುತ್ತಿವೆ. ಸೂಕ್ತ ಮತ್ತು ನುರಿತ ತನಿಖಾಧಿಕಾರಿಗಳು ಮತ್ತು ಅವರಿಗೆ ಸಹಾಯಕರು ಇಲ್ಲದಿದ್ದರೆ ಇಂದಿನ ಸಂಕೀರ್ಣ ಅಪರಾಧ ಪ್ರಪಂಚದಲ್ಲಿ ತನಿಖಾ ಸಂಸ್ಥೆಗಳು ಸೂಕ್ತವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಹಾಗಾಗಿ ಹೆಚ್ಚಿನ ಸಂದರ್ಭಗಳಲ್ಲಿ ನ್ಯಾಯಾಲಯದಲ್ಲಿ ಅಪರಾಧಿಗಳ ವಿರುದ್ಧ ಪರಿಣಾಮಕಾರಿಯಾದ ಸಾಕ್ಷಿಯನ್ನು ಸಂಗ್ರಹಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಸಾಧ್ಯವಾಗುವುದಿಲ್ಲ. ಇದರಿಂದ ದೇಶದಲ್ಲಿ ಗಂಭೀರವಾದ ಪ್ರಕರಣಗಳು ಹಳ್ಳ ಹಿಡಿದಿರುವ ಉದಾಹರಣೆಗಳು ನೂರಾರಿವೆ. ಇದಕ್ಕೆ ಇತ್ತೀಚಿನ ಉದಾಹರಣೆ ಬಾಬರಿ ಮಸೀದಿ ವಿಚಾರದಲ್ಲಿ ಸಿಬಿಐನ ವೈಫಲ್ಯ. ಭಾರತದ ಹೆಚ್ಚಿನ ತನಿಖಾ ಸಂಸ್ಥೆಗಳ ಬಹುಮುಖ್ಯ ಸಮಸ್ಯೆಯೆಂದರೆ ಮಾನವ ಸಂಪನ್ಮೂಲ ಅಭಿವೃದ್ಧಿ ಕೊರತೆ. ತನಿಖಾ ಸಂಸ್ಥೆಗಳಿಗೆ ನೇಮಕವಾಗುವ ಎಲ್ಲಾ ಅಧಿಕಾರಿಗಳಿಗೆ ಆಧುನಿಕ ತರಬೇತಿಯ ಕೊರತೆ ಬಹಳ ಮುಖ್ಯವಾಗಿ ಕಾಡುತ್ತಿದೆ. ಅದಕ್ಕಿಂತ ಮುಖ್ಯವಾದ ಅಂಶವೆಂದರೆ ತನಿಖಾ ಸಂಸ್ಥೆಗಳಿಗೆ ಯಾವ ಅಧಿಕಾರಿಯೂ ಸಹ ಸ್ವಯಂಪ್ರೇರಣೆಯಿಂದ ಬರುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಶಿಕ್ಷೆಗಳ ರೂಪದಲ್ಲಿ ಅಥವಾ ಯಾವುದಾದರೂ ಆರೋಪದಲ್ಲಿ ಸಿಲುಕಿಕೊಂಡಿರುವ ಅಧಿಕಾರಿಗಳನ್ನು ಇಲ್ಲಿಗೆ ವರ್ಗಾವಣೆ ಮಾಡುವುದು ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಹಲವಾರು ತನಿಖಾ ಸಂಸ್ಥೆಗಳಲ್ಲಿ ತಮ್ಮದೇ ಆದ ನೇಮಕಾತಿಯ ವ್ಯವಸ್ಥೆ ಇನ್ನೂ ಜಾರಿಗೆ ಬಂದಿಲ್ಲವೆಂದರೆ ನಾವು ನಂಬಲೇಬೇಕು. ಬೇಡದ ಇಲಾಖೆಗಳಿಂದ ಕೆಲವು ವ್ಯಕ್ತಿಗಳನ್ನು ತನಿಖಾ ಸಂಸ್ಥೆಗಳಿಗೆ ನೇಮಕ ಮಾಡುವ ಕೆಟ್ಟ ಸಂಪ್ರದಾಯ ಇನ್ನೂ ನಮ್ಮಲ್ಲಿ ಮುಂದುವರಿಯುತ್ತಿದೆ. ತನಿಖಾ ಸಂಸ್ಥೆಗಳಿಗೆ ವರ್ಗಾವಣೆಯಾಗಿ ಬರುವ ಅಧಿಕಾರಿಗಳು ಆದಷ್ಟು ಬೇಗ ಇಲ್ಲಿಂದ ಬೇರೆಡೆ ವರ್ಗಾವಣೆಗೆ ದಾರಿ ಹುಡುಕುತ್ತಿರುತ್ತಾರೆ. ಇದು ನಮ್ಮ ತನಿಖಾ ಸಂಸ್ಥೆಗಳ ನಿಜವಾದ ಹಣೆಬರಹ. ಕೆಲವು ಜಿಲ್ಲೆಗಳ ಗುಪ್ತಚರ ಕಚೇರಿಗಳಲ್ಲಿ ಎಲ್ಲಾ ಕೆಲಸವನ್ನು ಒಬ್ಬರು ಇಬ್ಬರು ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ ಎನ್ನುತ್ತಾರೆ ಬಲ್ಲವರು. ಇಂದಿಗೂ ರಾಜ್ಯ ಮತ್ತು ದೇಶದ ಅದೆಷ್ಟೋ ತನಿಖಾ ಸಂಸ್ಥೆಗಳಲ್ಲಿ ಸಹಸ್ರಾರು ಹುದ್ದೆಗಳು ಖಾಲಿ ಬಿದ್ದಿದ್ದು, ಅವುಗಳನ್ನು ತುಂಬಲು ಯಾವ ಸರಕಾರಗಳೂ ಮನಸ್ಸು ಮಾಡುತ್ತಿಲ್ಲ. ಇಂತಹ ಖಾಲಿ ಹುದ್ದೆಗಳಿಂದಾಗಿ ಸಾವಿರಾರು ಪ್ರಕರಣಗಳು ತಾರ್ಕಿಕ ಅಂತ್ಯಕಾಣದೆ ಕೊಳೆಯುತ್ತಿವೆ.
ಇತ್ತೀಚೆಗೆ ಸಿಮ್ ಕಾರ್ಡ್ ಇಲ್ಲದ ಫೋನ್‌ಗಳ ಬಳಕೆ, ಉಪಗ್ರಹ ದೂರವಾಣಿ ಬಳಕೆ ಮತ್ತು ವಾಟ್ಸ್‌ಆ್ಯಪ್ ಚಾಟ್‌ಗಳ ಮೂಲಕ ಸಹ ಸಾಕಷ್ಟು ಅಪರಾಧಗಳು ನಡೆಯುತ್ತಿರುವುದರಿಂದ ಅಪರಾಧ ತನಿಖಾ ಸಂಸ್ಥೆಗಳು ಬಹಳಷ್ಟು ರೀತಿಯಲ್ಲಿ ಆಧುನಿಕ ಸೌಲಭ್ಯಗಳನ್ನು ಹೊಂದಿರಬೇಕಾಗುತ್ತದೆ. ಆದರೆ ಇವ್ಯಾವುದರ ಸೌಲಭ್ಯ ನಮ್ಮ ರಾಜ್ಯ ತನಿಖಾ ಸಂಸ್ಥೆಗಳಿಗೆ ಇಲ್ಲವೆಂದೇ ಹೇಳಲಾಗುತ್ತಿದೆ. ಕೆಲವೊಮ್ಮೆ ಇಂತಹ ಸಂಸ್ಥೆಗಳು ಖಾಸಗಿಯವರ ತಾಂತ್ರಿಕ ಸಹಾಯ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಇಂದಿನ ಅಪರಾಧ ಪ್ರಪಂಚದಲ್ಲಿ ಪ್ರತಿಯೊಂದು ತನಿಖಾ ಸಂಸ್ಥೆಗಳು ಸೂಕ್ತ ಆಧುನಿಕ ಉಪಕರಣಗಳನ್ನು ಹೊಂದಿರಬೇಕಾದ ಅಗತ್ಯವಿದೆ. ಅಪರಾಧಿಗಳೇ ಆಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಬಳಸಿ ಅಪರಾಧ ಮಾಡುತ್ತಿದ್ದರೆ ತನಿಖಾ ಸಂಸ್ಥೆಗಳು ಇನ್ನೂ ಹಳೆಯ ತಂತ್ರಜ್ಞಾನಕ್ಕೆ ಜೋತು ಬಿದ್ದಿರುವುದು ನಿಜಕ್ಕೂ ಒಳ್ಳೆಯ ಲಕ್ಷಣವಲ್ಲ.
ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಸೈಬರ್ ಕ್ರೈಂ ಅತಿಯಾಗಿ ನಡೆಯುತ್ತಿದ್ದು, ಇದರಲ್ಲಿ ಅತಿ ವಿದ್ಯಾವಂತರು ಮತ್ತು ಸಮಾಜದ ಉನ್ನತ ವರ್ಗದವರು ಹೆಚ್ಚಾಗಿ ಸೇರಿಕೊಂಡಿದ್ದಾರೆ. ಆದರೆ ರಾಜ್ಯದಲ್ಲಿ ಸೈಬರ್ ಕ್ರೈಂಗಳ ಪೊಲೀಸ್ ಠಾಣೆಗಳ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು ಮಾತ್ರ ಇದೆ. ಸೈಬರ್‌ಕ್ರೈಂನಲ್ಲಿ ಕೆಲಸ ಮಾಡಲು ಕುಶಲತೆ, ಅನುಭವ, ಆಸಕ್ತಿ ಮತ್ತು ತಾಂತ್ರಿಕ ವಿದ್ಯಾರ್ಹತೆಗಳು ಬೇಕಾಗುತ್ತದೆ. ಹೆಚ್ಚಿನ ಸೈಬರ್ ಕ್ರೈಂಗಳ ಠಾಣೆಗಳಲ್ಲಿ ದೂರನ್ನು ಪಡೆದು ಎಫ್‌ಐಆರ್ ಹಾಕುವ ಹಂತಕ್ಕೆ ಮಾತ್ರ ಅಧಿಕಾರಿಗಳು ಲಭ್ಯವಿದ್ದಾರೆ. ಸೈಬರ್ ಅಪರಾಧಗಳು ಡಿಜಿಟಲ್ ರೂಪದಲ್ಲಿ ಹೆಚ್ಚಾಗಿ ನಡೆಯುವುದರಿಂದ ಉತ್ತಮ ಕಂಪ್ಯೂಟರ್ ಜ್ಞಾನವಿದ್ದರೆ ಮಾತ್ರ ಅಧಿಕಾರಿಗಳನ್ನು ಇಲ್ಲಿಗೆ ನೇಮಿಸಬೇಕಾಗಿರುವುದು ಬಹಳ ಮುಖ್ಯ. ಇತ್ತೀಚೆಗೆ ರಾಜ್ಯದಲ್ಲಿ ಮಾದಕ ಜಾಲಗಳ ಪ್ರಕರಣ ಹೆಚ್ಚಾಗುತ್ತಿದ್ದು, ಅವುಗಳ ತನಿಖೆಗಾಗಿ ವಿಶೇಷ ಠಾಣೆಗಳನ್ನು ಸ್ಥಾಪಿಸಲಾಗಿದೆ. ಆದರೆ ಅವುಗಳಿಗೆ ಯಾವುದೇ ರೀತಿಯ ಮೂಲಭೂತಸೌಕರ್ಯಗಳನ್ನು ಇದುವರೆಗೆ ನೀಡಲಾಗಿಲ್ಲ. ಕೆಲವೊಮ್ಮೆ ಪರೀಕ್ಷೆ ಮಾಡಲು ಸಿಬ್ಬಂದಿಯೇ ತಮ್ಮ ಸ್ವಂತ ಹಣದಿಂದ ರಾಸಾಯನಿಕ ವಸ್ತುಗಳನ್ನು ತರಬೇಕಾದ ಪರಿಸ್ಥಿತಿ ಇದೆ.
NSG IPS ದೇಶದಲ್ಲಿ ಮಾದರಿಯಲ್ಲಿ ಪ್ರತಿರಾಜ್ಯದಲ್ಲಿ ಉಗ್ರ ನಿಗ್ರಹ ಪಡೆಯನ್ನು ರಚಿಸಲಾಗಿದೆ. ಆದರೆ ಇದು ಸಹ ನಮ್ಮ ರಾಜ್ಯದಲ್ಲಿ ಸಮಸ್ಯೆಗಳಿಂದ ಕೂಡಿದೆ. ಈ ಪಡೆಗೆ ಅಖಿಲ ಭಾರತ ಮಟ್ಟದ ದರ್ಜೆ ಅಧಿಕಾರಿಗಳನ್ನು ಮುಖ್ಯಸ್ಥರಾಗಿ ನೇಮಿಸಬೇಕಾಗಿದೆ. ಆದರೆ ರಾಜ್ಯಮಟ್ಟದ ಅಧಿಕಾರಿಗಳೇ ಈ ಪಡೆಯನ್ನು ಮುನ್ನಡೆಸುತ್ತಿದ್ದಾರೆ ಎನ್ನುವ ವರದಿ ಇದೆ. ಇದರಿಂದ ಬೇರೆ ರಾಜ್ಯದ ಅಧಿಕಾರಿಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ. ಇಂತಹ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕಾದರೆ ಸೇನೆ, ಪ್ಯಾರಾ ಮಿಲಿಟರಿ ಪಡೆ ಇಲ್ಲಿ ಕೆಲಸ ಮಾಡಿ ಅನುಭವವಿರುವ ಅಧಿಕಾರಿಗಳನ್ನು ನೇಮಕ ಮಾಡಬೇಕೆಂಬ ಕೂಗು ಬಹಳ ವರ್ಷಗಳಿಂದ ಇದೆ. ಅಲ್ಲದೆ ಇವರಿಗೂ ಆಧುನಿಕ ಶಸ್ತ್ರಾಸ್ತ್ರಗಳನ್ನು ಅರೆಬರೆಯಾಗಿ ಒದಗಿಸಿರುವ ಆರೋಪವಿದೆ. ಇಲ್ಲಿನ ಹೆಚ್ಚಿನ ಸಿಬ್ಬಂದಿಗೆ ಯಾವುದೇ ರೀತಿಯ ಆಧುನಿಕ ತರಬೇತಿ ಸಹ ನೀಡಿಲ್ಲ ಎನ್ನಲಾಗಿದೆ. ಬೇರೆ ಬೇರೆ ಪೊಲೀಸ್ ವಿಭಾಗಗಳಿಂದ ಆಯ್ದ ಅಧಿಕಾರಿಗಳನ್ನು ಈ ಪಡೆಗೆ ನೇಮಕಾತಿ ಮಾಡಲಾಗಿದೆ ಎನ್ನುತ್ತವೆ ಬಲ್ಲ ಮೂಲಗಳು.
ತನಿಖಾ ಸಂಸ್ಥೆಗಳ ಆಮೂಲಾಗ್ರ ಸಾಂಸ್ಥಿಕ ಬದಲಾವಣೆ ಸರಕಾರದ ಪ್ರಮುಖ ಮತ್ತು ಆದ್ಯತೆಯ ಕೆಲಸವಾಗಬೇಕಿದೆ. ಎಲ್ಲಾ ತನಿಖಾ ಸಂಸ್ಥೆಗಳಿಗೆ ದೇಶ-ವಿದೇಶಗಳಲ್ಲಿ ತರಬೇತಿ ಪಡೆದಿರುವ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳ ನೇಮಕವಾಗಬೇಕು. ಶಿಕ್ಷೆಯ ರೂಪದಲ್ಲಿ ಅಧಿಕಾರಿಗಳನ್ನು ವರ್ಗಾಯಿಸುವುದರ ಬದಲಾಗಿ ಆಸಕ್ತಿ ಇರುವ ಅಧಿಕಾರಿಗಳನ್ನು ಇಲ್ಲಿಗೆ ತರಬೇಕು. ಸೈಬರ್‌ಕ್ರೈಂ, ವಿಧಿವಿಜ್ಞಾನ, ಕ್ರಿಮಿನಾಲಜಿ ವಿಚಾರಗಳಲ್ಲಿ ಜ್ಞಾನ ಮತ್ತು ಅನುಭವ ಇರುವವರಿಗೆ ತನಿಖಾ ಸಂಸ್ಥೆಗಳಲ್ಲಿ ಆದ್ಯತೆ ನೀಡಬೇಕು. ಎಲ್ಲಾ ಸಂಸ್ಥೆಗಳಿಗೆ ಅಗತ್ಯ ರೀತಿಯ ಆಧುನಿಕ ಮೂಲಭೂತ ಸೌಕರ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ಇಲ್ಲಿ ಕೆಲಸ ಮಾಡುವವರ ಜೀವಕ್ಕೆ ಸದಾ ಅಪಾಯ ಇರುವುದರಿಂದ ಅವರಿಗೆ ಪ್ರತ್ಯೇಕವಾದ ವೇತನ ಶ್ರೇಣಿ ಮತ್ತಿತರ ಸೌಲಭ್ಯಗಳನ್ನು ನೀಡಬೇಕು.
(ಆಧಾರ ವಿವಿಧ ಮೂಲಗಳಿಂದ)