ಆನ್‌ಲೈನ್ ಶಿಕ್ಷಣ ಮಕ್ಕಳಿಗೆ ಹಿತವೇ?
ಕೊರೋನ ಎಂಬ ಮಹಾಮಾರಿಯ ಹಾವಳಿಯಿಂದ ಲಕ್ಷಾಂತರ ಜನರು ಇನ್ನೂ ಆತಂಕದ ಸ್ಥಿತಿಯಲ್ಲಿ ಇದ್ದಾರೆ. ಜೊತೆಗೆ ಹಲವಾರು ಸಮಸ್ಯೆಗಳನ್ನು ಜನಸಾಮಾನ್ಯರು ದಿನನಿತ್ಯ ಅನುಭವಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಮಕ್ಕಳ ಸ್ಥಿತಿಯಂತೂ ಹೇಳತೀರದು. ಮಕ್ಕಳ ಮುಂದಿನ ಉಜ್ವಲ ಭವಿಷ್ಯಕ್ಕಾಗಿ, ಅವರ ಶಿಕ್ಷಣದ ಉನ್ನತಿಗಾಗಿ ಶಿಕ್ಷಣ ಪಡೆಯುವುದು ಅನಿವಾರ್ಯವಾಗಿದೆ. ಆದರೆ ಈಗ ಶಾಲೆಗಳಿಗೆ ಮಕ್ಕಳು ಹೋಗುವಂತಿಲ್ಲ. ಒಂದು ವೇಳೆ ಶಾಲೆಗಳಿಗೆ ತೆರಳಿ ಒಂದೇ ಕಡೆ ಮಕ್ಕಳು ಸೇರಿದರೆ, ಕೊರೋನ ಹಾವಳಿ ಹೆಚ್ಚಾಗುವ ಭಯ ಎಲ್ಲರನ್ನೂ ಕಾಡುತ್ತಿದೆ. ಹಾಗಾಗಿ ಕೊರೋನ ಭಯದ ಹಿನ್ನೆಲೆಯಲ್ಲಿ ಕೆಲ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ತಂದಿವೆ. ಆದರೆ ಈ ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಮಕ್ಕಳ ಅಧ್ಯಯನದ ಮೇಲೆ ಎಷ್ಟು ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ ಎಂಬುದು ಈಗಿರುವ ಮುಖ್ಯ ಪ್ರಶ್ನೆ. ಜೊತೆಗೆ ಬಡ ಕುಟುಂಬದ ಮಕ್ಕಳ ಸ್ಥಿತಿಗತಿ, ಅವರ ಆರ್ಥಿಕ ಪರಿಸ್ಥಿತಿ ಹೇಗೆ ಎನ್ನುವುದು ಸೇರಿದಂತೆ ನೂರಾರು ಪ್ರಶ್ನೆಗಳು ಸಹಜವಾಗಿಯೇ ನಮ್ಮನ್ನು ಕಾಡುತ್ತಿವೆ ಮತ್ತು ಘಾಸಿಗೊಳಿಸುತ್ತಿವೆ.
ಈಗ ಎಲ್ಲೆಡೆ ಆನ್‌ಲೈನ್ ಕ್ಲಾಸ್‌ಗಳು ಪ್ರಾರಂಭವಾಗಿವೆ. ಆಯಾ ವಿಷಯಕ್ಕೆ ತಕ್ಕಂತೆ ಪ್ರತಿದಿನ ಶಿಕ್ಷಕ-ಶಿಕ್ಷಕಿಯರು ಪಾಠ ಮಾಡುತ್ತಿದ್ದಾರೆ. ಮಕ್ಕಳು ಆನ್‌ಲೈನ್ ಕ್ಲಾಸ್‌ನಲ್ಲಿಯೇ ಪಾಠಗಳನ್ನು ಕೇಳಿ ಮನೆಯಲ್ಲಿಯೇ ಅಭ್ಯಾಸ ಮಾಡಬೇಕು. ಶಾಲೆಯಲ್ಲಿ ಪಾಠ ಮಾಡುವಾಗ ಶಿಕ್ಷಕರು ಮಕ್ಕಳ ಮನಸ್ಸನ್ನು ಸೆರೆ ಹಿಡಿಯಲು ಬೋಧನೋಪಕರಣಗಳ ಜೊತೆಗೆ ನಾನಾ ತರಹದ ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ಆದರೂ ಎಲ್ಲಾ ವಿದ್ಯಾರ್ಥಿಗಳು ಪಾಠಗಳನ್ನು ಕೇಳುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹೀಗಿರುವಾಗ ಮಕ್ಕಳಿಗೆ ಶಿಕ್ಷಕರ ಜೊತೆ ಸಂವಹನವೇ ಸಾಧ್ಯವಾಗದಿರುವ ಆನ್‌ಲೈನ್ ಶಿಕ್ಷಣದಿಂದ ಮಕ್ಕಳ ಶೈಕ್ಷಣಿಕ ಉನ್ನತಿ ಸಾಧ್ಯವೇ? ಮತ್ತೊಂದು ಕಡೆ ಬಡತನದ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಬಡವರ ಹತ್ತಿರ ಮೊಬೈಲ್ ಇರುತ್ತದೆಯೇ? ಇದ್ದರೂ ಹಳ್ಳಿಗಳಲ್ಲಿ ನೆಟ್‌ವರ್ಕ್ ಎಲ್ಲರಿಗೂ ಸಿಗುತ್ತಿದೆಯೇ? ಇಂತಹ ಕಾರಣಗಳಿಂದಾಗಿ ಆನ್‌ಲೈನ್ ಶಿಕ್ಷಣ ಎಲ್ಲರಿಗೂ ತಲುಪುವುದು ಕಷ್ಟವಾಗಿದೆ ಎಂದು ಕೆಲವು ಪೋಷಕರು ದೂರುತ್ತಿದ್ದಾರೆ.
ಹಳ್ಳಿಗಳಲ್ಲಿನ ಮಕ್ಕಳು ಹೊಲ, ಮನೆ ಕೆಲಸ, ಕೂಲಿ ಕೆಲಸ ಇತ್ಯಾದಿಗಳಿಗೆ ಪೋಷಕರೊಂದಿಗೆ ದುಡಿಯಲು ಹೋಗುತ್ತಾರೆ. ಹೀಗಾಗಿ ಇವರ ಶಿಕ್ಷಣ ಕಡಿತಗೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ. ಕೊರೋನ ಪರಿಸ್ಥಿತಿಯಿಂದಾಗಿ ಕೆಲಸ ಹುಡುಕಿ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗಿದೆ. ಇನ್ನು ಅವರ ಹತ್ತಿರ ಎಲ್ಲಿಂದ ಬರಬೇಕು ಸ್ಮಾರ್ಟ್‌ಫೋನ್‌ಗಳು?
ಸ್ಮಾರ್ಟ್‌ಫೋನ್ ಅತಿಯಾದ ಬಳಕೆಯಿಂದ ಮಕ್ಕಳ ಕಣ್ಣಿನ ದೃಷ್ಟಿಯ ಮೇಲೆ ಹೆಚ್ಚು ಹಾನಿಯಾಗುತ್ತದೆ. ಶಿಕ್ಷಕರು ನೋಟ್ಸ್ ಕಳಿಸಿದ್ದರೆ ಅವುಗಳನ್ನು ಪ್ರತಿ ಶಬ್ದಕ್ಕೂ ಝೂಮ್ ಮಾಡಿ ನೋಡುವುದು ಕಷ್ಟದ ಕೆಲಸ. ಇದರಿಂದ ಬರೆದುಕೊಳ್ಳಲು ಕೂಡ ಬೇಸರವಾಗುತ್ತದೆ. ಶಿಕ್ಷಕರು ಪಾಠವನ್ನು ವಿವರಿಸುತ್ತಾ ಹೋಗುತ್ತಾರೆ. ತಿಳಿಯದಿದ್ದರೆ ಮರಳಿ ಕೇಳಿ ತಿಳಿದುಕೊಳ್ಳುವ ಹಾಗಿಲ್ಲ. ಕೆಲವೊಂದು ವಿಷಯಗಳನ್ನು ನೋಟ್ಸ್ ಮಾಡಿ ಹೇಗೋ ಓದಿ ಕಂಠಪಾಠ ಮಾಡಬಹುದು. ಆದರೆ ಗಣಿತವನ್ನು ಹಾಗೆ ಮಾಡಲಾಗುವುದಿಲ್ಲ. ಲೆಕ್ಕಗಳನ್ನು ಬಿಡಿಸಿ ಹೇಳುವುದರಿಂದ ಮಾತ್ರ ಅರ್ಥವಾಗುತ್ತದೆ. ಆನ್‌ಲೈನ್ ಪಾಠದಲ್ಲಿ ತಿಳಿಯದಿದ್ದರೆ ವಾಪಸ್ ಕೇಳುವ ಹಾಗೂ ಇಲ್ಲ. ಹೀಗಿದ್ದ ಮೇಲೆ ಈ ಆನ್‌ಲೈನ್ ಶಿಕ್ಷಣದಿಂದ ಏನು ಪ್ರಯೋಜನ? ಮಕ್ಕಳು ಕಣ್ಣಿನ ಸಮಸ್ಯೆಗೊಳಗಾಗದೆ ಆನ್‌ಲೈನ್ ಪಾಠ ಕೇಳಲು ಫೋನ್‌ನ ಜೊತೆ ಲ್ಯಾಪ್‌ಟಾಪ್‌ಗಳ ಅವಶ್ಯಕತೆ ಇದೆ ಎನ್ನುವುದು ಸುಳ್ಳಲ್ಲ. ಆದರೆ ಎಲ್ಲ ಪೋಷಕರು ಶ್ರೀಮಂತರಾಗಿರುವುದಿಲ್ಲ. ಬಡ ವಿದ್ಯಾರ್ಥಿಗಳಿಗೆ ಫೋನ್ ತೆಗೆದುಕೊಳ್ಳುವುದೇ ಸಾಧ್ಯವಾಗದಿರುವಾಗ ಲ್ಯಾಪ್‌ಟಾಪ್ ಖರೀದಿಸುವುದು ಕನಸಿನ ಮಾತು. ಅಂದರೆ ಆನ್‌ಲೈನ್ ಕ್ಲಾಸ್‌ನಿಂದ ಬಡಮಕ್ಕಳಿಗೆ ಪ್ರಯೋಜನವಿಲ್ಲ. ಇದು ಕೇವಲ ಉಳ್ಳವರು ಮಾತ್ರ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ನಗರಗಳಲ್ಲಿ ಚಿಕ್ಕಮಕ್ಕಳಂತೂ ಈಗ ಮೊಬೈಲ್ ದಾಸರಾಗಿಬಿಟ್ಟಿದ್ದಾರೆ. ಆನ್‌ಲೈನ್ ಕ್ಲಾಸ್ ಇದೆಯೆಂದು ಹೇಳಿ ವೀಡಿಯೊ ಗೇಮ್‌ಗಳನ್ನು ಆಡುತ್ತಿದ್ದಾರೆ. ಒಂದಿಬ್ಬರು ಸೇರಿದರೆ ಇಡೀ ದಿನ ಆಟ ಆಡುವುದರಲ್ಲೇ ಮಗ್ನನಾಗಿರುತ್ತಾರೆ. ಒಂದೆಡೆ ಕೂತು ಆನ್‌ಲೈನ್ ಕ್ಲಾಸ್ ಕೇಳುವುದು ಇವರಿಗೂ ಕಷ್ಟವಾಗುತ್ತಿದೆ. ಇಂತಹ ಮಕ್ಕಳು ಹೋಮ್ ವರ್ಕ್ ಮಾಡಲು ಕೂಡಾ ಕಷ್ಟಪಡುತ್ತಾರೆ. ಹೀಗಾಗಿ ಮಕ್ಕಳ ಪಾಲಕರಿಗೆ ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆಯಾಗಿರುವುದು ಸುಳ್ಳಲ್ಲ.
ಆನ್‌ಲೈನ್ ಶಿಕ್ಷಣದ ವ್ಯವಸ್ಥೆಯಿಂದ ಮಕ್ಕಳ ಶೈಕ್ಷಣಿಕ ಭವಿಷ್ಯ ನಿರ್ಧರಿಸಬಾರದು. ಈ ವ್ಯವಸ್ಥೆಯಿಂದ ಉಪಯೋಗಕ್ಕಿಂತ ಅನನುಕೂಲವೇ ಹೆಚ್ಚಾಗಬಹುದು. ಇದರಿಂದ ಬಡ ಮಕ್ಕಳಿಗಂತೂ ಖಂಡಿತ ನೆಮ್ಮದಿ ಸಿಗಲಾರದು. ಶಾಲೆಯ ತರಗತಿಗಳಲ್ಲಿ ನಡೆಸುವ ಪಾಠಗಳ ಮೂಲಕ ಮಾತ್ರ ಮಕ್ಕಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬಹುದಾಗಿದೆ. ಆದ್ದರಿಂದ ಆನ್‌ಲೈನ್ ಶಿಕ್ಷಣದ ಬಗ್ಗೆ ಸಂಬಂಧ ಪಟ್ಟವರು ಇನ್ನಾದರೂ ಒಂದು ನಿರ್ಧಾರ ಕೈಗೊಳ್ಳುವ ಅವಶ್ಯಕತೆ ಇದೆ.