ಬೆಂಬಲ ಬೆಲೆಯಡಿ ಭತ್ತ ಖರೀದಿ: ಡಿಸಿ ರಾಜೇಂದ್ರ
ಸಾಮಾನ್ಯ ಭತ್ತ 1,868 ರೂ., ಗ್ರೇಡ್-1 ಭತ್ತ 1,888ರೂ.
ಮಂಗಳೂರು, ನ.12: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ ಭತ್ತ ಖರೀದಿಯನ್ನು ಮಾಡಲು ಅಗತ್ಯವಿರುವ ತಯಾರಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಸ್ತುತ ಸಾಲಿನ ಕನಿಷ್ಠ ಬೆಂಬಲ ಯೋಜನೆ ಕಾರ್ಯಾಚರಣೆಗೆ ಸಂಬಂಧಿಸಿದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರಿಂದ ಕನಿಷ್ಠ ಬೆಂಬಲ ಯೋಜನೆಯಡಿ ಸಾಮಾನ್ಯ ಭತ್ತವನ್ನು 1,868 ರೂ.ನಲ್ಲಿ ಹಾಗೂ ಗ್ರೇಡ್-1 ಭತ್ತವನ್ನು 1,888 ರೂ.ನಲ್ಲಿ ಖರೀದಿಸಲಾಗುವುದು. ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಪ್ರೂಟ್ಸ್ ದತ್ತಾಂಶದಿಂದ ರೈತರ ಮಾಹಿತಿ ಪಡೆದು ಕೃಷಿ ಇಲಾಖೆ ಒದಗಿಸಿರುವ ಸರಾಸರಿ ಬೆಳೆಯನ್ನು ಆಧಾರಿಸಿ ಹಾಗೂ ಕೇಂದ್ರ ಸರಕಾರದ ಮಾರ್ಗಸೂಚಿಗಳನ್ವಯ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರು ನೋಂದಣಿ ಮಾಡದಂತಹ ರೈತರಿಂದ ಭತ್ತವನ್ನು ಸರಕಾರವು ನಿಗದಿಪಡಿಸಿರುವ ಅಕ್ಕಿ ಗಿರಣಿಗಳ ಮೂಲಕ ಖರೀದಿಸಲಾಗುವುದು ಎಂದರು.
ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಭತ್ತ ಖರೀದಿಸಲು ಜಿಲ್ಲೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಸಂಗ್ರಹಣಾ ಮಂಡಳಿ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ. ರೈತರು ಖರೀದಿ ಕೇಂದ್ರಗಳಿಗೆ ಬಂದು ಅಲ್ಲಿಯೇ ಆನ್ಲೈನ್ನಲ್ಲಿ ನೋಂದಣಿ ಮಾಡಬೇಕು ಎಂದರು.
ಪ್ರತಿದಿನ ಖರೀದಿಸುವ ಕೃಷಿ ಉತ್ಪನ್ನಗಳ ವಿವರಗಳನ್ನು ಖರೀದಿ ಏಜೆನ್ಸಿ ಪತ್ರದಲ್ಲಿ ನೀಡಿರುವ ವಹಿಯಲ್ಲಿ ದಾಖಲಿಸಬೇಕು. ಗುಣಮಟ್ಟ ಪರಿಶೀಲನೆ ಹೆಸರಿನಲ್ಲಿ ರೈತರಿಗೆ ಯಾವುದೇ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು. ಪ್ರತಿ ಖರೀದಿ ಕೇಂದ್ರಗಳಿಗೆ ನುರಿತ ಗುಣಮಟ್ಟ ಪರೀಕ್ಷಕರನ್ನು ನೇಮಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಆಹಾರ ನಾಗರಿಕ ಇಲಾಖೆಯ ಉಪನಿರ್ದೇಶಕಿ ರಮ್ಯಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ, ಎಪಿಎಂಸಿಯ ಉಪ ನಿರ್ದೇಶಕಿ ರಾಣಿ ಉಪಸ್ಥಿತರಿದ್ದರು.