ಚುನಾವಣಾ ಫಲಿತಾಂಶ ಪ್ರಶ್ನಿಸಿ ಮಿಶಿಗನ್ ನ್ಯಾಯಾಲಯದಲ್ಲಿ ಟ್ರಂಪ್ ಮೊಕದ್ದಮೆ
ವಾಶಿಂಗ್ಟನ್, ನ. 12: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅಧಿಕಾರ ಸ್ವೀಕಾರಕ್ಕೆ ಸಿದ್ಧತೆಗಳನ್ನು ಆರಂಭಿಸುತ್ತಿರುವಂತೆಯೇ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಮಿಶಿಗನ್ ನ್ಯಾಯಾಲಯವೊಂದರಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
ಮಿಶಿಗನ್ ರಾಜ್ಯವು ನವೆಂಬರ್ 3ರ ಚುನಾವಣಾ ಫಲಿತಾಂಶವನ್ನು ಪ್ರಮಾಣೀಕರಿಸಬಾರದು ಎಂದು ಕೋರಿ ರಿಪಬ್ಲಿಕನ್ ಪಕ್ಷಕ್ಕೆ ಸೇರಿದ ಟ್ರಂಪ್ರ ಕಾನೂನು ತಂಡವು ಮಿಶಿಗನ್ ಫೆಡರಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ನವೆಂಬರ್ 3ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಿಶಿಗನ್ ರಾಜ್ಯವನ್ನು ಬೈಡನ್ ಗೆದ್ದಿದ್ದಾರೆ. 2016ರಲ್ಲಿ ನಡೆದ ಚುನಾವಣೆಯಲ್ಲಿ ಈ ರಾಜ್ಯವನ್ನು ಟ್ರಂಪ್ ಗೆದ್ದಿದ್ದರು.
ಮಿಶಿಗನ್ ರಾಜ್ಯದ ಅಧಿಕೃತ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಟ್ರಂಪ್ ತನ್ನ ಎದುರಾಳಿಗಿಂತ ಸುಮಾರು 1.48 ಲಕ್ಷ, ಅಂದರೆ 2.6 ಶೇಕಡ ಮತಗಳಿಂದ ಹಿಂದಿದ್ದಾರೆ.
Next Story