ಏನಿದು 'ಹಸಿರು ಪಟಾಕಿ' ?: ಇಲ್ಲಿದೆ ಸರಕಾರ ನೀಡಿದ ಮಾಹಿತಿ
ಸಾಂದರ್ಭಿಕ ಚಿತ್ರ
ಬೆಂಗಳೂರು, ನ. 13: ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧಿಸಿರುವ ರಾಜ್ಯ ಸರಕಾರ, `ಹಸಿರು ಪಟಾಕಿ' ಕುರಿತು ಶುಕ್ರವಾರ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.
ಕೋವಿಡ್-19 ಸೋಂಕು ಹೆಚ್ಚಳವಾಗುವ ಭೀತಿ ಹಿನ್ನೆಲೆಯಲ್ಲಿ ಪಟಾಕಿ ಮಾರಾಟ ನಿಷೇಧಿಸಬೇಕೆಂಬ ತಜ್ಞರ ಶಿಫಾರಸ್ಸನ್ನು ಆಧರಿಸಿ ಹಸಿರು ಪಟಾಕಿಗೆ ಅವಕಾಶ ನೀಡಿದೆ. ಆದರೆ, ಯಾವುದೇ ಕಾರಣಕ್ಕೂ ಹಸಿರು ಪಟಾಕಿಗಳ ಹೆಸರಿನಲ್ಲಿ ಪರಿಸರಕ್ಕೆ ಹಾನಿ ಉಂಟುಮಾಡಬಲ್ಲ ಅಂಶಗಳನ್ನು ಹೊಂದಿರುವ ಪಟಾಕಿಗಳ ಮಾರಾಟಕ್ಕೆ ಅನುವು ಮಾಡಿಕೊಡಬಾರದು. ಈ ನಿಟ್ಟಿನಲ್ಲಿ ಸರಕಾರ, ಜಿಲ್ಲಾಡಳಿತಗಳು, ಬಿಬಿಎಂಪಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಸೂಚಿಸಲಾಗಿದೆ.
ಸಿಎಸ್ಐಆರ್-ನೀರಿ ಸಂಸ್ಥೆಗಳ ಹಸಿರು ಲೋಗೋ ಇರುವ ಮತ್ತು ಕ್ವಿಕ್ ರೆಸ್ಪಾನ್ಸ್ (ಕ್ಯೂಆರ್) ಕೋಡಿಂಗ್ ವ್ಯವಸ್ಥೆ ಇರುವ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. ಸಾರ್ವಜನಿಕರಿಗೆ ಈ ವ್ಯವಸ್ಥೆ ಇರುವ ಪಟಾಕಿಗಳನ್ನು ಮಾತ್ರ ಖರೀದಿಸುವಂತೆ ಮಾಧ್ಯಮ, ಸಾಮಾಜಿಕ ಜಾಲತಾಣಗಳನ್ನು ವಿಸ್ತೃತ ಪ್ರಚಾರ ನೀಡಿ ಮಾಹಿತಿ ಒದಗಿಸಬೇಕು ಎಂದು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಹಸಿರು ಪಟಾಕಿಯ ಬಗ್ಗೆ ಹೆಚ್ಚಿನ ಸ್ಪಷ್ಟತೆಯನ್ನು ತರಲು ಮತ್ತು ಸಾಂಪ್ರದಾಯಿಕ ಪಟಾಕಿಗಳಿಂದ ಹಸಿರು ಪಟಾಕಿ ಪ್ರತ್ಯೇಕಿಸಲು ಸಾರ್ವಜನಿಕರಿಗೆ ಸಹಾಯ ಮಾಡಲು, ಗ್ರೀನ್ ಕ್ರ್ಯಾಕರ್ ಗಳ ಬಗ್ಗೆ ಈ ಕೆಳಗಿನ ಸಂಗತಿಗಳನ್ನು ಕೆಳಗೆ ನೀಡಲಾಗಿದೆ.
ಭಾರತ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪ್ರಕಾರ, ಹಸಿರು ಪಟಾಕಿಗಳು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಇದರಿಂದಾಗಿ ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ ಕಡಿಮೆ ಇರುತ್ತದೆ. ಸಾಂಪ್ರದಾಯಿಕ ಪಟಾಕಿಗಳಿಗೆ ಹೋಲಿಸಿದರೆ ಈ ಹಸಿರು ಪಟಾಕಿ ಹಾನಿಕಾರಕವಲ್ಲ. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್-ನ್ಯಾಷನಲ್ ಎನ್ವಿರಾನ್ಮೆಂಟಲ್ ಆ್ಯಂಡ್ ಇಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರಕಾರ ಹಸಿರು ಪಟಾಕಿ ತಯಾರಿಸಲಾಗುತ್ತದೆ. ಸಾಂಪ್ರದಾಯಿಕ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಸಣ್ಣ ಶೆಲ್ ಗಾತ್ರವನ್ನು ಹೊಂದಿರುತ್ತದೆ ಮತ್ತು ಕಡಿಮೆ ಹಾನಿಕಾರಕ ವಸ್ತುಗಳನ್ನು ಬಳಸಿ, ಉತ್ಪಾದಿಸಲ್ಪಡುತ್ತವೆ ಎಂದು ತಿಳಿಸಲಾಗಿದೆ.