ಉಡುಪಿ ರೆಡ್‌ಕ್ರಾಸ್‌ನ ನೂತನ ಸಭಾಪತಿಯಾಗಿ ತಲ್ಲೂರು ಆಯ್ಕೆ
ಬಸ್ರೂರು ರಾಜೀವ್ ಶೆಟ್ಟಿ ವಿರುದ್ಧ ಅವಿಶ್ವಾಸ ಗೊತ್ತುವಳಿ
ಉಡುಪಿ, ನ.14: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ನೂತನ ಸಭಾಪತಿಯಾಗಿ ಉದ್ಯಮಿ ತಲ್ಲೂರು ಶಿವರಾಮ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಜಿ.ಜಗದೀಶ್ ನೀಡಿದ ಸೂಚನೆಯಂತೆ ಉಡುಪಿ ಜಿಲ್ಲಾ ಘಟಕದ ಆಡಳಿತ ಮಂಡಳಿಯ ಆರು ಮಂದಿ ಸದಸ್ಯರು ಸಂಸ್ಥೆಯ ಸಭಾಪತಿಯಾಗಿದ್ದ ಬಸ್ರೂರು ರಾಜೀವ ಶೆಟ್ಟಿ, ಕಾರ್ಯ ದರ್ಶಿ ಬಾಲಕೃಷ್ಣ ಶೆಟ್ಟಿ ಹಾಗೂ ಖಜಾಂಚಿ ಟಿ.ಚಂದ್ರಶೇಖರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದು, ಅದರಂತೆ ನ.12ರಂದು ನಡೆದ ಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಬಹುಮತದ ಜಯ ಗಳಿಸಿತ್ತು.
ಸಂಸ್ಥೆಯ ಅಧ್ಯಕ್ಷ ಜಿ.ಜಗದೀಶ್ ಅಧ್ಯಕ್ಷತೆಯಲ್ಲಿ ಅಜ್ಜರಕಾಡು ರೆಡ್‌ಕ್ರಾಸ್ ಭವನದ ಜೀನ್ ಹೆನ್ರಿ ಡ್ಯುನಾಂಟ್ ಹಾಲ್‌ನಲ್ಲಿ ನಡೆದ ಸಭೆಯಲ್ಲಿ, ಬಸ್ರೂರು ರಾಜೀವ್ ಶೆಟ್ಟಿ ವಿರುದ್ಧದ ಅವಿಶ್ವಾಸ ಗೊತ್ತುವಳಿ 6-4ರ ಮತಗಳ ಅಂತರದಿಂದ ಮೇಲುಗೈ ಪಡೆಯಿತು. ಈ ಮೂಲಕ ಬಸ್ರೂರು ರಾಜೀವ ಶೆಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ತೆರವುಗೊಳಿಸಲಾಯಿತು.
ಬಳಿಕ ಸಭಾಪತಿ ಸ್ಥಾನಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾಗಿರುವ ಉಡುಪಿ ಜಿಪಂ ಸಿಇಓ ಡಾ.ನವೀನ್ ಭಟ್ ಅವರು ಉಪಸ್ಥಿತರಿದ್ದರು.