ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಮಹಿಳೆಯರಿಗಾಗಿ ಮೈಕ್ರೋ ಸಾಲ ಸೌಲಭ್ಯ
ಅರ್ಜಿ ಸಲ್ಲಿಸುವುದು ಹೇಗೆ ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ಬೆಂಗಳೂರು, ನ.14: ಕೋವಿಡ್-19 ಸಾಂಕ್ರಾಮಿಕದಿಂದಾಗಿ ತೊಂದರೆಗೊಳಗಾದ ಅಲ್ಪಸಂಖ್ಯಾತ ಸಮುದಾಯದ ಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬಲು ಮುಂದಾಗಿರುವ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು, 2020-21ನೇ ಸಾಲಿಗೆ ಮಾತ್ರ ಅನ್ವಯಿಸುವಂತೆ 25 ರಿಂದ 50 ವಯೋಮಾನದೊಳಗಿನ ಮಹಿಳೆಯರಿಗಾಗಿ ಮೈಕ್ರೋ ಸಾಲ ಯೋಜನೆ(ವೈಯಕ್ತಿಕ)ಗೆ ಚಾಲನೆ ನೀಡಿದೆ.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಈವರೆಗೆ ಯಾವುದೆ ಯೋಜನೆಯಲ್ಲೂ ಸಾಲ, ಸಹಾಯಧನ ಯಾವುದನ್ನೂ ಪಡೆಯದ ಕಡುಬಡತನದಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಬಿಪಿಎಲ್ ಕಾರ್ಡು ಹೊಂದಿರುವ 23 ಸಾವಿರ ಕುಟುಂಬಗಳಿಗೆ ತಲಾ 10 ಸಾವಿರ ರೂ.ಸಾಲ(8 ಸಾವಿರ ರೂ.ಸಾಲ, 2 ಸಾವಿರ ರೂ.ಸಬ್ಸಿಡಿ) ಒದಗಿಸಲು ಉದ್ದೇಶಿಸಿದೆ.
ತಳ್ಳುವ ಗಾಡಿಯಲ್ಲಿ ವ್ಯಾಪಾರ, ಬೀದಿ ವ್ಯಾಪಾರ, ಜಾತ್ರೆಗಳಲ್ಲಿ ವ್ಯಾಪಾರ, ಕಿರಾಣಿ ಅಂಗಡಿ, ಅರಿಷಿನ, ಕುಂಕುಮ, ಅಗರಬತ್ತಿ, ಕರ್ಪೂರ, ಪಾದಚಾರಿ ಮಾರ್ಗದಲ್ಲಿ ಟೀ, ಕಾಫಿ ಮಾರಾಟ, ಎಳನೀರು ವ್ಯಾಪಾರ, ಹೂವಿನ ವ್ಯಾಪಾರ, ತರಕಾರಿ ವ್ಯಾಪಾರ, ಹಣ್ಣಿನ ವ್ಯಾಪಾರ, ಇನ್ನಿತರ ಸಣ್ಣ ವ್ಯಾಪಾರ ನಡೆಸಲು ಆರಂಭಿಕ ಬಂಡವಾಳಕ್ಕಾಗಿ ಈ 10 ಸಾವಿರ ರೂ.ಗಳ ಅಲ್ಪಾವಧಿ ಸಾಲ ಯೋಜನೆಯನ್ನು ರೂಪಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?: ನಿಗಮದ ವೆಬ್ಸೈಟ್ kmdcmicro.karnataka.gov.in ಮೂಲಕ ಈ ಮೈಕ್ರೋ ಸಾಲ ಯೋಜನೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಇತ್ತೀಚಿನ ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ನ ಪ್ರತಿ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿಯ ಪ್ರತಿ, ಯೋಜನಾ ವರದಿಯನ್ನು ಸಲ್ಲಿಸಬೇಕು.
ಅರ್ಜಿದಾರರು ಅಥವಾ ಕುಟುಂಬದ ಯಾವುದೆ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರಕಾರದ ಸೇವೆಯಲ್ಲಿ ಇಲ್ಲದಿರುವ ಬಗ್ಗೆ 50 ರೂ.ಮುಖಬೆಲೆಯ ಛಾಪಾ ಕಾಗದದಲ್ಲಿನ ದೃಢೀಕರಣ ಪತ್ರವನ್ನು ಸಲ್ಲಿಸಬೇಕು. ಅಲ್ಲದೆ, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ)ದಿಂದ ಈ ಹಿಂದೆ ಯಾವುದೇ ಸಾಲ ಸೌಲಭ್ಯವನ್ನು ಪಡೆದಿಲ್ಲದಿರುವುದರ ಬಗ್ಗೆ 50 ರೂ. ಛಾಪಾ ಕಾಗದದಲ್ಲಿನ ದೃಢೀಕರಣ ಪತ್ರವನ್ನು ಸಲ್ಲಿಸಬೇಕು.
ಅರಿವು (ವಿದ್ಯಾಭ್ಯಾಸ ಸಾಲ) ಯೋಜನೆಗೆ kmdc.kar.nic.in/arivu2 , ಇತರೆ ಎಲ್ಲ ಯೋಜನೆಗಳಿಗೆ kmdc.kar.nic.in/loan/login.aspx ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು.
ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿಗೆ ಸಹಾಯಧನ: ಕೋವಿಡ್ನಿಂದಾಗಿ ಉದ್ಯೋಗಗಳನ್ನು ಕಳೆದುಕೊಂಡಿರುವ ಸುಮಾರು 800 ಮಂದಿಗೆ ನೆರವು ನೀಡಲು ಟ್ಯಾಕ್ಸಿ, ಗೂಡ್ಸ್ ವಾಹನ ಖರೀದಿಸಲು ಪ್ರತಿ ಅರ್ಜಿದಾರರಿಗೆ 75 ಸಾವಿರ ರೂ.ಗಳ ಸಹಾಯಧನ ನೀಡಲು ಉದ್ದೇಶಿಸಲಾಗಿದೆ. ಬ್ಯಾಂಕ್ ಸಾಲದ ಮೂಲಕ ಟ್ಯಾಕ್ಸಿ, ಗೂಡ್ಸ್ ವಾಹನವನ್ನು ಖರೀದಿಸುವ ಅರ್ಜಿದಾರರು ಈ ಸೌಲಭ್ಯವನ್ನು ಪಡೆಯಬಹುದು. ವೃತ್ತಿ ಪ್ರೋತ್ಸಾಹ ಯೋಜನೆ(ಪರಿಷ್ಕೃತ)ಯಡಿ ಒಂದು ಲಕ್ಷ ರೂ. ಸಾಲ ಸೌಲಭ್ಯ(ಶೇ.50ರಷ್ಟು ಸಹಾಯ ಧನ) ಪಡೆಯಬಹುದು.
ಶ್ರಮಶಕ್ತಿ ಯೋಜನೆ: ಅಲ್ಪಸಂಖ್ಯಾತ ವರ್ಗದ ಕುಲಕಸುಬುದಾರರಿಗೆ ತರಬೇತಿ ನೀಡಿ, ಅವರು ತಮ್ಮ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಿಕೊಂಡು ಅದೇ ಕಸುಬನ್ನು ಮುಂದುವರಿಸಲು ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು, ಅಭಿವೃದ್ಧಿಗೊಳಿಸುವ ಸಲುವಾಗಿ, ನಿಗಮದಿಂದ ಕಡಿಮೆ ಬಡ್ಡಿದರದಲ್ಲಿ 50 ಸಾವಿರ ರೂ.ವರೆಗೆ ಸಾಲ ಸೌಲಭ್ಯ. ಶೇ.50ರಷ್ಟು ಸಾಲವನ್ನು 36 ತಿಂಗಳಿನಲ್ಲಿ ಫಲಾನುಭವಿ ಮರುಪಾವತಿ ಮಾಡಿದರೆ, ಉಳಿದ ಶೇ.50ರಷ್ಟು ಹಣವನ್ನು ‘ಬ್ಯಾಂಕ್ ಎಂಡ್ ಸಹಾಯಧನ’ವನ್ನಾಗಿ ಪರಿಗಣಿಸಲಾಗುತ್ತದೆ.
ಗೃಹ ನಿರ್ಮಾಣ ಸಾಲದ ಯೋಜನೆ: ಸರಕಾರಿ ಸ್ವಾಮ್ಯದ ಸಂಸ್ಥೆಗಳು ಅಂದರೆ, ರಾಜೀವ್ ಗಾಂಧಿ ಗೃಹ ನಿರ್ಮಾಣ ನಿಗಮ, ಕರ್ನಾಟಕ ಗೃಹ ಮಂಡಳಿ, ಕೊಳಚೆ ನಿರ್ಮೂಲನ ಮಂಡಳಿ ಹಾಗೂ ಇತರೆ ಸರಕಾರಿ ಸ್ವಾಮ್ಯದ ಮೂಲಕ ವಿವಿಧ ಗೃಹ ನಿರ್ಮಾಣ ಯೋಜನೆಗಳ ಅಡಿಯಲ್ಲಿ ಆಯ್ಕೆಯಾಗುವ ರಾಜ್ಯದಲ್ಲಿನ ಮತೀಯ ಅಲ್ಪಸಂಖ್ಯಾತರ ಫಲಾನುಭವಿಗಳಿಗೆ ಗೃಹ ನಿರ್ಮಾಣ ಮಾಡಲು 1 ಲಕ್ಷ ರೂ.ಗಳವರೆಗೆ ಮಾರ್ಜಿನ್ ಹಣ ಸಾಲವನ್ನಾಗಿ ಶೇ.4ರ ಬಡ್ಡಿದರದಲ್ಲಿ ಫಲಾನುಭವಿಯ ಪರವಾಗಿ ನಿರ್ಮಾಣ ಮಾಡುವ ಸಂಸ್ಥೆಗಳಿಗೆ ಒಡಂಬಡಿಕೆಯ ಮೂಲಕ ಬಿಡುಗಡೆಯಾಗುತ್ತದೆ.
ಪಶು ಸಂಗೋಪನೆ ಯೋಜನೆ: ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮತೀಯ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರು, ಹಸು, ಕುರಿ, ಮೇಕೆ ಇತ್ಯಾದಿ ಸಾಕು ಪ್ರಾಣಿಗಳನ್ನು ಖರೀದಿಸಲು ಅಥವಾ ಕೋಳಿ ಸಾಕಾಣಿಕೆ, ಬಾತು ಕೋಳಿ, ಸಾಕಾಣಿಕೆ, ಉಷ್ಟ್ರಪಕ್ಷಿ ಸಾಕಾಣಿಕೆ ಇತ್ಯಾದಿಗಳನ್ನು ಪ್ರಾರಂಭಿಸಲು ವಾರ್ಷಿಕ ಶೇ.3ರ ಬಡ್ಡಿದರದಲ್ಲಿ 40 ಸಾವಿರ ರೂ.ಘಟಕ ವೆಚ್ಚದ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.
ರೈತರ ಕಲ್ಯಾಣ ಯೋಜನೆ: ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರೋತ್ಸಾಹಿಸಲು ಸಣ್ಣ ಪವರ್ ಟಿಲ್ಲರ್, ಭೂಮಿ ಸಿದ್ಧತೆ ಉಪಕರಣ, ನಾಟಿ, ಬಿತ್ತನೆ ಉಪಕರಣ, ಅಂತರ ಬೇಸಾಯ ಉಪಕರಣ, ಡಿಸೇಲ್ ಪಂಪ್ಸೆಟ್, ಚಿಕ್ಕ ಟ್ರ್ಯಾಕ್ಟರ್, ಟಿಲ್ಲರ್, ಇಂಜಿನ್ ಚಾಲಿತ ಸಸ್ಯ ಸಂರಕ್ಷಣ ಉಪಕರಣಗಳು ಇತ್ಯಾದಿಗಳನ್ನು 1 ಲಕ್ಷ ರೂ.ಘಟಕ ವೆಚ್ಚದಲ್ಲಿ ಖರೀದಿಸಲು ಶೇ.50ರಷ್ಟು ಸಹಾಯಧನ ಒದಗಿಸಲಾಗುತ್ತದೆ.
ಆಟೋಮೊಬೈಲ್ ಸರ್ವಿಸ್: ಅಶಿಕ್ಷಿತ ನಿರುದ್ಯೋಗಿ ಯುವಕ, ಯುವತಿಯರಿಗೆ ಆಟೋಮೊಬೈಲ್ ಸರ್ವಿಸ್ನಲ್ಲಿ ತರಬೇತಿಯನ್ನು ಹಾಗೂ ನಂತರ ಸ್ವಂತ ಉದ್ಯೋಗ ಕಲ್ಪಿಸಲು ರಾಷ್ಟ್ರೀಕೃತ, ಷೆಡ್ಯೂಲ್, ಗ್ರಾಮೀಣ ಬ್ಯಾಂಕುಗಳಿಂದ 2 ಲಕ್ಷ ರೂ.ಗಳಿಂದ 5 ಲಕ್ಷ ರೂ.ವರೆಗೆ ನೀಡಲಾಗುವ ಸಾಲಕ್ಕೆ ನಿಗಮದಿಂದ ಶೇ.35ರಷ್ಟು ಅಂದರೆ ಕನಿಷ್ಠ 70 ಸಾವಿರ ರೂ.ಗಳಿಂದ ಗರಿಷ್ಠ 1.25 ಲಕ್ಷ ರೂ.ಗಳ ಸಹಾಯ ಧನ ನೀಡಲಾಗುತ್ತದೆ.
ಬೀದರ್ ನಲ್ಲಿನ ಕರಕುಶಲ ಚಟುವಟಿಕೆಯಡಿಯಲ್ಲಿ ಅರ್ಹ ಫಲಾನುಭವಿಗೆ ತರಬೇತಿ ಹಾಗೂ ನಂತರ ಸ್ವಂತ ಉದ್ಯೋಗವನ್ನು ಕಲ್ಪಿಸಲು ರಾಷ್ಟ್ರೀಕೃತ, ಷೆಡ್ಯೂಲ್, ಗ್ರಾಮೀಣ ಬ್ಯಾಂಕುಗಳಿಂದ 2 ಲಕ್ಷ ರೂ.ಗಳಿಂದ 5 ಲಕ್ಷ ರೂ.ವರೆಗೆ ನೀಡಲಾಗುವ ಸಾಲಕ್ಕೆ ನಿಗಮದಿಂದ ಶೇ.35ರಷ್ಟು ಅಂದರೆ ಕನಿಷ್ಠ 70 ಸಾವಿರ ರೂ.ಗಳಿಂದ ಗರಿಷ್ಠ 1.25 ಲಕ್ಷ ರೂ.ಗಳ ಸಹಾಯ ಧನ ನೀಡಲಾಗುತ್ತದೆ.
ಚನ್ನಪಟ್ಟಣದ ಕರಕುಶಲ ಯೋಜನೆಯಡಿ ತರಬೇತಿ ನಂತರ ನಿಗಮದ 1 ಲಕ್ಷ ರೂ.ಗಳ ಸಾಲವನ್ನು ವಾರ್ಷಿಕ ಶೇ.3ರ ಬಡ್ಡಿದರದಲ್ಲಿ ನೀಡಲಾಗುವುದು. ಇದರಲ್ಲಿ ಶೇ.50ರಷ್ಟು ಸಹಾಯಧನ.
ಅವಧಿ ಸಾಲ ಯೋಜನೆ: ಇದು ಏಕ ವ್ಯಕ್ತಿಪರ ಯೋಜನೆಯಾಗಿದ್ದು, ಕ್ರೆಡಿಟ್ ಲೈನ್-1ರ ನಿಯಮಾವಳಿಯನ್ವಯ ಪ್ರತಿ ಫಲಾನುಭವಿಗೆ ವ್ಯಾಪಾರ, ಆರ್ಥಿಕ ಚಟುವಟಿಕೆಗಳಿಗಾಗಿ 50 ಸಾವಿರ ರೂ.ಗಳಿಂದ, 20 ಲಕ್ಷ ರೂ.ವರೆಗೆ ಶೇ.6ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ. ಕ್ರೆಡಿಟ್ಲೈನ್-2ರ ನಿಯಮಾವಳಿಯನ್ವಯ ಪ್ರತಿ ಫಲಾನುಭವಿಗೆ 30 ಲಕ್ಷ ರೂ.ವರೆಗೆ ಪುರುಷರಿಗೆ ಶೇ.8ರ ಬಡ್ಡಿದರ ಮತ್ತು ಮಹಿಳೆಯರಿಗೆ ಶೇ.6ರ ಬಡ್ಡಿದರಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ. ಈ ಒಟ್ಟು ಸಾಲದಲ್ಲಿ ಎನ್ಎಂಡಿಎಫ್ಸಿಯ ಪಾಲು ಶೇ.90, ಕೆಎಂಡಿಸಿಯ ಪಾಲು ಶೇ.5 ಆಗಿದ್ದು, ಇನ್ನುಳಿದ ಶೇ.5ರಷ್ಟು ವಂತಿಕೆಯನ್ನು ಫಲಾನುಭವಿಯು ಭರಿಸಬೇಕು.
ಇದಲ್ಲದೆ, ಅರಿವು ಯೋಜನೆ, ಗಂಗಾ ಕಲ್ಯಾಣ ಯೋಜನೆಯಡಿ ಏತ ನೀರಾವರಿ, ವೈಯಕ್ತಿಕ ಕೊಳವೆ ಬಾವಿ ಹಾಗೂ ತೆರೆದ ಬಾವಿಗಾಗಿ ಸಾಲ ಸೌಲಭ್ಯ. ಸಣ್ಣ ಸಾಲ ಹಾಗೂ ಸಹಾಯಧನ ಯೋಜನೆ, ರೇಷ್ಮೆ ಉದ್ಯಮ, ಮೈಕ್ರೋಫೈನಾನ್ಸ್ ಯೋಜನೆ, ವಿದ್ಯಾಭ್ಯಾಸ ಸಾಲ ಯೋಜನೆ, ಸಾಂಪ್ರದಾಯಿಕ ಕುಶಲಕರ್ಮಿಗಳು, ಕರಕುಶಲ ವಸ್ತುಗಳ ತಯಾರಕರಿಗೆ ‘ವಿರಾಸತ್’ ಯೋಜನೆ ಜಾರಿಯಲ್ಲಿದೆ.
ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸರಕಾರ ಬದ್ಧ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವು, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ಸಾಮಾಜಿಕ ನ್ಯಾಯದ ಮೇಲೆ ವಿಶ್ವಾಸವಿಟ್ಟು ಕಾರ್ಯನಿರ್ವಹಿಸುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕೆಎಂಡಿಸಿಯಲ್ಲಿ ಲಭ್ಯವಿರುವ ಎಲ್ಲ ಯೋಜನೆಗಳನ್ನು ಅತ್ಯಂತ ಪಾರದರ್ಶಕವಾಗಿ, ಅರ್ಹ ಫಲಾನುಭವಿಗಳಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದೇನೆ. ಕೆಎಂಡಿಸಿಯಲ್ಲಿ ಯಾವುದೆ ಯೋಜನೆಗಳ ಬಗ್ಗೆ ಮಾಹಿತಿ ಬೇಕಿದ್ದಲ್ಲಿ ಫಲಾನುಭವಿಗಳು ನೇರವಾಗಿ ನನ್ನ ಮೊಬೈಲ್ ಸಂಖ್ಯೆ 9448029738ಗೆ ಸಂಪರ್ಕಿಸಬಹುದು.
-ಮುಖ್ತಾರ್ ಹುಸೇನ್ ಪಠಾಣ್, ಕೆಎಂಡಿಸಿ ಅಧ್ಯಕ್ಷ