ಬೆಟ್ಟದ ನೆಲ್ಲಿ, ಲವಂಗ, ನೇರಳೆ, ಡಾಲ್ಚಿನ್ನಿ ವಿನಾಶದಂಚಿನ ಪಟ್ಟಿಗೆ ಸೇರ್ಪಡೆ
ಕರ್ನಾಟಕ ಜೀವವೈವಿಧ್ಯ ಮಂಡಳಿ ಔಷಧಿ ಮೂಲಿಕೆಗಳ ವರದಿ ಬಿಡುಗಡೆ
ಬೆಂಗಳೂರು: ಕರ್ನಾಟಕ ಜೀವ ವೈವಿಧ್ಯ ಮಂಡಳಿ ಕಳೆದ 5 ವರ್ಷಗಳಲ್ಲಿ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದ ಅರಣ್ಯ ಪ್ರದೇಶಗಳಲ್ಲಿರುವ ಔಷಧಿ ಸಸ್ಯ ಸಂಪನ್ಮೂಲಗಳ ಲಭ್ಯತೆ ಕುರಿತು ಅಧ್ಯಯನ ನಡೆಸಿದ್ದು, ಅದರಲ್ಲಿ ನಾವು ದಿನನಿತ್ಯ ಬಳಸಲ್ಪಡುವ ಬೆಟ್ಟದ ನೆಲ್ಲಿ, ಲವಂಗ, ಕಾಡು ನೇರಳೆ, ಶ್ರೀಗಂಧ, ಡಾಲ್ಚಿನ್ನಿ ಸೇರಿದಂತೆ ಹಲವು ಔಷಧಿ ಪ್ರಭೇದಗಳು ವಿನಾಶದಂಚಿಗೆ ಸೇರಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಕರ್ನಾಟಕ ಔಷಧಿ ಮೂಲಿಕಾ ಮಂಡಳಿ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಕಾಡಿನಲ್ಲಿ ಲಭ್ಯವಿರುವ ಎಲ್ಲ ಬಗೆಯ ಮರ, ಪೊದೆ ಹಾಗೂ ಬಳ್ಳಿಗಳ ಪ್ರಭೇದಗಳ ವೈವಿಧ್ಯತೆ ಕುರಿತು ಸುಮಾರು 12,820 ಕಿಮೀ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿದೆ. ಅರಣ್ಯಗಳಲ್ಲಿ ಕಂಡುಬರುವ 4,800ಕ್ಕೂ ಹೆಚ್ಚಿನ ಹೂ ಬಿಡುವ ಸಸ್ಯ ಪ್ರಭೇದಗಳು ಸೇರಿದಂತೆ ಸಾಮಾನ್ಯವಾಗಿ ಕಂಡುಬರುವ ಕೆಲವು ಔಷಧಿ ಗಿಡ ಮರಗಳು ಹಾಗೂ ವಿನಾಶದಂಚಿನ ಗಿಡ-ಮರಗಳನ್ನು ಅಧ್ಯಯನ ವರದಿಯಲ್ಲಿ ದಾಖಲಿಸಲಾಗಿದೆ.
ಕಳೆದ ಕೆಲವು ದಶಕಗಳಿಂದ ವಿವಿಧ ಕಾರಣಗಳಿಗಾಗಿ ಆಗುತ್ತಿರುವ ಅರಣ್ಯನಾಶ, ಕಾಡಿನ ಒತ್ತುವರಿ, ಬೇಸಿಗೆಯ ಕಾಡಿನ ಬೆಂಕಿ, ಮರಮುಟ್ಟುಗಳು ಹಾಗೂ ಅರಣ್ಯ ಉಪ ಉತ್ಪನ್ನಗಳನ್ನು ತೆಗೆಯುವಾಗ ಆಗುವ ನಷ್ಟ, ಏರುತ್ತಿರುವ ಜನಸಂಖ್ಯೆ, ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಔಷಧಿ ಮೂಲಿಕೆಗಳ ಬೇಡಿಕೆ, ಮೂಲಿಕೆಗಳ ಕಳ್ಳಸಾಗಾಣೆ ಇವೆಲ್ಲವುಗಳ ಕಾರಣದಿಂದಾಗಿ ಔಷಧಿ ಮೂಲಿಕೆಗಳ ಸಂಪತ್ತು ನಾಶವಾಗುತ್ತಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಭಿಪ್ರಾಯಿಸಿದೆ.
ರಾಜ್ಯದ ವಿವಿಧ ಭಾಗದಲ್ಲಿರುವ ಸುಮಾರು 12,820 ಕಿಮೀ ವ್ಯಾಪ್ತಿಯಲ್ಲಿರುವ ಅರಣ್ಯದಲ್ಲಿ ಔಷಧಿ ಮೂಲಿಕೆಗಳ ಸಂಶೋಧನೆಯ ಅನುಕೂಲಕ್ಕಾಗಿ ಕೆನರಾ ಸರ್ಕಲ್, ಮಂಗಳೂರು ಸರ್ಕಲ್, ಕಲಬುರಗಿ ಸರ್ಕಲ್, ಧಾರವಾಡ ಸರ್ಕಲ್, ಮೈಸೂರು ಸರ್ಕಲ್, ಹಾಸನ ಸರ್ಕಲ್ ಎಂದು ಆರು ವಿಭಾಗಗಳನ್ನು ಮಾಡಿಕೊಂಡು ಸರ್ಕಲ್ ಮಟ್ಟದ ಸಸ್ಯವೈವಿಧ್ಯ ಕುರಿತು ವರದಿಯನ್ನು ಸಿದ್ಧಪಡಿಸಲಾಗಿದೆ.
ವಿನಾಶದಂಚಿನ ಔಷಧಿಮೂಲಿಕೆಗಳ ಸಂರಕ್ಷಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ರೂಪಿಸುವ ಅಗತ್ಯವಿದ್ದು, ಮುಖ್ಯವಾಗಿ ರೈತರು, ಬಿಎಂಸಿ, ಗ್ರಾಮ ಅರಣ್ಯ ಸಮಿತಿಗಳು, ರೈತ ಸಹಕಾರಿ ಸಂಘಗಳು, ರೈತ ಉತ್ಪಾದನಾ ಕಂಪೆನಿಗಳು, ಸಸ್ಯಶಾಸ್ತ್ರಜ್ಞರು, ವೈದ್ಯರು. ಶಿಕ್ಷಕರು, ವಿದ್ಯಾರ್ಥಿಗಳು, ನಾಟಿ ವೈದ್ಯರು, ಸ್ಥಳೀಯ ಜನಪದ ತಜ್ಞರು, ಪಾರಂಪರಿಕ ಕುಶಲಕರ್ಮಿಗಳು ಇವರೆಲ್ಲರ ಸಹಭಾಗಿತ್ವದಿಂದ ಮಾತ್ರ ಔಷಧಿ ಮೂಲಿಕೆಗಳನ್ನು ಸಂರಕ್ಷಿಸಬಹುದಾಗಿದೆ ಎಂದು ಜೀವ ವೈವಿಧ್ಯ ಮಂಡಳಿ ಸಿದ್ಧಪಡಿಸಿದ ವರದಿಯಲ್ಲಿ ಸ್ಪಷ್ಟವಾಗಿ ಗುರುತಿಸಿದೆ.
ಔಷಧಿಮೂಲಿಕೆಗಳನ್ನು ವ್ಯಾಪಕವಾಗಿ ಬೆಳೆಸುವ ಕುರಿತಂತೆ ಈಗಾಗಲೇ ಆಯುಷ್ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳ ಅಡಿಯಲ್ಲಿ ಹಲವು ಉಪಯುಕ್ತ ಯೋಜನೆಗಳು ಜಾರಿಯಲ್ಲಿವೆ. ನಮ್ಮ ಮಂಡಳಿಯು ನಡೆಸಿದ ಈ ಅಧ್ಯಯನ ಮಾಹಿತಿಗಳನ್ನು ಈ ಇಲಾಖೆಗಳು ರೂಪಿಸುವ ಯೋಜನೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಬಳಕೆಯಾಗಲಿ. ಔಷಧಿ ಮೂಲಿಕೆಗಳನ್ನು ಸಂರಕ್ಷಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
-ಅನಂತ ಹೆಗಡೆ ಅಶೀಸರ, ಅಧ್ಯಕ್ಷ, ಕರ್ನಾಟಕ ಜೀವವೈವಿಧ್ಯ ಮಂಡಳಿ
ವಿನಾಶದಂಚಿನ ಗಿಡ- ಮರಗಳು
ಕೆನರಾ ಸರ್ಕಲ್: ಮಸಿಮರ, ಲವಂಗ, ಹೈಗಾ, ಸೂರಂಟೆ, ಬೆಟ್ಟದ ನೆಲ್ಲಿ, ರಕ್ತಚಂದನ, ಸೀತಾ ಅಶೋಕಾ, ಕಾಡುನೇರಳೆ, ಅಡವಿ ಅಣಲೆ, ಧೂಪದ ಮರ.
ಮಂಗಳೂರು ಸರ್ಕಲ್: ದಾಲ್ಚಿನ್ನಿ, ಅಡವಿ ಲವಂಗ, ಕೈಮರ, ಕಾಡುಗಂಧ, ಕಾಡುರಾಮಪತ್ರೆ, ಹೊನ್ನೆ, ಶ್ರೀಗಂಧ, ಜಾಲಾರಿ, ತಂಬಾಗ, ಅಡವಿ ಅಣಲೆ.
ಕಲಬುರಗಿ ಸರ್ಕಲ್: ಬೀಟೆ, ಬೀಟೆಮರ, ಬೆಟ್ಟದನೆಲ್ಲಿ
ಧಾರವಾಡ ಸರ್ಕಲ್: ಬೀಟೆ, ಶ್ರೀಗಂಧ, ಕಾಡು ನೇರಳೆ, ಅಡವಿ ಅಣಲೆ
ಹಾಸನ ಸರ್ಕಲ್: ನುರಕಲು, ಹೊಲೇಹೊನ್ನೆ, ಬೋವು, ಕಾಡು ರಾಮಪತ್ರೆ, ಜಾಲಾರಿ, ಕಾಡು ನೇರಳೆ