ಶಿರ್ವ: ನೀರು ಕೇಳುವ ನೆಪದಲ್ಲಿ ಮಹಿಳೆಯ ಸರ ಸುಲಿಗೆ
ಶಿರ್ವ, ನ.22: ನೀರು ಕೇಳುವ ನೆಪದಲ್ಲಿ ಮನೆಗೆ ಬಂದ ಅಪರಿಚಿತ ವ್ಯಕ್ತಿ, ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿ ಪರಾರಿ ಯಾಗಿರುವ ಘಟನೆ ನ.21ರಂದು ಸಂಜೆ ವೇಳೆ ಬಂಟಕಲ್ ಎಂಬಲ್ಲಿ ನಡೆದಿದೆ.
ಬಂಟಕಲ್ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ ಸಮೀಪದ ನಿವಾಸಿ ವಸಂತಿ(72) ಎಂಬವರ ಮನೆಗೆ ಓರ್ವ ಅಪರಿಚಿತ ವ್ಯಕ್ತಿಯು ಬೈಕಿನಲ್ಲಿ ಬಂದು ನೀರು ಕೇಳಿದ್ದು, ಅದರಂತೆ ನೀರು ಕುಡಿದು ಮನೆಯೊಳಗಡೆ ಬಂದ ಆತ, ವಸಂತಿಯವರ ಹಿಂದಿನಿಂದ ಬಂದು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡು ತಾನು ಬಂದ ಬೈಕಿನಲ್ಲಿ ಶಿರ್ವ ಕಡೆ ಪರಾರಿಯಾದನು.
ಆ ವ್ಯಕ್ತಿಯು ನೀಲಿ ಬಣ್ಣದ ಗೆರೆಗಳಿರುವ ಶರ್ಟ್, ಕಪ್ಪುಬಣ್ಣದ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಹೆಲ್ಮೆಟ್ ಧರಿಸಿದ್ದನು. ಕಳವಾದ 36 ಗ್ರಾಂ ತೂಕದ ಸರದ ಮೌಲ್ಯ 1,60,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story