varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 23 Nov, 2020
ಪಿ.ಎ.ರೈ

ನೀವು (ಗಡಿ ರಕ್ಷಣಾ ಸೇನೆ) ನಮ್ಮ ಗಡಿಗಳನ್ನು ರಕ್ಷಿಸುತ್ತಿರುವ ಕಾರಣ ನಾವು ರಾತ್ರಿ ನಿಶ್ಚಿಂತೆಯಿಂದ ನಿದ್ರಿಸುತ್ತಿದ್ದೇವೆ - ನರೇಂದ್ರ ಮೋದಿ, ಪ್ರಧಾನಿ
ನೀವು ನಿದ್ರಿಸುತ್ತಿರುವ ಕಾರಣದಿಂದಲೇ ಚೀನಾ ಸೇನೆ ಗಡಿಗೆ ನುಗ್ಗಿರುವುದು.


ಸಂಪುಟ ವಿಸ್ತರಣೆ ವೇಳೆ ಎಲ್ಲರಿಗೂ ಸಿಹಿ ಲಭಿಸಲಿದೆ, ಯಾರಿಗೂ ಕಹಿ ಇಲ್ಲ - ಬಸವರಾಜ ಬೊಮ್ಮಾಯಿ, ಸಚಿವ
ಮತದಾರರ ಬಾಯಿಗಷ್ಟೇ ಕಹಿ.


ಭಾರತದ ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳಿಕೊಂಡೇ ತಿರುಗಾಡುವ ಭೂಪ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಸತ್ಯಕ್ಕಿಂತ ಸುಳ್ಳಿಗೇ ಮಾರುಕಟ್ಟೆ ಇರುವಾಗ ಅವರೇನು ಮಾಡುತ್ತಾರೆ ಪಾಪ.


ರಾಷ್ಟ್ರಧ್ವಜ ಹಾರಿಸದವರು, ಸಂವಿಧಾನ ಒಪ್ಪದ ಆರೆಸ್ಸೆಸ್‌ನೋರು ದೇಶದ್ರೋಹಿಗಳು - ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್ ನಾಯಕ
70 ವರ್ಷಗಳ ಕಾಲ ಅವರನ್ನು ಮಡಿಲಲ್ಲಿಟ್ಟು ಸಾಕಿದ್ದು ಕಾಂಗ್ರೆಸ್ ಸರಕಾರ ತಾನೆ?


ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು 17 ಮಂದಿ ಶಾಸಕರು ಕಾರಣವಾದವರಲ್ಲದೆ ಅವರು ಪಕ್ಷ ಕಟ್ಟಿದವರಲ್ಲ - ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವ
ಪಕ್ಷವನ್ನು ಒಡೆಯುವುದು ಸಣ್ಣ ಕೆಲಸವೇ?


ಬಿಜೆಪಿಯವರು ವೋಟಿಗಾಗಿ ಮಾತ್ರ ಹಿಂದೂ ರಕ್ಷಕರು. ವ್ಯಾಪಾರ ದಂಧೆಯಲ್ಲಿ ಜಾತ್ಯತೀತರು- ರಮಾನಾಥ ರೈ, ಮಾಜಿ ಸಚಿವ
ಜಾತ್ಯತೀತ ಕಾಂಗ್ರೆಸ್ ಶಾಸಕರು ಕಡಿಮೆ ದರದಲ್ಲಿ ಸಿಕ್ಕುವಾಗ ಅವರಾದರೂ ಏನು ಮಾಡುತ್ತಾರೆ?


ಸೀಟು ಹಂಚಿಕೆಯಲ್ಲಿ ಆದ ವಿಳಂಬವೇ ಬಿಹಾರದಲ್ಲಿ ಮಹಾಘಟಬಂಧನ್ ಸೋಲಿಗೆ ಕಾರಣ- ತಾರಿಕ್‌ಅನ್ವರ್, ಕಾಂಗ್ರೆಸ್ ನಾಯಕ
ಹೌದು, ಕಾಂಗ್ರೆಸ್‌ಗೆ ಇನ್ನಷ್ಟು ಕಡಿಮೆ ಸೀಟುಗಳನ್ನು ಹಂಚಿದ್ದರೆ ಘಟಬಂಧನ್ ಗೆದ್ದು ಬಿಡುತ್ತಿತ್ತು.


ಗಡಿ ಭಾಗದಲ್ಲಿ ಕನ್ನಡಿಗರನ್ನು ಕೇಳುವವರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ- ವಾಟಾಳ್ ನಾಗರಾಜ್, ವಾಟಾಳ್ ಪಕ್ಷದ ಅಧ್ಯಕ್ಷ

ನಿಮ್ಮ ಕತ್ತೆಯ ಜೊತೆಗೆ ನೀವೇಕೆ ಗಡಿಭಾಗಕ್ಕೆ ವಲಸೆ ಹೋಗಬಾರದು?


ಬಿಜೆಪಿಯಲ್ಲಿ ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ- ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಅಲ್ಲೇನಿದ್ದರೂ ಆರೆಸ್ಸೆಸ್‌ನ ಬ್ರಾಹ್ಮಣ್ಯ ರಾಜಕಾರಣಕ್ಕಷ್ಟೇ ಅವಕಾಶ.


ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದರೆ ಅದರಲ್ಲಿ ತಪ್ಪೇನಿದೆ?- ಸಿ.ಟಿ. ರವಿ, ಬಿಜೆಪಿ ರಾ.ಪ್ರ. ಕಾರ್ಯದರ್ಶಿ
ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ವಿಸರ್ಜಿಸಿದರೆ ತಪ್ಪೇನಿದೆ ಎನ್ನುವ ಪ್ರಶ್ನೆಯೊಂದು ಬಾಕಿ ಉಳಿದಿದೆ. 


ಮುಖ್ಯಮಂತ್ರಿ ಯಡಿಯೂರಪ್ಪರ ಪುತ್ರ ವಿಜಯೇಂದ್ರರನ್ನು ಅನಗತ್ಯವಾಗಿ ವೈಭವೀಕರಿಸಲಾಗುತ್ತಿದೆ- ಕೆ.ಎಸ್. ಈಶ್ವರಪ್ಪ, ಸಚಿವ
ಹೆಸರಿನಲ್ಲೇ ವಿಜಯ ಇರುವ ಕಾರಣಕ್ಕಿರಬಹುದೇ?


ಅಗತ್ಯ ಬಿದ್ದರೆ ಕೃಷಿ ಉತ್ಪನ್ನ ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ಸಿದ್ಧ - ಎಸ್.ಟಿ. ಸೋಮಶೇಖರ್, ಸಚಿವ
ಕೃಷಿ ಉತ್ಪನ್ನ ಮಾಡುವುದರ ವಿರುದ್ಧವೇ ಕಾಯ್ದೆ ತರಲು ಹೊರಟಿರಬೇಕು.


ಮರಾಠಿ ಭಾಷೆಗೂ, ಮರಾಠಾ ಪ್ರಾಧಿಕಾರಕ್ಕೂ ಯಾವುದೇ ಸಂಬಂಧವಿಲ್ಲ- ಯಡಿಯೂರಪ್ಪ, ಮುಖ್ಯಮಂತ್ರಿ
ಸಂಬಂಧವೇನಿದ್ದರೂ ಚುನಾವಣೆಯ ಜೊತೆಗೆ ಮಾತ್ರ.


ಸಾಹಿತ್ಯದ ಮೂಲಕ ತುಳುನಾಡಿನ ಸಂಸ್ಕೃತಿಗೆ ಭದ್ರತೆ ನೀಡಬಹುದು- ಕೋಟ ಶ್ರೀನಿವಾಸಪೂಜಾರಿ, ಸಚಿವ
ರಾಜಕಾರಣಿಗಳೆಲ್ಲ ಖೋಟಾ ಸಾಹಿತಿಗಳಾಗಲು ಹೊರಟಿರಬೇಕು.


ಕಾಂಗ್ರೆಸ್ ಜೊತೆ ಸರಕಾರ ನಡೆಸಿ ನನಗೆ ಸಾಕಾಗಿ ಹೋಗಿತ್ತು. ಅದಕ್ಕೆ ಸರಕಾರ ಬೀಳಲಿ ಎಂದು ಸುಮ್ಮನಿದ್ದೆ- ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಬಿದ್ದ ಬಳಿಕ ಬಿಜೆಪಿ ಜೊತೆಗೆ ಸೇರಿಕೊಳ್ಳುವ ಉದ್ದೇಶ ಇದ್ದಿರಬೇಕು.


ಕೊರೋನ ಅವಧಿಯಲ್ಲಿ ಹಲವು ಬದಲಾವಣೆಗಳಾದವು. ನಗರಗಳಲ್ಲಿ ಪಕ್ಷಿಗಳು ಕಂಡವು, ಕೆರೆ-ನದಿಗಳು ಸ್ವಚ್ಛಗೊಂಡವು- ನರೇಂದ್ರ ಮೋದಿ, ಪ್ರಧಾನಿ
ಬಹುಶಃ ನಗರಗಳಲ್ಲಿ ಪಕ್ಷಿಗಳನ್ನು ಆಹ್ವಾನಿಸುವುದಕ್ಕಾಗಿ ಲಾಕ್‌ಡೌನ್ ಮಾಡಲಾಯಿತೇ?


 ನಾಗರಹಾವು ಸಿನೆಮಾದ ಜಲೀಲನ ನೆನಪಾಗಿ ಸಂಸದೆ ಸುಮಲತಾ ನನ್ನನ್ನು ಪೇಟೆ ರೌಡಿಗೆ ಹೋಲಿಸಿರಬಹುದು- ಪ್ರತಾಪಸಿಂಹ, ಸಂಸದ
ಆ ಜಲೀಲ ಪಾತ್ರಧಾರಿ ನಿಮ್ಮಷ್ಟು ಸಂಸ್ಕಾರ ಹೀನ ಮಾತನಾಡುತ್ತಿರಲಿಲ್ಲ. ಅವನದೇನಿದ್ದರೂ ‘ಏ ಬುಲ್ ಬುಲ್ ಮಾತಾಕಿಲ್ವಾ...’ ಇಷ್ಟೇ.


ಹಿಂದುತ್ವದ ವಿಷಯದಲ್ಲಿ ಬಿಜೆಪಿಯಂತಹ ಪಕ್ಷಗಳಿಂದ ಪಾಠ ಕಲಿಯುವ ಅಗತ್ಯವಿಲ್ಲ- ಸಂಜಯ್‌ರಾವತ್, ಶಿವಸೇನೆ ವಕ್ತಾರ
ನಿಮ್ಮದೇನಿದ್ದರೂ ಪಾಠ ಕಲಿಸುವ ಕೆಲಸ.


ಎಲ್ಲಿ ಅಧಿಕಾರ ಇರುತ್ತದೋ ಅಲ್ಲಿ ಜೆಡಿಎಸ್‌ನವರು ಇರುತ್ತಾರೆ- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಅಧಿಕಾರವಿಲ್ಲ ಎಂದು ತಾನೇ ತಾವು ಕಾಂಗ್ರೆಸ್‌ಗೆ ವರ್ಗಾವಣೆಯಾದದ್ದು.


ನಾನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಗ್ರಾಮ ವಾಸ್ತವ್ಯದಂತೆ ರಾತ್ರಿ ಇದ್ದು ಮಲಗಿ ಬೆಳಗ್ಗೆ ಎದ್ದು ಹೋಗಲು ಬಂದಿಲ್ಲ- ಬಿ.ಸಿ. ಪಾಟೀಲ್, ಸಚಿವ
ಬೆಳಗ್ಗೆಯೂ ಮಲಗಬೇಕು ಎಂದು ತೀರ್ಮಾನಿಸಿದ್ದೀರಾ?


ಪಟಾಕಿ ಸಂಸ್ಕೃತಿ ಹಿಂದೂಗಳದ್ದಲ್ಲ- ಡಿ. ರೂಪಾ, ಐಪಿಎಸ್ ಅಧಿಕಾರಿ
ಸಂಘಪರಿವಾರಿಗಳನ್ನು ಹಿಂದೂಗಳು ಎಂದು ನೀವು ತಪ್ಪು ತಿಳಿದುಕೊಂಡಿದ್ದೀರಿ.


ಲವ್ ಜಿಹಾದ್ ಎಂಬುದು ದೇಶ ಒಡೆಯಲು ಬಿಜೆಪಿ ಸೃಷ್ಟಿಸಿದ ಪದ- ಅಶೋಕ್ ಗೆಹ್ಲೋಟ್, ರಾಜಸ್ಥಾನ ಮುಖ್ಯಮಂತ್ರಿ
ಲವ್ ಜಿಹಾದ್‌ಗೆ ಬಲಿಯಾಗಿರುವ ರಾಷ್ಟ್ರ ಮಟ್ಟದ ಬಿಜೆಪಿ ಮುಖಂಡರ ಮಕ್ಕಳ ಮದುವೆಗಳೆಲ್ಲ ರದ್ದಾಗಿ ಬಿಡಬಹುದೇ?


ರಾಜಕೀಯದಲ್ಲಿ ಭಯ ಹುಟ್ಟಿಸುವ ಕೆಲಸ ಯಾವ ಪಕ್ಷವೂ ಮಾಡಬಾರದು- ಎಚ್.ಕೆ. ಪಾಟೀಲ್, ಮಾಜಿ ಸಚಿವ
ಯಡಿಯೂರಪ್ಪರು ಅಷ್ಟರ ಮಟ್ಟಿಗೆ ಭಯಭೀತರಾಗಿದ್ದಾರೆಯೇ?


ಹಣ ಮಾಡುವುದೇ ರಾಜಕೀಯದ ಉದ್ದೇಶವಲ್ಲ- ಡಾ. ಅಶ್ವತ್ಥ ನಾರಾಯಣ, ಉಪ ಮುಖ್ಯಮಂತ್ರಿ
ಹೆಣಗಳಿಗಾಗಿಯೂ ಕೆಲವರು ರಾಜಕೀಯ ಮಾಡುತ್ತಾರೆ.


ಈಗ ಚುನಾವಣೆಗಾಗಿ ಮೈತ್ರಿ ಮಾಡಿಕೊಳ್ಳುವುದು ಕೂಡ ದೇಶವಿರೋಧಿ ಕೃತ್ಯವಾಗಿದೆ- ಮೆಹಬೂಬ ಮುಫ್ತಿ, ಪಿಡಿಪಿ ನಾಯಕಿ
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಾಗ ನಿಮ್ಮ ದೇಶಭಕ್ತಿ ಸಾಬೀತಾಗಿದೆ ಬಿಡಿ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು