ಉಡುಪಿ : 13 ಮಂದಿಗೆ ಕೊರೋನ ಪಾಸಿಟಿವ್
ಉಡುಪಿ, ನ. 23: ಜಿಲ್ಲೆಯಲ್ಲಿ ಮಂಗಳವಾರ 13 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಅಲ್ಲದೇ 15 ಮಂದಿ ಚಿಕಿತ್ಸೆಯಿಂದ ಗುಣಮುಖ ರಾದರೆ, ಸದ್ಯ 179 ಮಂದಿ ಕೊರೋನ ಪಾಸಿಟಿವ್ಗೆ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದವರಲ್ಲಿ 7 ಮಂದಿ ಪುರುಷರು ಹಾಗೂ 6 ಮಂದಿ ಮಹಿಳೆಯರು. ಇವರಲ್ಲಿ ಮೂವರು ಪುರುಷರು ಹಾಗೂ ನಾಲ್ವರು ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣಗಳಿಲ್ಲ. ಉಡುಪಿ ತಾಲೂಕಿನ 6, ಕುಂದಾಪುರ ತಾಲೂಕಿನ 6, ಹೊರ ಜಿಲ್ಲೆಯ ಒಬ್ಬರಲ್ಲಿ ಪಾಸಿಟಿವ್ ಕಂಡುಬಂದಿದೆ ಎಂದು ಡಾ.ಸೂಡ ವಿವರಿಸಿದರು.
15 ಮಂದಿ ಗುಣಮುಖ: ಸೋಮವಾರ 15 ಮಂದಿ ಚಿಕಿತ್ಸೆ ಬಳಿಕ ಸೋಂಕಿ ನಿಂದ ಗುಣಮುಖರಾಗಿದ್ದಾರೆ. ಹೀಗಾಗಿ ಸೋಂಕಿನಿಂದ ಮುಕ್ತರಾಗಿ ಮನೆಗೆ ತೆರಳಿದವರ ಒಟ್ಟು ಸಂಖ್ಯೆ ಸದ್ಯ 22,170 ಆಗಿದೆ. ಜಿಲ್ಲೆಯಲ್ಲಿ ಸದ್ಯ 179 ಮಂದಿ ಈಗಲೂ ಕೋವಿಡ್ಗೆ ಚಿಕಿತ್ಸೆಯಲ್ಲಿದ್ದಾರೆ ಎಂದರು.
2812 ನೆಗೆಟಿವ್: ಜಿಲ್ಲೆಯಲ್ಲಿ ಸೋಮವಾರ ಒಟ್ಟು 2829 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 2812 ಮಂದಿ ನೆಗೆಟಿವ್ ಬಂದಿದ್ದಾರೆ. ಉಳಿದಂತೆ 17(ಐಸಿಎಂಆರ್ ವರದಿ)ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 22,536 ಕ್ಕೇರಿದೆ.
ಜಿಲ್ಲೆಯಲ್ಲಿ ಇಂದು ಸಹ ಕೋವಿಡ್ನಿಂದ ಯಾವುದೇ ಸಾವು ಸಂಭವಿಸಿಲ್ಲ. ಹೀಗಾಗಿ ನ.7ರ ನಂತರ ಇದುವರೆಗೆ ಕೋವಿಡ್ಗೆ ಜಿಲ್ಲೆಯಲ್ಲಿ ಯಾರೂ ಬಲಿಯಾಗಿಲ್ಲ ಎಂದು ಆರೋಗ್ಯ ಇಲಾಖೆಯ ದೈನಂದಿನ ಬುಲೆಟಿನ್ ತಿಳಿಸಿದೆ.