ಶಾಲಾ ತರಗತಿ ತೆರೆಯದಿರುವ ಸರಕಾರದ ನಿರ್ಧಾರಕ್ಕೆ ಖಂಡನೆ
ಮಂಗಳೂರು, ನ.24: ಪ್ರಸಕ್ತ ಶೈಕ್ಷಣಿಕ ವರ್ಷ ಶಾಲೆಗಳ 1ರಿಂದ 8ರವರೆಗಿನ ತರಗತಿಗಳನ್ನು ತೆರೆಯದಿರಲು ರಾಜ್ಯ ಸರಕಾರದ ನಿರ್ಧರಿಸಿರು ವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಹೇಳಿಕೆಯಲ್ಲಿ ತಿಳಿಸಿದೆ.
ಇದು ಬಡ ಮತ್ತು ಹಿಂದುಳಿದ ಸಮುದಾಯಗಳು ಮತ್ತು ಅವರ ಮಕ್ಕಳ ಹಿತಾಸಕ್ತಿ ಹಾಗು ಬೆಳವಣಿಗೆಗೆ ವಿರುದ್ಧವಾದ ನಿರ್ಧಾರವಾಗಿದೆ. ಶಿಕ್ಷಣ ಸಚಿವರ ನೇತೃತ್ವದಲ್ಲಿ ಸರಕಾರಿ ಶಾಲೆಗಳ ಪೋಷಕರು ಮತ್ತು ಎಸ್‌ಡಿಎಂಸಿ ರಾಜ್ಯವ್ಯಾಪಿ ಅಭಿಪ್ರಾಯವನ್ನು ಕೇಳಿದಾಗ ಶಾಲೆಯನ್ನು ತೆರೆಯುವ ಬಗ್ಗೆ ಸಹಮತ ವ್ಯಕ್ತ ಪಡಿಸಿದ್ದರು. ಅಲ್ಲದೆ ಹಲವು ಶಿಕ್ಷಣ ತಜ್ಞರು, ಶಿಕ್ಷಣಕ್ಕೆ ಸಂಬಂಧಪಟ್ಟ ಸಂಘಸಂಸ್ಥೆಗಳು ಕೂಡ ಶಾಲೆ ತೆರೆದು ಪ್ರಾರಂಭ ಮಾಡುವ ಅಗತ್ಯತೆ ಬಗ್ಗೆ ಮನವರಿಕೆ ಮಾಡಿದ್ದರು. ಆದರೆ ಮುಖ್ಯಮಂತ್ರಿಯು ಶಿಕ್ಷಣ ಸಚಿವರನ್ನು ಮೂಲೆಗುಂಪು ಮಾಡುವ ರೀತಿ ಯಲ್ಲಿ ಎಲ್ಲಾ ನಿರ್ಧಾರಗಳನ್ನು ಸ್ವತಃ ತಾನೇ ತೆಗೆದುಕೊಳ್ಳುತ್ತಿದ್ದಾರೆ. ಪೋಷಕರ ಮತ್ತು ಮಕ್ಕಳ ಹಾಗೂ ಸರಕಾರಿ ಶಾಲೆಯ ನಿಜವಾದ ವಾರಿಸುದಾರರಾದ ಎಸ್‌ಡಿಎಂಸಿಯ ಅಭಿಪ್ರಾಯಗಳಿಗೆ ಯಾವುದೇ ಬೆಲೆ ನೀಡದೆ ಶಾಲೆ ತೆರೆಯದಿರುವ ಬಗ್ಗೆ ಮೊದಲೇ ನಿಶ್ಚಯ ಮಾಡಿದ್ದರೆ ಪೋಷಕರ ಅಭಿಪ್ರಾಯ ಎನ್ನುವ ನಾಟಕದ ಅಗತ್ಯವೇನಿತ್ತು ಎಂದು ಪ್ರಶ್ನಿಸಿದೆ.
ಸರಕಾರಿ ಶಾಲೆಗಳ ಮಕ್ಕಳಿಗೆ ಸುರಕ್ಷಿತ ವಿಧಾನದಿಂದ ಕಲಿಸುತ್ತಿದ್ದ ವಿದ್ಯಾಗಮ ಎಂಬ ಕಾರ್ಯಕ್ರಮವು ಶಿಕ್ಷಣ ಸಚಿವರ ನೇತೃತ್ವದಲ್ಲಿ ನಡೆಯು ತ್ತಿರುವ ಸಂದರ್ಭ ಯಾವುದೇ ವೈಜ್ಞಾನಿಕ ಮತ್ತು ದಾಖಲೆಗಳು ಇಲ್ಲದೆ ಮಾಧ್ಯಮ ಮತ್ತು ಕೆಲವು ಲಾಬಿಗಳ ದುರುದ್ದೇಶ ಪೂರಿತವಾದ ಸಂದೇಶ ದಿಂದಾಗಿ ನಿಲ್ಲಿಸಲಾಗಿದೆ. ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯುವ ಮತ್ತು ರಕ್ಷಿಸುವ ಪ್ರಾಥಮಿಕ ಭಾದ್ಯತೆಯನ್ನು ಹೊಂದಿರುವ ರಾಜ್ಯ ಸರಕಾರವೇ ಮಕ್ಕಳ ಹಿತಾಸಕ್ತಿಗೆ ವಿರುದ್ಧವಾದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ , ಜೀತ ಪದ್ಧತಿ ಮತ್ತು ಮಕ್ಕಳ ಸಾಗಾಣಿಕೆಗೆ ಉತ್ತೇಜನ ನೀಡುವ ನೀತಿ ಅನುಸರಿಸಲು ಹೊರಟಿರುವುದು ಖಂಡನೀಯ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಸರಕಾರದ ಈ ನಿರ್ಧಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಮಹಾಪೋಷಕ ನಿರಂಜನಾರಾಧ್ಯ ವಿ ಪಿ, ರಾಜ್ಯಾಧ್ಯಕ್ಷ ಮೊಯಿದಿನ್ ಕುಟ್ಟಿ, ವಿಭಾಗ ಉಸ್ತುವಾರಿಗಳಾದ ಅಶೋಕ್ ಮಾಗಡಿ, ನಾಗೇಶ್ ಕೊಡಗು, ಡಿ.ವಿ.ಕುಪ್ಪಸ್ತ್ರ ವಿಜಯಪುರ, ರಾಘವೇಂದ್ರ ಗುನ್ನಲ್ಲಿ ತಿಳಿಸಿದ್ದಾರೆ.