ಗೋಹತ್ಯೆ ನಿಷೇಧ: ರೈತರ ಆತ್ಮಹತ್ಯೆಗೆ, ದಲಿತ-ಮುಸ್ಲಿಮರ ಹತ್ಯೆಗೆ ಪರವಾನಿಗೆ!
ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ಬಿಜೆಪಿ ಸರಕಾರ ರೈತರ ಹಿತದೃಷ್ಟಿಯಿಂದಲೇ ತರಲಿದೆಯೆಂಬುದು ಬಿಜೆಪಿ ಮಾಡುತ್ತಿರುವ ಅತಿದೊಡ್ಡ ಅಪಪ್ರಚಾರ. ಆದರೂ ಈ ಬಾರಿ ಕೇಂದ್ರದಲ್ಲಿ ಯಾವ ರೈತ, ದೇಶಹಿತದ ಅಜೆಂಡಾಗಳನ್ನು ಮುಂದಿಡದೆ ಕೇವಲ ಆಕ್ರಮಣಕಾರಿ ಮುಸ್ಲಿಂ ವಿರೋಧಿ, ಪಾಕಿಸ್ತಾನ ವಿರೋಧಿ ಕಥನಗಳ ಮೂಲಕವೇ ಅಧಿಕಾರಕ್ಕೆ ಬಂದ ಮೇಲೆ, ಈ ಮಸೂದೆಯ ಬಗ್ಗೆಯೂ ರೈತ ಹಿತದ ಮಾತು ಕಡಿಮೆಯಾಗಿ ದೇಶ ಅರ್ಥಾತ್ ಹಿಂದೂ ಅರ್ಥಾತ್ ಬ್ರಾಹ್ಮಣ ಸಂಸ್ಕೃತಿ ಉಳಿಸುವ ಮಾತು ಹೆಚ್ಚಿದೆ. ಆದರೆ ವಾಸ್ತವವೆಂದರೆ ಬಿಜೆಪಿ ರಾಜ್ಯಗಳಲ್ಲಿರುವ ಜಾನುವಾರು ಸಂರಕ್ಷಣಾ ಮಸೂದೆಯಲ್ಲಿರುವ ಪ್ರತಿ ಕಲಮೂ ರೈತರನ್ನು ಬೀದಿಪಾಲು ಮಾಡುತ್ತದೆ ಮತ್ತು ಜೈಲುಪಾಲು ಮಾಡುತ್ತದೆ.
ದೇಶವನ್ನು ಮತ್ತು ಈ ದೇಶದ ಅಗತ್ಯಗಳನ್ನು ಬ್ರಾಹ್ಮಣ್ಯದ ಕಣ್ಣಿಂದಲ್ಲದೆ ರೈತಾಪಿಯ ಮತ್ತು ದಮನಿತರ ಕಣ್ಣಿಂದ ಎಂದಿಗೂ ಅರ್ಥಮಾಡಿಕೊಳ್ಳದ ಬಿಜೆಪಿಗೆ ಈ ದೇಶ ಎಂದಿಗೂ ಅರ್ಥವಾಗಿಲ್ಲ. ಹೀಗಾಗಿ ಈ ದೇಶದ ಸಂಸ್ಕೃತಿಯನ್ನು ಉಳಿಸುವ ಹೆಸರಲ್ಲಿ ಅವರು ರೂಪಿಸುತ್ತಿರುವ ಕಾನೂನುಗಳೆಲ್ಲಾ ಈ ದೇಶದ ಬಹುಸಂಖ್ಯಾತರ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು ಅವರ ಬದುಕನ್ನು ಮತ್ತಷ್ಟು ದುರ್ಭರಗೊಳಿಸುತ್ತಿದೆ. ಅದರಲ್ಲೂ ಕೇಂದ್ರದಲ್ಲಿ ಬಿಜೆಪಿ ಪಕ್ಷವು ಆಕ್ರಮಣಕಾರಿ ಹಿಂದುತ್ವವಾದಿ ಅಜೆಂಡಾಗಳ ಮೂಲಕವೇ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಆರ್ಟಿಕಲ್ 370 ರದ್ದು, NPR-NRC, ರಾಮಮಂದಿರ, ಕಾರ್ಪೊರೇಟ್ ಪರ ಕೃಷಿ, ಕಾರ್ಮಿಕ, ಶಿಕ್ಷಣ ಹಾಗೂ ಪರಿಸರ ಕಾಯ್ದೆಗಳ ಮೂಲಕ ಈ ದೇಶದ ರೈತ-ದಲಿತ-ಅಲ್ಪಸಂಖ್ಯಾತ-ಆದಿವಾಸಿ-ಮಹಿಳೆಯರ ಮೇಲೆ ಬಂಡವಾಳಶಾಹಿ ಹಾಗೂ ಬ್ರಾಹ್ಮಣಶಾಹಿ ದಾಳಿಯನ್ನು ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವನ್ನೂ ಒಳಗೊಂಡಂತೆ ಬಿಜೆಪಿ ಸರಕಾರಗಳಿರುವ ರಾಜ್ಯಗಳಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಣಿ ನಿರ್ಧರಿಸಿದೆ.
ಅವುಗಳ ಬಗ್ಗೆ ಹಸಿಸುಳ್ಳು ಹಾಗೂ ಅರ್ಧ ಸತ್ಯಗಳನ್ನು ಪ್ರಚಾರ ಮಾಡುತ್ತಾ ಬೇಟೆಗೆ ಬಲಿಯ ಸಮ್ಮತಿಯನ್ನು ಪಡೆದುಕೊಳ್ಳುವ ಪ್ರಯತ್ನದಲ್ಲಿದೆ. ಇದಕ್ಕೆ ಪೂರಕವಾಗಿ ಗೋ ಹತ್ಯೆ ಕಾಯ್ದೆಯ ಸುತ್ತ ರಾಷ್ಟ್ರ ರಕ್ಷಣೆ ಮತ್ತು ರೈತ ರಕ್ಷಣೆಯ ಪರಮ ಸುಳ್ಳುಗಳ ಕಥನವನ್ನು ಬಿತ್ತಲು ಕರ್ನಾಟಕದ ಬಿಜೆಪಿಯು ಸಿದ್ಧವಾಗುತ್ತಿದೆ. ಈ ಹಿಂದೆ 2008-13ರಲ್ಲಿ ಕರ್ನಾಟಕದಲ್ಲಿ ಅಧಿಕಾರದಲ್ಲಿದಾಗ ಕರ್ನಾಟಕದ ಬಿಜೆಪಿ ಸರಕಾರವು ದೇಶದ ಇತರ ಎಲ್ಲಾ ಬಿಜೆಪಿ ಶಾಸಿತ ರಾಜ್ಯಗಳಿಗಿಂತ ಅತ್ಯಂತ ಕ್ರೂರವಾಗಿದ್ದ ಹಾಗೂ ರೈತ ವಿರೋಧಿಯಾಗಿದ್ದ ಗೋಹತ್ಯೆ ನಿಷೇಧ ಮಸೂದೆಯನ್ನು ತರಲು ಮುಂದಾಗಿತ್ತು. ಕರ್ನಾಟಕದ ಜನತೆಯ ಪ್ರಬಲ ಹೋರಾಟಗಳಿಂದ ಹಾಗೂ ವಿಧಾನ ಪರಿಷತ್ನಲ್ಲಿ ಶಾಸಕ ಬಲವಿಲ್ಲದ ಕಾರಣಗಳಿಂದ ಅದು ವಿಫಲವಾಗಿತ್ತು. ಆನಂತರ 2013ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ಆ ಮಸೂದೆಯನ್ನು ಹಿಂದೆಗೆದುಕೊಂಡಿತು.
ಈಗ ಮತ್ತೊಮ್ಮೆ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಆಪರೇಷನ್ ಕಮಲದ ಮೂಲಕ ವಿಧಾನ ಸಭೆಯಲ್ಲಿ ಪೂರ್ಣ ಪ್ರಮಾಣದ ಬಹುಮತವನ್ನು ಪಡೆದುಕೊಂಡಿದೆ. ಕೇಂದ್ರದಲ್ಲೂ ಪೂರ್ಣಬಹುಮತದ ಬಿಜೆಪಿ ಸರಕಾರ ಎರಡನೇ ಬಾರಿ ಆಕ್ರಮಣಕಾರಿ ಹಿಂದುತ್ವ ಅಜೆಂಡಾಗಳನ್ನು ಮುಂದಿಟ್ಟುಕೊಂಡೇ ಸರಕಾರ ನಡೆಸುತ್ತಿದೆ. ರಾಜ್ಯಪಾಲರ ಕಚೇರಿ ಮಾತ್ರವಲ್ಲದೆ ರಾಷ್ಟ್ರಪತಿಗಳ ಕಚೇರಿಗಳು ಅಕ್ಷರಶಃ ಬಿಜೆಪಿಯ ಪಕ್ಷದ ಕಚೇರಿಗಳಾಗಿವೆ. ಮತ್ತೊಂದೆಡೆ ವಿಧಾನ ಪರಿಷತ್ನಲ್ಲಿ ಶಕ್ತಿಗುಂದಿದ್ದ ಬಿಜೆಪಿ ಮತ್ತೊಮ್ಮೆ ಅತಿ ದೊಡ್ಡ ಪಕ್ಷವಾಗಿಬಿಟ್ಟಿದೆಯಾದರೂ ಇನ್ನೂ ಬಹುಮತವಿಲ್ಲ. ಕಾಂಗ್ರೆಸ್-ಜೆಡಿಎಸ್ ಒಂದಾಗಿ ಮತಚಲಾಯಿಸಿದಲ್ಲಿ ಪರಿಷತ್ನಲ್ಲಿ ಮಸೂದೆಗಳು ಪಾಸಾಗುವುದಿಲ್ಲ. ಆದರೆ ಈ ಪರಿಸ್ಥಿತಿ ಹೆಚ್ಚು ಕಾಲ ಇರುವುದಿಲ್ಲ. ಏಕೆಂದರೆ ವಿರೋಧಪಕ್ಷಗಳ ಅಂಗೈ ಹುಣ್ಣನ್ನು ನೋಡುವುದಕ್ಕೆ ವಿಶೇಷ ದುರ್ಬೀನೇನೂ ಅಗತ್ಯವಿಲ್ಲ. ಹೀಗಾಗಿ ಒಂದೊಮ್ಮೆ ಗೋಹತ್ಯೆ ನಿಷೇಧದ ಮಸೂದೆಯನ್ನು ಬಿಜೆಪಿ ತರುವುದೇ ಆದಲ್ಲಿ ಮತ್ತೊಮ್ಮೆ ನಾಡಿನ ರೈತಾಪಿ, ದಲಿತರು, ಮುಸ್ಲಿಮರು ಹಾಗೂ ಪ್ರಜಾತಂತ್ರವಾದಿಗಳು ಪ್ರಬಲ ಚಳವಳಿಯ ಮೂಲಕ ಮಾತ್ರ ತಡೆಗಟ್ಟಲು ಸಾಧ್ಯ.
ಹೀಗಾಗಿ ಬಿಜೆಪಿ ತರಬಯಸಿದ್ದ, ತರಬಯಸುತ್ತಿರುವ ಗೋಹತ್ಯೆ ನಿಷೇಧ ಕಾಯ್ದೆಯು ಹೇಗೆ ಪ್ರಧಾನವಾಗಿ ರೈತ ವಿರೋಧಿ ಮತ್ತು ನಂತರ ದಮನಿತರ ಆಹಾರ ಹಕ್ಕಿನ ವಿರೋಧಿ ಮತ್ತು ಸಂವಿಧಾನ ವಿರೋಧಿ ಎಂಬುದನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಳ್ಳುವ ಅಗತ್ಯವಿದೆ.
ಬಿಜೆಪಿಯ ಗೋಹತ್ಯೆ ನಿಷೇಧಕ್ಕೆ ಸಂವಿಧಾನದ ಬೆಂಬಲವಿದೆಯೇ?
1948ರ ನವಂಬರ್ 24ರಂದು ಸಂವಿಧಾನ ರಚನಾ ಸಭೆಯಲ್ಲಿ ಈ ಬಗ್ಗೆ ನಡೆದ ಚರ್ಚೆಯಲ್ಲಿ ಪಂಡಿತ್ ಠಾಕೂರ್ ದಾಸ್ ಭಾರ್ಗವ, ಸೇಠ್ ಗೋವಿಂದ್ ದಾಸ್ ಹಾಗೂ ಇನ್ನಿತರ ಕೆಲವು ಹಿಂದೂ ಮೂಲಭೂತವಾದಿಗಳು ಗೋಹತ್ಯೆ ನಿಷೇಧವನ್ನು ಮೂಲಭೂತ ಹಕ್ಕಾಗಿ ಸೇರಿಸಬೇಕೆಂದು ಒತ್ತಾಯಿಸಿದ್ದರು. ಇವರೊಂದಿಗೆ ಆಗಿನ ಯುನೈಟೆಡ್ ಪ್ರಾವಿನ್ಸ್ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದ ಮುಸ್ಲಿಮ್ ಪ್ರತಿನಿಧಿ ಝೆಡ್. ಎಚ್. ಲಾರಿ ಮತ್ತು ಅಸ್ಸಾಮಿನ ಮುಹಮ್ಮದ್ ಸೈದುಲ್ಲಾ ಎಂಬವರೂ ಧ್ವನಿಗೂಡಿಸಿದ್ದರು. ಆದರೆ ಡಾ. ಅಂಬೇಡ್ಕರ್, ಅಂದಿನ ಪ್ರಧಾನಿ ನೆಹರೂ ಹಾಗೂ ಇನ್ನಿತರರು ಅದರ ದೂರಗಾಮಿ ಪರಿಣಾಮದ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟರು. ಅಂತಹ ಒಂದು ಕಾನೂನು ಜಾರಿಗೆ ಬಂದರೆ ರೈತಾಪಿಗಳಿಗೆ ಧಕ್ಕೆ ಬರುವುದರಿಂದ ರೈತಾಪಿಯ ಹಿತಾಸಕ್ತಿಗೂ, ಗೋಮಾಂಸ ಆಹಾರ ಪದ್ಧತಿ ಉಳ್ಳವರ ಆಸಕ್ತಿಗೂ ಮತ್ತು ಗೋವನ್ನು ಪವಿತ್ರ ಎಂದು ಭಾವಿಸುವವರ ಭಾವನೆಗೂ ಧಕ್ಕೆ ಬರದಂತೆ 48ನೇ ಪರಿಚ್ಛೇದವನ್ನು ಸಂವಿಧಾನದ ನಿರ್ದೇಶನಾ ತತ್ವದಡಿಯಲ್ಲಿ ಸೇರಿಸಲಾಯಿತು.
48ನೇ ಪರಿಚ್ಛೇದ:
“The State shall endeavour to organise agriculture and animal husbandry on modern and scientific lines and shall in particular take steps for preserving and improving the breeds of cattle and prohibit the slaughter of cow and other useful cattle, specially milch and draught cattle and their young stock.” ಎಂದಷ್ಟೇ ಹೇಳುತ್ತದೆ. ಅಂದರೆ ದೇಶದ ಕೃಷಿಕ್ಷೇತ್ರ ಮತ್ತು ಪಶು ಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ಪುನರ್ಸಂಘಟಿಸಬೇಕು ಹಾಗೂ ಪ್ರಭುತ್ವವು ಕೃಷಿಸೇವೆಯಲ್ಲಿ ಮತ್ತು ಹೈನುಗಾರಿಕೆಯಲ್ಲಿ ಬಳಸಲಾಗುವ ಜಾನುವಾರುಗಳಾದ ಹಸು, ದನ, ಕೋಣ, ಎಮ್ಮೆಯಂತಹ ರಾಸುಗಳ ಮತ್ತವುಗಳ ಕರುಗಳ ಹತ್ಯೆ ತಡೆಗಟ್ಟಲು ಮತ್ತು ರಕ್ಷಿಸಲು ಕಾನೂನನ್ನು ರಚಿಸಬೇಕು. ಹಾಗೆಯೇ ಇದರಲ್ಲಿ ಸ್ಪಷ್ಟವಾಗಿ ಕಾಣುವಂತೆ ಈ ಕಲಮಿನಲ್ಲಿ ಗೋಹತ್ಯೆ ನಿಷೇಧವನ್ನು ಸಾರಾಸಗಟಾಗಿ ಮಾಡಬೇಕೆಂದಾಗಲೀ ಅಥವಾ ಗೋವು ಮಾತ್ರ ಪವಿತ್ರವೆಂಬ ದೃಷ್ಟಿಯಾಗಲೀ ಇಲ್ಲ.
ಬ್ರಾಹ್ಮಣಿಕೆಯ ಸಸ್ಯಾಹಾರದ ಬೂಟಾಟಿಕೆ
ಆದರೆ ಅಲ್ಪಸಂಖ್ಯಾತ ದ್ವೇಷವನ್ನೇ ತಮ್ಮ ರಾಜಕೀಯದ ತಿರುಳನ್ನಾಗಿ ಮಾಡಿಕೊಂಡಿರುವ ಹಿಂದುತ್ವವಾದಿಗಳು ಈ ದೇಶದ ಇತಿಹಾಸವನ್ನು, ಜನತೆಯ ನಂಬಿಕೆ, ವಿಶ್ವಾಸ ಮತ್ತು ಪುರಾಣಗಳನ್ನು ವಿಕೃತವಾಗಿ ತಿರುಚುತ್ತಾ ಬಂದಿದ್ದಾರೆ. ಈ ದೇಶದಲ್ಲಿ ಗೋಮಾಂಸ ಭಕ್ಷಣೆ ಪ್ರಾರಂಭವಾಗಿದ್ದೇ ಮುಸ್ಲಿಂ ದೊರೆಗಳ ದಾಳಿಯ ನಂತರ ಎಂದು ಹೇಳುತ್ತಾ ಇತಿಹಾಸವನ್ನು ವಿಕೃತಗೊಳಿ ಸುತ್ತಿರುವ ಈ ಹಿಂದುತ್ವವಾದಿಗಳು ಈ ದೇಶದಲ್ಲಿ ಬುದ್ಧಧರ್ಮ ಅಸ್ತಿತ್ವಕ್ಕೆ ಬರುವ ಮುನ್ನ ಆರ್ಯರು ಎಂದು ಹೇಳಿಕೊಳ್ಳುವ ಎಲ್ಲರೂ ಗೋಮಾಂಸ ಭಕ್ಷಕರೇ ಆಗಿದ್ದರೆಂಬುದನ್ನು ಮರೆಮಾಚುತ್ತಿದ್ದಾರೆ. ಮನುಸ್ಮತಿ, ತೈತ್ತರೀಯ ಬ್ರಾಹ್ಮಣ, ಹಲವು ವೇದಸ್ಮತಿಗಳೂ ಸಹ ಗೋಮಾಂಸ ಭಕ್ಷಣೆಯನ್ನು ನಿಷೇಧಿಸಿರಲಿಲ್ಲ ಎಂಬುದನ್ನು ಸಹ ಮುಚ್ಚಿಡುತ್ತಿದ್ದಾರೆ. ತಮ್ಮ ಶ್ರೇಣೀಕೃತ ಸಾಮಾಜಿಕ ನೀತಿಗೆ ವಿರುದ್ಧವಾಗಿದ್ದ ಬೌದ್ಧ ಧರ್ಮದಿಂದ ಜನತೆಯನ್ನು ಆಕರ್ಷಿಸಲು ಆವರೆಗೆ ಗೋಮಾಂಸ ಭಕ್ಷಣೆಯನ್ನೇ ಪ್ರಚಾರ ಮಾಡುತ್ತಿದ್ದ ಬ್ರಾಹ್ಮಣಧರ್ಮವು ಗೋಮಾಂಸವನ್ನೇ ಅಲ್ಲದೆ ಮಾಂಸಾಹಾರವನ್ನೇ ತ್ಯಜಿಸಿತೆಂಬುದನ್ನು ಡಾ. ಅಂಬೇಡ್ಕರ್ರವರು ತಮ್ಮ“BRAHMIN AND THE DEAD COW” ಎಂಬ ಲೇಖನದಲ್ಲಿ ಸ್ಪಷ್ಟಪಡಿಸುತ್ತಾರೆ. ಹಾಗೆಯೇ ಗೋಮಾಂಸ ಭಕ್ಷಣೆಯನ್ನು ಮುಂದುವರಿಸಿದ್ದರಿಂದಲೇ ದಲಿತರನ್ನು ಹಿಂದೂ ಸಮಾಜ ಅಸ್ಪೃಶ್ಯರನ್ನಾಗಿ ಕಾಣಲು ಕಾರಣವಾಯಿತೆಂದು ವಾದಿಸುತ್ತಾರೆ. ಇಂದಿಗೂ ದಲಿತ, ಆದಿವಾಸಿ ಮತ್ತು ಶೂದ್ರ ಸಮುದಾಯಗಳಿಗೆ ಸುಲಭದಲ್ಲಿ ಸಿಗಬಹುದಾದ ಪೌಷ್ಠಿಕ ಆಹಾರ ಗೋಮಾಂಸವೇ ಆಗಿದೆ. ಈ ಎಲ್ಲಾ ಹಿನ್ನೆಲೆಯಿಂದಲೇ ಡಾ. ಅಂಬೇಡ್ಕರ್ರವರು ಗೋಹತ್ಯೆ ನಿಷೇಧವನ್ನು ಸಂವಿಧಾನದಲ್ಲಿ ಮೂಲಭೂತ ಹಕ್ಕಾಗಿ ಸೇರಿಸಬಾರದೆಂದೂ ಅಥವಾ ಗೋಮಾಂಸ ಭಕ್ಷಣೆಯನ್ನು ಹೀನಾಯವಾಗಿ ನೋಡಬಾರದೆಂದೂ ಬಲವಾಗಿ ವಾದಿಸಿದ್ದರು.
ಬಿಳಿಯ ಹಾಲಿಂದ ಕೇಸರಿ ಬೆಣ್ಣೆ!
ಆದರೂ ಹಲವಾರು ರಾಜಕೀಯ ಬಿಕ್ಕಟ್ಟುಗಳಿಂದ ತತ್ತರಿಸುತ್ತಿದ್ದ 1960ರ ದಶಕದ ಸಂದರ್ಭದಲ್ಲಿ ಕಾಂಗ್ರೆಸನ್ನೂ ಒಳಗೊಂಡಂತೆ ಹಲವಾರು ಪಕ್ಷಗಳಲ್ಲಿದ್ದ ವಿವಿಧ ಬಗೆಯ ಹಿಂದುತ್ವವಾದಿಗಳು, ಆರ್ಯಸಮಾಜಿಗಳು, 1963-64ರಲ್ಲಿ ಗೋಹತ್ಯೆ ನಿಷೇಧಕ್ಕಾಗಿ ಹುಯಿಲಿಡಲು ಪ್ರಾರಂಭಿಸಿದರು. ಈ ಕಾರಣದಿಂದಾಗಿ ಹಲವಾರು ರಾಜ್ಯಗಳಲ್ಲಿ 1964ರಲ್ಲಿ ‘ಉಪಯುಕ್ತ ಗೋವು ಹತ್ಯೆ ನಿಷೇಧ ಕಾಯ್ದೆ’ಗಳು ಜಾರಿಗೆ ಬಂದವು. ಅದರ ಭಾಗವಾಗಿಯೇ, ಕರ್ನಾಟಕದಲ್ಲೂ ಉಪಯುಕ್ತ ಗೋವುಗಳ ರಕ್ಷಣೆ ಮಾಡುವ ಶಾಸನವೊಂದು 1964ರಲ್ಲಿ ಜಾರಿಗೆ ಬಂದಿದೆ. ಈ THE KARNATAKA PREVENTION OF COW SLAUGHTER AND CATTLE PRESERVATION ACT, 1964ರ ಪ್ರಕಾರ ಗೋಹತ್ಯೆಯನ್ನು ತಡೆಗಟ್ಟುವ ಬಗ್ಗೆ ಅಸ್ಪಷ್ಟವಾದ ಆದೇಶವಿದ್ದರೂ ಕಾಯ್ದೆಯ 5 (1) ಮತ್ತು (2) ನೇ ಕಲಮುಗಳಲ್ಲಿ 12 ವರ್ಷಕ್ಕೆ ಮೇಲ್ಪಟ್ಟ ರಾಸುಗಳನ್ನು ಹತ್ಯೆ ಮಾಡಲು ಪರವಾನಿಗೆ ನೀಡಲಾಗಿದೆ. ಅದಕ್ಕೆ ಪಶುವೈದ್ಯರ ಪರವಾನಿಗೆಯಷ್ಟೇ ಬೇಕಾಗುತ್ತದೆ. ಈವರೆಗೆ ಕರ್ನಾಟಕದಲ್ಲಿರುವ ಕಸಾಯಿಖಾನೆಗಳೂ ಸಹ ಇದೇ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿವೆ. ಸಾಮಾನ್ಯವಾಗಿ ಸರಕಾರದಿಂದ ಮಾನ್ಯತೆ ಪಡೆದ ಕಸಾಯಿಖಾನೆಗಳಲ್ಲಿ ವ್ಯವಹಾರದಲ್ಲಿರುವ ವ್ಯಾಪಾರಿಗಳ್ಯಾರೂ ಕರುಗಳನ್ನಾಗಲಿ, 12 ವರ್ಷ ವಯಸ್ಸಾಗದ ರಾಸುಗಳನ್ನಾಗಲಿ ಕೊಲ್ಲುವುದಿಲ್ಲ. ಎಲ್ಲಾ ವ್ಯವಹಾರಗಳಲ್ಲಿ ಇರುವಂತೆ ಅಲ್ಲಿಯೂ ಕೆಲವರು ಈ ನಿಯಮವನ್ನು ಉಲ್ಲಂಘಿಸುತ್ತಾರಾದರೂ ಅಂತಹವರ ಮೇಲೆ ಕ್ರಮ ತೆಗೆದು ಕೊಳ್ಳುವುದಕ್ಕೆ ಈ ಕಾಯ್ದೆಯಲ್ಲಿ ಅವಕಾಶವಿದೆ.
ಆದರೆ ಬಿಜೆಪಿ ಸರಕಾರಗಳು ಅಧಿಕಾರಕ್ಕೆ ಬಂದಮೇಲೆ ಆಹಾರ ಸಂಸ್ಕೃತಿಯ ಮೇಲೂ ದ್ವೇಷ ರಾಜಕಾರಣ ಮಾಡುತ್ತಾ 1964ರ ಉಪಯುಕ್ತ ಗೋಹತ್ಯೆ ನಿಷೇಧ ಕಾಯ್ದೆಯ ಬದಲಿಗೆ ಯಾವುದೇ ಜಾನುವಾರು ಹತ್ಯೆ ಮಾತ್ರವಲ್ಲ, ಗೋಮಾಂಸ ಭಕ್ಷಣೆಯನ್ನೂ ದೇಶದ್ರೋಹವೆಂದು ಪರಿಗಣಿಸುವಂತಹ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ. ಇಂತಹ ಕಾಯ್ದೆಗಳಿಗೆ ಸಂವಿಧಾನದ ಆರ್ಟಿಕಲ್ 48 ಯಾವುದೇ ಬಗೆಯ ಸಮರ್ಥನೆಯನ್ನು ಒದಗಿಸುವುದಿಲ್ಲ.
ರೈತರನ್ನು ಜೈಲಿಗೆ ಹಾಗೂ ಸಾವಿಗೆ ದೂಡುವ ಕಾಯ್ದೆ
ಎಲ್ಲಕ್ಕಿಂತ ಮುಖ್ಯವಾಗಿ ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ಬಿಜೆಪಿ ಸರಕಾರ ರೈತರ ಹಿತದೃಷ್ಟಿಯಿಂದಲೇ ತರಲಿದೆಯೆಂಬುದು ಬಿಜೆಪಿ ಮಾಡುತ್ತಿರುವ ಅತಿದೊಡ್ಡ ಅಪಪ್ರಚಾರ. ಆದರೂ ಈ ಬಾರಿ ಕೇಂದ್ರದಲ್ಲಿ ಯಾವ ರೈತ, ದೇಶಹಿತದ ಅಜೆಂಡಾಗಳನ್ನು ಮುಂದಿಡದೆ ಕೇವಲ ಆಕ್ರಮಣಕಾರಿ ಮುಸ್ಲಿಂ ವಿರೋಧಿ, ಪಾಕಿಸ್ತಾನ ವಿರೋಧಿ ಕಥನಗಳ ಮೂಲಕವೇ ಅಧಿಕಾರಕ್ಕೆ ಬಂದ ಮೇಲೆ, ಈ ಮಸೂದೆಯ ಬಗ್ಗೆಯೂ ರೈತ ಹಿತದ ಮಾತು ಕಡಿಮೆಯಾಗಿ ದೇಶ ಅರ್ಥಾತ್ ಹಿಂದೂ ಅರ್ಥಾತ್ ಬ್ರಾಹ್ಮಣ ಸಂಸ್ಕೃತಿ ಉಳಿಸುವ ಮಾತು ಹೆಚ್ಚಿದೆ. ಆದರೆ ವಾಸ್ತವವೆಂದರೆ ಬಿಜೆಪಿ ರಾಜ್ಯಗಳಲ್ಲಿರುವ ಜಾನುವಾರು ಸಂರಕ್ಷಣಾ ಮಸೂದೆಯಲ್ಲಿರುವ ಪ್ರತಿ ಕಲಮೂ ರೈತರನ್ನು ಬೀದಿಪಾಲು ಮಾಡುತ್ತದೆ ಮತ್ತು ಜೈಲುಪಾಲು ಮಾಡುತ್ತದೆ.
ಉದಾಹರಣೆಗೆ 2010ರಲ್ಲಿ ಮಂಡಿಸಲಾಗಿದ್ದ ಕರ್ನಾಟಕದ ಮಸೂದೆಯ ಸೆಕ್ಷನ್ (8)ರ ಪ್ರಕಾರ ‘‘ಜಾನುವಾರುಗಳನ್ನು ಕೊಲ್ಲುವ ಉದ್ದೇಶದಿಂದ ಮಾರುವುದು, ಕೊಳ್ಳುವುದು ಅಥವಾ ಪರಭಾರೆ ಮಾಡುವುದು ನಿಷೇಧ’’ವಾಗುತ್ತದೆ. ಶಿಕ್ಷಾರ್ಹ ಅಪರಾಧವಾಗುತ್ತದೆ. ಅಂದರೆ ಕೃಷಿಗೆ ಬಳಸಲಾಗದ ಹಾಗೂ ಸಾಕಲೂ ಆಗದ ಗೊಡ್ಡು ಅಥವಾ ಮುದಿ ದನಗಳನ್ನು ಮಾರಾಟ ಮಾಡುವ ರೈತನೂ ಅಪರಾಧಿಯಾಗುತ್ತಾನೆ. ಏಕೆಂದರೆ ಸೆಕ್ಷನ್ (8)ರ ವಿವರಣೆಯ ಪ್ರಕಾರ ‘‘ಆ ದನಗಳನ್ನು ಕೊಲ್ಲುವ ಉದ್ದೇಶಕ್ಕೆ ಕೊಳ್ಳಲಾಗುತ್ತಿದೆ ಎಂದು ಗೊತ್ತಿದ್ದರೆ ಅಥವಾ ದನಗಳನ್ನು ಕೊಲ್ಲಲೆಂದೇ ಕೊಳ್ಳಲಾಗುತ್ತಿದೆ ಎಂದು ನಂಬುವ ಕಾರಣವಿದ್ದೂ’’ ಮಾರುವುದೂ ಸಹ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧ!
ಒಂದು ಕಡೆ ಗೊಡ್ಡಾದ ದನಗಳನ್ನೂ ಸಾಕಬೇಕು, ಮತ್ತೊಂದು ಕಡೆ ಬೇಸಾಯ ಮುಂದುವರಿಸಲೂ ಬೇಕಾದ ಹೊಸ ರಾಸುಗಳನ್ನು ಕೊಳ್ಳಲೂ ಹಣವಿಲ್ಲ. ಈ ಇಕ್ಕಟ್ಟಿನ ಸಂದರ್ಭದಲ್ಲಿ ರೈತ ಒಂದು ವೇಳೆ ದನವನ್ನು ಮಾರಿದರೆ ಅವನನ್ನು ಮುಲಾಜಿಲ್ಲದೆ ಜೈಲಿಗೆ ಹಾಕಿ ಎನ್ನುತ್ತದೆ ಈ ಕಾಯ್ದೆ!
ಆದ್ದರಿಂದಲೇ ಈ ಪುರೋಹಿತರ ಸರಕಾರಕ್ಕೆ ರೈತ ಬದುಕಿನ ಕಷ್ಟಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲವೆಂಬುದು ಗೊತ್ತಾಗುತ್ತದೆ. ಅಷ್ಟು ಮಾತ್ರವಲ್ಲ. ಈ ರಾಜ್ಯದ ಬಹುಪಾಲು ರೈತರು ಕೃಷಿಯೊಂದಿಗೆ ಉಪಕಸುಬಾಗಿ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಹೈನುಗಾರಿಕೆಯಲ್ಲಿ ನಾಟಿ ಹಸುಗಳಿಗಿಂತ ಹೆಚ್ಚು ಹಾಲು ಕೊಡುವ ಜರ್ಸಿ ಅಥವಾ ಸೀಮೆ ಹಸುಗಳೇ ಮುಖ್ಯ. ಇವುಗಳು ಹಾಲನ್ನು ಕೊಟ್ಟರೂ ಕೊಡದಿದ್ದರೂ ನಾಟಿ ಹಸುಗಳ ಮೂರುಪಟ್ಟು ಮೇವನ್ನು ತಿನ್ನುತ್ತವೆ. ಎಲ್ಲಿಯತನಕ ಅವು ಹಾಲನ್ನು ಕೊಡುತ್ತಿ ರುತ್ತವೋ ಅಲ್ಲಿಯವರೆಗೆ ಅವುಗಳನ್ನು ಸಾಕುವುದು ಅಷ್ಟು ಕಷ್ಟವಲ್ಲ. ಆದರೆ ಹಾಲು ಕೊಡುವುದನ್ನು ನಿಲ್ಲಿಸಿದ ನಂತರವೂ ಅವುಗಳು ಮೇವು ತಿನ್ನುವ ಪ್ರಮಾಣವೇನೂ ಕಡಿಮೆಯಾಗುವುದಿಲ್ಲ. ಹೀಗಾಗಿ ಆದಾಯವಿರಲಿ, ಇಲ್ಲದಿರಲಿ ರೈತ ಆ ಸೀಮೆ ಹಸುಗಳನ್ನು ಸಾಕಲೇ ಬೇಕೆಂದರೆ ರೈತಾಪಿಯ ಕುಟುಂಬದ ಆರ್ಥಿಕತೆಯ ಮೇಲೆ ಎಂತಹ ದುಷ್ಟ ಪ್ರಭಾವ ಬೀರಬಹುದೆಂಬುದನ್ನು ಸರಕಾರ ಯೋಚಿಸಿದೆಯೇ?
ಸೀಮೆಹಸುಗಳ ಗಂಡುಕರುಗಳು ಬೇಸಾಯದ ಬಳಕೆಗೂ ಬರುವುದಿಲ್ಲ, ಹಾಲನ್ನೂ ಕೊಡುವುದಿಲ್ಲ. ಮೇವನ್ನು ಮಾತ್ರ ನಾಟಿ ಹಸುಗಳ ಮೂರುಪಟ್ಟು ತಿನ್ನುತ್ತಲೇ ಇರುತ್ತವೆ. ಇವನ್ನು ರೈತ ಮಾರದಿದ್ದರೆ ಅವನಿಗೆ ಬರುವ ಲಾಭವೆಲ್ಲಾ ಇವುಗಳನ್ನು ಸಾಕಲೆಂದೇ ಖರ್ಚಾಗುತ್ತದೆ ಅಥವಾ ಅದಕ್ಕಿಂತ ಜಾಸ್ತಿಯಾಗುತ್ತದೆ. ಈ ಕಷ್ಟಗಳಿಂದ ತಪ್ಪಿಸಿಕೊಳ್ಳಲು ರೈತನೇನಾದರೂ ಗಂಡುಕರುವನ್ನು ಮಾರಿದರೆ ಆತನಿಗೆ ಈ ಕಾಯ್ದೆಯ ಪ್ರಕಾರ ಜೈಲುಶಿಕ್ಷೆ ಕಟ್ಟಿಟ್ಟಬುತ್ತಿ!
ಹೀಗಾಗಿ ಬಿಜೆಪಿಯು ಇತರ ರಾಜ್ಯಗಳಲ್ಲಿ ತಂದಿರುವ ಹಾಗೂ ಕರ್ನಾಟಕದಲ್ಲಿ ತರಬೇಕೆಂದಿರುವ ಗೋಹತ್ಯೆ ನಿಷೇಧ ಕಾಯ್ದೆಯು ಸಾರಾಂಶದಲ್ಲಿ ಆತ್ಮಹತ್ಯೆಗೆ, ಸೆರೆಮನೆಗಳಿಗೆ ದೂಡುವ ಕಾಯ್ದೆಯಾಗಲಿದೆ. ರೈತರ ಬದುಕನ್ನು ಇನ್ನಷ್ಟು ಅತಂತ್ರಗೊಳಿಸುವ ಹಾಗೂ ಅಪರಾಧೀಕರಿಸುವ ಕಾಯ್ದೆಯಾಗಲಿದೆ. ಹಾಗೆಯೇ ಅಲ್ಪಸಂಖ್ಯಾತರ ಮತ್ತು ದಲಿತರ ಅಸ್ಮಿತೆ ಹಾಗೂ ಆಹಾರ ಸಂಸ್ಕೃತಿಯ ಮೇಲೂ ಸಾಂಸ್ಕೃತಿಕ ದಾಳಿಯನ್ನು ನಡೆಸುವ ಬ್ರಾಹ್ಮಣಶಾಹಿ ಕಾಯ್ದೆಯಾಗಲಿದೆ.