‘ಎಸ್ಸಿಸಿ ಟಿ20 ಯೌಮ್ ಅಲ್ ವತ್ನಿ ಕಪ್’ ಜಯಿಸಿದ ಕ್ಲೌಡ್7, ಎನರ್ಕೊ ಮತ್ತು ಪಾನ್ ಗಲ್ಫ್ ತಂಡ
3 ವಿಭಾಗಗಳಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿ
ದಮ್ಮಾಮ್, ನ.26: ಈಸ್ಟರ್ನ್ ಪ್ರೊವಿನ್ಸ್ ಕ್ರಿಕೆಟ್ ಅಸೋಸಿಯೇಶನ್(ಇಪಿಸಿಎ), ದಮ್ಮಾಮ್ ವತಿಯಿಂದ ಸೌದಿ ಕ್ರಿಕೆಟರ್ ಸೆಂಟರ್(ಎಸ್ಸಿಸಿ) ಸಹಯೋಗದಲ್ಲಿ ಪ್ರಥಮ ಆವೃತ್ತಿಯ ಟ್ವೆಂಟಿ20 ಕ್ರಿಕೆಟ್ ಪಂದ್ಯಾವಳಿ ‘ಎಸ್ಸಿಸಿ ಟಿ20 ಯೌಮ್ ಅಲ್ ವತ್ನಿ ಕ್ರಿಕೆಟ್ ಟೂರ್ನಮೆಂಟ್’ ಇತ್ತೀಚೆಗೆ ನಡೆಯಿತು.
ಮೂರು ವಿಭಾಗಗಳಲ್ಲಿ ಜರುಗಿದ ಪಂದ್ಯಾವಳಿಯಲ್ಲಿ ಒಟ್ಟು 40 ತಂಡಗಳು ಪಾಲ್ಗೊಂಡಿದ್ದವು. ಪ್ರೀಮಿಯರ್ ಡಿವಿಶನ್ನಲ್ಲಿ 10 ತಂಡ, ಪ್ರೈಮ್ ಡಿವಿಶನ್ನಲ್ಲಿ 10 ಹಾಗೂ ಫಸ್ಟ್ ಡಿವಿಷನ್ ನಲ್ಲಿ 20 ತಂಡಗಳು ಆಡಿದವು. ಮೂರು ವಿಭಾಗಗಳಲ್ಲಿ ಕ್ರಮವಾಗಿ ಕ್ಲೌಡ್ 7, ಎನರ್ಕೊ ಮತ್ತು ಪಾನ್ ಗಲ್ಫ್ ತಂಡಗಳು ‘ಎಸ್ಸಿಸಿ ಟಿ20 ಯೌಮ್ ಅಲ್ ವತ್ನಿ’ ಕಪ್ ಜಯಿಸಿದವು.
ಫಸ್ಟ್ ಡಿವಿಶನ್
ಫಸ್ಟ್ ಡಿವಿಶನ್ನ ಮೊದಲ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಅಡ್ಪ್ಕೊಫ್ರೆಂಡ್ಸ್ ತಂಡವು ಖೋಬರ್ ರೇಂಜರ್ಸ್ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ನಲ್ಲಿ ಕ್ಲೌಡ್-7 ತಂಡವು ಶಯಾನ್11 ತಂಡದ ವಿರುದ್ಧ 8 ವಿಕೆಟ್ಗಳ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.
ಫೈನಲ್ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಡ್ಪ್ಕೊಫ್ರೆಂಡ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 146 ರನ್ಗಳನ್ನು ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಕ್ಲೌಡ್-7 ತಂಡವು 14.2 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 143 ರನ್ಗಳನ್ನು ಗಳಿಸಿ ಗೆಲುವಿನ ನಗೆ ಬೀರಿತು. ಆ ಮೂಲಕ ‘ಫಸ್ಟ್ ಡಿವಿಶನ್’ ವಿಭಾಗದಲ್ಲಿ ‘ಎಸ್ಸಿಸಿ ಟಿ20 ಯೌಮ್ ಅಲ್ ವತ್ನಿ’ ಕಪ್ ಪ್ರಶಸ್ತಿ ಜಯಿಸಿತು. ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ವಿನೀತ್ ಮೋಹನನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪ್ರೈಮ್ ಡಿವಿಶನ್
ಪ್ರೈಮ್ ಡಿವಿಶನ್ ವಿಭಾಗದ ಮೊದಲ ಸೆಮಿಫೈನಲ್ನಲ್ಲಿ ಎನರ್ಕೊ ತಂಡವು ಡಿಎಚ್ಎಲ್ ಸ್ನಾಸ್ ತಂಡವನ್ನು 33 ರನ್ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. 2ನೇ ಸೆಮಿಫೈನಲ್ ಪಂದ್ಯದಲ್ಲಿ ಇಂಟೆಲಿಜೆಂಟ್ ಹಾಕ್ಸ್ ತಂಡವು ಟ್ರಾವೆಲ್ಸ್ ಫಾಲ್ಕನ್ ತಂಡವನ್ನು 34 ರನ್ಗಳಿಂದ ಸೋಲಿಸಿ ಫೈನಲ್ ಪಂದ್ಯದಲ್ಲಿ ಆಡಲು ಅರ್ಹತೆ ಗಳಿಸಿತು.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎನರ್ಕೊ ಸಿಸಿ ತಂಡವು 5 ವಿಕೆಟ್ ನಷ್ಟಕ್ಕೆ 192 ರನ್ಗಳ ಬೃಹತ್ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಇಂಟೆಲಿಜೆಂಟ್ ಹಾಕ್ಸ್ ಸಿಸಿ ತಂಡವು 17.2 ಓವರ್ಗಳಲ್ಲಿ 142 ರನ್ಗಳಿಗೆ ಆಲೌಟ್ ಆಯಿತು. 50 ರನ್ಗಳಿಂದ ಜಯಿಸಿದ ಎನರ್ಕೊ ತಂಡವು ‘ಎಸ್ಸಿಸಿ ಟಿ20 ಯೌಮ್ ಅಲ್ ವತ್ನಿ’ ಕಪ್ ಮುಡಿಗೇರಿಸಿಕೊಂಡಿತು. ವಿಜೇತ ತಂಡದ ಪರ ಉತ್ತಮ ಬ್ಯಾಟಿಂಗ್ ನಡೆಸಿದ ಶಮಾಸ್ ಸಜ್ಜದ್ ಚೀಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಪ್ರೀಮಿಯರ್ ಡಿವಿಶನ್
ಈ ವಿಭಾಗದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾನ್ ಗಲ್ಫ್ ತಂಡವು ಕನೂ ತಂಡದ ವಿರುದ್ಧ 51 ರನ್ಗಳಿಂದ ಗೆದ್ದು ಫೈನಲ್ ಪ್ರವೇಶಿಸಿತು. 2ನೆ ಸೆಮಿ ಫೈನಲ್ನಲ್ಲಿ ಇಂಟೆಲಿಜೆಂಟ್ ಕ್ಲೆಂಡರ್ಸ್ ತಂಡದ ವಿರುದ್ಧ ಜಯ ಸಾಧಿಸಿದ ಪಾಕ್ ಸೌದಿ ತಂಡವು ಫೈನಲ್ ಗೆ ಸ್ಥಾನ ಪಡೆಯಿತು. ಫೈನಲ್ ಪಂದ್ಯದಲ್ಲಿ ಪಾನ್ ಗಲ್ಫ್ ಸಿಸಿ ತಂಡವು ಪಾಕ್ ಸೌದಿ ಸಿಸಿ ತಂಡವನ್ನು 9 ವಿಕೆಟ್ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿ ‘ಎಸ್ಸಿಸಿ ಟಿ20 ಯೌಮ್ ಅಲ್ ವತ್ನಿ’ ಜಯಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ಸೌದಿ ತಂಡವನ್ನು 17.2 ಓವರ್ಗಳಲ್ಲಿ 116 ರನ್ಗಳನ್ನು ಆಲೌಟ್ ಮಾಡಿದ ಪಾನ್ ಗಲ್ಫ್ ತಂಡವು ಈ ಮೊತ್ತವನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ 10 ಓವರ್ಗಳಲ್ಲಿ ಯಶಸ್ವಿಯಾಗಿ ತಲುಪಿ ವಿಜಯಿಯಾಯಿತು. ಆ ಮೂಲಕ ‘ಎಸ್ಸಿಸಿ ಟಿ20 ಯೌಮ್ ಅಲ್ ವತ್ನಿ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಉತ್ತಮವಾಗಿ ಆಡಿದ ಕಶಿಫ್ ಅಬ್ಬಾಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು