ಸೌದಿ: ಭ್ರಷ್ಟಾಚಾರ ಆರೋಪದಲ್ಲಿ 226 ಮಂದಿ ಬಂಧನ
ರಿಯಾದ್ (ಸೌದಿ ಅರೇಬಿಯ), ನ. 27: ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆನ್ನಲಾದ 226 ಮಂದಿಯನ್ನು ಬಂಧಿಸಿರುವುದಾಗಿ ಸೌದಿ ಅರೇಬಿಯ ಗುರುವಾರ ಘೋಷಿಸಿದೆ ಎಂದು ದೇಶದ ಅಧಿಕೃತ ಸುದ್ದಿಸಂಸ್ಥೆ ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.
ಈ ವ್ಯಕ್ತಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಲಂಚ ಪಡೆಯುತ್ತಿದ್ದರು ಎಂದು ಸೌದಿ ಅರೇಬಿಯದ ಭ್ರಷ್ಟಾಚಾರ ನಿಯಂತ್ರಣ ಮತ್ತು ನಿಗ್ರಹ ಪ್ರಾಧಿಕಾರ ಆರೋಪಿಸಿದೆ.
ಆಗಸ್ಟ್‌ನಲ್ಲಿ ದಾಖಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ದೇಶದ ರಕ್ಷಣಾ ಸಚಿವಾಲಯಕ್ಕಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಮತ್ತು ನಾಗರಿಕರು ಶಾಮೀಲಾಗಿದ್ದಾರೆ ಎಂದು ಸೌದಿ ಪ್ರೆಸ್ ಏಜನ್ಸಿ ಹೇಳಿದೆ.
ಈ ವ್ಯಕ್ತಿಗಳು ಒಟ್ಟು 1.229 ಬಿಲಿಯ ಸೌದಿ ರಿಯಾಲ್ (ಸುಮಾರು 2,425 ಕೋಟಿ ರೂಪಾಯಿ)ನಷ್ಟು ಲಂಚ ಪಡೆದಿದ್ದಾರೆ ಎಂದು ಪ್ರಾಧಿಕಾರ ತಿಳಿಸಿದೆ. ಅಷ್ಟೇ ಅಲ್ಲದೆ, ಅವರು ನಕಲಿ ದಾಖಲೆ ಸೃಷ್ಟಿ ಮತ್ತು ಅಕ್ರಮ ಹಣ ವರ್ಗಾವಣೆಯಲ್ಲೂ ತೊಡಗಿದ್ದಾರೆ ಎಂದಿದೆ.
Next Story