ದ.ಕ. ಜಿಲ್ಲೆ : ಕ್ಷಯರೋಗ ಪ್ರಕರಣದ ಸಂಖ್ಯೆಯಲ್ಲಿ ಇಳಿಮುಖ
ಫಲಿಸಿದ ಕ್ಷಯರೋಗ ನಿಯಂತ್ರಣ ವಿಭಾಗದ ಪ್ರಯತ್ನ
ಮಂಗಳೂರು, ನ. 29: ಕಳೆದ ಎರಡ್ಮೂರು ವರ್ಷಗಳಲ್ಲಿ ಕಂಡುಬಂದ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ ದ.ಕ.ಜಿಲ್ಲೆಯಲ್ಲಿ ಪ್ರಸ್ತುತ ವರ್ಷದಲ್ಲಿ ಕ್ಷಯರೋಗ ಪ್ರಕರಣದ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದ್ದು, ಆಶಾದಾಯಕ ಬೆಳವಣಿಗೆಯಾಗಿ ಪರಿಣಮಿಸಿದೆ.
ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಕ್ಷಯರೋಗ ನಿಯಂತ್ರಣ ವಿಭಾಗದ ಸತತ ಪ್ರಯತ್ನವೇ ಈ ಸಂಖ್ಯೆ ಇಳಿಮುಖಗೊಳ್ಳಲು ಕಾರಣವಾಗಿದೆ.
2018ರಲ್ಲಿ 2690 (ಸಾರ್ವಜನಿಕ), 566 (ಖಾಸಗಿ) ಸಹಿತ ಒಟ್ಟು 3256 ಮತ್ತು 2019ರಲ್ಲಿ 2885 (ಸಾರ್ವಜನಿಕ), 554 (ಖಾಸಗಿ) ಸಹಿತ ಒಟ್ಟು 3439 ಕ್ಷಯರೋಗ ಪ್ರಕರಣಗಳು ಪತ್ತೆಯಾಗಿತ್ತು. 2020ರ ನ.27ರವರೆಗೆ 1612 (ಸಾರ್ವಜನಿಕ), 525 (ಖಾಸಗಿ)ಸಹಿತ 2137 ಪ್ರಕರಣ ಪತ್ತೆಯಾಗಿದೆ. ಅಂದರೆ ಎರಡು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಮುಖ ಕಂಡಿವೆ.
ಸಕ್ರಿಯ ಕ್ಷಯರೋಗ ಪತ್ತೆ ಕಾರ್ಯಕ್ರಮ: ಜಿಲ್ಲಾ ಕ್ಷಯರೋಗ ನಿಯಂತ್ರಣ ವಿಭಾಗವು ಡಿ.1ರಿಂದ 31ರವರೆಗೆ ಜಿಲ್ಲಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆ ಮೂಲಕ ಜಿಲ್ಲೆಯನ್ನು ಸಂಪೂರ್ಣ ಕ್ಷಯರೋಗ ಮುಕ್ತ ಜಿಲ್ಲೆ ಎಂದು ಘೋಷಿಸುವ ಬಗ್ಗೆ ತವಕ ಹೊಂದಿದೆ. ಅದಕ್ಕಾಗಿ ಇಲಾಖೆಯು ತಳಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿದೆ. ಅಂದರೆ ಸಾಮಾಜಿಕ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರನ್ನು ಕೇಂದ್ರೀಕರಿಸಿ ಮನೆ ಮನೆ ಭೇಟಿ ಮಾಡುವ ಮೂಲಕ ಸಕ್ರಿಯ ಕ್ಷಯರೋಗ ಪ್ರಕರಣಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ. ಅಂದರೆ ಕ್ಷಯರೋಗಿಗಳು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹುಡುಕಿಕೊಂಡು ಹೋಗುವ ಬದಲ ಇಲಾಖೆಯು ಆಶಾ ಮತ್ತು ಆರೋಗ್ಯ ಕಾರ್ಯಕರ್ತರನ್ನು ಮನೆ ಮನೆಗೆ ಕಳುಹಿಸಿಕೊಟ್ಟು ಕ್ಷಯರೋಗಿಗಳ ಪತ್ತೆ ಹಚ್ಚುವಿಕೆಗೆ ಶ್ರಮಿಸುತ್ತಿದೆ. ಜಿಲ್ಲೆಯಲ್ಲಿ ಇದು ಫಲಿಸಿದ್ದು, ಕ್ಷಯರೋಗ ಪ್ರಕರಣಗಳ ಇಳಿಮುಖಕ್ಕೆ ಪ್ರಮುಖ ಕಾರಣವಾಗಿದೆ.
ದ.ಕ.ಜಿಲ್ಲೆಯಲ್ಲಿ ಅಕ್ಟೋಬರ್ ಅಂತ್ಯಕ್ಕೆ 816 ಸಕ್ರಿಯ ಪ್ರಕರಣ ಇದೆ ಎಂದು ಕ್ಷಯರೋಗ ನಿಯಂತ್ರಣ ವಿಭಾಗವು ಖಚಿತಪಡಿ ಸಿದೆ. ಅದರಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ಅಂದರೆ 266 ಮತ್ತು ಸುಳ್ಯದಲ್ಲಿ ಅತೀ ಕಡಿಮೆ ಅಂದರೆ 41 ಪ್ರಕರಣಗಳಿವೆ.
ಸತತ ಎರಡು ವಾರಕ್ಕಿಂತ ಹೆಚ್ಚು ಕೆಮ್ಮಿದರೆ, ರಾತ್ರಿ ವೇಳೆ ಜ್ವರ ಬಂದರೆ, ಬೆವರಿದರೆ, ಹಸಿವಾಗದಿದ್ದರೆ, ತೂಕದಲ್ಲಿ ಇಳಿಕೆ ಮತ್ತು ಕಫದಲ್ಲಿ ರಕ್ತ ಕಂಡು ಬರುವುದು ಕ್ಷಯರೋಗದ ಲಕ್ಷಣವಾಗಿದೆ. ಅಂತಹವರು ಇದನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸಬಾರದು. ಸಕಾಲಕ್ಕೆ ಚಿಕಿತ್ಸೆ ಪಡೆದು ಕ್ಷಯ ರೋಗ ನಿರ್ಮೂಲನೆ ಮಾಡಲು ಹಮ್ಮಿಕೊಳ್ಳಲಾದ ಆಂದೋಲನದ ಜೊತೆ ಕೈ ಜೋಡಿಸಬೇಕು ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಕ್ಷಯರೋಗಿಯು ಕೆಮ್ಮಿದಾಗ, ಸೀನಿದಾಗ ಕ್ರಮಿಗಳು ಗಾಳಿಯಲ್ಲಿ ಸೇರಿ ಇತರರು ಉಸಿರಾಡುವಾಗ ದೇಹವನ್ನು ಸೇರುವ ಸಾಧ್ಯತೆ ಇದೆ. ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ ಭಾರತದಲ್ಲಿ ಪ್ರತೀ ದಿನ 40 ಸಾವಿರಕ್ಕಿಂತ ಹೆಚ್ಚು ಜನರ ದೇಹದಲ್ಲಿ ಕ್ರಿಮಿಗಳು ಸೇರುತ್ತದೆ. 5 ಸಾವಿರಕ್ಕಿಂತ ಹೆಚ್ಚು ಜನರಿಗೆ ಕ್ಷಯರೋಗ ಕಾಣಿಸಿಕೊಳ್ಳಲಿದೆ. ಒಂದುವರೆ ನಿಮಿಷಕ್ಕೆ ಒಬ್ಬರಂತೆ ದೇಶದಲ್ಲಿ ಪ್ರತೀ ದಿನ 1 ಸಾವಿರ ಮಂದಿ ಕ್ಷಯರೋಗದಿಂದ ಸಾವಿಗೀಡಾಗುತ್ತಿದ್ದಾರೆ.
ಅಂದಹಾಗೆ, ಈ ಕ್ಷಯರೋಗಕ್ಕೆ 138 ವರ್ಷದ ಇತಿಹಾಸವಿದೆ. 1882ರ ಮಾ.24ರಂದು ಮೈಕ್ರೋಬ್ಯಾಕ್ಟೀರಿಯಂ ಟ್ಯುಬರ್ ಕ್ಯುಲೋಸಿಸ್ ಎಂಬ ಸೂಕ್ಷ್ಮಾಣುವನ್ನು ವೈದ್ಯಕೀಯ ವಿಜ್ಞಾನಿ ರಾಬರ್ಟ್ ಕಾಕ್ ಪತ್ತೆ ಹಚ್ಚುವ ಮೂಲಕ ‘ಕ್ಷಯ’ರೋಗವು ಮನುಷ್ಯರಿಗೆ ಭಾದಿಸಲಿದೆ ಎಂದು ಸಾರಿದ. ಹಾಗಾಗಿ ಮಾ.24ರಂದು ವರ್ಷಂಪ್ರತಿ ವಿಶ್ವಾದ್ಯಂತ ಕ್ಷಯರೋಗ ನಿಯಂತ್ರಣ ದಿನ ಆಚರಿಸಲಾಗುತ್ತದೆ.
ಸಮಾಜವನ್ನು ಕ್ಷಯರೋಗದಿಂದ ಮುಕ್ತಗೊಳಿಸುವುದು ಕ್ಷಯರೋಗ ನಿರ್ಮೂಲನದ ಉದ್ದೇಶವಾಗಿದೆ. ಭಾರತದಲ್ಲಿ 1962ರಲ್ಲಿ ರಾಷ್ಟ್ರೀಯ ಕ್ಷಯ ನಿಯಂತ್ರಣ ಕಾರ್ಯಕ್ರಮ ಆರಂಭಗೊಂಡಿತು. 1993ರಲ್ಲಿ ಇದಕ್ಕಾಗಿ ಪೈಲಟ್ ಯೋಜನೆ ರೂಪಿಸಲಾಯಿತು. 2003ರಲ್ಲಿ ದ.ಕ.ಜಿಲ್ಲೆಯಲ್ಲಿ ಪರಿಷ್ಕೃತ ರಾಷ್ಟ್ರೀಯ ಕ್ಷಯ ನಿಯಂತ್ರಂಣ ಕಾರ್ಯಕ್ರಮ ಅನುಷ್ಠಾನಗೊಂಡಿತು. ಈ ವರ್ಷದ ಜನವರಿಯಲ್ಲಿ ಅದಕ್ಕೆ ‘ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ’ ಎಂದು ಮರು ನಾಮಕರಣ ಮಾಡಲಾಯಿತು.
ಉಚಿತ ಪರೀಕ್ಷೆ: ಕ್ಷಯರೋಗದ ಪರೀಕ್ಷೆಯು ಉಚಿತವಾಗಿರುತ್ತದೆ. ಎರಡು ಬಾರಿ ಕಫ ಪರೀಕ್ಷೆಯ ಮೂಲಕ ಕ್ಷಯರೋಗದ ಕ್ರಿಮಿಗಳನ್ನು ಸೂಕ್ಷ್ಮದರ್ಶಕ ಯಂತ್ರದ ಮೂಲಕ ಪತ್ತೆ ಹಚ್ಚಲಾಗುತ್ತದೆ. ಕ್ಷ-ಕಿರಣ ಪರೀಕ್ಷೆ ಮಾಡಲಾಗುತ್ತದೆ. ಶ್ವಾಸ ಕೋಶಯೇತರ ಪರೀಕ್ಷೆ (ದೇಹದ ಇತರ ಅಂಗಗಳ) ಮಾಡಲಾಗುತ್ತದೆ. ಸಿಬಿನ್ಯಾಟ್ ಮತ್ತು ಟ್ರೂನ್ಯಾಟ್ ಪರೀಕ್ಷೆ ಮಾಡಲಾಗುತ್ತದೆ.
ಚಿಕಿತ್ಸಾ ಘಟಕಗಳು: ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿ ದ.ಕ.ಜಿಲ್ಲೆಯ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮೂಡುಬಿದಿರೆ, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಮುಲ್ಕಿ ಸಹಿತ 8 ಕ್ಷಯ ಚಿಕಿತ್ಸಾ ಘಟಕಗಳು ಕಾರ್ಯನಿರ್ವಹಿಸುತ್ತಿದೆ. ಈ ಹಿಂದೆ ಸರಕಾರಿ ಆರೋಗ್ಯ ಸಂಸ್ಥೆಗಳು ಮತ್ತು 8 ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಸಹಿತ ಜಿಲ್ಲೆಯಲ್ಲಿ 31 ನಿಗದಿತ ಪ್ರಯೋಗಶಾಲೆಗಳಿದ್ದವು. ಆದರೆ 2019ರ ಜನವರಿಯಿಂದ ಜಿಲ್ಲೆಯ 66 ಪ್ರಾಥಮಿಕ ಆರೋಗ್ಯ ಕೇಂದ್ರ ಗಳು, 8 ಸಮುದಾಯ ಆರೋಗ್ಯ ಕೇಂದ್ರಗಳು, 12 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 4 ತಾಲೂಕು ಆಸ್ಪತ್ರೆಗಳು ಕೂಡ ನಿಗದಿತ ಪ್ರಯೋಗಶಾಲೆಯಾಗಿ ಮಾರ್ಪಟ್ಟ ಕಾರಣ ಕ್ಷಯರೋಗ ನಿಯಂತ್ರಣ ಸುಲಭ ಸಾಧ್ಯವಾಗಿದೆ.
ಸೌಲಭ್ಯಗಳು: ರಾಷ್ಟ್ರಿಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿ ರೋಗಿಗಳಿಗೆ ಹಲವು ಸೌಲಭ್ಯಗಳು ಸಿಗಲಿವೆ. ಅಂದರೆ ಎಲ್ಲಾ ಸರಕಾರಿ ಅರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಉಚಿತ ತಪಾಸಣೆ, ಉಚಿತ ಚಿಕಿತ್ಸೆ, ನಿಕ್ಷಯ್ ಘೋಷಣ್ ಯೋಜನೆಯ ಮೂಲಕ ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರದ ಖರ್ಚಿಗಾಗಿ 500 ರೂ.ವನ್ನು ಕ್ಷಯರೋಗಿ ಅಥವಾ ಸಂಬಂಧಪಟ್ಟವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು.
2025ರೊಳಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಸರಕಾರ ಹೊಂದಿದೆ. ಅದಕ್ಕೆ ಪೂರಕವಾಗಿ ದ.ಕ.ಜಿಲ್ಲೆ ಯಲ್ಲಿ ಡಿ.1ರಿಂದ 31ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನವನ್ನು ಹಮ್ಮಿಕೊಂಡಿದೆ. ಹಾಗಾಗಿ ಕ್ಷಯ ರೋಗದ ಸಾಮಾನ್ಯ ಲಕ್ಷಣಗಳು ಕಂಡುಬಂದರೆ ತಕ್ಷಣ ಸಮೀಪದ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಕಫ ಪರೀಕ್ಷೆ ಮಾಡಿಸಿ ಕೊಳ್ಳಬೇಕು. ಯಾವ ಕಾರಣಕ್ಕೂ ವಿಳಂಬಿಸಬಾರದು. ದಿನದ 24 ಗಂಟೆಯೂ ಚಾಲ್ತಿಯಲ್ಲಿರುವ ಉಚಿತ ಆರೋಗ್ಯ ಸಹಾಯವಾಣಿಯ (104) ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಮಾಸ್ಕ್ ಧರಿಸುವುದರಿಂದ, 6 ಅಡಿ ಸುರಕ್ಷಿತ ಅಂತರ ಕಾಪಾಡು ವುದರಿಂದ, ಆಗಾಗ ಕೈಗಳನ್ನು ಸ್ವಚ್ಛ ಮಾಡುವುದರಿಂದ ಕ್ಷಯ ರೋಗವನ್ನು ನಿಯಂತ್ರಿಸಬಹುದಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ.
- ಡಾ. ಬದ್ರುದ್ದೀನ್
ದ.ಕ.ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ