ಡಿ.3ರಂದು ವಿಶ್ವ ವಿಕಲಚೇತನರ ದಿನಾಚರಣೆ; ವಿಕಲಚೇತನರ ಸೇವೆಯಲ್ಲಿ ಮೀಸಲು ಪಡೆಯ ಪೊಲೀಸ್
ಬಶೀರ್ ಚೊಕ್ಕಬೆಟ್ಟು
ಮಂಗಳೂರು, ಡಿ.2: ಕೊಣಾಜೆ ಸಮೀಪದ ಅಸೈಗೋಳಿಯಲ್ಲಿರುವ ಕರ್ನಾಟಕ ರಾಜ್ಯ 7ನೆ ಮೀಸಲು ಪೊಲೀಸ್ ಪಡೆಯಲ್ಲಿರುವ ಸುರತ್ಕಲ್ ಸಮೀಪದ ಚೊಕ್ಕಬೆಟ್ಟುವಿನ ಬಶೀರ್ ಚೊಕ್ಕಬೆಟ್ಟು ವಿಕಲಚೇತನರ ಸೇವೆಗೈಯ್ಯುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಸುಮಾರು 18 ವರ್ಷದಿಂದ 500ಕ್ಕೂ ಅಧಿಕ ವಿಕಲಚೇತನರ ಸೇವೆಗೈದ ತೃಪ್ತಿಯಲ್ಲಿರುವ 43ರ ಹರೆಯದ ಬಶೀರ್ ಚೊಕ್ಕಬೆಟ್ಟು ಮಿತಭಾಷಿ. ಮೀಸಲು ಪಡೆಯಲ್ಲಿ ಪೊಲೀಸ್ ಆಗಿದ್ದರೂ ಕೂಡ ಸದಾ ವಿಕಲಚೇತನರ ಸೇವೆಗೈಯ್ಯುವ ಆತುರ. ಬಿಡುವಿನ ವೇಳೆ ಮೀಸಲು ಪಡೆಯ ಹಿರಿಯ ಅಧಿಕಾರಿಗಳ ಸಲಹೆ, ಮಾರ್ಗದರ್ಶನ ಪಡೆದು ಸೇವೆಯಲ್ಲಿ ನಿರತರಾಗಿದ್ದಾರೆ.
ಮೂಲತಃ ತಣ್ಣೀರುಬಾವಿಯ ಟಿ. ಅಬ್ದುಲ್ ಖಾದರ್-ಖತೀಜಮ್ಮ ದಂಪತಿಯ ಪುತ್ರನಾಗಿ ಚೊಕ್ಕಬೆಟ್ಟುವಿನಲ್ಲಿ ಹುಟ್ಟಿದ ಬಶೀರ್ ಎಸೆಸೆಲ್ಸಿ ಕಲಿತ್ತಿದ್ದಾರೆ. ಬಡತನದಿಂದಾಗಿ ಕಲಿಕೆ ಮುಂದುವರಿಸಲಾಗಲಿಲ್ಲ. ತಂದೆ ನಡೆಸುತ್ತಿದ್ದ ಸೈಕಲ್ಶಾಪ್ನಲ್ಲಿ ಕೆಲಸ ಮಾಡತೊಡಗಿದ ಬಶೀರ್ ಬಳಿಕ ಸುರತ್ಕಲ್ ಮಾರ್ಕೆಟ್ನಲ್ಲಿ ತರಕಾರಿ, ಹಣ್ಣುಹಂಪಲು ಮಾರಾಟ ಮಾಡತೊಡಗಿದರು. ಕಿನ್ನಿಗೋಳಿ ಮತ್ತಿತರ ಕಡೆ ತೆರಳಿ ಸಂತೆ ವ್ಯಾಪಾರ ಮಾಡತೊಡಗಿದರು. ಈ ಮಧ್ಯೆ ಮಗನಿಗೊಂದು ನೆಲೆಕಲ್ಪಿಸಿಕೊಳ್ಳಲು ಮುಂದಾದ ಅಬ್ದುಲ್ ಖಾದರ್ ಚೊಕ್ಕಬೆಟ್ಟುವಿನಲ್ಲಿ ಸಣ್ಣದಾದ ಜಿನಸಿ ಅಂಗಡಿ ಮಾಡಿಕೊಟ್ಟರು. ಆದರೂ ಅದೂ ಕೈ ಬಶೀರ್ರ ಹಿಡಿಯಲಿಲ್ಲ. 1999ರ ಸುರತ್ಕಲ್ ಗಲಭೆಯ ವೇಳೆ ಅನಿವಾರ್ಯವಾಗಿ ಆ ಅಂಗಡಿಗೆ ಬಾಗಿಲು ಎಳೆಯಬೇಕಾಯಿತು. ಹಾಗೇ ಮುಚ್ಚಿದ ಬಾಗಿಲನ್ನು ಮತ್ತೆ ಅವರು ತೆರೆಯಲೇ ಆಗಲಿಲ್ಲ. ಉಪಾಯವಿಲ್ಲದೆ ಮಂಗಳೂರಿನ ಸ್ಟೇಟ್ಬ್ಯಾಂಕ್, ರಾವ್ ಆ್ಯಂಡ್ ರಾವ್ ಸರ್ಕಲ್, ಲೇಡಿಗೋಶನ್ ಆಸ್ಪತ್ರೆ, ಹಂಪನಕಟ್ಟೆ ಮತ್ತಿತರ ಕಡೆ ದಿನಪತ್ರಿಕೆಗಳನ್ನು ಮಾರಾಟ ಮಾಡತೊಡಗಿದರು. ಅದೊಂದು ದಿನ ಅವರ ಕಣ್ಣಿಗೆ ಪತ್ರಿಕೆಯಲ್ಲಿ ಪ್ರಕಟಗೊಂಡ ಸುದ್ದಿಯೊಂದು ಬಿತ್ತು. ಅದೇ ಮೀಸಲು ಪೊಲೀಸ್ ಪಡೆಗೆ ಸೇರಲು ಅರ್ಜಿ ಆಹ್ವಾನ. ಹಿಂದೆಮುಂದೆ ನೋಡದೆ ಬಶೀರ್ ಅರ್ಜಿ ಹಾಕಿದರು. ಕೆಲಸವೂ ಸಿಕ್ಕಿತು. ಮದುವೆಯೂ ಆಯಿತು. ಬದುಕಿಗೊಂದು ಭದ್ರತೆ ಸಿಕ್ಕಿದ ಬಳಿಕ ವಿಕಲಚೇತನರ ಸೇವೆಯನ್ನು ಬಹಳ ಮುತುವರ್ಜಿಯಿಂದ ಮಾಡತೊಡಗಿದರು.
ಅಂದರೆ ಸರಕಾರದ ವಿವಿಧ ಇಲಾಖೆಗೆ ತೆರಳಿ ವಿಕಲಚೇತನರಿಗೆ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ಪಡೆದುಕೊಂಡು ಅದನ್ನು ಅರ್ಹರಿಗೆ ತಲುಪಿಸತೊಡಗಿದರು. ನಿವೇಶನ ಮತ್ತು ಮಾಸಿಕ ಗೌರವಧನ ದೊರಕಿಸಿಕೊಡುವುದು, ಗುರುತಿನ ಚೀಟಿ ಮಾಡಿಕೊಡುವುದು, ಸರಕಾರಿ ಮತ್ತು ಖಾಸಗಿ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ, ಸ್ವ ಉದ್ಯೋಗಕ್ಕೆ ನೆರವು... ಇತ್ಯಾದಿ ಸೇವೆಯಲ್ಲಿ ತೊಡಗಿಸಿಕೊಂಡರು.
ಬಾಲ್ಯದಲ್ಲಿ ನನ್ನನ್ನು ಗೆಳೆಯರು ಸದಾ ಗೇಲಿ ಮಾಡುತ್ತಿದ್ದರು. ಇದರಿಂದ ನಾನು ಮಾನಸಿಕವಾಗಿ ಒಂದಷ್ಟು ಕುಗ್ಗಿದ್ದೆ. ಹಾಗಾಗಿ ಬದುಕಿನ ಲ್ಲೊಂದು ಏನಾದರೊಂದು ಗುರಿ ಸಾಧಿಸಿ ತೋರಿಸಬೇಕು ಎಂದು ಅಶಿಸಿದ್ದೆ. ಬಡತನದಿಂದ ಹೆಚ್ಚು ಕಲಿಯಲಾಗಲಿಲ್ಲ. ಸಣ್ಣಪುಟ್ಟ ವ್ಯಾಪಾರವೂ ಕೈ ಹಿಡಿಯಲಿಲ್ಲ. 2002ರಲ್ಲಿ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದಾಗ ಅದರಲ್ಲಿ ಕಂಡು ಬಂದ ಸಣ್ಣ ಸುದ್ದಿಯೊಂದು ನನ್ನ ಬದುಕನ್ನೇ ಬದಲಿಸಿತು ಎನ್ನಬಹುದು. ಮೀಸಲು ಪೊಲೀಸ್ ಪಡೆಗೆ ಸೇರಿ ಕರ್ತವ್ಯದ ಮಧ್ಯೆ ಸಮಾಜಸೇವೆಯಲ್ಲಿ ಸಕ್ರಿಯನಾದೆ. ತನ್ನನ್ನು ಗೇಲಿ ಮಾಡುತ್ತಿ ದ್ದವರಿಗೆ ತಾನೇನು ಎಂದು ತೋರಿಸಿಕೊಡಬೇಕು ಎಂಬ ಛಲವಿತ್ತು. ವಿಕಲಚೇತನರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಲೇ ತನಗಾದ ಅನುಭವ ವನ್ನು ಪತ್ರಿಕೆಗಳಿಗೆ ಬರೆಯತೊಡಗಿದೆ. ಊರವರು ಅದರಲ್ಲೂ ಗೇಲಿ ಮಾಡುತ್ತಿದ್ದವರು ನನ್ನನ್ನು ಗುರುತಿಸಿಕೊಳ್ಳತೊಡಗಿದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ ಎಂದು ಕಳೆದುಹೋದ ತನ್ನ ಆ ದಿನಗಳನ್ನು ಬಶೀರ್ ನೆನಪಿಸುತ್ತಾರೆ.
ಬಶೀರ್ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಹಲವು ಸಂಘಟನೆಗಳು ಸನ್ಮಾನಿಸಿವೆ. 2020ರ ಅಕ್ಟೋಬರ್ 25ರಂದು ಊರಿನ ಸಂಘಟನೆಗಳಲ್ಲಿ ಒಂದಾದ ‘ಯುನೈಟೆಡ್ ಚೊಕ್ಕಬೆಟ್ಟು ಗ್ಲೋಬಲ್ ಫೋರಂ’ ಸಂಘಟನೆಯು 5 ಸಾವಿರ ರೂ. ನಗದಿನೊಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಅದಲ್ಲದೆ 2010ರಲ್ಲಿ ಅಂತರ್ರಾಷ್ಟ್ರೀಯ ಜೂನಿರ್ ಚೇಂಬರ್ ಮಂಗಳೂರು ಇದರ ಜೆಸಿ ಯುವ ಸಾಧಕ ಪ್ರಶಸ್ತಿ, 2011ರಲ್ಲಿ ಬೆಂಗಳೂರಿನ ಕನ್ನಡ ಅಭಿವೃದ್ಧಿ ಸಮಿತಿಯ ರಾಜ್ಯೋತ್ಸವ ಪ್ರಶಸ್ತಿ, 2014ರಲ್ಲಿ ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಅಕಾಡಮಿಯ ಸೇವಾರತ್ನ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ.
ನನ್ನ ಮನೆ ಸಮೀಪ ಒಬ್ಬರು ವಿಕಲಚೇತನರಿದ್ದರು. ಮೊದಲು ನಾನು ಅವರಿಗೆ ಮಾಸಿಕ 400 ರೂ. ಗೌರವಧನ ಸಿಗಲು ಪ್ರಯತ್ನಿಸಿದೆ. ಈಗ ಅದರ ಮೊತ್ತ 2,400 ರೂ.ಗೆ ಏರಿದೆ. ಆಮೇಲೆ ನಾನು ಹಿಂದಿರುಗಿ ನೋಡಿದ್ದೇ ಇಲ್ಲ. ದ.ಕ.ಜಿಲ್ಲೆಯ ಸುಮಾರು 500ಕ್ಕೂ ಅಧಿಕ ವಿಕಲಚೇತನರ ಸೇವೆ ಮಾಡಿದ ತೃಪ್ತಿ ನನಗಿದೆ. ವಿಕಲಚೇತನರನ್ನು ಕಚೇರಿಯಿಂದ ಕಚೇರಿಗೆ ಕರೆದುಕೊಂಡು ಹೋಗುವುದು ತ್ರಾಸದಾಯಕ. ಆದರೂ ಸರಕಾರದ ಸೌಲಭ್ಯ ಸಿಗುವಾಗ ಅವರ ಮುಖದಲ್ಲಿ ಕಾಣಿಸುವ ಆ ನಗೆಯು ನನ್ನ ಹುಮ್ಮಸ್ಸನ್ನು ಇಮ್ಮಡಿಗೊಳಿಸುತ್ತದೆ.
- ಬಶೀರ್ ಚೊಕ್ಕಬೆಟ್ಟು
(ಕರ್ನಾಟಕ ರಾಜ್ಯ 7ನೆ ಮೀಸಲು ಪಡೆಯ ಪೊಲೀಸ್)