ಕತರ್ ಬಹಿಷ್ಕಾರ ಕೊನೆಗೊಳಿಸುವ ಮಾತುಕತೆಯಲ್ಲಿ ಪ್ರಗತಿ: ಕುವೈತ್
ಕುವೈತ್ ಸಿಟಿ, ಡಿ. 4: ಕೊಲ್ಲಿ ಬಿಕ್ಕಟ್ಟಿಗೆ ಪರಿಹಾರವೊಂದನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ರಚನಾತ್ಮಕ ಹಾಗೂ ಫಲದಾಯಕ ಮಾತುಕತೆಗಳು ನಡೆಯುತ್ತಿವೆ ಎಂದು ಕುವೈತ್ ವಿದೇಶ ಸಚಿವ ಶೇಖ್ ಅಹ್ಮದ್ ನಾಸಿರ್ ಅಲ್-ಸಬಾಹ್ ಶುಕ್ರವಾರ ಹೇಳಿದ್ದಾರೆ.
2017ರ ಜೂನ್ ತಿಂಗಳಲ್ಲಿ ಸೌದಿ ಅರೇಬಿಯ, ಯುನೈಟೆಡ್ ಅರಬ್ ಎಮಿರೇಟ್ಸ್, ಬಹರೈನ್ ಮತ್ತು ಈಜಿಪ್ಟ್ ದೇಶಗಳು ಖತರ್‌ನೊಂದಿಗಿನ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳನ್ನು ಕಡಿದುಕೊಂಡ ಬಳಿಕ ಕೊಲ್ಲಿ ವಲಯದಲ್ಲಿ ಬಿಕ್ಕಟ್ಟು ನೆಲೆಸಿದೆ. ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ನಾಲ್ಕು ದೇಶಗಳು ಆ ದೇಶದ ವಿರುದ್ಧ ಹಠಾತ್ ಬಹಿಷ್ಕಾರ ಘೋಷಿಸಿದ್ದವು.
‘‘ಇತ್ತೀಚೆಗೆ ಫಲಪ್ರದ ಮಾತುಕತೆಗಳು ನಡೆದಿವೆ. ಮಾತುಕತೆಗಳ ವೇಳೆ ಎಲ್ಲ ದೇಶಗಳು ಸಂಬಂಧ ಸುಧಾರಣೆಗೆ ಉತ್ಸುಕತೆ ತೋರಿಸಿವೆ’’ ಎಂದು ಕುವೈತ್ ಟಿವಿಯಲ್ಲಿ ಓದಿ ಹೇಳಲಾದ ಹೇಳಿಕೆಯೊಂದರಲ್ಲಿ ಅಲ್-ಸಬಾ ಹೇಳಿದ್ದಾರೆ. ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಿರುವುದಕ್ಕಾಗಿ ಅಮೆರಿಕದ ಶ್ವೇತಭವನದ ಹಿರಿಯ ಸಲಹೆಗಾರ ಜ್ಯಾರೆಡ್ ಕಶ್ನರ್‌ಗೆ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಈ ಹೇಳಿಕೆಯ ಬಳಿಕ ಪ್ರತಿಕ್ರಿಯೆ ನೀಡಿದ ಖತರ್ ವಿದೇಶ ಸಚಿವ ಮುಹಮ್ಮದ್ ಬಿನ್ ಅಬ್ದುಲ್‌ರಹಮಾನ್ ಅಲ್ ತಾನಿ, ಸಂಧಾನದಲ್ಲಿ ಮಧ್ಯಸ್ಥಿಕೆ ವಹಿಸಿರುವುದಕ್ಕಾಗಿ ಕುವೈತ್‌ಗೆ ಕೃತಜ್ಞತೆ ಸಲ್ಲಿಸಿದರು.