ದೀಪ ಹಚ್ಚಿ ವಿಘಟನೆಯನ್ನು ಸುಟ್ಟುಬಿಡಿ
ಅಂಬೇಡ್ಕರ್ 1956 ಡಿಸೆಂಬರ್ 16 ಬಾಂಬೆಯಲ್ಲಿ ಹತ್ತು ಲಕ್ಷ ಜನರೊಂದಿಗೆ ಬುದ್ಧನ ದಮ್ಮಕ್ಕೆ ನಡೆಯುವ ಬೃಹತ್ ಸಮಾವೇಶ ಆಯೋಜಿಸಿದ್ದರು. ಆದರೆ ಅಚಾನಕ್ ಬಾಬಾ ಸಾಹೇಬರು ಆ ಘಟನೆಗಿಂತ ಹತ್ತು ದಿನದ ಮುಂಚಿತವಾಗಿಯೇ ತೀರಿಕೊಂಡರು. ಅವರ ಆಪ್ತ ಬಿ. ಕೆ. ಗಾಯಕ್ವಾಡ್‌ರವರು ‘‘ಅಂಬೇಡ್ಕರ್‌ರವರ ಅತೀವ ಆಶಯವನ್ನು ಈಡೇರಿಸಬಲ್ಲಿರಾ?’’ ಎಂದು ನೆರೆದಿದ್ದ ಆ ಜನಸಾಗರದ ಮುಂದೆ ಇಟ್ಟರು. ಆ ಮಾನವ ಸಾಗರವು ದುಃಖಿತ ಹರ್ಷೋದ್ಗಾರದೊಂದಿಗೆ ಸಮ್ಮತಿಯನ್ನು ಸೂಚಿಸಿತು. ಇಂತಹ ಅಪರೂಪದ ಘಟನೆ ಭಾರತೀಯ ಧಾರ್ಮಿಕ ಪರಂಪರೆಯ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಸ್ಫೂರ್ತಿ ಸ್ಮರಣೀಯ.
ಸಂಕಲ್ಪಗಳಿಲ್ಲದ ಯಾವ ದಿನಾಚರಣೆಗಳು ಕೂಡ ಮುಂದಿನ ಪೀಳಿಗೆಯಲ್ಲಿ ಬದುಕನ್ನು ಕಟ್ಟಿಕೊಡಲಾರವು. ಡಾ. ಅಂಬೇಡ್ಕರ್ ರವರ ಬದುಕಿನ ಕಟ್ಟಕಡೆಯ ಕೆಲವು ದೃಢ ಸಂಕಲ್ಪಗಳು ಇಂದಿನ ತಲೆಮಾರಿನಲ್ಲಿ ಅವರ ವೈಭವೀಕರಣ ಅಭಿಮಾನ ಆಚರಣೆಗಳೊಳಗೆ ಕಳೆದು ಹೊಗುತ್ತಿವೆಯೇ..? ಮುಸ್ಲಿಂ ಮನೆಯಲ್ಲೊಂದು ‘ಕುರ್‌ಆನ್’, ಕ್ರಿಶ್ಚಿಯನ್ನರಿಗೆ ‘ಬೈಬಲ್’, ಹಿಂದೂಗಳಲ್ಲಿ ‘ಭಗವದ್ಗೀತೆ’ ಇರುವ ಹಾಗೆ ಪ್ರತಿ ಶೋಷಿತರ ಮನೆಯಲ್ಲಿ ‘ಬುದ್ಧ ಮತ್ತು ಆತನ ದಮ್ಮ’ ಕೃತಿ ಇರಬೇಕೆಂಬ ಬಹುದೊಡ್ಡ ಆಶಯವನ್ನು ವ್ಯಕ್ತ ಪಡಿಸಿದ್ದರು. ಅಂತಹ ಸಂಕಲ್ಪಗಳನ್ನು ಮರೆತು ಇಂದಿನ ಪರಿನಿಬ್ಬಾಣ ದಿನಾಚರಣೆಗಳು, ದೀಪಗಳನ್ನು ಮಾತ್ರ ಸುಡುತ್ತಿವೆ. 65 ವರ್ಷಗಳಿಂದ ಇನ್ನೆಷ್ಟು ದೀಪಗಳನ್ನು ಸುಡುತ್ತೀರಿ. ನಮ್ಮೆಳಗಿನ ಸ್ವಾರ್ಥ ಅಸೂಯೆ ವಿಘಟನೆಯನ್ನೊಮ್ಮೆ ಸುಟ್ಟುಬಿಟ್ಟರೆ ಒಳ್ಳೆಯ ಬದುಕನ್ನು ಕಾಣಬಹುದೇನೊ. ಮಹಾನಾಯಕ ಧಾರಾವಾಹಿಯನ್ನು ನೋಡುವುದರೊಟ್ಟಿಗೆ ಅವರ ‘ವೈಟಿಂಗ್ ಫಾರ್ ಎ ವೀಸಾ’ ಕೃತಿಯನ್ನು ಒಮ್ಮೆ ಓದಿ ಬಿಟ್ಟರೆ ನಮಗೆ ಮತ್ತಷ್ಟು ನೈಜ ಅಂಬೇಡ್ಕರ್‌ರನ್ನು ಕಾಣಬಹುದೇನೋ. ಇಂದು ಬೀದಿ ಬೀದಿಗಳಲ್ಲಿ ರಾರಾಜಿಸುವ ಬ್ಯಾನರ್ ನಲ್ಲಿ ಮಹಾನಾಯಕರನ್ನು ನಾವು ಹುಡುಕಲಾರೆವು. ಹಾಥರಸ್‌ನಲ್ಲಿ ದೇಶದ ಕಣ್ಣೆದುರೇ ಸುಟ್ಟು ಹೋದ ಹೆಣ್ಣು ಮಗಳೊಬ್ಬಳ ಚಿತೆಯನ್ನು ನಾವು ನೋಡಿಯೂ ಮಹಾನಾಯಕರು ನಮಗೆ ಕಾಣಲಿಲ್ಲವೆಂದರೆ ಅವರು ಮತ್ತೆಲ್ಲೂ ಸಿಗಲಾರರು. ಇದು ಹೀಗೆ ಮುಂದುವರಿದರೆ ನಾಳೆ ನಮ್ಮ ಮನೆಯಲ್ಲಿಯೂ ಇಂತಹದೊಂದು ಘಟನೆ ಸಂಭವಿಸಬಹುದು.
ಡಾ. ಅಂಬೇಡ್ಕರ್‌ರವರ ಬದುಕಿನ ಬಗ್ಗೆ ರೋಚಕತೆಗಳನ್ನು ಸೃಷ್ಟಿಸುವ ಅಗತ್ಯವಿಲ್ಲ. ಏಕೆಂದರೆ ಅವರ ಬದುಕೇ ಒಂದು ರೋಚಕ. ಅವರ ಬಗ್ಗೆ ಅಂತಹ ರೋಚಕತೆಗಳು ಇಂಡಿಯಾ ದೇಶಕ್ಕಿಂತ ಅಮೆರಿಕ, ಲಂಡನ್ ಮತ್ತು ಇತರ ದೇಶಗಳಲ್ಲಿ ಅತಿಹೆಚ್ಚು ಜರುಗಿವೆ. ಅಂಬೇಡ್ಕರರಿಗೆ ಅದೆಷ್ಟು ಒತ್ತಡ ಬಂದರೂ ಕೂಡ ತಮ್ಮ ಬಯೋಗ್ರಫಿಯನ್ನು ಬರೆದುಕೊಳ್ಳಲಿಲ್ಲ. ಆದರೆ ಬರೆಯುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ‘ಬುದ್ಧ ಮತ್ತು ಆತನ ದಮ್ಮ’ ಹಾಗೂ ಇನ್ನಷ್ಟು ಗ್ರಂಥಗಳ ನಂತರದಲ್ಲಿ ಮಾತ್ರ ಎಂದಿದ್ದರು. ಆದರೆ ತಮ್ಮ ‘ವೈಟಿಂಗ್ ಫಾರ್ ಎ ವೀಸಾ’ ಎಂಬ ಕೃತಿಯಲ್ಲಿ ತಮ್ಮ ಬದುಕಿನ ವೈಯಕ್ತಿಕ ಒಂದಿಷ್ಟು ಘಟನೆಗಳನ್ನು ಬರೆದಿಟ್ಟಿದ್ದರು. ಇವಿಷ್ಟು ಅಂಬೇಡ್ಕರ್‌ರ ಬದುಕಿನ ನೈಜ ಘಟನೆಗಳು. ಉಳಿದವು ಅವರ ಸಮಕಾಲೀನರಿಂದ ಬರೆಯಲ್ಪಟ್ಟವು ಮಾತ್ರ. ಈ ಪುಸ್ತಕವನ್ನು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯ ತನ್ನ ವಿದ್ಯಾರ್ಥಿಗಳಿಗಾಗಿ, ಅಂಬೇಡ್ಕರ್‌ರ ಬದುಕನ್ನು ಪರಿಚಯಿಸುವ ದೃಷ್ಟಿಯಿಂದ ತನ್ನ ಪಠ್ಯಕ್ರಮವಾಗಿ ಸ್ವೀಕರಿಸಿತ್ತು. ಆಗಿನ್ನೂ ಭಾರತದ ಹಳ್ಳಿಗಳಲ್ಲಿ ಅಂಬೇಡ್ಕರ್ ನಾಮಫಲಕಗಳನ್ನು ಹಾಕಲು ಅವಕಾಶ ನೀಡದಿದ್ದ ಕಾಲವದು.
ಡಿಸೆಂಬರ್ 6 ಆ ರಾತ್ರಿ ನಡೆದ ಘಟನೆಯ ಆಸುಪಾಸಿನಲ್ಲಿಯೇ ಅವರ ಪಾರ್ಥಿವ ಶರೀರವನ್ನು ಸಾರನಾಥಕ್ಕೆ ಕೊಂಡೊಯ್ಯಲು, ಅವರ ಪತ್ನಿ ಸವಿತಾರವರು ಹಠ ಹಿಡಿದು ಕುಳಿತರು. ಅಭಿಮಾನಿಗಳು ಮುಂಬೈಗೆ ಸಾಗಿಸಲು ಹಠ ಹಿಡಿದರು. ಆದರೆ ಮುಂಬೈಗೆ ಪಾರ್ಥಿವ ಶರೀರವನ್ನು ಸಾಗಿಸುವ ಪ್ರಯಾಣದ ಹಣಕ್ಕಾಗಿ ಅಭಿಮಾನಿಗಳು ತಮ್ಮ ಸ್ವಂತ ಕಾರನ್ನು ಮಾರಿದ್ದು, ಆನಂತರ ಜಗಜೀವನ್ ರಾಮ್‌ರವರು ಇಂಡಿಯನ್ ಏರ್‌ಲೈನ್ಸ್ ಮುಖಾಂತರ ಸಹಾಯ ಮಾಡಿದ್ದು ಈಗ ಇತಿಹಾಸ. ಆದರೆ ಇಂತಹ ತ್ಯಾಗಪೂರ್ಣ ಬದುಕನ್ನು ಅವರು ಬದುಕಿದ್ದು ಯಾರ ಉಳಿವಿಗಾಗಿ ಎಂದೊಮ್ಮೆ ಇಂದಿನ ಭಾರತ ಯೋಚಿಸಬೇಕಾಗಿದೆ. ಇಂತಹ ಇವರ ಬದುಕಿನ ತ್ಯಾಗದ ಎಳೆ ಹಿಡಿದು ಇಂದಿನ ಪೀಳಿಗೆ ನಡೆಯಬೇಕಿದೆ.
ಅಂದು ಕರೆಂಟ್ ಪತ್ರಿಕೆಯ ವರದಿಗಾರ ಎನ್.ಎಸ್. ಮುತ್ತಣ್ಣ ಬರೆಯುತ್ತ ‘‘ಸುಮಾರು ಹತ್ತು ಲಕ್ಷಕ್ಕೂ ಮೀರಿದ ಜನಸಾಗರವು ಅಂಬೇಡ್ಕರ್ ಅವರ ಪಾರ್ಥಿವ ಶರೀರವನ್ನು ಹಿಂಬಾಲಿಸುತ್ತಿತ್ತು. ನಾನಿದ್ದ ಸ್ಥಳದಿಂದ ಆ ಶರೀರವು ಎರಡು ಮೈಲಿಗಳ ದೂರದಲ್ಲಿ ಸಾಗುತ್ತಿತ್ತು. ನೋಡಿದಷ್ಟು ದೂರದವರೆಗೂ ಜನರ ಬರೀ ಶಿರಗಳೇ ಕಾಣುತ್ತಿದ್ದವು. ಅದೊಂದು ಶಿರಸಾಗರದಂತೆ ಭಾಸವಾಗುತ್ತಿತ್ತು’’ ಎನ್ನುತ್ತಾರೆ. ಆ ದಿನ ಆ ಅಂತ್ಯಸಂಸ್ಕಾರದಲ್ಲಿ ಅಪರೂಪದ ಘಟನೆಯೊಂದು ಸಂಭವಿಸಿತು. ಅಂಬೇಡ್ಕರ್ 1956 ಡಿಸೆಂಬರ್ 16 ಬಾಂಬೆಯಲ್ಲಿ ಹತ್ತು ಲಕ್ಷ ಜನರೊಂದಿಗೆ ಬುದ್ಧನ ದಮ್ಮಕ್ಕೆ ನಡೆಯುವ ಬೃಹತ್ ಸಮಾವೇಶ ಆಯೋಜಿಸಿದ್ದರು. ಆದರೆ ಅಚಾನಕ್ ಬಾಬಾ ಸಾಹೇಬರು ಆ ಘಟನೆಗಿಂತ ಹತ್ತು ದಿನದ ಮುಂಚಿತವಾಗಿಯೇ ತೀರಿಕೊಂಡರು. ಅವರ ಆಪ್ತ ಬಿ. ಕೆ. ಗಾಯಕ್ವಾಡ್‌ರವರು ‘‘ಅಂಬೇಡ್ಕರ್‌ರವರ ಅತೀವ ಆಶಯವನ್ನು ಈಡೇರಿಸ ಬಲ್ಲಿರಾ?’’ ಎಂದು ನೆರೆದಿದ್ದ ಆ ಜನಸಾಗರದ ಮುಂದೆ ಇಟ್ಟರು. ಆ ಮಾನವ ಸಾಗರವು ದುಃಖಿತ ಹರ್ಷೋದ್ಗಾರದೊಂದಿಗೆ ಸಮ್ಮತಿಯನ್ನು ಸೂಚಿಸಿತು. ಇಂತಹ ಅಪರೂಪದ ಘಟನೆ ಭಾರತೀಯ ಧಾರ್ಮಿಕ ಪರಂಪರೆಯ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಸ್ಫೂರ್ತಿ ಸ್ಮರಣೀಯ. ಇದು ತಮ್ಮ ನಾಯಕನೊಬ್ಬನಿಗೆ ಜನರು ತೋರಿದ ಅತಿ ಹಿರಿಮೆಯ ಗೌರವವಾಗಿತ್ತು. ಹಿರಿಯ ಬಿಕ್ಕು ಆನಂದ್ ಕೌಶಲೈ ಚಿತೆಯ ಮುಂದೆ ನಿಂತು ಅತ್ಯಂತ ದುಃಖದಿಂದ ಬುದ್ಧನ ಶ್ಲೋಕವನ್ನು ಆರಂಭಿಸಿದರು. ಈ ಜನಸಾಗರದ ಧ್ವನಿಯು ಆ ಸ್ಮಶಾನವನ್ನು ಆವರಿಸಿತ್ತು. ಬಹುಶಃ ಅನುಯಾಯಿಗಳು, ಜನಸ್ತೋಮ ಒಂದು ಅಗಲಿದ ತಮ್ಮ ನಾಯಕನಿಗೆ ಹೀಗೆ ಗೌರವ ಸಲ್ಲಿಸಬಹುದೆಂದು ಜಗತ್ತಿಗೂ ತೋರಿಸಿಕೊಟ್ಟಿತು. ತಮ್ಮ ನಾಯಕನ ಅನುಪಸ್ಥಿತಿಯಲ್ಲಿಯೂ ಅವರ ಪ್ರತಿಜ್ಞೆಯನ್ನು ಪೂರೈಸುವ ನಿಟ್ಟಿನಲ್ಲಿ ತೆಗೆದುಕೊಂಡ ಈ ನಿರ್ಧಾರ ಐತಿಹಾಸಿಕವೇ ಸರಿ. ಚೈತ್ಯಭೂಮಿಯಲ್ಲಿ ಸಂಬಂಧಿಸಿದ ಈ ಘಟನೆ ವಿಶ್ವದ ಯಾವ ಜನ ನಾಯಕನ ಪಾರ್ಥಿವ ಶರೀರದ ಮುಂದೆಯೂ ನಡೆದಿರುವುದಿಲ್ಲ ಎಂಬುದು ಈಗ ಇತಿಹಾಸ.
ಅಂದು ಸಂಜೆ 7:15 ಇಡೀ ಮರಣಭೂಮಿ ನಿಶಬ್ದತೆಯಿಂದ ಕೂಡಿತ್ತು. ಬುದ್ಧನ ಶ್ಲೋಕ ಅತೀವ ಗದ್ಗದಿತವಾಗಿ ಆ ಸ್ಮಶಾನವನ್ನು ಆವರಿಸುತ್ತಿತ್ತು. ಶ್ರೀಗಂಧದ ಸೌದೆಗಳಲ್ಲಿ ಬಾಬಾ ಸಾಹೇಬರ ದೇಹವು ಅತ್ಯಂತ ಶಾಂತ ಚಿತ್ತವಾಗಿ ಮಲಗಿತ್ತು. ಅದೊಂದು ಬುದ್ಧ ಪರಿನಿಬ್ಬಾಣ ಹೊಂದಿದ ವಾತಾವರಣದಂತಿತ್ತು. ಬಾಬಾಸಾಹೇಬರ ಅಂತಿಮ ನಮನಕ್ಕಾಗಿ ಜನಸಾಗರ ತಮ್ಮ ಮುಂಗಾಲಿನ ಮೇಲೆ ನಿಂತಿತ್ತು. ಯಶವಂತ್ ಅಂಬೇಡ್ಕರ್‌ರವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ದುಃಖಿತ ಜನ ಸಾಗರದೊಳಗೆ ನೋಡುನೋಡುತ್ತಿದ್ದಂತೆ ಬಾಬಾಸಾಹೇಬರ ಚಿತೆಯು ಪಂಚಭೂತಗಳಲ್ಲಿ ಲೀನವಾಯಿತು. ಆದರೆ ಜನರ ರೋದನೆ ಮುಗಿಲುಮುಟ್ಟಿತ್ತು. ಡಿಸೆಂಬರ್ 9 ಶನಿವಾರ ಬೆಳಗ್ಗೆ ಕೂಡ ಚಿತಾಭಸ್ಮದ ಸಂಗ್ರಹಕ್ಕಾಗಿ ಮತ್ತೆ ಜನಸ್ತೋಮವು ಆ ಸ್ಥಳದಲ್ಲಿ ನೆರದಿತ್ತು. ಕೆಲವರು ಭಸ್ಮದ ಮೇಲೆ ಒದ್ದಾಡುತ್ತಿದ್ದ ದೃಶ್ಯಗಳು ಅವರ ಬದುಕಿನ ತ್ಯಾಗವನ್ನು ಭಾವನಾತ್ಮಕವಾಗಿ ಅನಾವರಣಗೊಳಿಸುತ್ತಿದ್ದವು.
ಪ್ರತಿ ಪರಿನಿಬ್ಬಾಣದಲ್ಲೂ ಮೂರು ಸಂಕಲ್ಪಗಳು ಮೂರು ವ್ಯಕ್ತಿಗಳನ್ನು ಮರೆಯಬಾರದು. ಒಂದು ‘ಬುದ್ಧ ಮತ್ತು ಆತನ ದಮ್ಮ’ ಕೃತಿಯ ಅಧ್ಯಯನ. ಎರಡು ಅವರು ಆಯೋಜಿಸಿದ ‘ನಾಗ್ಪುರದ ಬುದ್ಧ ಸಮ್ಮೇಳನ’. ಮೂರು ಅವರ ಚಿತೆಯ ಮುಂದೆ ನಡೆದ ‘ದೀಕ್ಷೆಯಾನ’ ಮತ್ತು ಅವರ ಅಂತಿಮ ಕ್ಷಣದಲ್ಲಿ ಅವರೊಟ್ಟಿಗಿದ್ದ, ತಮ್ಮ ಬದುಕನ್ನೇ ಅಂಬೇಡ್ಕರ್ ರವರ ಸೇವೆಗೆ ತ್ಯಾಗಮಾಡಿದ ನಾನಕ್ ಚಂದ್ ರತ್ತು, ಅಡುಗೆ ಸೇವಕ ಸುಧಾಮ, ಡ್ರೈವರ್ ಕಾಳು, ಇವರಿಂದ ಮಾತ್ರವೆ ಬಾಬಾಸಾಹೇಬರ ಬದುಕಿನ ನೈಜ ಘಟನೆಗಳನ್ನು ಜಗತ್ತಿಗೆ ಅನಾವರಣಗೊಳಿಸಲು ಸಾಧ್ಯವಾಯಿತು. ಭಾರತದಂತಹ ನೆಲದಲ್ಲಿ ನೋವುಗಳು ಸಂಭವನೀಯ, ಆದರೆ ಸಂಕಲ್ಪಗಳು ಮಾತ್ರ ಅಸಂಭವ. ಸಂಕಲ್ಪಗಳಿಲ್ಲದ ಯಾವುದೇ ಆಚರಣೆಗಳು ನಾಳೆ ಅಮಾಯಕರಿಗೆ ಜೀವ ನೀಡಲಾರವು.