ನಿರೀಕ್ಷೆಯಲ್ಲಿದ್ದಾರೆ ನಿರ್ದೇಶಕಿ ಶೀತಲ್ ಶೆಟ್ಟಿ!
ಶೀತಲ್ ಶೆಟ್ಟಿ ಎಂದರೆ ದಶಕದ ಹಿಂದೆ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ವಾರ್ತಾ ವಾಚಕಿ. ಅದರ ಬಳಿಕ ವಾರ್ತಾವಾಹಿನಿಗೆ ರಾಜೀನಾಮೆ ನೀಡಿ ನಟಿಯಾಗಿಯೂ ಗುರುತಿಸಿಕೊಂಡರು. ತಾನು ಮಾತಿನ ಮಲ್ಲಿ ಚೆಲುವೆಯಷ್ಟೇ ಅಲ್ಲ; ಪ್ರತಿಭಾವಂತೆಯೂ ಹೌದು ಎನ್ನುವುದನ್ನು ಸಾಬೀತು ಪಡಿಸಿರುವ ಅವರು ಸದ್ಯಕ್ಕೆ ಸಿನೆಮಾದ ಕ್ಯಾಪ್ಟನ್ ಹುದ್ದೆಗೂ ಸೈ ಎಂದಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಚಿತ್ರವಾದ ‘ವಿಂಡೋ ಸೀಟ್’ ಸಿನೆಮಾವನ್ನು ಜನವರಿ ತಿಂಗಳಲ್ಲಿ ಬಿಡುಗಡೆ ಮಾಡುವ ಬಗ್ಗೆ ತಯಾರಿ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಚಿತ್ರ ಮತ್ತು ಅದರ ನಿರ್ದೇಶನದ ಅನುಭವದ ಬಗ್ಗೆ ಶೀತಲ್ ಅವರು ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ್ದಾರೆ.
ಪ್ರ: ‘ವಿಂಡೋ ಸೀಟ್’ ಚಿತ್ರದ ವಿಶೇಷತೆಗಳೇನು?
*ಶೀರ್ಷಿಕೆಯೇ ಹೇಳುವಂತೆ ಇದು ಕಿಟಕಿಯ ಬದಿಗೆ ಸಂಬಂಧಿಸಿದಂತಹ ಕತೆ. ಜಗತ್ತಿನ ಬಹುತೇಕ ಪ್ರಯಾಣಿಕರು ಕಿಟಕಿ ಪಕ್ಕದ ಸೀಟನ್ನು ಬಯಸುವವರೇ. ವಾಹನದೊಳಗಿನ ಅಷ್ಟು ಮಂದಿಯ ಜೊತೆಗಿದ್ದರೂ ಕೂಡ ಅದರಾಚೆ ಕಿಟಕಿಯಲ್ಲಿ ಕಾಣುವ ದೃಶ್ಯಗಳೊಂದಿಗೆ ತಮ್ಮನ್ನು ಸಂಪರ್ಕಗೊಳಿಸಲು ಬಯಸುವವರೇ ಹೆಚ್ಚು. ಅಂತಹ ಪ್ರಯಾಣಿಕನೋರ್ವನ ಜೀವನ ಪಯಣದ ಘಟನೆಗೆ ಸಂಬಂಧಿಸಿ ಈ ಚಿತ್ರವಿದೆ. ಹಾಗಾಗಿ ಸಬ್ಜೆಕ್ಟ್ ಸಾರ್ವತ್ರಿಕವಾಗಿ ಇಷ್ಟವಾಗುವಂತಹದ್ದು. ವಿಂಡೋ ಸೀಟಲ್ಲಿ ಕುಳಿತುಕೊಂಡ ರೈಲ್ವೇ ಪ್ರಯಾಣಿಕನಾಗಿ ನಿರೂಪ್ ಭಂಡಾರಿ ನಟಿಸಿದ್ದಾರೆ.
ಪ್ರ: ನಿರ್ದೇಶಕಿಯಾಗಿ ಮೊದಲ ಅನುಭವ ಹೇಗಿತ್ತು?
*ಅನುಭವ ಪೂರ್ತಿಯಾಗಿ ಅರಿವಾಗಬೇಕಾದರೆ ಅದಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆಯೂ ದೊರಕಬೇಕು. ಅದಕ್ಕಾಗಿ ಕಾಯುತ್ತಿದ್ದೇನೆ. ಅದರ ಹೊರತು, ಆ್ಯಕ್ಷನ್ ಕಟ್ ನನಗೆ ಹೊಸದೇನೂ ಅಲ್ಲ. ನಾನು ವಾರ್ತಾ ವಾಚಕಿಯಾಗಿದ್ದು, ನಿರೂಪಕಿಯಾಗಿದ್ದು ಅನಿರೀಕ್ಷಿತವೇ ಹೊರತು ನಿರ್ದೇಶಕಿಯಾಗುವಾಗ ಸರಿಯಾದ ಯೋಜನೆ ಹಾಕಿಕೊಂಡೇ ಬಂದಿದ್ದೇನೆ. ಮೊದಲು ನಟಿಯಾಗಿ ಸಿನೆಮಾಗಳ ಬಗ್ಗೆ ಒಂದಷ್ಟು ತಿಳಿದುಕೊಂಡೆ. ಸುಮಾರು ಆರು ವರ್ಷಗಳ ಹಿಂದೆ ನಾನು ಬರೆದ ಕತೆಯನ್ನು ಸಿನೆಮಾ ಮಾಡಬಹುದೇ ಎಂದು ಸ್ನೇಹಿತರೊಂದಿಗೆ ಮಾತನಾಡುವಾಗ ಅವರೆಲ್ಲ ಅದನ್ನು ನೀನೇ ನಿರ್ದೇಶಿಸಿದರೆ ಹೆಚ್ಚು ನ್ಯಾಯ ಒದಗಿಸಬಹುದು ಎಂದರು. ಅದರಿಂದ ನನ್ನೊಳಗಿನ ನಿರ್ದೇಶಕಿಗೆ ಧೈರ್ಯ ಬಂತು. ಮಾತ್ರವಲ್ಲ, ಇದಕ್ಕೂ ಮೊದಲೇ ನಾನು ಒಂದೆರಡು ಕಿರುಚಿತ್ರ ಮಾಡಿದ ಅನುಭವ ಇತ್ತು. ಅದೇ ತಂಡದವರನ್ನೇ ಇರಿಸಿಕೊಂಡು ಚಿತ್ರ ಮಾಡಲು ಮುಂದಾದೆ. ಕತೆಯನ್ನು ಸಿನೆಮಾ ಮಾಡುವಾಗ ಚಿತ್ರೀಕರಣದ ಸ್ಥಳಕ್ಕೆ ಸಂಬಂಧಿಸಿದ ಹಾಗೆ ದೃಶ್ಯಗಳಲ್ಲಿ ಒಂದಷ್ಟು ಕಾಂಪ್ರಮೈಸ್ ಮಾಡಬೇಕಾಗಿ ಬಂತು. ಉಳಿದಂತೆ ಅಂದುಕೊಂಡ ಹಾಗೆ ಚಿತ್ರ ಪೂರ್ತಿ ಮಾಡಿದ ತೃಪ್ತಿ ಇದೆ.
ಪ್ರ: ನಿಮಗೆ ಚಿತ್ರರಂಗದಿಂದ ಸಿಕ್ಕಂತಹ ಪ್ರೋತ್ಸಾಹ ಯಾವ ರೀತಿಯಲ್ಲಿದೆ?
*ಅದನ್ನು ಹೇಳಿಕೊಳ್ಳಲೇಬೇಕು. ನನಗೆ ಚಿತ್ರ ಕೈಗೆತ್ತಿಕೊಳ್ಳುವಾಗ ಅಂತಹದೊಂದು ಆತಂಕ ಇತ್ತು. ಇಲ್ಲಿನ ನನ್ನ ಗೆಲುವು ಸಾಕಷ್ಟು ಮಂದಿ ನನ್ನಂತಹವರು ಅಥವಾ ನನಗಿಂತ ಪ್ರತಿಭಾವಂತೆಯರಿದ್ದು, ಅವಕಾಶ ಸಿಗದಿರುವ ಮಂದಿಗೆ ಸ್ಫೂರ್ತಿಯಾಗಲೆಂದು ಬಯಸಿದ್ದೆ. ಆದರೆ ನನ್ನ ಆತಂಕವನ್ನು ಕೂಡ ದೂರಮಾಡುವಂತೆ ನನಗೆ ಒಳ್ಳೆಯ ಅನುಭವಗಳೇ ಸಿಕ್ಕವು. ಮೊದಲನೆಯದಾಗಿ ಕತೆ ಕೇಳಿದ ನಾಯಕ ನಿರೂಪ್ ಚಿತ್ರವನ್ನು ಒಪ್ಪಿಕೊಂಡಿದ್ದು ಖುಷಿ ನೀಡಿತು. ಈ ಕತೆಯನ್ನು ನಾನು ಸುದೀಪ್ ಅವರಿಗೂ ಹೇಳಿದ್ದೆ. ಅವರು ಕೂಡ ಕತೆ ಮೆಚ್ಚಿಕೊಂಡಿದ್ದು, ಅವರ ಮೂಲಕವೇ ಜಾಕ್ ಮಂಜು ಅವರಂತಹ ಪ್ರತಿಷ್ಠಿತ ನಿರ್ಮಾಪಕರ ಪರಿಚಯವಾಯಿತು. ನಾಯಕಿಯರಾದ ಅಮೃತಾ ಅಯ್ಯಂಗಾರ್, ಸಂಜನಾ ಆನಂದ್ ಸೇರಿದಂತೆ ಒಟ್ಟು ಚಿತ್ರ ತಂಡ ನನಗೆ ಬೆನ್ನೆಲುಬಾಗಿ ನಿಂತಿದೆ. ಇಲ್ಲಿ ಮುಖ್ಯವಾಗಿ ನನ್ನ ನಿರ್ದೇಶಕರ ತಂಡ ಮತ್ತು ಸಂಕಲನಕಾರರ ಬಗ್ಗೆ ಪ್ರಸ್ತಾಪಿಸಲೇಬೇಕು. ಬರವಣಿಗೆ ರೂಪದಲ್ಲಿದ್ದ ನನ್ನ ಕತೆಗೆ ಸಿನೆಮಾ ಕತೆಯ ರೂಪ ನೀಡುವಲ್ಲಿ ವೀರೇಶ್ ಪಾತ್ರ ಪ್ರಮುಖ. ಯೋಗರಾಜ್ ಭಟ್ ಮತ್ತು ಕವಿರಾಜ್ ಅವರ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಅವರು ನೀಡಿರುವ ಸಂಗೀತ ಚಿತ್ರಕ್ಕೊಂದು ಶಕ್ತಿಯಾಗಿದೆ. ಈಗಾಗಲೇ ಬಿಡುಗಡೆಯಾದ ಹಾಡುಗಳಿಗೆ ಸಿಕ್ಕ ಮೆಚ್ಚುಗೆ ಅವರಿಗೆ ಸಲ್ಲುವಂಥದ್ದು. ಅರ್ಜುನ್ ಜನ್ಯ ಅವರು ಹಿನ್ನೆಲೆ ಸಂಗೀತದಲ್ಲಿಯೂ ಕೂಡ ಮ್ಯಾಜಿಕ್ ಮಾಡಿದ್ದಾರೆ.
ಪ್ರ: ನಿಮ್ಮ ಸಿನೆಮಾ ಪ್ರೇಕ್ಷಕರಿಗೆ ಯಾವ ಕಾರಣಕ್ಕೆ ಇಷ್ಟವಾಗಬಹುದು?
*ಲಾಕ್‌ಡೌನ್ ಬಳಿಕ ಬಿಡುಗಡೆಯಾದ ಸಿನೆಮಾಗಳಿಗಿಂತ ವಿಭಿನ್ನವಾದ ಜಾನರ್ ಸಿನೆಮಾ ಇದು. ಹಾಗಂತ ಇದೇ ರೀತಿಯ ಚಿತ್ರ ಎಂದು ಕೆಟಗರಿ ಮಾಡಿ ಕೂರಿಸಲಾಗದ ವೈವಿಧ್ಯತೆ ಚಿತ್ರದಲ್ಲಿದೆ. ಈ ಹಿಂದೆ ಸಿನೆಮಾಗಳಲ್ಲಿ ನೋಡಿ ಸವಕಲೆನಿಸಿದ ದೃಶ್ಯಗಳು ಇಲ್ಲಿರುವುದಿಲ್ಲ ಎಂಬ ಭರವಸೆ ನೀಡಬಲ್ಲೆ. ನಾಯಕ ನಿರೂಪ್ ಅವರು ಕೂಡ ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ಮಾಡಿದ್ದಾರೆ. ಹಾಗಂತ ಇದು ತುಂಬ ಪ್ರಯೋಗಾತ್ಮಕ ಚಿತ್ರ ಎಂದುಕೊಳ್ಳಬಾರದು. ಇಲ್ಲಿಯೂ ಕತೆಗೆ ಹೊಂದಿಕೊಂಡಂತೆ ಫೈಟ್ ಸನ್ನಿವೇಶಗಳು ಬಂದು ಹೋಗುತ್ತವೆ. ಖಳ ನಟ ಪಿ.ರವಿಶಂಕರ್ ಅವರು ಚಿತ್ರದಲ್ಲಿ ಒಂದು ವಿಭಿನ್ನ ಕ್ಯಾರಕ್ಟರ್ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯ ಮನಸ್ಸಿನಿಂದ ಪರಿಶ್ರಮ ಹಾಕಿ ಮಾಡುವ ಕೆಲಸ ಖಂಡಿತವಾಗಿ ಎಲ್ಲರನ್ನು ತಲುಪುತ್ತದೆ ಎನ್ನುವುದು ನನ್ನ ನಂಬಿಕೆ. ಹಾಗಾಗಿ ಚಿತ್ರ ಖಂಡಿತವಾಗಿ ವೀಕ್ಷಕರಿಗೆ ಇಷ್ಟವಾಗಬಹುದೆನ್ನುವ ಭರವಸೆ ಇದೆ.