ಇರಾನ್ ಪರಮಾಣು ಒಪ್ಪಂದಕ್ಕೆ ಅಮೆರಿಕ ಮರಳಿದರೆ ಕೊಲ್ಲಿ ದೇಶಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು: ಸೌದಿ
ಮನಾಮ (ಬಹರೈನ್), ಡಿ. 6: ಇರಾನ್ ಜೊತೆಗಿನ ಪರಮಾಣು ಒಪ್ಪಂದಕ್ಕೆ ಅಮೆರಿಕ ಮರುಜೀವ ನೀಡುವಾಗ ಕೊಲ್ಲಿ ದೇಶಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಸೌದಿ ಅರೇಬಿಯದ ವಿದೇಶ ಸಚಿವ ಫೈಸಲ್ ಬಿನ್ ಫರ್ಹಾನ್ ಅಲ್-ಸೌದ್ ಹೇಳಿದ್ದಾರೆ. ಒಪ್ಪಂದವನ್ನು ಸಹ್ಯವಾಗಿಸಲು ಇರುವ ಏಕೈಕ ದಾರಿ ಇದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪರಮಾಣು ಒಪ್ಪಂದದ ಅಂಶಗಳಿಗೆ ಇರಾನ್ ಬದ್ಧತೆ ವ್ಯಕ್ತಪಡಿಸಿದರೆ ಅಮೆರಿಕ 2015ರ ಒಪ್ಪಂದಕ್ಕೆ ಮತ್ತೆ ಸೇರ್ಪಡೆಗೊಳ್ಳಬಹುದು ಎಂಬುದಾಗಿ ಅವೆುರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಇತ್ತೀಚೆಗೆ ನೀಡಿರುವ ಹೇಳಿಕೆಗೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2018ರಲ್ಲಿ ಒಪ್ಪಂದದಿಂದ ಅಮೆರಿಕವನ್ನು ಹೊರ ತಂದಿದ್ದರು.
‘‘ಇರಾನ್‌ನೊಂದಿಗೆ ಮಾತುಕತೆಗಳ ವಿಷಯದಲ್ಲಿ ನಮ್ಮನ್ನು ಮತ್ತು ಇತರ ಪ್ರಾದೇಶಿಕ ಮಿತ್ರರನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ನಾವು ಬಯಸುತ್ತೇವೆ’’ ಎಂದು ಬಹರೈನ್ ದೇಶದ ರಾಜಧಾನಿ ಮನಾಮದಲ್ಲಿ ಶನಿವಾರ ನಡೆದ ಭದ್ರತಾ ಸಮ್ಮೇಳನವೊಂದರ ನೇಪಥ್ಯದಲ್ಲಿ ಎಎಫ್‌ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸೌದಿ ವಿದೇಶ ಸಚಿವರು ಹೇಳಿದರು.