ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ
ಮಂಗಳೂರು, ಡಿ.7: ಬಾಲಕಿಯ ಅತ್ಯಾಚಾರ ಪ್ರಕರಣದ ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 60,000 ರೂ. ದಂಡ ವಿಧಿಸಿ ಮಂಗಳೂರಿನ ಜಿಲ್ಲಾ ಮತ್ತು ನ್ಯಾಯಾಲಯ ಹಾಗೂ ಪೋಕ್ಸೋ ನ್ಯಾಯಾಲಯವು ಸೋಮವಾರ ತೀರ್ಪು ಪ್ರಕಟಿಸಿದೆ.
ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಕುರಪ್ಪಾಡಿ ನಿವಾಸಿ ಸತೀಶ್ ಶಿಕ್ಷೆಗೊಳಗಾದ ಆರೋಪಿ.
ಆರೋಪಿಯ ಅತ್ಯಾಚಾರ ಎಸಗಿದ ಆರೋಪ ಸಾಬೀತಾಗಿದೆ ಎಂಬುದಾಗಿ ನ್ಯಾಯಾಲಯವು ಡಿ.1ರಂದು ಅಭಿಪ್ರಾಯಪಟ್ಟಿತ್ತು. ಇದೀಗ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
ಆರೋಪಿಗೆ ಐಪಿಸಿ ಸೆ.376 ಅನ್ವಯ ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಆರು ತಿಂಗಳ ಸಾದಾ ಶಿಕ್ಷೆ, ಪೊಕ್ಸೊ ಕಾಯ್ದೆಯ ಸೆಕ್ಷನ್ 6 ರ ಪ್ರಕಾರ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 50,000 ರೂ. ದಂಡ ಹಾಗೂ ದಂಡ ಪಾವತಿಸಲು ತಪ್ಪಿದರೆ ಎಂಟು ತಿಂಗಳ ಸಾದಾ ಜೈಲುಶಿಕ್ಷೆಯನ್ನು ವಿಧಿಸಿ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ವೆಂಕಟರಮಣ ಭಟ್ ತೀರ್ಪು ನೀಡಿದ್ದಾರೆ.
ದಂಡ ಮೊತ್ತದಲ್ಲಿ 50,000 ರೂ.ನ್ನು ಸಂತ್ರಸ್ತ ಬಾಲಕಿಗೆ ಪಾವತಿಸಬೇಕು. ಮಾತ್ರವಲ್ಲದೆ ಸರಕಾರದಿಂದ ಆರು ಲಕ್ಷ ರೂ.ಗಳನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕೆಂದೂ ನ್ಯಾಯಾಧೀಶರು ಆದೇಶಿಸಿದ್ದಾರೆ.
ಪ್ರಕರಣ ವಿವರ: ಆರೋಪಿ ಸತೀಶ್ ಬಾಲಕಿಯ ಮಾವನ ಜತೆ ಕೆಲಸ ಕೂಲಿ ಕೆಲಸ ಮಾಡಿಕೊಂಡಿದ್ದು, ಆಕೆಯ ಜತೆ ಸ್ನೇಹ ಬೆಳೆಸಿದ್ದ. 2018ನೇ ಜನವರಿ ಕೊನೆ ವಾರದಲ್ಲಿ ಆರೋಪಿಯು ಬಾಲಕಿಯನ್ನು ಮನೆಯ ಪಕ್ಕದಲ್ಲಿರುವ ಗುಡ್ಡೆಗೆ ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ ಎಂದು ಆರೋಪಿಸಲಾಗಿತ್ತು. ಇದರಿಂದಾಗಿ ಆಕೆ ಗರ್ಭಿಣಿಯಾಗಿದ್ದಳು. 2018ರ ಆಗಸ್ಟ್ 3ರಂದು ಸಂತ್ರಸ್ತ ಬಾಲಕಿಯ ತಾಯಿ ಮೃತಪಟ್ಟಿದ್ದು, ಈ ಸಂದರ್ಭ ಬಾಲಕಿ ನಡತೆಯ ಬಗ್ಗೆ ಮಾವನಿಗೆ ಅನುಮಾನ ಬಂದು ಆಕೆಯನ್ನು ಪ್ರಶ್ನಿಸಿದಾಗ ಆರೋಪಿಯು ಅತ್ಯಾಚಾರಗೈದ ಪರಿಣಾಮ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿತು. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಳ್ತಂಗಡಿ ಪೊಲೀಸ್ ನಿರೀಕ್ಷಕರು ಪ್ರಕರಣವನ್ನು ತನಿಖೆ ಮಾಡಿ ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಒಟ್ಟು 14 ಜನ ಸಾಕ್ಷಿದಾರರನ್ನು ವಿಚಾರಣೆ ಮಾಡಿ 18 ದಾಖಲೆಗಳನ್ನು ಗುರುತಿಸಲಾಗಿತ್ತು. ಆರೋಪಿಯ, ಸಂತ್ರಸ್ತ ಬಾಲಕಿಯ ಮತ್ತು ಮಗುವಿನ ಡಿಎನ್‌ಎ ವರದಿಯಲ್ಲಿ ಸತೀಶ್ ಮಗುವಿನ ತಂದೆಯೆಂದು ದೃಢಪಟ್ಟಿತ್ತು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಸಿ.ವೆಂಕಟರಮಣ ಸ್ವಾಮಿ ವಾದಿಸಿದ್ದರು