ಉಡುಪಿ: 15 ಮಂದಿಯಲ್ಲಿ ಕೊರೋನ ಸೋಂಕು ದೃಢ
ಉಡುಪಿ, ಡಿ.10: ಜಿಲ್ಲೆಯಲ್ಲಿ ಸತತ ಮೂರನೇ ದಿನವಾದ ಗುರುವಾರ ಸಹ 15 ಮಂದಿಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. 12 ಮಂದಿ ಚಿಕಿತ್ಸೆ ಯಿಂದ ಗುಣಮುಖರಾದರೆ, 139 ಮಂದಿ ಈಗ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದವರಲ್ಲಿ 8 ಮಂದಿ ಪುರುಷರು ಹಾಗೂ ಏಳು ಮಂದಿ ಮಹಿಳೆಯರು. ಇವರಲ್ಲಿ ನಾಲ್ವರು ಪುರುಷ ಹಾಗೂ ಮೂವರು ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಉಡುಪಿ ತಾಲೂಕಿನ 7, ಕುಂದಾಪುರ ತಾಲೂಕಿನ 8 ಮಂದಿ ಇಂದು ಕೊರೋನಕ್ಕೆ ಪಾಸಿಟಿವ್ ಬಂದಿದ್ದಾರೆ ಎಂದು ಡಾ. ಸೂಡ ತಿಳಿಸಿದರು.
12 ಮಂದಿ ಗುಣಮುಖ : ಬುಧವಾರ ಜಿಲ್ಲೆಯಲ್ಲಿ 12 ಮಂದಿ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ ಮುಕ್ತರಾದವರ ಒಟ್ಟು ಸಂಖ್ಯೆ ಈಗ 22,517ಕ್ಕೇರಿದೆ. ಜಿಲ್ಲೆಯಲ್ಲಿ ಸದ್ಯ 139 ಮಂದಿ ಮಾತ್ರ ಕೋವಿಡ್ಗೆ ಸಕ್ರಿಯರಿದ್ದಾರೆ ಎಂದರು.
1060 ನೆಗೆಟಿವ್: ಜಿಲ್ಲೆಯಲ್ಲಿ ಬುಧವಾರ ಒಟ್ಟು 1076 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 1060 ಮಂದಿ ನೆಗೆಟಿವ್ ಫಲಿತಾಂಶ ಪಡೆದಿದ್ದಾರೆ. ಉಳಿದ 16 (ಐಸಿಎಂಆರ್ ವರದಿ) ಮಂದಿಯಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 22,843ಕ್ಕೇರಿದೆ ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಬುಧವಾರದವರೆಗೆ ಒಟ್ಟು 2,61,013 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಇವರಲ್ಲಿ 2,38,170 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. ಒಟ್ಟು 22,843 ಮಂದಿ ಈವರೆಗೆ ಪಾಸಿಟಿವ್ ಬಂದಿದ್ದರೆ, 22,517 ಮಂದಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ.
ಕೋವಿಡ್ಗೆ ಜಿಲ್ಲೆಯಲ್ಲಿ ಈವರೆಗೆ ಬಲಿಯಾದವರ ಒಟ್ಟು ಸಂಖ್ಯೆ 187 ಮಾತ್ರ. ಸತತ 33 ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ಗೆ ಯಾರೂ ಬಲಿಯಾಗಿಲ್ಲ ಎಂದು ಮಾಹಿತಿ ನೀಡಲಾಗಿದೆ.