ಬ್ರಹ್ಮಾವರ: ಸಾಲದ ಖಾತೆ ತೆರೆದು ಹಣ ವರ್ಗಾಯಿಸಿ ವಂಚನೆ; ಇನ್ನಷ್ಟು ದೂರುಗಳ ದಾಖಲು
ಬ್ರಹ್ಮಾವರ, ಡಿ.10: ಬ್ರಹ್ಮಾವರ ಮಿಲಾಗ್ರಿಸ್ ಕೋ ಆಪರೇಟಿವ್ ಸೊಸೈಟಿಯ ಮ್ಯಾನೇಜರ್ ಗಣೇಶ್ ನಾಯ್ಕಾ, ಉದ್ಯೋಗಿಗಳಾದ ಭಾಗ್ಯ ಲಕ್ಷ್ಮಿ, ನಿರಂಜನ, ರಮೇಶ್ ನಾಯ್ಕಿ ಸೇರಿ ಅಕ್ರಮವಾಗಿ ಸಾಲದ ಖಾತೆ ತೆರೆದು ಅದರಿಂದ ಹಣವನ್ನು ಇನ್ನೊಬ್ಬರ ಖಾತೆಗೆ ವರ್ಗಾವಣೆ ಮಾಡಿ ವಂಚಿಸಿರುವ ಇನ್ನಷ್ಟು ಪ್ರಕರಣಗಳು ಇಂದು ಬೆಳಕಿಗೆ ಬಂದಿದ್ದು, ಹಲವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕುಂದಾಪುರ ತಾಲೂಕು ಹೆಂಗವಳ್ಳಿ ಗ್ರಾಮದ ಮಂಜುನಾಥ ನಾಯ್ಕಾ ತನಗೆ 2,00,000ರೂ. ಸಾಲದ ನೋಟೀಸು ಬಂದಿದ್ದು, ಬ್ಯಾಂಕಿನಲ್ಲಿ ವಿಚಾರಿಸಿದಾಗ ಅದನ್ನು ಸಾಲವಾಗಿ ಪಡೆದಿರುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅದೇ ರೀತಿ ಕುಂದಾಪುರ ತಾಲೂಕು ಬೆಳ್ವೆ ಗ್ರಾಪಂನ ಹೆಂಗವಳ್ಳಿ ಗ್ರಾಮದ ಗಣಪ ನಾಯ್ಕಾ ಎಂಬವರಿಗೆ 1,90,000ರೂ. ಸಾಲದ ನೋಟೀಸು ಬಂದಿರುವುದಾಗಿ ತಿಳಿಸಿದ್ದು, ಅದೇ ಗ್ರಾಮದ ಮಹೇಶ್‌ಕುಮಾರ್‌ಗೆ 3,60,000 ರೂ. ಹಾಗೂ ಗೋಪಾಲ ನಾಯ್ಕಾ ಎಂಬವರಿಗೆ 3,35,000ರೂ. ಸಾಲದ ನೋಟೀಸು ಬಂದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಗಣೇಶ್, ಭಾಗ್ಯಲಕ್ಷ್ಮಿ, ನಿರಂಜನ ಅವರು ಸೇರಿಕೊಂಡು ಇವರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಖಾತೆಯಿಂದ ಹಣವನ್ನು ಮ್ಯಾನೇಜರ್ ಆಗಿರುವ ಗಣೇಶ್ ನಾಯ್ಕಾ ಅವರ ಖಾತೆಗೆ ವರ್ಗಾವಣೆ ಆಡಿ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.