ಊರಿನ ಪತನವನ್ನು ಹೇಳುವ ‘ಹೆಸರೇ ಇಲ್ಲದ ಊರಲ್ಲಿ’
‘ಹೆಸರೇ ಇಲ್ಲದ ಊರಲ್ಲಿ’ ಕೃತಿ ಪತ್ರಕರ್ತ, ಕಥೆಗಾರ ಹಂಝ ಮಲಾರ್ ಅವರ 20 ಕತೆಗಳ ಗುಚ್ಛ. ಅರಸ್ತಾನದ ಕಥೆಗಳು, ಅದರಾಚೆ ಊರೇ ಇಲ್ಲ, ಉಮ್ಮನ ಅಲಿಖಾತು, ಅಜ್ಜಿ ಸಾಕಿದ ಪುಳ್ಳಿ ಮೊದಲಾದ ಕಥಾ ಸಂಕಲನಗಳನ್ನು ಹೊರತಂದಿರುವ ಹಂಝ ಮಲಾರ್ ಅವರ 15ನೇ ಕಥಾ ಸಂಕಲನ ಇದು.
ಸರಳತೆ , ಮೆದು ದನಿಯಲ್ಲಿ ಕತೆ ಹೇಳುವುದು ಹಂಝ ಅವರ ವೈಶಿಷ್ಟ. ಬ್ಯಾರಿ ಸಾಹಿತ್ಯ, ಸಂಸ್ಕೃತಿಯ ಕುರಿತ ಚಟುವಟಿಕೆಗಳಲ್ಲೂ ಆಳವಾಗಿ ತೊಡಗಿಕೊಂಡಿರುವ ಹಂಝ ಮಲಾರ್ ಅವರ ಕತೆಗಳಲ್ಲಿ ಸಹಜವಾಗಿಯೇ ಬ್ಯಾರಿ ಪರಿಸರ ಅನಾವರಣಗೊಂಡಿದೆ. ಬ್ಯಾರಿ ಪ್ರಭಾವಿತ ಸರಳಗನ್ನಡದಲ್ಲಿ ಕತೆಗಳನ್ನು ನಿರೂಪಿಸುವ ಎಂದಿನ ಶೈಲಿಯನ್ನು ಇಲ್ಲೂ ಕಾಣಬಹುದಾಗಿದೆ.
ಇಲ್ಲಿ ಒಟ್ಟು 22 ಕತೆಗಳಿವೆ. ಅವುಗಳಲ್ಲಿ ಮೊದಲ ಕತೆಯೇ ‘ಹೆಸರೇ ಇಲ್ಲದ ಊರಲ್ಲಿ’. ಒಂದು ಊರಿನ ಪತನವನ್ನು ಹೇಳುವ ಕತೆ ಇದು. ಪರಿಸರಕ್ಕೆ ಹೊಂದಿಕೊಂಡು ಬಾಳುತ್ತಿದ್ದ ಒಂದು ಊರು, ಆಧುನಿಕತೆ, ಮನುಷ್ಯನ ಲೋಭ, ದುಷ್ಟತನಕ್ಕೆ ಸಿಲುಕಿ ಹೇಗೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಎನ್ನುವುದನ್ನು ವಿಭಿನ್ನವಾಗಿ ನಿರೂಪಿಸುತ್ತದೆ.
ವರ್ತಮಾನದಲ್ಲಿ ಹೇಗೆ ಹಂತ ಹಂತವಾಗಿ ಹಳ್ಳಿಗಳು ಆಧುನಿಕತೆಗೆ ಸಿಲುಕಿ ನಾಶವಾಗುತ್ತವೆ ಎನ್ನುವುದನ್ನು ಹೇಳುವ ಕತೆ ಇದು. ‘ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ’ ಕೂಡ ಮನುಷ್ಯನ ಪತನವನ್ನು ಸರಳವಾಗಿ ವಿವರಿಸಿ ಹೇಳುವ ಕತೆ. ಇದಕ್ಕಾಗಿ ಮಸ್ತಾನ್ ಉಪ್ಪಾಪ ಎಂಬ ನಿಗೂಢ ವೃದ್ಧರೊಬ್ಬರು ಕಾಣುವ ಕನಸುಗಳನ್ನು ಕತೆಗಾರ ಬಳಸಿಕೊಳ್ಳುತ್ತಾರೆ. ಪ್ರಪಂಚ ಹೇಗೆ ತನ್ನ ಪಾಪದಿಂದಾಗಿಯೇ ನಾಶವಾಗಲಿದೆ ಎನ್ನುವುದನ್ನು ಕುರ್‌ಆನ್‌ನಲ್ಲಿ ಬರುವ ರೂಪಕಗಳನ್ನು ಆಧರಿಸಿ ಈ ಕತೆ ವಿವರಿಸುತ್ತದೆ.
ಅಜ್ಜನ ಹಿಂದೆ ಹೆಜ್ಜೆ, ನಿತಾಕತ್, ಜಕ್ರಿ ಬ್ಯಾರಿಯ ದೇಹದಾನ ಪತ್ರ, ಪ್ರೊ. ಇದಿನಬ್ಬರ ಜೀವನೋತ್ಸಾಹ, ಖಾದ್ರಾಜಾರ್ ಹೀಗೆ ಬಹುತೇಕ ಕತೆಗಳು ಒಂದು ವೌನ ವಿಷಾದವನ್ನು ತನ್ನೊಳಗೆ ಬಚ್ಚಿದ್ದುಕೊಂಡಿರುವಂತಹದು. ಬದುಕಿನ ಹೋರಾಟಗಳಿಂದ, ಜಂಜಡಗಳಿಂದ ಸುಸ್ತಾದ ಜೀವಗಳು ಇಲ್ಲಿರುವ ಕತೆಗಳಲ್ಲಿ ಕಂಡು ಬರುತ್ತವೆ. ವರ್ತಮಾನದ ದುರಂತಗಳನ್ನು ಅಸಹಾಯಕವಾಗಿ ನೋಡುತ್ತಾ, ಅದರ ವಿರುದ್ಧ ನಿಲ್ಲಲಾಗದೆ ನಿಡುಸುಯ್ಯುವ ಪಾತ್ರಗಳೇ ಅಧಿಕ. ಇಲ್ಲಿರುವ ‘ಉನ್ಮಾದ’ ಕತೆ ಅತ್ಯಂತ ತೆಳುವಾದದ್ದು. ಪ್ರೇಮದ ಉನ್ಮಾದಕ್ಕೆ ಬಿದ್ದ ಹುಡುಗ ಅಂತಿಮವಾಗಿ ಸತ್ಯವನ್ನು ಅರಿತುಕೊಂಡು ವಾಸ್ತವಕ್ಕೆ ಬರುವುದನ್ನು ಹೇಳುತ್ತದೆ. ಇಂತಹ ವಾಚ್ಯವಾದ ಹಲವು ಕತೆಗಳೂ ಇಲ್ಲಿವೆ.
ಸುಮಾರು 15 ಕಥಾಸಂಕಲನ, ಅಂದರೆ ಅವರೇ ಹೇಳುವಂತೆ 220 ಕತೆಗಳನ್ನು ಬರೆದಿರುವ ಹಂಝ ಮಲಾರ್ ಅವರಿಂದ ಇನ್ನಷ್ಟು ಜೀವನಾನುಭವಗಳನ್ನು ಒಳಗೊಂಡ ಕತೆಗಳನ್ನು ಸಾಹಿತ್ಯ ಕ್ಷೇತ್ರ ನಿರೀಕ್ಷಿಸುತ್ತದೆ. ರೂಪ ಪ್ರಕಾಶನ ಮೈಸೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 216. ಮುಖಬೆಲೆ 200 ರೂಪಾಯಿ. ಆಸಕ್ತರು 94810 17495 ದೂರವಾಣಿಯನ್ನು ಸಂಪರ್ಕಿಸಬಹುದು.