ಕೆಲವು ಅಚ್ಚುಮೆಚ್ಚಿನ ಆಸ್ಟ್ರೇಲಿಯನ್ನರು
1948ರ ಇಂಗ್ಲೆಂಡ್ ಪ್ರವಾಸದ ಬಳಿಕ ಆಸ್ಟ್ರೇಲಿಯನ್ ಆಟಗಾರರು ಕ್ರಿಕೆಟ್ ಆಡುವ ಬಗ್ಗೆ ಅರ್ಲಟ್ ಸಂಕ್ಷಿಪ್ತವಾದ ಆದರೆ ತುಂಬ ಅರ್ಥಪೂರ್ಣವಾದ ಒಂದು ಪ್ರಬಂಧ ಬರೆದ. ಆ ಪ್ರಬಂಧ ಒಂದಷ್ಟು ಪ್ರಶ್ನೆಗಳೊಂದಿಗೆ ಆರಂಭವಾಗುತ್ತದೆ: ‘ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಇತರರಿಗಿಂತ ಯಾಕೆ ಭಿನ್ನ? ಆಸ್ಟ್ರೇಲಿಯ ವಿರುದ್ಧದ ಒಂದು ಟೆಸ್ಟ್ ಮ್ಯಾಚ್ ಇತರ ದೇಶಗಳ ವಿರುದ್ಧದ ಟೆೆಸ್ಟ್ ಮ್ಯಾಚ್‌ಗಿಂತ ಯಾಕೆ ಭಿನ್ನ (ಡಿಫರೆಂಟ್)? ಮತ್ತು ಅದು ಭಿನ್ನ ಎಂದು ನಮಗೆ ಯಾಕೆ ಅನಿಸುತ್ತದೆ?’ ತನ್ನ ಲೇಖನದಲ್ಲಿ ತಾನು ಓದಿದ್ದ ಅಥವಾ ವೀಕ್ಷಿಸಿದ್ದ ಪಂದ್ಯಗಳಲ್ಲಿ ಆಸ್ಟ್ರೇಲಿಯನ್ ಕ್ರಿಕೆಟಿಗರ ವಿಶೇಷ ಗುಣಲಕ್ಷಣಗಳನ್ನು ಅಲರ್ಟ್ ವಿವರಿಸುತ್ತಾನೆ.
ನಾನು ಮೊದಲ ಪುಟದಿಂದ ಕೊನೆಯ ಪುಟದವರೆಗೆ ಓದಿದ ಮೊದಲ ಪುಸ್ತಕ ಓರ್ವ ಆಸ್ಟ್ರೇಲಿಯನ್ ಬರೆದ ಪುಸ್ತಕ. ಅವನ ಹೆಸರು ಕೀತ್ ಮಿಲ್ಲರ್. ಆತ ಅವನ ಕಾಲದ ಆಸ್ಟ್ರೇಲಿಯದ ಅತ್ಯಂತ ಶ್ರೇಷ್ಠ ಆಲ್‌ರೌಂಡ್ ಕ್ರಿಕೆಟ್ ಆಟಗಾರ. 1956ರಲ್ಲಿ ಆತ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಬಳಿಕ ಕ್ರಿಕೆಟ್ ಕ್ರಾಸ್ ಫಯರ್ ಎಂಬ ಲವಲವಿಕೆಯ ಆತ್ಮಕತೆಯೊಂದನ್ನು ಪ್ರಕಟಿಸಿದ. ಭಾರತದ ಪ್ರಕಾಶಕರೊಬ್ಬರು ಅದನ್ನು ಮರುಮುದ್ರಿಸಿ, ನಾನು ಬೆಳೆದ ಪಟ್ಟಣಕ್ಕೆ ಕೆಲವು ಪ್ರತಿಗಳನ್ನು ಕಳುಹಿಸಿದರು. ಮಿಲ್ಲರ್ ಕ್ರಿಕೆಟ್ ಆಡುವುದನ್ನು ತ್ಯಜಿಸಿ ಒಂದು ಪೂರ್ಣ ದಶಕದ ಬಳಿಕ, ಭಾರತದಲ್ಲಿ ಸರ್ಕ್ಯುಲೇಟ್‌ಆಗುತ್ತಿದ್ದ ಆ ಪುಸ್ತಕದ, ಪ್ರಾಯಶಃ ಕೊನೆಯ, ಪ್ರತಿಯನ್ನು ಡೆಹ್ರಾಡೂನ್‌ನ, ರಾಜ್‌ಪುರ್ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ನನ್ನ ತಂದೆ ಕೊಂಡುಕೊಂಡು ನನಗೆ ನೀಡಿದರು.
ಹುಡುಗನಾಗಿದ್ದಾಗ ನಾನು ಕ್ರಿಕೆಟ್ ಕ್ರಾಸ್ ಫಯರ್ ಓದಿದೆ. ಆಗ ಎರಡು ವಿಷಯಗಳು ನನ್ನ ಗಮನ ಸೆಳೆದವು: ಮೊದಲನೆಯದಾಗಿ, ತನ್ನ ಕ್ಯಾಪ್ಟನ್ ಡಾನ್ ಬ್ರಾಡ್‌ಮನ್ ಬಗ್ಗೆ ಮಿಲ್ಲರ್‌ನ ಅಸ್ಪಷ್ಟವಾದ ಭಾವನೆಗಳು; ಎರಡನೆಯದಾಗಿ, ಭಾರತ ಮತ್ತು ಭಾರತೀಯರ ಬಗ್ಗೆ ಮಿಲ್ಲರ್ ಅಭಿವ್ಯಕ್ತಿಸಿದ ಪ್ರೀತಿ. ಬ್ರಾಡ್‌ಮನ್ ತನ್ನ ಕಾಲದ ಅತ್ಯಂತ ಶ್ರೇಷ್ಠ ಕ್ರಿಕೆಟ್ ಆಟಗಾರ ಎಂದು ಒಪ್ಪಿದರೂ ಕೂಡ ಬ್ರಾಡ್‌ಮನ್ ಒಂದೇ ಮನಸ್ಸಿನವ ಮತ್ತು ಸ್ವಾರ್ಥಿ ಕೂಡ ಎಂದು ಮಿಲ್ಲರ್ ಹೇಳುತ್ತಾರೆ. ಆತ ಯಾವ ಭಾರತೀಯ ಆಟಗಾರರ ವಿರುದ್ಧ ಆಟವಾಡಿದ್ದನೋ ಅವರನ್ನು ಕ್ರೀಡಾಳುಗಳಾಗಿ ಹಾಗೂ ಮಾನವ ಜೀವಿಗಳಾಗಿ ಬಹಳ ಮೆಚ್ಚಿಕೊಂಡಿದ್ದ. ಮಿಲ್ಲರ್‌ನ ಪುಸ್ತಕ ಮುಷ್ತಾಕ್ ಅಲಿ, ಸಿ.ಎಸ್.ನಾಯ್ಡು ವಿನೂ ಮಂಕಡ್ ಬಗ್ಗೆ ಸಂಕ್ಷಿಪ್ತವಾದ ಆದರೆ ತುಂಬ ಪ್ರೀತಿಯ ಚಿತ್ರಗಳನ್ನು ನೀಡುತ್ತದೆ ಎಂದು ಅರ್ಧಶತಮಾನಕ್ಕೂ ಹೆಚ್ಚಿನ ಅವಧಿಯ ಬಳಿಕ ನನಗೀಗ ನೆನಪಾಗುತ್ತಿದೆ.
ನಾನು 1967 ಅಥವಾ 1968ರಲ್ಲಿ ಕ್ರಿಕೆಟ್ ಕ್ರಾಸ್‌ಫಯರ್‌ನ್ನು ಓದಿರಬೇಕು. ಸುಮಾರಾಗಿ ಅದೇ ಸಮಯದಲ್ಲಿ ನಾನು ಈಗ ಪ್ರಕಾಶನ ನಿಲ್ಲಿಸಿರುವ ಸ್ಪೋರ್ಟ್ ಆ್ಯಂಡ್ ಪಾಸ್‌ಟೈಮ್ ಪ್ರತಿಕೆಯಲ್ಲಿ ಜ್ಯಾಕ್ ಫಿಂಗಲ್ಟನ್‌ನ ಲೇಖನಗಳನ್ನು ಓದಲಾರಂಭಿಸಿದೆ. ಮಿಲ್ಲರ್ ಆಡುವ ಒಂದು ದಶಕದ ಮೊದಲು ಫಿಂಗಲ್ಟನ್ ಬ್ರಾಡ್‌ಮನ್ ಜತೆಗೆ ಆಟವಾಡಿದ್ದ. ಆತಕೂಡ ಬ್ರಾಡ್‌ಮನ್ ತನ್ನಕಾಲದ ಅತ್ಯಂತ ಶ್ರೇಷ್ಠ ಆಟಗಾರ ಮತ್ತು ತುಂಬ ಇಷ್ಟಪಡಲಾಗದ ವ್ಯಕ್ತಿ ಎಂದು ಹೇಳಿದ್ದ.
ನಾನು ಮಿಲ್ಲರ್ ಮತ್ತು ಫಿಂಗಲ್ಟನ್‌ನ ಪುಸ್ತಕಗಳನ್ನು ಮೊದಲಬಾರಿಗೆ ಓದುವ ವೇಳೆಗೆ ನನ್ನ ಮನೆಯೊಳಗೆ ಬರುತ್ತಿದ್ದ ಆಸ್ಟ್ರೇಲಿಯನ್ ಧ್ವನಿಗಳನ್ನು ಕೂಡ ನಾನು ಮೊದಲ ಬಾರಿಗೆ ಕೇಳಿಸಿಕೊಂಡೆ.
1960ರ ದಶಕದ ಕೊನೆಯ ಭಾಗದಲ್ಲಿ ಭಾರತದ ಮನೆಗಳಲ್ಲಿ ಟೆಲಿವಿಜನ್‌ಗಳು ಇರಲಿಲ್ಲ. ಆದ್ದರಿಂದ ಕ್ರಿಕೆಟ್ ಹುಚ್ಚಿನ ನನ್ನಂತಹ ಹುಡುಗರು ಒಂದೋ ಮುದ್ರಣ ಮಾಧ್ಯಮದಲ್ಲಿ ಅಥವಾ ರೇಡಿಯೊದಲ್ಲಿ ಕ್ರಿಕೆಟ್‌ನ್ನು ನೋಡಬಹುದಾಗಿತ್ತು ಅಥವಾ ಕೇಳಬಹುದಾಗಿತ್ತು. 1967-68 ಭಾರತ ತಂಡದ ಆಸ್ಟ್ರೇಲಿಯ ಪ್ರವಾಸದ ತುಣುಕುಗಳನ್ನು ನಾನು ಕೇಳಿಸಿಕೊಂಡಿರಬೇಕು. ಮುಂದಿನ ಚಳಿಗಾಲದಲ್ಲಿ ವೆಸ್ಟ್‌ಇಂಡೀಸ್ ಡೌನ್ ಅಂಡರ್ ಪ್ರವಾಸ ಮಾಡಿದ ನೆನಪುಗಳು ನನಗೆ ಇನ್ನಷ್ಟು ಸ್ಪಷ್ಟವಾಗಿ ಇವೆ. ನಾನು ಪ್ರವಾಸಿ ತಂಡವನ್ನು ಬೆಂಬಲಿಸುತ್ತಿದ್ದೆ. ಆ ತಂಡದ ನಾಯಕ ಡಾನ್‌ಗಿಂತಲೂ ಹೆಚ್ಚು ಶ್ರೇಷ್ಠನಾದ ಗಾರ್‌ಫೀಲ್ಡ್ ಸೋಬರ್ಸ್ ಆಗಿದ್ದ. ಆದ್ದರಿಂದ ಟೆ ್ಟ್ ಪಂದ್ಯಗಳಲ್ಲಿ 3-1 ಲಾಸ್‌ನಿಂದ ನಾನು ನಿರಾಶನಾದೆ.
ಎಬಿಸಿಯಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಅಲನ್ ಮ್ಯಾಕ್‌ಗಿಲ್ವರಿ ಮತ್ತು ಲಿಂಡ್ಸೆ ಹ್ಯಾಸೆಟ್ ಆ ಸೋಲನ್ನು ಮೃದುಗೊಳಿಸಿ ವಿವರಿಸಿದ್ದರು. ಡೆಹ್ರಾಡೂನ್‌ನಲ್ಲಿ ಚಳಿಗಾಲಗಳಲ್ಲಿ ಹೆಪ್ಪುಗಟ್ಟಿಸುವ ಚಳಿ. ಆಗ ಬೆಳಗ್ಗೆ ಐದು ಗಂಟೆಗೆ ಎದ್ದು ಮನೆಯಲ್ಲಿದ್ದ ನಮ್ಮ ಫಿಲಿಪ್ಸ್ ಸೆಟ್‌ನ ಮುಂದೆ ಕುಳಿತು ಮೆಲ್ಲನೆಯ ಧ್ವನಿಯಲ್ಲಿ ಕ್ರಿಕೆಟ್ ಕವೆುಂಟರಿ ಕೇಳುತ್ತಿದ್ದೆ. ಮನೆಯವರಿಗೆ ತೊಂದರೆಯಾಗದಂತೆ ಕಡಿಮೆ ವ್ಯಾಲ್ಯೂಮ್ ಇಟ್ಟು ಮ್ಯಾಕ್ ಗಿಲ್ವರಿ ಮತ್ತು ಹ್ಯಾಸೆಟ್ ನನಗೆ ವಿವರಿಸುತ್ತಿದ್ದ ವಿವರಣೆಯ ಥ್ರಿಲ್ ಒಂದಡೆಯಾದರೆ ಹಲ್ಲು ಕಟಕಟನೆ ಸದ್ದು ಮಾಡುವಂತಹ ಕೊರೆಯುವ ಚಳಿ ಇನ್ನೊಂದೆಡೆ. 1970ರ ದಶಕದ ಉದ್ದಕ್ಕೂ ನನ್ನ ಚಳಿಗಾಲಗಳು ಇಂಗ್ಲೆಂಡ್, ವೆಸ್ಟ್ ಇಂಡಿಸ್, ಪಾಕಿಸ್ತಾನ ಮತ್ತು ಭಾರತದ ಆಸ್ಟ್ರೇಲಿಯ ಪ್ರವಾಸಗಳ ಕ್ರಿಕೆಟ್ ಕಮೆಂಟರಿ ಕೇಳುವ ಸಂತಸದಿಂದ ತುಂಬಿರುತ್ತಿದ್ದವು. ಮರುದಿನದ (ನಮ್ಮ ಮನೆಗೆ ಬರುತ್ತಿದ್ದ) ವರ್ತಮಾನ ಪತ್ರಿಕೆಗಳಲ್ಲಿ ಹಾಗೂ ಕ್ರೀಡಾ ಮ್ಯಾಗಿಝಿನ್‌ಗಳಲ್ಲಿ ಕ್ರಿಕೆಟ್ ಸುದ್ದಿಗಳನ್ನು, ವಿವರಗಳನ್ನು ಓದಿ ಖುಷಿ ಪಡುತ್ತಿದ್ದೆ. ನಾನು ಬೆಳೆದು ದೊಡ್ಡವನಾದಂತೆ ನಾನೇ ಪುಸ್ತಕಗಳನ್ನು ಕೊಂಡುಕೊಳ್ಳಲು ಆರಂಭಿಸಿದಾಗ ಮೇಲೆ ಹೇಳಿದ ಜ್ಯಾಕ್ ಫಿಗಂಲ್ಟನ್ ಹಾಗೂ ರೇ ರಾಬಿನ್ಸನ್‌ರವರ ಕೃತಿಗಳನ್ನು ಕೂಡ ಓದಿದೆ.
ನನ್ನ ಬಾಲ್ಯದ ಹಾಗೂ ಯೌವನದ ದಿನಗಳ ಫೆವರೆಟ್ ಆಸ್ಟ್ರೇಲಿಯನ್ನರು ಕ್ರಿಕೆಟ್ ಲೇಖಕರು ಹಾಗೂ ಕ್ರಿಕೆಟ್ ಕಮೆಂಟೇಟರುಗಳಾಗಿದ್ದರು. 1979ರಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯನ್ ಕ್ರಿಕೆಟ್ ಆಟಗಾರರನ್ನು ಕಣ್ಣಾರೆ ನೋಡುವ ವೇಳೆಗೆ ನಾನು ಆಗಲೇ 20ರ ತರುಣನಾಗಿದ್ದೆ. 1980ರ ದಶಕ ಆಸ್ಟ್ರೇಲಿಯನ್ನರು ಕ್ರಿಕೆಟ್ ಆಡುವುದನ್ನು ನಾನು ನೋಡಬೇಕಾಗಿತ್ತು. ಆದರೂ ಪರವಾಗಿಲ್ಲ ಅನ್ನಿಸಿತು. ಯಾಕೆಂದರೆ ಆ ದಶಕದಲ್ಲಿ ಪೂರ್ಣಶಕ್ತಿಯ ಒಂದು ಕ್ರಿಕೆಟ್ ತಂಡ ಸ್ಪರ್ಧಾತ್ಮಕವಾಗಿರಲಿಲ್ಲ. ಅದೃಷ್ಟವಶಾತ್, 1990ರ ಹಾಗೂ 2000ದ ದಶಕಗಳಲ್ಲಿ ಟಾಪ್-ಕ್ಲಾಸ್ ಆಸ್ಟ್ರೇಲಿಯನ್ ತಂಡಗಳು ನಾನು ಈಗ ನನ್ನ ಹೋಮ್ ಸಿಟಿ ಎಂದು ಕರೆಯುವ ಬೆಂಗಳೂರಿನಲ್ಲಿ ಹಲವು ಟೆಸ್ಟ್ ಪಂದ್ಯಗಳನ್ನು ಆಡಿದವು. ಆ ಎಲ್ಲ ಪಂದ್ಯಗಳು ನಡೆಯುವಾಗ ನಾನು ಯಾವಾಗಲೂ ಕ್ರಿಕೆಟ್ ಅಂಗಣದಲ್ಲಿ ಹಾಜರಿರುತ್ತಿದ್ದೆ. ಪಾಂಟಿಂಗ್ ಮತ್ತು ವೋಹ್ ಸಹೋದರರು ಬ್ಯಾಟ್ಸ್‌ಮನ್‌ಶಿಪ್ ಮತ್ತು ಮೆಕ್‌ಗ್ರಾಥ್ ನಾಗೂ ವಾರ್ನ್‌ರವರ ಬೌಲಿಂಗ್ ಮತ್ತು ಹೀಲಿ ಹಾಗೂ ಗಿಲ್ ಕ್ರಿಸ್ಟ್‌ರವರ ವಿಕೆಟ್ ಕೀಪಿಂಗ್‌ನ ವೀಕ್ಷಣೆಯಲ್ಲಿ ನಾನು ಮುಳುಗಿ ಹೋಗಿರುತ್ತಿದೆ.
ಆಸ್ಟ್ರೇಲಿಯದ ಕ್ರಿಕೆಟ್ ಆಟಗಾರರ ಬಗ್ಗೆ ಇಡೀ ಜೀವಮಾನ ಓದಿದ, ಆಲಿಸಿದ ಹಾಗೂ ಅವರ ಆಟವನ್ನು ವೀಕ್ಷಿಸಿದ ಆಧಾರದಲ್ಲಿ, ಎಲ್ಲ ಕಾಲದ ಒಂದು ಆಸ್ಟ್ರೇಲಿಯನ್ ಇಲೆವೆನ್ ತಂಡವನ್ನು ನಾನು ಚರ್ಚೆಗೆ ಎತ್ತಿಕೊಳ್ಳುತ್ತಿದ್ದೇನೆ. ಆ ತಂಡ ಬ್ಯಾಟಿಂಗ್‌ಗೆ ಅನುಕ್ರಮವಾಗಿ ಹೀಗಿದೆ: 1.ವಿಕ್ಟರ್ ಟ್ರಂಪರ್ 2.ಆರ್ಥರ್ ಮೊರಿಸ್ 3.ಡಾನ್ ಬ್ರಾಡ್‌ಮನ್ 4.ರಿಕಿ ಪಾಂಟಿಂಗ್ 5.ಅಲೆನ್ ಬಾರ್ಡರ್ 6.ಕೀತ್ ಮಿಲ್ಲರ್ 7.ಆ್ಯಡಮ್ ಗಿಲ್‌ಕ್ರಿಸ್ಟ್ 8.ಶೇನ್‌ವಾರ್ನ್ 9.ಡೆನಿಸ್ ಲಿಲ್ಲಿ 10.ಬಿಲ್ ಒರಿಲಿ 11.ಗ್ಲೆನ್ ಮೆಕ್‌ಗ್ರಾತ್.
ಸ್ಟೀವ್ ಸ್ಮಿತ್ ಇನ್ನೂ ಆಟವಾಡುತ್ತಿರುವುದರಿಂದ ಅವರನ್ನು ನಾನು ಈ ಯಾದಿಯಲ್ಲಿ ಸೇರಿಸಿಲ್ಲ. ಹೀಗಾಗಿ ಓಪನರ್‌ಗಳು ಅತ್ಯಂತ ವಿವಾದಾಸ್ಪದವಾದ ಆಯ್ಕೆಗಳಿರಬಹುದು. ‘ ರಿಸೆನ್ಸಿ ಬಯಾಸ್’ ನಿಂದಾಗಿ ಹಲವು ಕ್ರಿಕೆಟ್ ಅಭಿಮಾನಿಗಳು ಮಾರ್ಕ್ ಟೇಲರ್ ಮತ್ತು ಮ್ಯಾಥ್ಯೂ ಹೇಡನ್‌ರನ್ನು ಆಯ್ಕೆ ಮಾಡಬಹುದು. ಇವರ ಮಿಂಚಿನ ರನ್- ಸ್ಕೋರಿಂಗ್ ಮುಂದಿನ ತಲೆಮಾರುಗಳಿಗಾಗಿ ಟಿವಿಯಲ್ಲಿ ದಾಖಲಾಗಿದೆ; ಇದನ್ನು ಯು ಟ್ಯೂಬ್‌ನಲ್ಲಿ ಮತ್ತೆ ಮತ್ತೆ ವೀಕ್ಷಿಸಬಹುದು. ಅದೇನಿದ್ದರೂ, ಟ್ರಂಪರ್ ಆಸ್ಟೇಲಿಯದ ಕ್ರಿಕೆಟ್ ಇತಿಹಾಸದಲ್ಲಿ ಹಾಗೂ ಜನಮನದಲ್ಲಿ ಒಂದು ವಿಶೇಷ ಸ್ಥಾನ ಪಡೆದಿದ್ದಾರೆ. ಅವರ ಕುರಿತು ( ಇತರ ಹಲವರಲ್ಲದೆ) ಜ್ಯಾಕ್ ಫಿಂಗಲ್ಟನ್ ಮತ್ತು ಗಿಡಿಯೋನ್ ಹೈಗ್ ರವರ ಬರವಣಿಗೆಯಲ್ಲೂ ಇದು ಕಾಣಿಸುತ್ತದೆ. ಟ್ರಂಪರ್ ಹಾಗೆ ಆರ್ಥರ್ ಮೊರಿಸ್ ಓರ್ವ ಅದ್ಭುತ ದಾಳಿಕೋರ ಬ್ಯಾಟ್ಸ್ ಮನ್ ಆಗಿದ್ದರು. ನನ್ನ ಇಲೆವೆನ್ ತಂಡದಲ್ಲಿ ಅವರ ಫಿಲೋ ಲೆಫ್ಟ್ ಹ್ಯಾಂಡರ್ಸ್ ಟೇಲರ್ ಮತ್ತು ಹೇಡೆನ್‌ರವರಿಗಿಂತ ಮೊರಿಸ್ ಮುಂದಿದ್ದಾರೆ.
ನಾನು ಇನ್ನಷ್ಟು ವಿವಾದಕ್ಕೆ ಸಿದ್ಧನಾಗುತ್ತೇನೆ: ಈ ಇಲೆವೆನ್‌ನ ಕ್ಯಾಪ್ಟನ್ ಯಾರಾಗಬೇಕು? ಬ್ರಾಡ್‌ಮನ್ ಎಂಬುದು ಸ್ಪಷ್ಟವೇ ಆದರೂ ನಾನು ಅಲೆನ್ ಬಾರ್ಡರ್ ಆಗಬೇಕು ಎನ್ನುತ್ತೇನೆ. ಬ್ರಾಡ್‌ಮನ್ ಕ್ರಿಕೆಟ್‌ನ ಎಲ್ಲ ವಿಭಾಗಗಳಲ್ಲೂ ಭಾರೀ ಪರಿಣಿತರನ್ನು ಮುನ್ನಡೆಸಿದ್ದ ; ಪರಿಣಾಮವಾಗಿ ಹೇಗಿದ್ದರೂ ಆ ತಂಡ ಗೆಲ್ಲುತ್ತಿತ್ತು. ಆದರೆ ಬಾರ್ಡರ್ ಆಸ್ಟ್ರೇಲಿಯದ ಕ್ರಿಕೆಟ್ ಇತಿಹಾಸದ ಅತ್ಯಂತ ಕೆಟ್ಟ ಅವಧಿಗಳಲ್ಲಿ ಒಂದು ಅವಧಿಯಲ್ಲಿ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದ. ಆತ ಎಳೆಯ ಆಟಗಾರರನ್ನು ಹುರಿದುಂಬಿಸಿ ಮೇಲೆ ತರುವುದರಲ್ಲಿ ಹಾಗೂ ಟೀಮ್ ಸ್ಟಿರಿಟ್ನ ನಿರ್ಮಾಣದಲ್ಲಿ ಬ್ರಾಡ್‌ಮನ್‌ಗಿಂತ ತುಂಬಾ ಉತ್ತಮನಾಗಿದ್ದ. ಈ ತಂಡ ಮತ್ತು ಎಲ್ಲ ಕಾಲದ ಒಂದು ವೆಸ್ಟ್ ಇಂಡಿಯನ್ ತಂಡದ ನಡುವೆ ಒಂದು ಭ್ರಾಮಕ ಪಂದ್ಯ ನಡೆಯುವುದಾದಲ್ಲಿ, ಯಾವ ಕಾಲಕ್ಕೂ ನಾನು ಬ್ರಾಡ್‌ಮನ್‌ಗಿಂತ ಬಾರ್ಡರ್‌ಗೇ ಪಟ್ಟ ಕಟ್ಟಿಯೇನು. ಓರ್ವ ಇಂಗ್ಲಿಷ್ ಮ್ಯಾನ್‌ನ ಮಾತುಗಳನ್ನು ಉದ್ಧರಿಸುವ ಮೂಲಕ ಆಸ್ಟ್ರೇಲಿಯನ್ ಕ್ರಿಕೆಟ್ ಆಟಗಾರರ ಬಗ್ಗೆ ನನ್ನ ಅನಿಸಿಕೆಗಳನ್ನು ಮುಕ್ತಾಯಗೊಳಿಸಬಯಸುತ್ತೇನೆ. ಆತ ಜಾನ್ ಅರ್ಲಟ್.
1948ರ ಇಂಗ್ಲೆಂಡ್ ಪ್ರವಾಸದ ಬಳಿಕ ಆಸ್ಟ್ರೇಲಿಯನ್ ಆಟಗಾರರು ಕ್ರಿಕೆಟ್ ಆಡುವ ಬಗ್ಗೆ ಅರ್ಲಟ್ ಸಂಕ್ಷಿಪ್ತವಾದ ಆದರೆ ತುಂಬ ಅರ್ಥಪೂರ್ಣವಾದ ಒಂದು ಪ್ರಬಂಧ ಬರೆದ. ಆ ಪ್ರಬಂಧ ಒಂದಷ್ಟು ಪ್ರಶ್ನೆಗಳೊಂದಿಗೆ ಆರಂಭವಾಗುತ್ತದೆ: ‘ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಇತರರಿಗಿಂತ ಯಾಕೆ ಭಿನ್ನ? ಆಸ್ಟ್ರೇಲಿಯ ವಿರುದ್ಧದ ಒಂದು ಟೆಸ್ಟ್ ಮ್ಯಾಚ್ ಇತರ ದೇಶಗಳ ವಿರುದ್ಧದ ಟೆಸ್ಟ್ ಮ್ಯಾಚ್‌ಗಿಂತ ಯಾಕೆ ಭಿನ್ನ (ಡಿಫರೆಂಟ್)? ಮತ್ತು ಅದು ಭಿನ್ನ ಎಂದು ನಮಗೆ ಯಾಕೆ ಅನಿಸುತ್ತದೆ?’ ತನ್ನ ಲೇಖನದಲ್ಲಿ ತಾನು ಓದಿದ್ದ ಅಥವಾ ವೀಕ್ಷಿಸಿದ್ದ ಪಂದ್ಯಗಳಲ್ಲಿ ಆಸ್ಟ್ರೇಲಿಯನ್ ಕ್ರಿಕೆಟಿಗರ ವಿಶೇಷ ಗುಣಲಕ್ಷಣಗಳನ್ನು ಅಲರ್ಟ್ ವಿವರಿಸುತ್ತಾನೆ.
ಇಂಗ್ಲಿಷ್ ತಂಡವೊಂದು ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಆಡಿದಾಗಲೆಲ್ಲ ಅದು ‘‘ಆಸ್ಟ್ರೇಲಿಯನ್ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್, ನಾಯಕತ್ವ ಮತ್ತು ‘ಆಸ್ಟ್ರೇಲಿಯನಿಸಂ’ಅನ್ನು ಎದುರಿಸಬೇಕಾಗುತ್ತಿತ್ತು’’ ಎಂದು ಹೇಳಿ ಅಲರ್ಟ್ ತನ್ನ ಪ್ರಬಂಧವನ್ನು ಮುಕ್ತಾಯಗೊಳಿಸುತ್ತಾನೆ. ‘ಆಸ್ಟ್ರೇಲಿಯನಿಸಂ’ ಅಂದರೆ ಗೆದ್ದೇ ಗೆಲ್ಲಬೇಕು ಎಂಬ ಅತ್ಯಂತ ದೃಢವಾದ ನಿರ್ಧಾರ ಕ್ರಿಕೆಟ್‌ನ ನಿಯಮಗಳನ್ನು ಮೀರದೆ, ಆದರೆ ಆ ನಿಯಮಗಳಡಿಯಲ್ಲಿ ಕೊನೆಯ ಮಿತಿಯವರೆಗೆ, ಆಡಿ ಗೆಲ್ಲಲೇಬೇಕೆಂಬ ದೃಢ ನಿರ್ಧಾರ. ಅಂದರೆ, ಮನುಷ್ಯನ ದೇಹ ಏನನ್ನೂ ಮಾಡಲು ‘‘ಅಸಾಧ್ಯವೋ’’ ಅದನ್ನು ಮಾಡಲು ಸಾಧ್ಯವೆಂದು ‘ನಂಬುವ’ ಆಸ್ಟ್ರೇಲಿಯನ್ನರು ಇದ್ದಾರೆ. ಅಂದರೆ ಎಂದೂ ಒಂದು ಪಂದ್ಯದಲ್ಲಿ ನಿರ್ದಿಷ್ಟವಾಗಿ ಒಂದು ಟೆಸ್ಟ್‌ಮ್ಯಾಚ್‌ನಲ್ಲಿ ಕೊನೆಯ ರನ್ ಗಳಿಸುವವರೆಗೆ ಅಥವಾ ಕೊನೆಯ ವಿಕೆಟ್ ಪತನವಾಗುವವರೆಗೆ ಅವರು ಎಂದೂ ಸೋತದ್ದಿಲ್ಲ. ಇದನ್ನು ಓರ್ವ ಇಂಗ್ಲಿಷ್ ಮ್ಯಾನ್‌ನ ದೃಷ್ಟಿಯಿಂದ ಬರೆಯಲಾಗಿತ್ತು. ಆದರೂ ಆಸ್ಟ್ರೇಲಿಯನರ ವಿರುದ್ಧ ತಮ್ಮದೇ ಆದ ತಂಡ ಆಡುವುದನ್ನು ವೀಕ್ಷಿಸಿರುವ ಭಾರತೀಯರಿಗೂ ಇದು ಅರ್ಥಪೂರ್ಣವಾಗುತ್ತದೆ. ಡೌನ್ ಅಂಡರ್‌ನಲ್ಲಿ ಸದ್ಯವೇ ಆರಂಭವಾಗಲಿರುವ ಟೆಸ್ಟ್ ಪಂದ್ಯ ಸರಣಿ 70 ವರ್ಷಗಳ ಹಿಂದೆ ಅರ್ಲಟ್ ಹೇಳಿದ ಮಾತುಗಳ ಸತ್ಯಾಸತ್ಯತೆಯನ್ನು ಖಂಡಿತವಾಗಿಯೂ ದೃಢಪಡಿಸುತ್ತದೆ.
(ರಾಮಚಂದ್ರ ಗುಹಾರವರ ದಿ ಕಾಮನ್‌ವೆಲ್ತ್ ಆಫ್ ಕ್ರಿಕೆಟ್ ಇತ್ತೀಚೆಗಷ್ಟೇ ಪ್ರಕಟವಾಗಿದೆ.)