ಕರಾವಳಿ ಅಲ್ಪಸಂಖ್ಯಾತ ಮೀನುಗಾರ ಸಂಘದಿಂದ ಬೋಟ್ ದುರಂತದ ಸಂತ್ರಸ್ತರಿಗೆ ಪರಿಹಾರಧನ ವಿತರಣೆ
ಮಂಗಳೂರು, ಡಿ.15: ಅಲ್ಪಸಂಖ್ಯಾತ ಮೀನುಗಾರರ ಸಂಘ ಆರಂಭದ ದಿನಗಳಿಂದಲೂ ಜಾತಿ, ಧರ್ಮ, ಭೇದವಿಲ್ಲದೆ ಸರ್ವ ಧರ್ಮೀಯರ ಸಂಕಷ್ಟಕ್ಕೆ ಸ್ಪಂದಿಸುತ್ತಾ ನಿರಂತರ ಬೆಳವಣಿಗೆ ಕಂಡಿದೆ ಎಂದು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಸಹಕಾರಿ ಸಂಘದ ಸಲಹೆಗಾರ ಪ್ರವೀಣ್ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು.
ಮಂಗಳೂರು ಬಂದರು ಉತ್ತರ ಧಕ್ಕೆ ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಸಹಕಾರಿ ಸಂಘದ ವತಿಯಿಂದ ಮಂಗಳೂರಿನ ಸೆಂಟ್ರಲ್ ಕಮಿಟಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಶ್ರೀರಕ್ಷಾ ಬೋಟ್ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 50 ಸಾವಿರ ರೂ. ಪರಿಹಾಧನದ ಚೆಕ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಐಓಸಿ ನಿವೃತ್ತ ಅಧಿಕಾರಿ ಮೋಹನ್ ದಾಸ್ ಮಾತನಾಡಿ, ಸಂಘ-ಸಂಸ್ಥೆಗಳಲ್ಲಿರುವ ಹಣ ನೊಂದವರು, ಸಂಕಷ್ಟದಲ್ಲಿರುವವರ ಉಪಯೋಗಕ್ಕೆ ಬರಬೇಕು, ಸೇವೆ ಮಾಡುವ ಭಾಗ್ಯ ಎಲ್ಲರಿಗೂ ಸಿಗದಿದ್ದರೂ ಅಲ್ಪಸಂಖ್ಯಾತ ಮೀನುಗಾರರ ಸಂಘ ಸಿಕ್ಕಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡಿದೆ ಎಂದು ಶ್ಲಾಘಿಸಿದರು.
ಸಂಘದ ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್ ಮಾತನಾಡಿ, ಸಂಘವು ಮೀನುಗಾರರು, ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣ, ರೋಗಿಗಳಿಗೆ ಧನಸಹಾಯ ಒದಗಿಸುತ್ತಾ ಬಂದಿದ್ದು, ಲಾಕ್ ಡೌನ್ ಸಂದರ್ಭದಲ್ಲಿ 25 ಲಕ್ಷ ರೂ. ಮೊತ್ತದ ಆಹಾರ ಸಾಮಗ್ರಿಗಳನ್ನು ವಿತರಿಸುವ ಮೂಲಕ ನೊಂದವರ ಧ್ವನಿಯಾಗಿ ಕಾರ್ಯನಿರ್ವಹಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಿಡ್ನಿ ಮತ್ತು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಧನಸಹಾಯ ವಿತರಿಸಲಾಯಿತು.
ಸಂಘದ ಅಧ್ಯಕ್ಷ ಜೆ.ಮುಹಮ್ಮದ್ ಇಸಾಕ್ ಚಾಲನೆ ನೀಡಿದರು.
ಸಂಘದ ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಬ್ದುಲ್ಲತೀಫ್, ನಿರ್ದೇಶಕರಾದ ಯು.ಟಿ.ಅಹ್ಮದ್ ಶರೀಫ್, ಬಿ.ಇಬ್ರಾಹೀಂ, ಮುಹಮ್ಮದ್ ಅಶ್ರಫ್, ಎಂ.ಎ.ಗಫೂರ್, ಎಸ್.ಕೆ.ಇಸ್ಮಾಯೀಲ್, ಎಸ್.ಎಂ.ಇಬ್ರಾಹೀಂ, ಟಿ.ಎಚ್.ಹಮೀದ್, ಸುದತ್, ಬಿ.ಮುಹಮ್ಮದ್ ಶಾಲಿ, ಎ.ಎಂ.ಕೆ.ಮುಹಮ್ಮದ್ ಇಬ್ರಾಹಿಂ, ಬಿ.ಕೆ.ರಝಿಯಾ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಮುಹಮ್ಮದ್ ಮುಸ್ತಫ ಮಲಾರ್ ಕಾರ್ಯಕ್ರಮನಿರೂಪಿಸಿದರು.