ಡ್ರಗ್ಸ್ ಪಿಡುಗು ದೇಶದ ಅಭಿವೃದ್ಧಿಗೆ ಮಾರಕ : ಡಾ. ಮಹಾಬಲೇಶ್ ಶೆಟ್ಟಿ
ಮಂಗಳೂರು, ಡಿ.15: ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಾದಕ ದ್ರವ್ಯ ಪೂರೈಕೆಯಾಗುತ್ತಿದ್ದು, ದೇಶದ ಬೆಳವಣಿಗೆಯನ್ನು ಕುಂಠಿತ ಗೊಳಿಸುವುದು ಇದರ ಹಿಂದಿರುವ ಹುನ್ನಾರ ಎಂದು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಮಹಾ ಬಲೇಶ್ ಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಮಾದಕ ದ್ರವ್ಯ ವಿರೋಧಿ ಸಪ್ತಾಹ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ದೇಶದ ಯುವಜನತೆಯನ್ನು ಗುರಿಯಾಗಿಸಿರುವ ಡ್ರಗ್ಸ್ ಪಿಡುಗು ಒಂದು ರೀತಿಯಲ್ಲಿ ಭಯೋತ್ಪಾದನೆಗೆ ಸಮಾನವಾಗಿದ್ದು, ನಿಯಂತ್ರಿಸದಿದ್ದರೆ ದೇಶಕ್ಕೆ ಅಪಾಯ ಎಂದು ಹೇಳಿದ ಅವರು, 2019ರ ಸಮೀಕ್ಷೆಯ ಪ್ರಕಾರ ದೇಶದ ಜನಸಂಖ್ಯೆಯಲ್ಲಿ ಶೇ.14 ಮಂದಿ ಡ್ರಗ್ಸ್ ಚಟಕ್ಕೆ ಒಳಗಾಗಿ ದ್ದಾರೆ ಎಂದರು.
20 ಕೋಟಿ ಜನರು ಆಲ್ಕೋಹಾಲ್ ಚಟ ಹೊಂದಿದ್ದಾರೆ. ದಿನವೊಂದಕ್ಕೆ 50 ಸಾವಿರ ಮಂದಿ ಸಿಗರೇಟು ಸೇವನೆ ಆರಂಭಿಸುತ್ತಿದ್ದಾರೆ. ಕೀಳ ರಿಮೆ, ಕುತೂಹಲದ ಮೂಲಕ ಮಾದಕ ದ್ರವ್ಯ ಆರಂಭವಾಗುತ್ತದೆ. ಮದ್ಯ, ಸಿಗರೇಟ್ ಕೂಡ ಮಾದಕ ದ್ರವ್ಯ ಆಗಿದೆ. ಹಾಗಾಗಿ ವೈನ್‌ಶಾಪ್, ಬಾರ್ ಮಾಲೀಕರು ಕೂಡ ಡ್ರಗ್ ಮಾರಾಟಗಾರರು.
ಪೊಲೀಸರು ವಾರಕ್ಕೊಮ್ಮೆ ವಿಶೇಷ ಕಾರ್ಯಾಚರಣೆ ನಡೆಸಬೇಕು ಎಂದು ಮಹಾಬಲೇಶ್ ಶೆಟ್ಟಿ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಸಪ್ತಾಹ ಉದ್ಘಾಟಿಸಿದರು. ಅಪರಾಧ ಚಟುವಟಿಕೆಗಳಿಗೆ ಮಾದಕ ವಸ್ತು ಮೂಲ ವಾಗಿದೆ. ರೌಡಿ ಪರೇಡ್ ನಡೆಸಿ ಡ್ರಗ್ ಮಾರಾಟಗಾರರಿಗೆ ಸುಧಾರಣೆ ಆಗಲು ಎಚ್ಚರಿಕೆ ನೀಡಲಾಗಿದೆ. ಕಾನೂನು ಕ್ರಮದೊಂದಿಗೆ ಸಪ್ತಾಹದ ಮೂಲಕ ಜಾಗೃತಿ ನೀಡುವ ಕೆಲಸವಾಗುತ್ತಿದೆ ಎಂದರು.
ಇಸ್ಕಾನ್ ಸಂಸ್ಥೆಯ ಅಧ್ಯಕ್ಷ ಕಾರುಣ್ಯ ಸಾಗರ ದಾಸ್ ಅವರು ಮುಖ್ಯ ಅತಿಥಿಯಾಗಿದ್ದರು. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಗಾಂವ್‌ಕರ್ ಸ್ವಾಗತಿಸಿದರು.
ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್ ವಂದಿಸಿದರು. ಬರ್ಕೆ ಠಾಣೆ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟಿ ಕಾರ್ಯಕ್ರಮ ನಿರೂಪಿಸಿದರು.