ಸಾಮಾಜಿಕ ಮಾಧ್ಯಮಗಳಲ್ಲಿ ಟೈಮ್ ಪಾಸಿಂಗ್ ಖಿನ್ನತೆಗೆ ಕಾರಣವಾಗಬಲ್ಲದು
ಸಾಮಾಜಿಕ ಮಾಧ್ಯಮಗಳು ಒಂದು ರೀತಿಯಲ್ಲಿ ನಿಧಾನ ವಿಷವಿದ್ದಂತೆ ಎಂಬ ಮಾತನ್ನು ನಿರಾಕರಿಸುವಂತಿಲ್ಲ. ಸಾಮಾಜಿಕ ಮಾಧ್ಯಮಗಳ ಮೂಲಕ ವಿಶ್ವಾದ್ಯಂತ ಜನರ ಸಂಪರ್ಕ ಹೊಂದಿರುವುದನ್ನು ಮತ್ತು ಇತರರ ಬದುಕುಗಳಲ್ಲಿ ಏನು ಸಂಭವಿಸುತ್ತಿದೆ ಎನ್ನುವುದರ ಬಗ್ಗೆ ಅಪ್‌ಡೇಟ್ ಆಗಿರಲು ನಮ್ಮ ಯುವ ಪೀಳಿಗೆ ಹಾತೊರೆಯುತ್ತಿದೆ. ಆದರೆ ದಿನದ ಹೆಚ್ಚಿನ ಸಮಯವನ್ನು ನಿರಂತರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಕಳೆಯುವ ಚಟವು ಕೆಲವು ಅನನುಕೂಲತೆಗಳನ್ನು ಹೊಂದಿದೆ. ಸಾಮಾಜಿಕ ಮಾಧ್ಯಮಗಳು ಗೀಳು ಆಗಿ ಪರಿಣಮಿಸುವ ಜೊತೆಗೆ ಸುದೀರ್ಘ ಅವಧಿಗೆ ಅವುಗಳ ಬಳಕೆಯು ಖನ್ನತೆಯನ್ನೂ ಉಂಟು ಮಾಡುತ್ತದೆ ಎನ್ನುವುದನ್ನು ಇತ್ತೀಚಿನ ಅಧ್ಯಯವವೊಂದು ಬೆಳಕಿಗೆ ತಂದಿದೆ. ಆರು ತಿಂಗಳಿಗೂ ಹೆಚ್ಚಿನ ಅವಧಿಗೆ ನಿರತಂರ ಸಾಮಾಜಿಕ ಮಾಧ್ಯಮಗಳಲ್ಲಿ ಇರುವ ವ್ಯಕ್ತಿ ಖಿನ್ನತೆಗೆ ಗುರಿಯಾಗುವ ಅಪಾಯವು ಹೆಚ್ಚು.
ವಿರಾಮವಿದ್ದಾಗ ನೀವು ಏನು ಮಾಡುತ್ತೀರಿ? ಹೆಚ್ಚಿನ ಜನರು ತಮ್ಮ ಫೋನ್‌ಗಳನ್ನು ಹೊರತೆಗೆದು ಸಾಮಾಜಿಕ ಮಾಧ್ಯಮ ಅಪಡೇಟ್‌ಗಳಿಗಾಗಿ ಸ್ಕ್ರೋಲ್ ಮಾಡತೊಡಗುತ್ತಾರೆ. ಕೆಲವು ಸಮಯ ಸಾಮಾಜಿಕ ಮಾಧ್ಯಮಗಳ ಬಳಕೆ ಕೆಟ್ಟದ್ದೇನಲ್ಲ,ಅದು ನಿಜಕ್ಕೂ ಒಳ್ಳೆಯದೇ. ಆದರೆ ಕೆಲಸದ ಸಮಯದಲ್ಲಿಯೂ ಸಾಮಾಜಿಕ ಮಾಧ್ಯಮಗಳನ್ನು ಜಾಲಾಡದೆ ಇರಲು ಸಾಧ್ಯವಿಲ್ಲ ಎನ್ನುವವರ ಗುಂಪಿಗೆ ನೀವು ಸೇರಿದ್ದರೆ ಈ ಅಭ್ಯಾಸವನ್ನು ಬದಲಿಸಿಕೊಳ್ಳಲು ಇದು ಸಕಾಲವಾಗಿದೆ. ಸಾಮಾಜಿಕ ಮಾಧ್ಯಮದ ಗೀಳು ಕಾಲಕ್ರಮೇಣ ಮಾನಸಿಕ ಸ್ವಾಸ್ಥಕ್ಕೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಅಧ್ಯಯನವು ಇದನ್ನು ಸಾಬೀತುಗೊಳಿಸಿದೆ.
ಮೋಜಿಗಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸಬೇಕೇ ಹೊರತು ಅದೇ ಒಂದು ಚಟವಾಗಬಾರದು,ಹಾಗೇನಾದರೂ ಆದರೆ ಅದು ನಿಮಗೆ ಅಪಾಯಕಾರಿಯಾಗಬಲ್ಲದು. ಅಮೆರಿಕನ್ ಜರ್ನಲ್ ಆಫ್ ಪ್ರಿವೆಂಟಿವ್ ಮೆಡಿಸಿನ್ ಸಾಮಾಜಿಕ ಮಾಧ್ಯಮಗಳ ಬಳಕೆ ಮತ್ತು ಖಿನ್ನತೆಯ ನಡುವಿನ ನಂಟುಗಳ ಕುರಿತು ಅಧ್ಯಯನ ವರದಿಯೊಂದನ್ನು ಪ್ರಕಟಿಸಿದೆ.
ಅಮೆರಿಕದ ಯುನಿವರ್ಸಿಟಿ ಆಫ್ ಅರ್ಕಾನ್ಸಾಸ್‌ನ ಜನಾರೋಗ್ಯ ಬೋಧಕರಾಗಿರುವ ಡಾ.ಬ್ರಿಯಾನ್ ಪ್ರಿಮ್ಯಾಕ್ ಅವರ ನೇತೃತ್ವದ ತಂಡವು ಈ ಅಧ್ಯಯನವನ್ನು ಕೈಗೊಂಡಿತ್ತು. ದಿನವೊಂದಕ್ಕೆ 300 ನಿಮಿಷಗಳಿಗೂ ಅಧಿಕ ಸಮಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕಳೆಯುವ ವಯಸ್ಕ ವ್ಯಕ್ತಿಗಳು ಇತರರಿಗೆ ಹೋಲಿಸಿದರೆ ಆರು ತಿಂಗಳಲ್ಲಿ ಖಿನ್ನತೆಗೆ ಗುರಿಯಾಗುವ ಸಾಧ್ಯತೆ ಮೂರು ಪಟ್ಟು ಹೆಚ್ಚಿರುತ್ತದೆ ಎಂದಿರುವ ಡಾ.ಪ್ರಿಮ್ಯಾಕ್,ಸಾಮಾಜಿಕ ಮಾಧ್ಯಮಗಳನ್ನು ದಿನಕ್ಕೆ 120 ನಿಮಿಷಗಳಿಗೂ ಹೆಚ್ಚು ಕಾಲ ಬಳಸಬಾರದು ಎಂದು ವರದಿಯಲ್ಲಿ ಹೇಳಿದ್ದಾರೆ.
ಖಿನ್ನತೆ ಮತ್ತು ಸಾಮಾಜಿಕ ಮಾಧ್ಯಮ ಗೀಳು ಜೊತೆ ಜೊತೆಯಾಗಿ ಸಾಗುತ್ತವೆ ಎನ್ನುವುದು ಇತರ ಅಧ್ಯಯನಗಳಿಂದ ನಮಗೆ ತಿಳಿದಿತ್ತು. ಆದರೆ ಇವೆರಡರ ಪೈಕಿ ಯಾವುದು ಮೊದಲು ಉಂಟಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಕಷ್ಟವಾಗಿತ್ತು. ನೂತನ ಅಧ್ಯಯನವು ಇಂತಹ ಪ್ರಶ್ನೆಗಳ ಮೇಲೆ ಬೆಳಕು ಚೆಲ್ಲಿದೆ. ಆರಂಭದಲ್ಲಿ ಅತ್ಯಧಿಕ ಸಾಮಾಜಿಕ ಮಾಧ್ಯಮಗಳ ಬಳಕೆಯು ಖಿನ್ನತೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ,ಆದರೆ ಆರಂಭಿಕ ಖಿನ್ನತೆಯು ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ. ಸಾಮಾಜಿಕ ಮಾಧ್ಯಮಗಳು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕವನ್ನು ಕಡಿಮೆಗೊಳಿಸುತ್ತವೆ ಮತ್ತು ಯಾವುದೇ ಒಳ್ಳೆಯದನ್ನು ಮಾಡುವುದಿಲ್ಲ. ಯುವಜನರು ಸಾಮಾಜಿಕ ಮಾಧ್ಯಮಗಳಲ್ಲಿ ಗಂಟೆಗಳನ್ನು ಕಳೆಯುವ ಬದಲು ಏನಾದರೂ ಉತ್ಪಾದಕ ಕೆಲಸಕ್ಕಾಗಿ ತಮ್ಮ ಸಮಯವನ್ನು ಬಳಸಬೇಕು. ಇದು ಅವರ ಮಾನಸಿಕ ಸ್ವಾಸ್ಥವನ್ನು ಕಾಯ್ದುಕೊಳ್ಳಲು ನೆರವಾಗುವ ಜೊತೆಗೆ ಖಿನ್ನತೆಯ ಸುಳಿಗೆ ಸಿಲುಕುವುದನ್ನು ತಪ್ಪಿಸುತ್ತದೆ ಎಂದು ಅಧ್ಯಯನ ವರದಿಯು ಹೇಳಿದೆ.