ಜನರಿಗೆ ಒಳಿತು ಮಾಡಲು ಕಮಲ್ ಹಾಸನ್ ರಿಂದ ಸಾಧ್ಯವಿಲ್ಲ: ತಮಿಳುನಾಡು ಸಿಎಂ
ಚೆನ್ನೈ,ಡಿ.17: “ಜನರಿಗಾಗಿ ಉತ್ತಮ ಕಾರ್ಯಗಳನ್ನು ಮಾಡಲು ಕಮಲ್ ಹಾಸನ್ ರಿಂದ ಸಾಧ್ಯವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಇ.ಕೆ ಪಳನಿಸ್ವಾಮಿ ಹೇಳಿಕೆ ನೀಡಿದ್ದಾರೆ. ತಮಿಳುನಾಡು ಸರಕಾರದ ಕುರಿತಾದಂತೆ ಕಮಲ್ ಹಾಸನ್ ಮಾಡಿದ್ದ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆಂದು timesofindia.com ವರದಿ ಮಾಡಿದೆ.
ಮಕ್ಕಳ್ ನೀದಿ ಮಯ್ಯಂ ಪಕ್ಷದ ಮುಖಂಡ ಕಮಲ್ ಹಾಸನ್ “ದಾಖಲೆಯಿಲ್ಲದ ಹಣವನ್ನು ಆರ್ಟಿಓ ಹಾಗೂ ಡಿವಿಎಸಿ ಕಚೇರಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳೆಲ್ಲಾ ತಮಿಳುನಾಡು ಸರಕಾರದ ಭ್ರಷ್ಟಾಚಾರದ ಹೆಜ್ಜೆ ಗುರುತನ್ನು ಅನುಸರಿಸುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯೆಯೆಂಬಂತೆ ತ್ರಿಚಿ ಸಮೀಪದ ಅರಿಯಲೂರಿನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಪಳನಿಸ್ವಾಮಿ ಮಾತನಾಡಿದರು.
"ಡಿವಿಎಸಿ (ಭ್ರಷ್ಟಾಚಾರ ನಿಗ್ರಹ ದಳ)ಯು ರಾಜ್ಯ ಸರಕಾರದ ಅಡಿಯಲ್ಲೇ ಬರುತ್ತದೆ. ಅಲ್ಲಿ ಯಾವುದೇ ಅವ್ಯವಹಾರಗಳು ನಡೆಯಬಾರದು ಎಂಬ ನಿಟ್ಟಿನಲ್ಲಿ ದಾಳಿ ಮಾಡಲಾಗಿತ್ತು. ನೀವು (ಕಮಲ್ ಹಾಸನ್) ನಿಮ್ಮ 70ನೇ ವಯಸ್ಸಿನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದೀರಿ.ಇದರಿಂದ ಸಮಾಜಕ್ಕೆ ಏನು ಸಂದೇಶ ನೀಡುತ್ತಿದ್ದೀರಿ? ನಿಮ್ಮ ಕಾರ್ಯಕ್ರಮವನ್ನು ನೋಡಿದರೆ ಮಕ್ಕಳು ಕೂಡಾ ತಪ್ಪು ದಾರಿ ಹಿಡಿಯುತ್ತಾರೆ. ನಿಮ್ಮಿಂದ ಸಮಾಜಕ್ಕೆ ಏನೂ ಒಳ್ಳೆಯ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.