ಉಡುಪಿ ಗ್ರಾಪಂ ಚುನಾವಣೆ : ಸಂತೆ, ಜಾತ್ರೆ ನಿಷೇಧ
ಉಡುಪಿ, ಡಿ.18: ಗ್ರಾಪಂನ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಡಿ.22 ಮತ್ತು 27ರಂದು ಚುನಾವಣೆ ನಡೆಯಲಿದ್ದು, ಮತದಾನದ ಸಂದಭರ್ ದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮತ್ತು ಸಾರ್ವಜನಿಕರು ಮತ ಹಾಕಲು ಅನುಕೂಲವಾಗುವಂತೆ ಜಿಲ್ಲೆಯ ಈ ಕೆಳಕಂಡ ತಾಲೂಕಿನ ಚುನಾವಣೆ ನಡೆಯಲಿರುವ ಗ್ರಾಪಂನ ಕ್ಷೇತ್ರ ವ್ಯಾಪ್ತಿಯ ಪ್ರದೇಶಗಳಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಅಡಿಯಲ್ಲಿ ಚುನಾವಣೆ ನಡೆಯುವ ದಿನಗಳಂದು ಸಂತೆ ಮತ್ತು ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.
ಡಿ.22ರ ಮೊದಲ ಹಂತದ ಚುನಾವಣೆ ಸಂದರ್ಭದಲ್ಲಿ ಬೈಂದೂರು ತಾಲೂಕು ಉಪ್ಪುಂದ ಗ್ರಾಪಂ ವ್ಯಾಪ್ತಿಯ ಉಪ್ಪುಂದ ಗ್ರಾಮದ ವಾರದ ಸಂತೆ, ಬ್ರಹ್ಮಾವರ ತಾಲೂಕು ನಾಲ್ಕೂರು ಗ್ರಾಪಂ ವ್ಯಾಪ್ತಿಯ ಮುದ್ದೂರಿನ ಸಂತೆ, ಉಪ್ಪೂರು ಗ್ರಾಪಂನ ಕೊಳಲಗಿರಿ ಪ್ರದೇಶದಲ್ಲಿ ನಡೆಯುವ ಸಂತೆ ಹಾಗೂ ಹೆಬ್ರಿ ತಾಲೂಕು ಕುಚ್ಚೂರು ಗ್ರಾಪಂನ ಬೇಳಂಜೆ ಗ್ರಾಮದಲ್ಲಿ ನಡೆಯುವ ಮಾರಿ ಜಾತ್ರೆಯನ್ನು ನಿಷೇಧಿಸಲಾಗಿದೆ.
ಡಿ.27ರ ಎರಡನೇ ಹಂತದ ಚುನಾವಣೆ ಸಂದರ್ದಲ್ಲಿ ಕಾರ್ಕಳ ತಾಲೂಕು ಇರ್ವತ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವ ಗಂಗಾಧರೇಶ್ವರ ದೇವಸ್ಥಾನದ ಜಾತ್ರೆ, ನೀರೆ ಗ್ರಾಪಂನ ಕಣಜಾರು ಗ್ರಾಮದ ಶ್ರೀಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಜಾತ್ರೆ ಹಾಗೂ ಕಾಪು ತಾಲೂಕು ಇನ್ನಂಜೆ ಗ್ರಾಪಂನ ಪಾಂಗಾಳ ಗ್ರಾಮದ ಆರ್ಯಾಡಿ ಶ್ರೀಜನಾರ್ದನ ದೇವಸ್ಥಾನದಲ್ಲಿ ನಡೆಯುವ ಜಾತ್ರೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.