varthabharthi


ಈ ಹೊತ್ತಿನ ಹೊತ್ತಿಗೆ

ಮಾಸ್ತಿ ಬದುಕು-ಬರಹಗಳ ಮರು ಓದು

ವಾರ್ತಾ ಭಾರತಿ : 19 Dec, 2020
ಕಾರುಣ್ಯಾ

ಮಾಸ್ತಿ, ಪುತಿನರಂತಹ ಹಿರಿಯರನ್ನು ಮರು ಓದುವ ಅಗತ್ಯವಿದೆ. ಹೊಸ ತಲೆಮಾರು, ವರ್ತಮಾನದ ಜಂಜಡಗಳಿಗೆ ಮುಖಾಮುಖಿಯಾಗಿ ತೀವ್ರವಾಗಿ ಬರೆಯುತ್ತಿರುವ ಹೊತ್ತಿನಲ್ಲಿ, ಅವರ ಆಲೋಚನೆಗಳನ್ನು ತಿದ್ದಿ ತೀಡುವುದಕ್ಕೆ, ಅವರ ಬರಹಗಳು ಇನ್ನಷ್ಟು ಮಾಗುವುದಕ್ಕೆ ಹಳೆಯ ಲೇಖಕರ ಓದಿನ ಅವಶ್ಯವಿದೆ. ಜೀವಪರವಾಗಿ ಬರೆಯುತ್ತಿದ್ದ ಹಿಂದಿನ ಹಿರಿಯ ಲೇಖಕರನ್ನು ಅವರಿಗೆ ಪರಿಚಯಿಸುವ ಪ್ರಯತ್ನ ಹೆಚ್ಚು ಹೆಚ್ಚು ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಎಸ್. ಆರ್. ವಿಜಯಶಂಕರ ಅವರು ಬರೆದಿರುವ ‘ಮಾಸ್ತಿ ವೆಂಕಟೇಶ ಅಯ್ಯಂಗಾರ್ ಬದುಕು-ಬರಹ’ ಕೃತಿ ಒಂದು ಉತ್ತಮ ಪ್ರಯತ್ನವಾಗಿದೆ.

ಸಾಹಿತ್ಯ ಅಕಾಡಮಿ ಈ ಕೃತಿಯನ್ನು ಹೊರತಂದಿದೆ. ಕೃತಿಯಲ್ಲಿ ಒಟ್ಟು ಆರು ಅಧ್ಯಾಯಗಳಿವೆ. ಅಧ್ಯಾಯ ಒಂದರಲ್ಲಿ ಮಾಸ್ತಿಯವರ ಬದುಕು ಬರಹಗಳನ್ನು ಒಟ್ಟಂದದಲ್ಲಿ ಪರಿಚಯಿಸಲಾಗಿದೆ. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮಾಸ್ತಿಯವರು, ಇಂಗ್ಲಿಷ್ ಪುಸ್ತಕಗಳನ್ನೂ ಬರೆದವರು. ಮೈಸೂರು ಸಿವಿಲ್ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದು ಅಸಿಸ್ಟೆಂಟ್ ಕಮಿಷನರ್ ಹುದ್ದೆಗೇರಿ ಅವರು ಸಾಧಿಸಿದ ಸಾಧನೆಗಳು ಅವರ ಆತ್ಮಕತೆಯಾಗಿರುವ ಭಾವ ಸಂಪುಟಗಳಲ್ಲಿವೆ. ಅವರ ಹಲವು ಕತೆಗಳಲ್ಲಿ ವೃತ್ತಿ ಮತ್ತು ಪ್ರವೃತ್ತಿಗಳ ನಡುವಿನ ಸಮನ್ವಯವನ್ನು ಕಾಣಬಹುದು.

ವೃತ್ತಿಯ ಸಂದರ್ಭದಲ್ಲಿ ಎದುರಾದ ಹಲವು ಸವಾಲುಗಳು ಅಂತಿಮವಾಗಿ ಕತೆಗಳು, ನೀಳ್ಗತೆಗಳ ರೂಪಪಡೆದದ್ದಿದೆ. ಮಾಸ್ತಿಯವರ ಬೈಚೇಗೌಡರ ಕತೆ ಹುಟ್ಟಿರುವುದು ಇಂತಹದೇ ಒಂದು ಸಂದರ್ಭದಲ್ಲಿ ಎನ್ನುವುದನ್ನು ಸ್ವತಃ ಮಾಸ್ತಿಯೇ ಹೇಳಿಕೊಳ್ಳುತ್ತಾರೆ. ಮಾಸ್ತಿಯವರು ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ಬರೆದವರು. ಆದರೆ ಅವರ ಅತ್ಯಂತ ಶ್ರೇಷ್ಠ ಅಭಿವ್ಯಕ್ತಿ ಹಾಗೂ ಅತ್ಯುತ್ತಮ ರೂಪಕಾತ್ಮಕ ಚಿಂತನೆ ಹರಳು ಕಟ್ಟಿರುವುದು ಸಣ್ಣಕತೆಗಳಲ್ಲಿ ಎಂದು ಲೇಖಕ ವಿಜಯಶಂಕರ್ ಅಭಿಪ್ರಾಯ ಪಡುತ್ತಾರೆ. ಮಾಸ್ತಿಯವರ ಸಾಹಿತ್ಯದ ಮರು ಓದು ನಿರ್ಮಲ ಜೀವನ, ನಿರುದ್ವಿಗ್ನ ನಂಬುಗೆ, ನೈತಿಕ ನೈರ್ಮಲ್ಯ, ಕ್ರೌರ್ಯದ ಅರಿವಿದ್ದೂ ಹುಟ್ಟು ವ ಸಾತ್ವಿಕ ನಂಬುಗೆ, ನಿಧಾನ ಶ್ರುತಿಯಲ್ಲಿ ಅರಳುವ ಜೀವನದ ಸಜ್ಜನ ವೌಲ್ಯಗಳನ್ನು ಎತ್ತಿ ತೋರಿಸುತ್ತದೆ. ಲಾಭ, ಸ್ವಾರ್ಥ, ಪ್ರಯೋಜನವಾದಿ ಚಿಂತನೆಗಳ ವಾತಾವರಣದಲ್ಲಿ ಪ್ರಾಮಾಣಿಕ, ನಿರ್ಮಲ ಬದುಕಿನ ಜೀವಪರ ವೌಲ್ಯಗಳನ್ನು ಪುನಃ ನೆನಪಿಸುತ್ತದೆ. ನಮ್ಮ ಕಾಲಕ್ಕೂ ಸಲ್ಲುವ, ಇಂದಿಗೂ ಬೇಕಾದ ಸಾಹಿತ್ಯವಾಗಿ ಅದರ ಸಮಕಾಲೀನ ಮಹತ್ವವನ್ನು ಅವರ ಬರಹಗಳ ಮರು ಓದು ತೋರಿಸಿಕೊಡುತ್ತದೆ ಎನ್ನುವುದು ಲೇಖಕರ ನಂಬುಗೆಯಾಗಿದೆ.

 ಎರಡನೇ ಅಧ್ಯಾಯದಲ್ಲಿ ಮಾಸ್ತಿಯವರ ಸಣ್ಣಕತೆಗಳಿಗೆ ಬೆಳಕು ಚೆಲ್ಲುತ್ತಾರೆ. ರಂಗನ ಮದುವೆ ಮಾಸ್ತಿಯವರ ಮೊದಲ ಕತೆ. ಸುಮಾರು ನೂರು ಕತೆಗಳನ್ನು ಮಾಸ್ತಿಯವರು ಬರೆದಿದ್ದಾರೆ. ‘‘... ಸಣ್ಣ ಕತೆಗಳನ್ನು ಒಂದು ಸಾಹಿತ್ಯ ಪ್ರಕಾರದಂತೆ ಕಲ್ಪಿಸಿ ಅದರಲ್ಲಿ ಸತತವಾಗಿ ಕೃಷಿ ಮಾಡಿ ಅವುಗಳಿಗೆ ಸಣ್ಣ ಕತೆಗಳು ಎಂದು ಹೆಸರಿಸಿ ಕನ್ನಡದಲ್ಲೊಂದು ನೂತನ ಸಾಹಿತ್ಯ ಪ್ರಕಾರವನ್ನು ಸ್ಥಾಪಿಸಲು ತಮ್ಮ ಶ್ರದ್ಧೆಯನ್ನೂ ಸಾಹಿತ್ಯ ಚೇತನವನ್ನೂ ಧಾರೆಯೆರೆದು ಆ ಪ್ರಕಾರವನ್ನು ಕನ್ನಡದಲ್ಲಿ ಸ್ಥಾಪಿಸಿದ ಮೊದಲಿಗರು ಮಾಸ್ತಿಯವರು ....’’ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ.

ಹಲವು ಕತೆಗಳ ಕುರಿತಂತೆ ಸ್ವಯಂ ವಿಶ್ಲೇಷಿಸಿರುವುದಷ್ಟೇ ಅಲ್ಲದೆ, ಹಲವು ವಿಮರ್ಶಕರ ನಿಲುವುಗಳನ್ನು ಲೇಖಕರು ಸಂಗ್ರಹಿಸಿ ನೀಡಿದ್ದಾರೆ. ಮೂರನೇ ಅಧ್ಯಾಯದಲ್ಲಿ ಮಾಸ್ತಿಯವರ ಮಹತ್ವದ ಕಾದಂಬರಿಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಾರೆ. ಚೆನ್ನ ಬಸವನಾಯಕ, ಚಿಕವೀರ ರಾಜೇಂದ್ರ ಐತಿಹಾಸಿಕ ಕಾದಂಬರಿಗಳ ಕುರಿತಂತೆ ಸುದೀರ್ಘ ವಿವರಣೆಗಳು ಈ ಕೃತಿಯಲ್ಲಿವೆ. ಹಾಗೆಯೇ ಸುಬ್ಬಣ್ಣ, ಶೇಷಮ್ಮ ಸಾಮಾಜಿಕ ನೀಳ್ಗತೆ ಅಥವಾ ಕಿರು ಕಾದಂಬರಿಗಳ ಕುರಿತಂತೆಯೂ ವಿವರಗಳಿವೆ. ಉಳಿದಂತೆ ನಾಟಕಗಳು, ಕಾವ್ಯ, ಕಥನ ಕಾವ್ಯ, ಮಹಾಕಾವ್ಯಗಳ ಬಗ್ಗೆಯೂ ವಿವರವಾದ ಅಧ್ಯಾಯಗಳಿವೆ. ಪತ್ರಿಕೋದ್ಯಮಕ್ಕೆ ಅವರ ಕೊಡುಗೆಗಳನ್ನೂ ಈ ಕೃತಿಯಲ್ಲಿ ನೆನಪಿಸಲಾಗಿದೆ.

ಎಸ್. ಆರ್. ವಿಜಯಶಂಕರ್ ಅವರು ಮಾಸ್ತಿಯವರ ತಾತ್ವಿಕ ಚಿಂತನೆಗಳನ್ನು ವಿಶಿಷ್ಟಾದ್ವೈತಕ್ಕೆ ಜೋಡಿಸುತ್ತಾರೆ. ಇದೇ ಸಂದರ್ಭದಲ್ಲಿ ಮಾಸ್ತಿಯವರ ಬರದೊಳಗಿರುವ ಅತಿ ಸಾಂಪ್ರದಾಯಿಕತೆಯ ಕುರಿತಂತೆ ಕೃತಿ ವೌನವಾಗುತ್ತದೆ. ಮಾಸ್ತಿಯವರ ಸಾಹಿತ್ಯ ಚಿಂತನೆಗಳ ಪರಿಚಯವಷ್ಟೇ ಕೃತಿಯ ಉದ್ದೇಶವಾಗಿರುವುದರಿಂದ ಅಂತಹ ತೀವ್ರ ವಿಮರ್ಶೆಯ ಅಗತ್ಯ ಇಲ್ಲಿ ಬೀಳುವುದಿಲ್ಲ. 225 ಪುಟಗಳ ಈ ಕೃತಿಯ ಮುಖಬೆಲೆ 200 ರೂಪಾಯಿ. ಆಸಕ್ತರು 080-22245152 ದೂರವಾಣಿಯನ್ನು ಸಂಪರ್ಕಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)