ಬಾಯಿಯೊಳಗೆ ಕಂಡು ಬರುವ ಬಿಳಿ ಹುಣ್ಣುಗಳಿಂದ ಪಾರಾಗುವುದು ಹೇಗೆ ?
ಕೆಲವೊಮ್ಮೆ ಕೆನ್ನೆಗಳ ಒಳಭಾಗದಲ್ಲಿ ಮತ್ತು ನಾಲಿಗೆಯ ಮೇಲೆ ಬಿಳಿಯ ಅಥವಾ ಹಳದಿ ಬಣ್ಣದ ಹುಣ್ಣುಗಳಂತಹ ರಚನೆಗಳು ಉಂಟಾಗುವುದನ್ನು ಗಮನಿಸಿದ್ದೀರಾ? ಇದನ್ನು ‘ಓರಲ್ ಥ್ರಷ್’ ಎಂದು ಕರೆಯಲಾಗುತ್ತದೆ. ಬಾಯಿಯೊಳಗೆ ಯೀಸ್ಟ್ ಸೋಂಕು ಉಂಟಾಗುವುದು ಇದಕ್ಕೆ ಕಾರಣವಾಗುತ್ತದೆ. ಆರಂಭದ ಹಂತಗಳಲ್ಲಿ ಲಕ್ಷಣಗಳು ಸ್ಪಷ್ಟವಾಗಿರುವುದಿಲ್ಲ,ಆದರೆ ಸೋಂಕು ಹೆಚ್ಚಾದಂತೆ ಲಕ್ಷಣಗಳು ತೀವ್ರಗೊಳ್ಳುತ್ತವೆ. ಈ ಹುಣ್ಣುಗಳನ್ನು ವೈದ್ಯಕೀಯವಾಗಿ ಓರಲ್ ಕ್ಯಾಂಡಿಡಿಯಾಸಿಸ್ ಅಥವಾ ಒರೊಫ್ಯಾರಿಂಜಿಯಲ್ ಕ್ಯಾಂಡಿಡಿಯಾಸಿಸ್ ಎಂದು ಕರೆಯಲಾಗುತ್ತದೆ. ಓರಲ್ ಥ್ರಷ್ ಶಿಶುಗಳಲ್ಲಿ ಹೆಚ್ಚು ಸಾಮಾನ್ಯವಾಗಿ ಕಂಡು ಬರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಸೂಕ್ತ ಕಾಳಜಿ ಮತ್ತು ಚಿಕಿತ್ಸೆಯಿಂದಾಗಿ ಇವು ನಿವಾರಣೆಯಾಗುತ್ತವೆ.
ಓರಲ್ ಥ್ರಷ್ ಕ್ಯಾಂಡಿಡಾ ಅಲ್ಬಿಕನ್ಸ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ನಮ್ಮ ರೋಗ ನಿರೋಧಕ ವ್ಯವಸ್ಥೆಯು ಸೂಕ್ತವಾಗಿ ಕಾರ್ಯ ನಿರ್ವಹಿಸದಿದ್ದರೆ ಇದು ಹಾನಿಕಾರಕವಾಗಬಲ್ಲದು. ಒಳ್ಳೆಯ ಬ್ಯಾಕ್ಟೀರಿಯಾಗಳು ಶಿಲೀಂಧ್ರ ಸೋಂಕು ಶರೀರಕ್ಕೆ ಹಾನಿಯನ್ನುಂಟು ಮಾಡದಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುತ್ತವೆ. ಮಧುಮೇಹಿಗಳು ಈ ಸೋಂಕಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಈ ಹುಣ್ಣುಗಳಿಂದ ಪಾರಾಗಲು ಕೆಲವು ಪರಿಣಾಮಕಾರಿ ಮನೆಮದ್ದುಗಳಿವೆ. ಇಂತಹ ಕೆಲವು ಮನೆಮದ್ದುಗಳ ಕುರಿತು ಮಾಹಿತಿಯಿಲ್ಲಿದೆ.
* ಅಡಿಗೆ ಸೋಡಾ
ಅಡಿಗೆ ಸೋಡಾ ಬಳಕೆಯು ಹಲ್ಲುಗಳನ್ನು ಸ್ವಚ್ಛವಾಗಿರಿಸಲು ಉತ್ತಮ ವಿಧಾನವಾಗಿದ್ದು,ಅದು ಯೀಸ್ಟ್ ಸೋಂಕನ್ನು ತಡೆಯಲು ಮತ್ತು ಅದಕ್ಕೆ ಚಿಕಿತ್ಸೆ ನೀಡಲೂ ನೆರವಾಗುತ್ತದೆ. ಅಡಿಗೆ ಸೋಡಾವನ್ನು ಒಳಗೊಂಡಿರುವ ಟೂಥ್‌ಪೇಸ್ಟ್ ಅನ್ನೂ ಬಳಸಬಹುದಾಗಿದೆ. ಪೀಡಿತ ಭಾಗಕ್ಕೆ ಅಡಿಗೆ ಸೋಡಾವನ್ನು ಹಚ್ಚಿ 3-4 ನಿಮಿಷಗಳ ನಂತರ ಮೃದುವಾಗಿ ಬ್ರಷ್ ಮಾಡಬಹುದು ಅಥವಾ ನೀರಿನಿಂದ ಮುಕ್ಕಳಿಸಬಹುದು. ನಿಮ್ಮ ಟೂಥ್‌ಪೇಸ್ಟ್‌ಗೆ ಚಿಟಿಕೆ ಅಡಿಗೆ ಸೋಡಾವನ್ನು ಬೆರೆಸಿಕೊಂಡೂ ಹಲ್ಲುಗಳನ್ನುಜ್ಜಬಹುದು. ನೀರಿಗೆ ಅಡಿಗೆ ಸೋಡಾವನ್ನು ಬೆರೆಸಿಕೊಂಡು ದಿನಕ್ಕೆರಡು ಬಾರಿ ಬಾಯಿ ಮುಕ್ಕಳಿಸುವುದು ಸಹ ನಿರೀಕ್ಷಿತ ಪರಿಣಾಮವನ್ನು ನೀಡುತ್ತದೆ.
* ಅರಿಶಿನ
ಅರಿಷಿಣದಲ್ಲಿರುವ ಕರ್ಕುಮಿನ್ ಉರಿಯೂತ ನಿರೋಧಕ ಮತ್ತು ಶಿಲೀಂಧ್ರ ನಿರೋಧಕ ಗುಣಗಳನ್ನು ಹೊಂದಿದ್ದು ಕ್ಯಾಂಡಿಡಾ ಅಲ್ಬಿಕನ್ಸ್ ವಿರುದ್ಧ ಹೋರಾಡುವ ಮೂಲಕ ಓರಲ್ ಥ್ರಷ್ ನಿವಾರಣೆಯಲ್ಲಿ ನೆರವಾಗುತ್ತದೆ. ಪೀಡಿತ ಭಾಗದಲ್ಲಿ ಅರಿಷಿಣ ಹುಡಿಯನ್ನು ಲೇಪಿಸಬಹುದು ಅಥವಾ ಅರಿಷಿಣ ಹುಡಿ ಬೆರೆಸಿದ ನೀರಿನಿಂದ ಬಾಯಿಯನ್ನು ಮುಕ್ಕಳಿಸಬಹುದು. ಇದನ್ನು ದಿನಕ್ಕೆರಡು ಬಾರಿಮಾಡುವುದರಿಂದ ಶಿಲೀಂಧ್ರ ಸೋಂಕು ವಾಸಿಯಾಗುವ ಜೊತೆಗೆ ಭವಿಷ್ಯದಲ್ಲಿ ಇಂತಹ ಸೋಂಕುಗಳುಂಟಾಗುವುದನ್ನೂ ತಡೆಯುತ್ತದೆ.
* ಮೊಸರು
ಓರಲ್ ಥ್ರಷ್ ಉಂಟಾಗಿರುವ ಬಾಯಿಯ ಭಾಗದಲ್ಲಿ ಒಂದು ಟೀ ಚಮಚ ಮೊಸರನ್ನು ಐದು ನಿಮಿಷಗಳ ಕಾಲ ಇಟ್ಟುಕೊಂಡರೆ ಪರಿಣಾಮಕಾರಿಯಾಗಿರುತ್ತದೆ. ಮೊಸರು ಪೀಡಿತ ಭಾಗದಲ್ಲಿ ತಣ್ಣನೆಯ ಮತ್ತು ಶಮನಿಸುವ ಪರಿಣಾಮದೊಂದಿಗೆ ತ್ವರಿತವಾಗಿ ಚಿಕಿತ್ಸೆ ನೀಡುತ್ತದೆ.
* ಉಪ್ಪುನೀರು
ಉಪ್ಪಿನಲ್ಲಿರುವ ಶಿಲೀಂಧ್ರ ನಿರೋಧಕ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳು ಶಿಲೀಂದ್ರ ಅಥವಾ ಇತರ ಸೋಂಕುಗಳನ್ನು ಗುಣಪಡಿಸಲು ನೆರವಾಗುತ್ತವೆ. ಉಪ್ಪು ಓರಲ್ ಥ್ರಷ್ ಅನ್ನು ಉಂಟು ಮಾಡುವ ಶಿಲೀಂಧ್ರವನ್ನು ನಿವಾರಿಸುತ್ತದೆ. ಉಪ್ಪು ಮಿಶ್ರಿತ ನೀರಿನಿಂದ ಕೆಲವು ನಿಮಿಷಗಳ ಕಾಲ ದಿನಕ್ಕೆ ಮೂರು ಬಾರಿ ಬಾಯಿ ಮುಕ್ಕಳಿಸಿದರೆ ಕೆಲವೇ ದಿನಗಳಲ್ಲಿ ನಿರೀಕ್ಷಿತ ಪರಿಣಾಮವನ್ನು ಪಡೆಯಬಹುದು.
* ಆ್ಯಪಲ್ ಸಿಡರ್ ವಿನೆಗರ್
ಇದರಲ್ಲಿರುವ ಶಿಲೀಂಧ್ರ ನಿರೋಧಕ ಗುಣಗಳು ಓರಲ್ ಥ್ರಷ್ ವಿರುದ್ಧ ಹೋರಾಡಲು ನೆರವಾಗುತ್ತವೆ. ಪ್ರತಿದಿನ ಆ್ಯಪಲ್ ಸಿಡರ್ ವಿನೆಗರ್‌ನ ಸೇವನೆ ಹಲ್ಲುಗಳ ನೈರ್ಮಲ್ಯಕ್ಕೂ ಒಳ್ಳೆಯದು. ಇದನ್ನು ಬಳಸುವುದರಿಂದ ಇತರ ಚಿಕಿತ್ಸೆಗಳಿಗಿಂತ ಬೇಗನೆ ಓರಲ್ ಥ್ರಷ್‌ಗಳಿಂದ ಪಾರಾಗಬಹುದು. ಮೊಸರಿನ ಜೊತೆ ಬೆರಸಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಸಣ್ಣ ಹತ್ತಿಯ ತುಂಡಿನಿಂದ ಈ ಮಿಶ್ರಣವನ್ನು ಪೀಡಿತ ಭಾಗದಲ್ಲಿ ಲೇಪಿಸಿ 15-20 ನಿಮಿಷಗಳ ಬಳಿಕ ತೊಳೆದುಕೊಳ್ಳಿ ಅಥವಾ ಪ್ರತಿದಿನ ಬೆಚ್ಚಗಿನ ನೀರಿಗೆ ಈ ವಿನೆಗರ್ ಮತ್ತು ಸ್ವಲ್ಪ ಜೇನು ಸೇರಿಸಿಕೊಂಡು ಸೇವಿಸಬಹುದು.
* ಲಿಂಬೆ ರಸ
ಲಿಂಬೆ ಹಣ್ಣಿನ ರಸದಲ್ಲಿರುವ ನಂಜು ನಿರೋಧಕ ಮತ್ತು ಶಿಲೀಂಧ್ರ ನಿರೋಧಕ ಗುಣಗಳು ಓರಲ್ ಥ್ರಷ್‌ನ್ನುಂಟು ಮಾಡುವ ಶಿಲೀಂಧ್ರದ ವಿರುದ್ಧ ಹೋರಾಡಲು ನೆರವಾಗುತ್ತವೆ. ಅಲ್ಲದೆ ಅದು ಆಮ್ಲೀಯವಾಗಿರುವುದರಿಂದ ಓರಲ್ ಥ್ರಷ್‌ನ ಸೋಂಕನ್ನು ನಿವಾರಿಸುತ್ತದೆ. ಒಂದು ವಾರ ಪ್ರತಿದಿನ ಒಂದು ಗ್ಲಾಸ್ ನೀರಿಗೆ ಅರ್ಧ ಲಿಂಬೆ ಹಣ್ಣಿನ ರಸವನ್ನು ಬೆರೆಸಿಕೊಂಡು ಕುಡಿಯುತ್ತಿದ್ದರೆ ಸೋಂಕು ಕಡಿಮೆಯಾಗುತ್ತದೆ.
* ಟೀ ಟ್ರೀ ಆಯಿಲ್
ಶಿಲೀಂಧ್ರ ಮತ್ತು ಯೀಸ್ಟ್ ಸೋಂಕುಗಳ ವಿರುದ್ಧ ಹೋರಾಡಬಲ್ಲ ಬ್ಯಾಕ್ಟೀರಿಯಾ ನಿರೋಧಕ ಮತ್ತು ನಂಜು ನಿರೋಧಕ ಗುಣಗಳು ಎಸೆನ್ಶಿಯಲ್ ಆಯಿಲ್‌ಗಳಲ್ಲಿ ಒಂದಾಗಿರುವ ಟೀ ಟ್ರೀ ತೈಲದಲ್ಲಿಯೂ ಇವೆ. ಯಾವುದೇ ಎಣ್ಣೆಯನ್ನು ಲೇಪಿಸುವ ಮುನ್ನ ಬಾಯಿಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಎನ್ನುವುದು ನಿಮ್ಮ ಗಮನದಲ್ಲಿರಲಿ. ಕೆಲವು ಹನಿಗಳಷ್ಟು ಟೀ ಟ್ರೀ ತೈಲವನ್ನು ನೀರಿಗೆ ಬೆರೆಸಿಕೊಂಡು ಬಾಯಿ ಮುಕ್ಕಳಿಸಬಹದು ಅಥವ ತೆಂಗಿನೆಣ್ಣೆಗೆ ಈ ತೈಲವನ್ನು ಬೆರೆಸಿಕೊಂಡು ಪೀಡಿತ ಭಾಗಕ್ಕೆ ಹಚ್ಚಿಕೊಳ್ಳಬಹುದು. ಒಂದು ವಾರ ಪ್ರತಿದಿನ ಕನಿಷ್ಠ ಒವ್ಮೆು ಈ ಕೆಲಸ ಮಾಡಿ.
ಪೀಡಿತ ಭಾಗಕ್ಕೆ ಬೆಳ್ಳುಳ್ಳಿ ಪೇಸ್ಟ್ ಲೇಪನ ಮತ್ತು ವಿಟಮಿನ್ ಸಿ ಪೂರಕಗಳ ಸೇವನೆ ಕೂಡ ಶಿಲೀಂಧ್ರ ಸೋಂಕನ್ನು ನಿವಾರಿಸಲು ನೆರವಾಗುತ್ತವೆ.