varthabharthi


ಕಾಲಮಾನ

ಆರೆಸ್ಸೆಸ್ ಏನನ್ನು ಪ್ರತಿನಿಧಿಸುತ್ತದೆ?

ವಾರ್ತಾ ಭಾರತಿ : 26 Dec, 2020
ರಾಮಚಂದ್ರ ಗುಹಾ

ಎಪ್ಪತ್ತೆರಡು ವರ್ಷಗಳ ಬಳಿಕ ಆರೆಸ್ಸೆಸ್ ಕುರಿತಾದ ಗಾಂಧೀಜಿ ಯವರ ಅಭಿಪ್ರಾಯಗಳು ಎಷ್ಟರಮಟ್ಟಿಗೆ ಸರಿಯಾಗಿವೆ, ಪ್ರಸ್ತುತವಾಗಿವೆ? ಸಂಪೂರ್ಣವಾಗಿ ಪ್ರಸ್ತುತವಾಗಿವೆ. ಒಂದು ವ್ಯತ್ಯಾಸವೆಂದರೆ ಅವರು ಬಳಸಿದ್ದ ವಿಶೇಷಣಗಳ ಸ್ಥಾನವನ್ನು ಹಿಂದುಮುಂದು ಮಾಡಬೇಕಾಗಬಹುದು. ಈಗ ಅದು ಕೋಮುವಾದಿ ದೃಷ್ಟಿಕೋನದ ಸರ್ವಾಧಿಕಾರಿ ಸಂಘಟನೆಯ ಬದಲಾಗಿ ಸರ್ವಾಧಿಕಾರಿ ಧೋರಣೆಯ ಕೋಮುವಾದಿ ಸಂಘಟನೆ ಎನ್ನುವುದು ಹೆಚ್ಚು ಸೂಕ್ತವಾಗಬಹುದು. 1947ರಲ್ಲಿ ಅದು ಭಾರತೀಯ ಬದುಕಿನ ಅಂಚಿನಲ್ಲಿತ್ತು; ಈಗ ಅದು ಭಾರೀ ಪ್ರಭಾವಶಾಲಿಯಾಗಿದೆ. ಕೇಂದ್ರ ಸರಕಾರವನ್ನು ನಿಯಂತ್ರಿಸುತ್ತಿರುವ ಆರೆಸ್ಸೆಸ್‌ನ ಸದಸ್ಯರು ಪತ್ರಿಕೆಗಳನ್ನು ತಮ್ಮ ಅಧೀನಕ್ಕೊಳಪಡಿಸಿಕೊಂಡಿದ್ದಾರೆ. ನ್ಯಾಯಾಂಗವನ್ನು ಪಳಗಿಸಿದ್ದಾರೆ, ಇತರ ರಾಜಕೀಯ ಪಕ್ಷಗಳ ರಾಜ್ಯ ಸರಕಾರಗಳನ್ನು ಉರುಳಿಸಲು ಅಥವಾ ಅಮುಖ್ಯಗೊಳಿಸಲು ಲಂಚ ಹಾಗೂ ಬಲಪ್ರಯೋಗವನ್ನು ಬಳಸಿದ್ದಾರೆ. ಎನ್‌ಜಿಒಗಳನ್ನು ಹತ್ತಿಕ್ಕುವ ಹೊಸ ಕಾನೂನುಗಳು ಹಿಂದುತ್ವ ಸಿದ್ಧಾಂತಕ್ಕೆ ನಿಷ್ಠೆ ತೋರದ ಎಲ್ಲ ಸ್ವಯಂಸೇವಾ ಸಂಘಟನೆಗಳನ್ನು ಬಲಹೀನಗೊಳಿಸುವ ಉದ್ದೇಶದಿಂದಲೇ ರಚಿತವಾಗಿವೆ.


ಗಾಂಧೀಜಿಯವರ ಕೊನೆಯ ಕಾರ್ಯದರ್ಶಿ, ಪ್ಯಾರೇಲಾಲ್ ‘ಮಹಾತ್ಮಾ ಗಾಂಧಿ: ದಿ ಲಾಸ್ಟ್ ಫೇಸ್’ ಎಂಬ ತನ್ನ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ: ‘‘1947ರಲ್ಲಿ ಆದ ಭಾರತದ ವಿಭಜನೆ ಮತ್ತು ಅದರ ಬೆನ್ನಿಗೇ ಸಂಭವಿಸಿದ ಭಯಾನಕ ಹಿಂಸೆ ಹಿಂದೂ ಅನ್ಯಾಕ್ರಮಣಶೀಲತೆಗೆ ಫಲವತ್ತಾದ ಮಣ್ಣನ್ನು ಒದಗಿಸಿತು. ಹಿಂದೂ ಮಧ್ಯಮ ವರ್ಗ ಹಾಗೂ ಸರಕಾರಿ ಸೇವೆಗಳಲ್ಲಿ ಕೂಡ ರಾಷ್ಟ್ರೀಯ ಸ್ವಯಂಸೇವಕ ಸಂಘ ನುಸುಳಿ ಕೊಂಡದ್ದು ಈ ಅನ್ಯಾಕ್ರಮಣಶೀಲತೆ ಅತ್ಯಂತ ಎದ್ದುಕಾಣುವ ರೂಪದಲ್ಲಿ ಪ್ರಕಟವಾಯಿತು. ಆರೆಸ್ಸೆಸ್ ಹಿಂದೂ ಕಾಂಗ್ರೆಸಿಗರ ಒಂದು ವರ್ಗದ ಗುಪ್ತ ಅನುಕಂಪವನ್ನು ಕೂಡ ಪಡೆಯಲಾರಂಭಿಸಿತು?’’

ಮುಂದಕ್ಕೆ ಪ್ಯಾರೇಲಾಲ್ ಹಿಂದೂ ಆಕ್ರಮಣಶೀಲರ ಈ ಸಂಘಟನೆ ಏನನ್ನು, ಯಾವುದನ್ನು ಪ್ರತಿನಿಧಿಸುತ್ತಿತ್ತು ಮತ್ತು ಅದರ ಗುರಿಗಳು ಏನಾಗಿದ್ದವು ಎಂಬುದನ್ನು ತನ್ನ ಓದುಗರಿಗೆ ವಿವರಿಸುತ್ತಾ ಅವರು ಹೀಗೆ ಬರೆಯುತ್ತಾರೆ: ‘‘ಆರೆಸ್ಸೆಸ್ ಎಂಬುದು ಮಹಾರಾಷ್ಟ್ರದಿಂದ ನಿಯಂತ್ರಿಸಲ್ಪಡುತ್ತಿದ್ದ ಒಂದು ಕೋಮುವಾದಿ, ಪ್ಯಾರಾಮಿಲಿಟರಿ, ಫ್ಯಾಶಿಸ್ಟ್ ಸಂಘಟನೆ... ಅವರ ಘೋಷಿತ ಗುರಿ ಹಿಂದೂ ರಾಜ್‌ನ ಸ್ಥಾಪನೆ. ಅವರು ‘ಮುಸ್ಲಿಮರೇ ಭಾರತವನ್ನು ಬಿಟ್ಟು ತೊಲಗಿ’ ಎಂಬ ಘೋಷಣೆಯನ್ನು ಅಂಗೀಕರಿಸಿದ್ದರು. ಆಗ ಅವರು ಕನಿಷ್ಠಪಕ್ಷ ಢಾಳಾಗಿ ಕಾಣಿಸುವಂತೆ ಸಕ್ರಿಯರಾಗಿರಲಿಲ್ಲ; ಆದರೆ ಅವರು ಎಲ್ಲಾ ಹಿಂದೂಗಳನ್ನು ಹಾಗೂ ಸಿಖ್ಖರನ್ನು (ಪಶ್ಚಿಮ ಪಂಜಾಬ್‌ನಿಂದ) ಹೊರಗೆ ಕಳುಹಿಸುವ ಸಮಯಕ್ಕಾಗಿ ಕಾಯುತ್ತಿದ್ದರಷ್ಟೇ ಎಂದು ರಹಸ್ಯವಾಗಿ ಸುಳಿವು ನೀಡಲಾಗಿತ್ತು. ಆಮೇಲೆ ಪಾಕಿಸ್ತಾನ ಮಾಡಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ಮುಸ್ಲಿಮರ ಮೇಲೆ ಅವರು ಪೂರ್ಣಪ್ರಮಾಣದ ಪ್ರತೀಕಾರ ತೀರಿಸಿಕೊಳ್ಳುವವರಿದ್ದರು.’’

ಹೊಸದಾಗಿ ಸ್ವತಂತ್ರಗೊಂಡ ಭಾರತ ದೇಶದ ವಿಭಜನೆಯ ಗಾಯಗಳು ಹಾಗೂ ನಿರಾಶ್ರಿತರ ಸಮಸ್ಯೆಗಳನ್ನು ನಿಭಾಯಿಸುತ್ತಿರುವಾಗಲೇ ಅದು ದೇಶದ ಒಳಗಿನಿಂದಲೇ ಆಂತರಿಕ ಶತ್ರುವಿನಿಂದ ಗಂಭೀರ ಬೆದರಿಕೆಯನ್ನು ಎದುರಿಸಬೇಕಾಯಿತು. ಹಿಂದೂ ಅನ್ಯಾಕ್ರಮಣಶೀಲತೆಯ (ಶೋವನಿಸಂ) ಏರುತ್ತಿದ್ದ ಅಲೆಯೇ ಈ ಶತ್ರು. 1947ರ ದ್ವಿತೀಯಾರ್ಧದಲ್ಲಿ ಆರೆಸ್ಸೆಸ್ ಹಿಂದೂ ಮಧ್ಯಮವರ್ಗದ ಒಲವನ್ನು ಗಳಿಸಲಾರಂಭಿಸಿತ್ತು. ಇದರಲ್ಲಿ ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳೂ ಇದ್ದರು. ಅದೇನಿದ್ದರೂ, ಇಬ್ಬರು ಪ್ರಸಿದ್ಧ ಹಿಂದೂಗಳು ಮತೀಯವಾದ ಹಾಗೂ ಅನ್ಯಾಕ್ರಮಣಶೀಲತೆಯ ವಿರುದ್ಧ ದೃಢವಾಗಿ ನಿಂತರು. ಅವರು ಭಾರತದಲ್ಲೇ ಉಳಿಯಲು ನಿರ್ಧರಿಸಿದ್ದ ಮುಸ್ಲಿಮರ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ತಮ್ಮ ಪ್ರಾಣಗಳನ್ನೇ ಪಣವಾಗಿಡಲು ಸಿದ್ಧರಿದ್ದರು.

ಈ ಅಸಾಮಾನ್ಯ ಹಿಂದೂಗಳೇ ಪ್ರಧಾನಿ ಜವಾಹರಲಾಲ್ ನೆಹರೂ ಹಾಗೂ ಅವರ ಮಾರ್ಗದರ್ಶಿ ಮಹಾತ್ಮಾಗಾಂಧಿ. ಪ್ಯಾರೇಲಾಲ್ ಬರೆದಿರುವಂತೆ: ‘‘ಅಂತಹ ಒಂದು ದುರಂತಕ್ಕೆ ತಾನೊಬ್ಬ ಜೀವಂತ ಸಾಕ್ಷಿಯಾಗದಿರಲು ಗಾಂಧೀಜಿ ದೃಢ ನಿರ್ಧಾರ ತಳೆದಿದ್ದರು. ಇಂಡಿಯನ್ ಯೂನಿಯನ್‌ನಲ್ಲಿ ಮುಸ್ಲಿಮರು ಈಗ ಅಲ್ಪಸಂಖ್ಯೆಯಲ್ಲಿದ್ದರು. ಇಂಡಿಯನ್ ಯೂನಿಯನ್‌ನ ಸಮಾನ ನಾಗರಿಕರಾಗಿ ತಮ್ಮ ಭವಿಷ್ಯದ ಬಗ್ಗೆ ಅವರಿಗೆ ಅಭದ್ರತೆ ಯಾಕೆ ಕಾಡಬೇಕು?... ಯಾರೇ ಆದರೂ ತನ್ನ ತಲೆಯೆತ್ತಿ ನಡೆಯಲಾಗದೆ ಭಯದಲ್ಲಿ ಬದುಕುವುದನ್ನು ನೋಡಲು ಅವರಿಗೆ ತುಂಬಾ ನೋವಾಗುತ್ತಿತ್ತು. ಪತಿತರ ಉದ್ಧಾರಕ್ಕಾಗಿ ಸದಾ ಉತ್ಸುಕರಾಗಿದ್ದ ಅವರು ಭಾರತೀಯ ಮುಸ್ಲಿಮರಲ್ಲಿ ಧೈರ್ಯ ತುಂಬಲು ಮುಂದಾದರು.’’

ಎಪ್ಪತ್ತಕ್ಕೂ ಹೆಚ್ಚು ವರ್ಷಗಳ ಬಳಿಕ ಇಂದು ಈ ಮಾತುಗಳನ್ನು ಓದುವುದು ಉಪಯುಕ್ತವಾಗಿದೆ. 1947ರ ದ್ವಿತೀಯಾರ್ಧದಲ್ಲಿ ಆರೆಸ್ಸೆಸ್ ಭಾರತದ ರಾಜಕಾರಣ ಹಾಗೂ ಸಾರ್ವಜನಿಕ ಬದುಕಿನಲ್ಲಿ ಬಹಳ ಚಿಕ್ಕ ಪಾತ್ರ ವಹಿಸಿತ್ತು. ಅಂದಿನ ಕೋಮು ಬಿಗಿತಗಳನ್ನು ಬಳಸಿಕೊಂಡು ಅದು ತನ್ನ ಪ್ರಭಾವವನ್ನು, ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಭರವಸೆ ಹೊಂದಿತ್ತು. ಭಾರತದ ಅದೃಷ್ಟವೋ ಎಂಬಂತೆ ಗಾಂಧಿ ಮತ್ತು ನೆಹರೂರವರ ನಿರ್ಧಾರದಿಂದಾಗಿ ಅದು ಪ್ರಬಲಗೊಳ್ಳದಂತೆ ತಡೆಯಲಾಯಿತು. ಭಾರತಕ್ಕೆ ಒಂದು ಹಿಂದೂ ಪಾಕಿಸ್ತಾನವಾಗುವ ಉದ್ದೇಶವಿರಲಿಲ್ಲ ಎಂಬುದನ್ನು ನೆಹರೂರವರು ತನ್ನ ಸರಕಾರದ ಎಲ್ಲರಿಗೂ ಸ್ಪಷ್ಟಪಡಿಸಿದರು. ಗಾಂಧೀಜಿ ಕೋಲ್ಕತ ಮತ್ತು ದಿಲ್ಲಿಯಲ್ಲಿ ಹಿಂದೂ- ಮುಸ್ಲಿಮರ ಸಾಮರಸ್ಯಕ್ಕಾಗಿ ಯಶಸ್ವಿಯಾಗಿ ಉಪವಾಸ ಸತ್ಯಾಗ್ರಹ ನಡೆಸಿದರು. 1948ರ ಜನವರಿ 30ರಂದು ಅವರು ಆರೆಸ್ಸೆಸ್‌ನ ಓರ್ವ ವ್ಯಕ್ತಿಯಿಂದ ಹತ್ಯೆಯಾದರು ಮತ್ತು ಗಾಂಧಿಯವರು ಹೀಗೆ ಹುತಾತ್ಮರಾದದ್ದು ಅವರ ಸಹ ಹಿಂದೂಗಳಿಗೆ ಆಘಾತ ನೀಡಿತ್ತು ಹಾಗೂ ಅವರನ್ನು ಅವಮಾನಕ್ಕೆ ತಳ್ಳಿತ್ತು. ಅವರು ನಿಜವೇನೆಂದು ಅರಿತರು. ಒಮ್ಮೆಗೆ, ಆರೆಸ್ಸೆಸ್‌ನ ಉದ್ದೇಶಗಳು ಈಡೇರದಾದವು.

ನಾನಿದನ್ನು ಬರೆಯುವ ವೇಳೆಗೆ, ಅದೇನಿದ್ದರೂ ಆರೆಸ್ಸೆಸ್ ಪ್ರಬಲಗೊಂಡು ಭಾರತದ ರಾಜಕಾರಣ ಹಾಗೂ ಸಾರ್ವಜನಿಕ ಬದುಕಿನಲ್ಲಿ ಯಜಮಾನಿಕೆ ನಡೆಸುತ್ತಿದೆ. ಅದರ ರಾಜಕೀಯ ಮುಖವಾಗಿರುವ ಭಾರತೀಯ ಜನತಾ ಪಕ್ಷವು ಕೇಂದ್ರ ಸರಕಾರವನ್ನು ಹಾಗೂ ಹಲವು ರಾಜ್ಯ ಸರಕಾರಗಳನ್ನು ನಿಯಂತ್ರಿಸುತ್ತಿದೆ. ಹಿಂದೂ ಮಧ್ಯಮವರ್ಗದ ಬಹಳಷ್ಟು ಸಮುದಾಯಗಳು ತಮ್ಮ ರಾಜಕೀಯ ಹಾಗೂ ಸೈದ್ಧಾಂತಿಕ ಅಜೆಂಡಾದ ಬಗ್ಗೆ ಏರುದನಿಯಲ್ಲೇ ತಮ್ಮ ಬೆಂಬಲವನ್ನು ಘೋಷಿಸುತ್ತಾರೆ. ಉನ್ನತ ಸರಕಾರಿ ಅಧಿಕಾರಿಗಳು, ಉನ್ನತ ರಾಜತಾಂತ್ರಿಕರು ಹಾಗೂ ಉನ್ನತ ಸೈನ್ಯಾಧಿಕಾರಿಗಳು ಕೂಡ ಸಂವಿಧಾನಕ್ಕೆ ತಾವು ತೋರಬೇಕಾದ ನಿಷ್ಠೆಯನ್ನು ತ್ಯಜಿಸಿ ಹಿಂದುತ್ವ ಹಾಗೂ ದೇಶವನ್ನಾಳುವ ಸರಕಾರದ ಪಕ್ಷಪಾತಿ ಬೆಂಬಲಿಗರಾಗಿದ್ದಾರೆ. ಪ್ಯಾರೇಲಾಲ್ ಹೇಳುವಂತೆ, ‘‘1947ರಲ್ಲಿ ಆರೆಸ್ಸೆಸ್‌ನ ಮೂಲದಲ್ಲಿನ ನಂಬಿಕೆಗಳು: ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದೇ ಅವರ ಘೋಷಿತ ಗುರಿಯಾಗಿತ್ತು. ‘ಮುಸ್ಲಿಮರೇ ಭಾರತದಿಂದ ಹೊರನಡೆಯಿರಿ’ ಎಂಬ ಘೋಷಣೆಯನ್ನು ಅವರು ಅಂಗೀಕರಿಸಿದ್ದರು.’’ ಆ ಹೇಳಿಕೆಯ ಮೊದಲ ಭಾಗ ಇನ್ನೂ ಸಂಪೂರ್ಣವಾಗಿ ಸಿಂಧುವಾಗಿ ಇದೆ. ಎರಡನೇ ಭಾಗವನ್ನು ಮಾರ್ಪಾಡು ಮಾಡಲಾಗಿದೆ. ವಿಭಜನೆಯ ನಂತರದ ದಿನಗಳಲ್ಲಿ ಆರೆಸ್ಸೆಸ್‌ನ ಹಲವು ನಾಯಕರು ಭಾರತವನ್ನು ಸಂಪೂರ್ಣವಾಗಿ ಮುಸ್ಲಿಮರಿಂದ ಮುಕ್ತವಾಗಿಸಬಯಸಿದ್ದರು. ಅದೇನಿದ್ದರೂ, 1950ರ ದಶಕದ ವೇಳೆಗೆ ಇದು ಅಸಾಧ್ಯವೆಂದು ಅವರು ಮನಗಂಡರು. ಆಗ ಭಾರತದ ಮುಸ್ಲಿಮರ ಕುರಿತಾದ ಆರೆಸ್ಸೆಸ್‌ನ ನಿಲುವನ್ನು ಈ ಕೆಳಗಿನಂತೆ ಪುನರ್‌ರೂಪಿಸಲಾಯಿತು: ಇಲ್ಲಿ ಹುಟ್ಟಿದ ಮತ್ತು ವಾಸಿಸುತ್ತಿರುವ ಮುಸ್ಲಿಮರು ಹಿಂದೂಗಳ ರಾಜಕೀಯ, ಪೌರಾಣಿಕ, ಸಾಮಾಜಿಕ, ಆರ್ಥಿಕ, ಸಾಂಸ್ಥಿಕ ಹಾಗೂ ನೈತಿಕ ಪಾರಮ್ಯವನ್ನು ಗುರುತಿಸಿ ಒಪ್ಪಿಕೊಳ್ಳುವವರೆಗೆ ಈ ದೇಶದಲ್ಲಿ ಉಳಿಯಬಹುದು.

ನಾನು ಬೇರೆ ಒಂದು ಕಡೆ ಹೇಳುವಂತೆ, ವ್ಯಂಗ್ಯವೆಂದರೆ ಆರೆಸ್ಸೆಸ್‌ನ ಈ ರಾಜಕೀಯ ಮಾದರಿ ಮಧ್ಯಯುಗದ ಇಸ್ಲಾಮಿನಿಂದ ಎರವಲು ತಂದ ಮಾದರಿ. ಖಲೀಫತ್‌ನ ಉಚ್ಛ್ರಾಯದ ದಿನಗಳಲ್ಲಿ ಮುಸ್ಲಿಮರಿಗೆ ಯಹೂದಿಗಳು ಹಾಗೂ ಕ್ರಿಶ್ಚಿಯನ್ನರಿಗೆ ಇದ್ದುದಕ್ಕಿಂತ ಮೇಲಿನ (ಸುಪೀರಿಯರ್) ಹಕ್ಕುಗಳಿದ್ದವು. ಇವರನ್ನು ನೇರವಾಗಿ ಕಿರುಕುಳಕ್ಕೊಳಪಡಿಸದಿದ್ದರೂ ಇವರು ತಮ್ಮ ಜೀವನ ನಿರ್ವಹಣೆಗಾಗಿ ಮುಸ್ಲಿಮರಿಗಿಂತ ಕೆಳಮಟ್ಟದ ಅಥವಾ ದ್ವಿತೀಯ ದರ್ಜೆಯ ಸ್ಥಾನವನ್ನು ಒಪ್ಪಿಕೊಳ್ಳಬೇಕಾಗಿತ್ತು. ಅದೇ ರೀತಿಯಾಗಿ ಇವತ್ತು ಭಾರತದಲ್ಲಿ ಆರೆಸ್ಸೆಸ್ ಹೇಳುವಂತೆ ನಡೆದಲ್ಲಿ ಮುಸ್ಲಿಮರು ಕೂಡ ದ್ವಿತೀಯ ದರ್ಜೆಯ ಸ್ಥಾನಮಾನವನ್ನು (ಸ್ಟೇಟಸ್) ಒಪ್ಪಿಕೊಳ್ಳಲೇಬೇಕಾಗುತ್ತದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಇತಿಹಾಸ ಮತ್ತು ಸಮಾಜ ಶಾಸ್ತ್ರದ ಕುರಿತು ವಿದ್ವಾಂಸರು ಹಲವು ವಿದ್ವತ್ಪೂರ್ಣ ಪುಸ್ತಕಗಳನ್ನು ಬರೆದಿದ್ದಾರೆ. ಇನ್ನೊಂದೆಡೆ ಆರೆಸ್ಸೆಸ್ ತಾನು ಏನನ್ನು ಪ್ರತಿನಿಧಿಸುತ್ತೇನೆ ಎಂಬುದನ್ನು ಸಂಘಪರಿವಾರದ ಸದಸ್ಯರಲ್ಲದವರಿಗೆ ವಿವರಿಸುವ ಪ್ರಯತ್ನವಾಗಿ ಡಜನ್‌ಗಟ್ಟಲೆ ಪುಸ್ತಕಗಳನ್ನು ಪ್ರಕಟಿಸಿದೆ. ಇಷ್ಟಾಗಿಯೂ, (ಇವುಗಳ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇವೆೆಯಾದರೂ ಕೂಡ) ಆರೆಸ್ಸೆಸ್‌ನ ಸಿದ್ಧಾಂತ ಹಾಗೂ ಕಾರ್ಯಕ್ರಮವನ್ನು ಆರು ಶಬ್ದಗಳಲ್ಲಿ ಸಂಕ್ಷೇಪಿಸಬಹುದು: ನಾವು ಮುಸ್ಲಿಮರಿಗೆ ಅವರ ಸ್ಥಾನವು ಯಾವುದೆಂದು ತೋರಿಸುತ್ತೇವೆ.

ಹಿಂದೂ ಸ್ವಾಭಿಮಾನದ, ಹೆಮ್ಮೆಯ ಪುನರುತ್ಥಾನ, ಅದನ್ನು ಮರಳಿ ಪಡೆಯುವಿಕೆಗಾಗಿ ತಾನು ಇದ್ದೇನೆ ಎಂದು ಆರೆಸ್ಸೆಸ್ ಹೇಳುತ್ತದೆ. ಆದರೆ, ಆಚರಣೆಯಲ್ಲಿ ಆರೆಸ್ಸೆಸ್‌ನ ನಂಬಿಕೆಗಳು ಹಾಗೂ ಕ್ರಿಯೆಗಳು ಮತ್ತು ಅದರೊಂದಿಗೆ ಸಂಬಂಧ ಹೊಂದಿರುವ ರಾಜಕೀಯ ಪಕ್ಷದ ನಂಬಿಕೆಗಳು ಹಾಗೂ ಕ್ರಿಯೆಗಳನ್ನು ಹೆಮ್ಮೆಗಿಂತಲೂ ಹೆಚ್ಚಾಗಿ ಪೂರ್ವಾಗ್ರಹ ಹಾಗೂ ಭಯ ನಿರ್ಧರಿಸಿದೆ. ಕೇಂದ್ರ ಸರಕಾರ ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯ ಸರಕಾರಗಳ ಕ್ರಿಯೆಗಳನ್ನು, ಕ್ರಮಗಳನ್ನು ಗಮನಿಸಿ ನೋಡಿ. ಜಮ್ಮು ಮತ್ತು ಕಾಶ್ಮೀರದ ನಾಶ, ಅಯೋಧ್ಯೆಯಲ್ಲಿ ದೇವಾಲಯವೊಂದರ ನಿರ್ಮಾಣದ ಕುರಿತಾದ ದಿಗ್ವಿಜಯ ಭಾವ (ಟ್ರಯಂಫಲಿಸಂ), ಅಂತರ್‌ಧರ್ಮೀಯ ವಿವಾಹಗಳ ವಿರುದ್ಧದ ಕಾನೂನುಗಳು ಮತ್ತು ಇವೆಲ್ಲಕ್ಕಿಂತ ಮುಖ್ಯವಾಗಿ ನಾಗರಿಕತ್ವ ತಿದ್ದುಪಡಿ ಕಾಯ್ದೆ ಮತ್ತು ಅದನ್ನು ಶಾಂತಿಯುತವಾಗಿ ವಿರೋಧಿಸಿದವರ ವಿರುದ್ಧ ನಡೆದ ಬರ್ಬರ ಕಿರುಕುಳ, ಹಿಂಸೆ -ಇವೆಲ್ಲ ಮುಸ್ಲಿಮರಿಗೆ ಅವರ ಸ್ಥಾನ ಯಾವುದನ್ನು ತೋರಿಸುವ ಬಯಕೆಯಿಂದ, ಇರಾದೆಯಿಂದ ತೆಗೆದುಕೊಂಡ ಕ್ರಮಗಳು.

‘ಮಹಾತ್ಮಾಗಾಂಧಿ ದಿ ಲಾಸ್ಟ್ ಫೇಸ್’ನಲ್ಲಿ ಪ್ಯಾರೇಲಾಲ್ 1947ರ ಸೆಪ್ಟ್ಟಂಬರ್‌ನಲ್ಲಿ ತಾನು ಸಾಕ್ಷಿಯಾಗಿದ್ದ ಒಂದು ಸಂಭಾಷಣೆಯ ಕುರಿತು ಹೀಗೆ ಬರೆಯುತ್ತಾರೆ: ‘‘ಆರೆಸ್ಸೆಸ್‌ನವರು ನಿರಾಶ್ರಿತ ಶಿಬಿರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರು ಶಿಸ್ತು, ಧೈರ್ಯ ಮತ್ತು ಕಠಿಣ ದುಡಿಮೆಯ ತಮ್ಮ ಸಾಮರ್ಥ್ಯವನ್ನು ಮೆರೆದಿದ್ದಾರೆ ಎಂದು ಗಾಂಧೀಜಿಯವರ ಕಡೆಯವರೊಬ್ಬರು ಹೇಳಿದರು. ಅದಕ್ಕೆ ಗಾಂಧೀಜಿ ಉತ್ತರಿಸಿದರು: ‘ಆದರೆ ಹಿಟ್ಲರನ ನಾಝಿಗಳು ಮತ್ತು ಮುಸ್ಸೋಲಿನಿಯ ಫ್ಯಾಶಿಸ್ಟರು ಕೂಡ ಇದನ್ನೇ ಮೆರೆದಿದ್ದಾರೆ ಎಂಬುದನ್ನು ಮರೆಯಬೇಡಿ’ ಅವರು (ಗಾಂಧಿ) ಆರೆಸ್ಸೆಸ್‌ಅನ್ನು ‘ಸರ್ವಾಧಿಕಾರಿ ಧೋರಣೆಯ ಒಂದು ಕೋಮು ಸಂಸ್ಥೆ’ಯೆಂದು ಪರಿಗಣಿಸಿದ್ದರು.’’

ಎಪ್ಪತ್ತೆರಡು ವರ್ಷಗಳ ಬಳಿಕ ಆರೆಸ್ಸೆಸ್ ಕುರಿತಾದ ಗಾಂಧೀಜಿಯವರ ಅಭಿಪ್ರಾಯಗಳು ಎಷ್ಟರಮಟ್ಟಿಗೆ ಸರಿಯಾಗಿವೆ, ಪ್ರಸ್ತುತವಾಗಿವೆ? ಸಂಪೂರ್ಣವಾಗಿ ಪ್ರಸ್ತುತವಾಗಿವೆ. ಒಂದು ವ್ಯತ್ಯಾಸವೆಂದರೆ ಅವರು ಬಳಸಿದ್ದ ವಿಶೇಷಣಗಳ ಸ್ಥಾನವನ್ನು ಹಿಂದುಮುಂದು ಮಾಡಬೇಕಾಗಬಹುದು. ಈಗ ಅದು ಕೋಮುವಾದಿ ದೃಷ್ಟಿಕೋನದ ಸರ್ವಾಧಿಕಾರಿ ಸಂಘಟನೆಯ ಬದಲಾಗಿ ಸರ್ವಾಧಿಕಾರಿ ಧೋರಣೆಯ ಕೋಮುವಾದಿ ಸಂಘಟನೆ ಎನ್ನುವುದು ಹೆಚ್ಚು ಸೂಕ್ತವಾಗಬಹುದು. 1947ರಲ್ಲಿ ಅದು ಭಾರತೀಯ ಬದುಕಿನ ಅಂಚಿನಲ್ಲಿತ್ತು; ಈಗ ಅದು ಭಾರೀ ಪ್ರಭಾವಶಾಲಿಯಾಗಿದೆ. ಕೇಂದ್ರ ಸರಕಾರವನ್ನು ನಿಯಂತ್ರಿಸುತ್ತಿರುವ ಆರೆಸ್ಸೆಸ್‌ನ ಸದಸ್ಯರು ಪತ್ರಿಕೆಗಳನ್ನು ತಮ್ಮ ಅಧೀನಕ್ಕೊಳಪಡಿಸಿಕೊಂಡಿದ್ದಾರೆ. ನ್ಯಾಯಾಂಗವನ್ನು ಪಳಗಿಸಿದ್ದಾರೆ, ಇತರ ರಾಜಕೀಯ ಪಕ್ಷಗಳ ರಾಜ್ಯ ಸರಕಾರಗಳನ್ನು ಉರುಳಿಸಲು ಅಥವಾ ಅಮುಖ್ಯಗೊಳಿಸಲು ಲಂಚ ಹಾಗೂ ಬಲಪ್ರಯೋಗವನ್ನು ಬಳಸಿದ್ದಾರೆ. ಎನ್‌ಜಿಒಗಳನ್ನು ಹತ್ತಿಕ್ಕುವ ಹೊಸ ಕಾನೂನುಗಳು ಹಿಂದುತ್ವ ಸಿದ್ಧಾಂತಕ್ಕೆ ನಿಷ್ಠೆ ತೋರದ ಎಲ್ಲ ಸ್ವಯಂಸೇವಾ ಸಂಘಟನೆಗಳನ್ನು ಬಲಹೀನಗೊಳಿಸುವ ಉದ್ದೇಶದಿಂದಲೇ ರಚಿತವಾಗಿವೆ.

ಆರೆಸ್ಸೆಸ್ ಮತ್ತು ಬಿಜೆಪಿಯವರು ರಾಜಕೀಯ ಪ್ರಕ್ರಿಯೆ, ದೇಶದ ಸಂಸ್ಥೆಗಳು, ನಾಗರಿಕ ಸಮಾಜ, ಜನರು ಏನನ್ನು ತಿನ್ನಬೇಕು, ಹೇಗೆ ಬಟ್ಟೆ ಧರಿಸಬೇಕು, ಅವರು ಯಾರನ್ನು ಮದುವೆಯಾಗಬಹುದು ಹಾಗೂ ಯಾರನ್ನು ಮದುವೆಯಾಗಕೂಡದು ಎಂಬುದರ ಮೇಲೆ ಕೂಡ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ದೇಶದಲ್ಲಿ ಬದುಕಿನ ಎಲ್ಲ ಮುಖಗಳನ್ನು ನಿಯಂತ್ರಿಸುವ ಬಯಕೆ ‘ಸರ್ವಾಧಿಕಾರಿ ನಿಲುವಿನ’ ವ್ಯಾಖ್ಯಾನಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಅದೇ ವೇಳೆ ಮುಸ್ಲಿಮರನ್ನು ದೂರವಿಡುವ ಹಾಗೂ ರಾಕ್ಷಸೀಕರಿಸುವ ಅವರ ಪ್ರಯತ್ನಗಳು ಅವರ ‘ಕೋಮುವಾದಿ’ ಮನಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸಿವೆ.

1947ರ ದ್ವಿತೀಯಾರ್ಧದಲ್ಲಿ ಆರೆಸ್ಸೆಸ್ ಕುರಿತು ಮಹಾತ್ಮಾ ಗಾಂಧಿ ನೀಡಿದ ವ್ಯಾಖ್ಯಾನ, ವಿವರಣೆ ಅಂದು ಮತ್ತು ಇಂದು ಕೂಡ ಸಂಪೂರ್ಣವಾಗಿ ಒಪ್ಪಿಗೆಯಾಗುವಂತಿದೆ. ಅಧಿಕಾರದ ಅಂಚುಗಳಲ್ಲಿರಲಿ ಅಥವಾ ಅಧಿಕಾರದ ಕೇಂದ್ರದಲ್ಲಿರಲಿ ಆರೆಸ್ಸೆಸ್ ಸರ್ವಾಧಿಕಾರಿ ದೃಷ್ಟಿಕೋನದ ಒಂದು ಕೋಮುವಾದಿ ಸಂಘಟನೆ ಅಲ್ಲದೆ ಬೇರೇನೂ ಅಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)