ನಿಮ್ಮ ಕಣ್ಣುಗಳು ಒಣಗಿರುತ್ತವೆಯೇ? ಹಾಗಿದ್ದರೆ ಈ ಮೂರು ಆಹಾರಗಳನ್ನು ಹೆಚ್ಚು ಸೇವಿಸಿ
ಆರೋಗ್ಯಯುತ ಕಣ್ಣುಗಳು ವರದಾನವೆಂದೇ ಹೇಳಬಹುದು. ಜಗತ್ತಿನಲ್ಲಿಯೇ ಅತ್ಯಂತ ಮುಂದುವರಿದ ದೇಶವೆಂಬ ಹೆಗ್ಗಳಿಕೆ ಹೊಂದಿರುವ ಅಮೆರಿಕದಲ್ಲಿಯೇ ಸುಮಾರು ಶೇ.48ರಷ್ಟು ವಯಸ್ಕ ವ್ಯಕ್ತಿಗಳು ಶುಷ್ಕ ಕಣ್ಣುಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿಯೂ ಇದು ಸಾಮಾನ್ಯವಾಗಿದೆ. ಕಣ್ಣುಗಳು ಒಣಗಿರುವುದರಿಂದ ಅವುಗಳಲ್ಲಿ ನೋವು,ಉರಿಯ ಜೊತೆಗೆ ಓದುವುದಕ್ಕೆ ಅಥವಾ ಟಿವಿ,ಕಂಪ್ಯೂಟರ್ ಪರದೆಗಳನ್ನು ನೋಡಲು ಕಷ್ಟವಾಗುತ್ತದೆ.
ಕಂಪ್ಯೂಟರ್ ಸ್ಕ್ರೀನ್‌ನ ಎದುರು ತುಂಬ ಸಮಯವನ್ನು ಕಳೆದ ಬಳಿಕ ಸಂಜೆಯ ವೇಳೆಗಳಲ್ಲಿ ದೂರಕ್ಕೆ ದೃಷ್ಟಿಯನ್ನು ಕೇಂದ್ರೀಕರಿಸಲು ಅಥವಾ ದೂರದ ವಸ್ತುಗಳನ್ನು ನೋಡಲು ಕಷ್ಟವಾಗುತ್ತದೆ. ಕೊರೋನ ವೈರಸ್ ಸಾಂಕ್ರಾಮಿಕದ ಈ ದಿನಗಳಲ್ಲಿ ಹೆಚ್ಚಿನ ಜನರು ಮನೆಗಳಿಂದಲೇ ಕೆಲಸವನ್ನು ಮಾಡುತ್ತಿದ್ದಾರೆ ಮತ್ತು ಇಂತಹ ಸ್ಥಿತಿಯಲ್ಲಿ ಅವರು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಮುಂದೆ ಗಂಟೆಗಟ್ಟಲೆ ಸಮಯವನ್ನು ಕಳೆಯುವುದು ಅನಿವಾರ್ಯವಾಗಿದೆ.
ವಿದ್ಯುನ್ಮಾನ ಸಾಧನಗಳ ನಿಯಮಿತ ಬಳಕೆಯು ತಲೆನೋವುಗಳನ್ನು ಮತ್ತು ಕಣ್ಣುಗಳಿಗೆ ಆಯಾಸವನ್ನುಂಟು ಮಾಡುತ್ತದೆ. ಇದು ನಿಮಗೂ ಆಗುತ್ತಿದ್ದರೆ ನೀವು ಕಂಪ್ಯೂಟರ್ ವಿಜನ್ ಸಿಂಡ್ರೋಮ್‌ನಿಂದ ಬಳಲುತ್ತಿರಬಹುದು. ಇದರಿಂದ ಪಾರಾಗಲು ಕಣ್ಣುಗಳ ಶುಷ್ಕತೆಯನ್ನು ತಗ್ಗಿಸುವುದು ಅಗತ್ಯವಾಗುತ್ತದೆ. ಒಮೆಗಾ-3,ಪೊಟ್ಯಾಷಿಯಂ ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವ ಆಹಾರಗಳು ಮತ್ತು ಯಥೇಚ್ಛ ನೀರಿನ ಸೇವನೆಯಿಂದ ಕಣ್ಣುಗಳ ಶುಷ್ಕತೆಯನ್ನು ಹೋಗಲಾಡಿಸಬಹುದು. ಕಣ್ಣುಗಳು ಆರೋಗ್ಯಯುತವಾಗಿರಲು ಅವುಗಳಿಗೆ ವಿಟಾಮಿನ್‌ಗಳು ಮತ್ತು ಖನಿಜಗಳೂ ಅಗತ್ಯವಾಗಿವೆ. ಕಣ್ಣುಗಳನ್ನು ಶುಷ್ಕತೆಯಿಂದ ರಕ್ಷಿಸುವ ಮತ್ತು ಶುಷ್ಕತೆಯನ್ನು ನಿವಾರಿಸುವ ಕೆಲವು ಆಹಾರಗಳ ಕುರಿತು ಮಾಹಿತಿಗಳಿಲ್ಲಿವೆ.......
* ಒಮೆಗಾ-3 ಫ್ಯಾಟಿ ಆಮ್ಲಗಳು
ಒಮೆಗಾ-3 ಫ್ಯಾಟಿ ಆಮ್ಲಗಳನ್ನೊಳಗೊಂಡ ಆಹಾರಗಳನ್ನು ಸೇವಿಸುವುದರಿಂದ ಕಣ್ಣೀರಿನಲ್ಲಿಯ ತೈಲ ಭಾಗವನ್ನು ಸೃಷ್ಟಿಸುವ ಮೀಬೊಮಿಯನ್ ಗ್ಲಾಂಡ್ಸ್ ಎಂದು ಕರೆಯಲಾಗುವ ಕಣ್ಣಿನ ಗ್ರಂಥಿಗಳು ಕ್ರಿಯಾಶೀಲಗೊಳ್ಳುತ್ತವೆ. ಬಂಗುಡೆ,ತಾಜಾ ಟುನಾ ಮತ್ತು ಸಾಲ್ಮನ್ ಮೀನುಗಳು,ಅಕ್ರೋಡ್ ಮತ್ತು ಕುಂಬಳ,ಅಗಸೆ ಅಥವಾ ಕಾಮಕಸ್ತೂರಿ ಬೀಜಗಳು,ಸಸ್ಯಜನ್ಯ ತೈಲ,ಸೋಯಾಬೀನ್,ಹಸಿರು ಸೊಪ್ಪುಗಳು ಒಮೆಗಾ-3 ಫ್ಯಾಟಿ ಆಮ್ಲಗಳನ್ನು ಒಳಗೊಂಡ ಕೆಲವು ಆಹಾರಗಳಾಗಿವೆ.
* ಪೊಟ್ಯಾಷಿಯಂ
ಶುಷ್ಕ ಕಣ್ಣುಗಳ ನಿವಾರಣೆಗೆ ಪೊಟ್ಯಾಷಿಯಂ ತುಂಬ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅಕ್ಷಿಪಟಲವನ್ನು ಆವರಿಸಿರುವ ಕಣ್ಣೀರಿನ ತೆಳುವಾದ ಪದರವಾಗಿರುವ ಟಿಯರ್ ಫಿಲ್ಮ್‌ನ ಸುಸ್ಥಿರತೆಗೆ ಅಗತ್ಯವಾಗಿರುವ ಘಟಕಗಳಲ್ಲಿ ಪೊಟ್ಯಾಷಿಯಂ ಒಂದಾಗಿದೆ. ಪೊಟ್ಯಾಷಿಯಂ ಮಟ್ಟ ಕುಸಿದರೆ ಟಿಯರ್ ಫಿಲ್ಮ್‌ಗೆ ಹಾನಿಯುಂಟಾಗುತ್ತದೆ. ಪೊಟ್ಯಾಷಿಯಂ ಈ ಪದರವನ್ನು ದಪ್ಪವಾಗಿಸುತ್ತದೆ. ಹೀಗಾಗಿ ಪೊಟ್ಯಾಷಿಯಂ ಅಧಿಕವಾಗಿರುವ ಆಹಾರಗಳನ್ನು ಸೇವಿಸಬೇಕು.
ಬಾಳೆಹಣ್ಣು,ಸಿಹಿಗೆಣಸು,ಬಟಾಟೆ,ಮೊಸರು ಮತ್ತು ಸೋಯಾಬೀನ್ ಸಮೃದ್ಧವಾಗಿ ಪೊಟ್ಯಾಷಿಯಂ ಒಳಗೊಂಡಿರುವ ಕೆಲವು ಆಹಾರಗಳಾಗಿವೆ.
* ವಿಟಮಿನ್ ಇ
ಇ ವಿಟಮಿನ್‌ನ ಉತ್ಕರ್ಷಣ ನಿರೋಧಕ ಶಕ್ತಿಯು ಕಣ್ಣುಗಳ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ,ಜೊತೆಗೆ ಶರೀರದ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಹೀಗಾಗಿ ಇ ವಿಟಾಮಿನ್‌ಗಳನ್ನು ಒಳಗೊಂಡಿರುವ ಆಹಾರಗಳ ಸೇವನೆಯು ಕಣ್ಣಿನ ದೃಷ್ಟಿ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ,ಇದೇ ವೇಳೆ ವಿಟಾಮಿನ್ ಶುಷ್ಕತೆಯನ್ನೂ ಅದು ತಡೆಯುತ್ತದೆ.
ಸೂರ್ಯಕಾಂತಿ ಬೀಜಗಳು,ಪೀನಟ್ ಬಟರ್ ಅಥವಾ ಕಡಲೆಕಾಯಿ ಬೆಣ್ಣೆ,ಅಕ್ರೋಡ್,ಗೋದಿ,ಬಾದಾಮ್,ಸಿಹಿಗೆಣಸು ಇವು ವಿಟಮಿನ್ ಇ ಅನ್ನು ಒಳಗೊಂಡಿರುವ ಕೆಲವು ಆಹಾರಗಳಾಗಿವೆ.