ರಾಷ್ಟ್ರೀಯ ಆರೋಗ್ಯ ಸರ್ವೇ: ಎಲ್ಲಿದೆ ಕರ್ನಾಟಕ?
ಗ್ರಾಮೀಣ ಭಾರತದಲ್ಲಿ ಬಡತನ, ಅವೈಜ್ಞಾನಿಕ ಆರೋಗ್ಯ ಸಂಸ್ಕೃತಿ, ಕಳಪೆ ಆರೋಗ್ಯ ವರ್ತನೆಗಳ ಕಾರಣದಿಂದ ಶಿಶುಗಳ ಮತ್ತು ತಾಯಂದಿರ ಮರಣ ಇನ್ನೂ ಹೆಚ್ಚಾಗುತ್ತಿದೆ. ಈ ಸಮೀಕ್ಷೆಯು ಪ್ರಕಾರ ಕ್ಯಾನ್ಸರ್, ಪಾರ್ಶ್ವವಾಯು, ಹೃದ್ರೋಗ, ಮಾನಸಿಕ ಆರೋಗ್ಯ ಸಮಸ್ಯೆಗಳು, ನ್ಯುಮೋನಿಯಾ, ಕ್ಷಯರೋಗ ಮತ್ತು ಶ್ವಾಸಕೋಶದ ಕಾಯಿಲೆಯಿಂದ ಗ್ರಾಮೀಣ ಮಹಿಳೆಯರು ಬಳಲುತ್ತಿದ್ದಾರೆ.
ಪ್ರತಿಬಾರಿಯಂತೆ ಈ ಬಾರಿಯೂ ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸರ್ವೇ ನಡೆಸಿದ್ದು ಕೊರೋನ ಕಾರಣದಿಂದ ಈ ಬಾರಿ ಒಟ್ಟು 17 ರಾಜ್ಯಗಳ ಫಲಿತಾಂಶವನ್ನು ಮಾತ್ರ ಪ್ರಕಟಿಸಲಾಗಿದೆ. ಈ ವರದಿ ಕರ್ನಾಟಕದ ಸದ್ಯದ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲಿದೆ. ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ವೇ ರಾಷ್ಟ್ರಾದ್ಯಂತ ನಡೆಯುವ ಪ್ರಮುಖ ಸರ್ವೇಯಾಗಿದ್ದು ಈ ಸರ್ವೇ ಪ್ರಕಾರ ಮುಖ್ಯವಾಗಿ ರಾಜ್ಯದಲ್ಲಿ ಲಿಂಗಾನುಪಾತ ವಿಚಾರದಲ್ಲಿ ಪ್ರತಿ ಸಾವಿರ ಪುರುಷರಿಗೆ 1,035 ಮಹಿಳೆಯರು ಇರುವುದು ಕಂಡುಬಂದಿದೆ. ಲಿಂಗಾನುಪಾತ ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಣೆ ಕಂಡಿದೆ. ಮಹಿಳಾ ಸಾಕ್ಷರತೆ ವಿಚಾರ ಬಂದರೆ ನಗರ ಪ್ರದೇಶಗಳಲ್ಲಿ ಸಾಕ್ಷರತಾ ಪ್ರಮಾಣ ಶೇ.85 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶೇ.71 ಇದೆ. ಪುರುಷರ ಸಾಕ್ಷರತಾ ಪ್ರಮಾಣ ಗ್ರಾಮೀಣ ಪ್ರದೇಶಗಳಲ್ಲಿ ಶೇ.87 ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ.42 ಮಂದಿ ಮಹಿಳೆಯರು ಮಾತ್ರ 10 ವಷರ್ಕ್ಕಿಂತ ಹೆಚ್ಚಿನ ಶಿಕ್ಷಣವನ್ನು ಪಡೆದಿದ್ದಾರೆ. ಅಂತರ್ಜಾಲ ಬಳಕೆಯ ವಿಚಾರದಲ್ಲಿ ಗ್ರಾಮೀಣ ಮಹಿಳೆಯರು ಬಹಳಷ್ಟು ಹಿಂದೆ ಇರುವುದು ಕಂಡುಬಂದಿದೆ. ಈ ವರದಿಯ ಪ್ರಕಾರ ಶೇ.24 ಗ್ರಾಮೀಣ ಮಹಿಳೆಯರು ಅಂತರ್ಜಾಲ ಬಳಸುತ್ತಿದ್ದಾರೆ. ನಗರ ಪ್ರದೇಶದಲ್ಲಿ ಇದರ ಪ್ರಮಾಣ ಶೇ. ಐವತ್ತರಷ್ಟು ಇದೆ. ಶೇ.55 ಪುರುಷರು ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಾಲ ಬಳಸುತ್ತಿದ್ದಾರೆ ಎಂದು ಈ ವರದಿ ಹೇಳಿದೆ.
ಈ ವರದಿಯ ಪ್ರಕಾರ ಮಹಿಳೆಯರ ವೈವಾಹಿಕ ವಿಚಾರವು ಸಾಕಷ್ಟು ಚಿಂತನೆಗೆ ಕಾರಣವಾಗಿದೆ. ಗ್ರಾಮೀಣ ಪರಿಸರದಲ್ಲಿ ಶೇ.24 ಮಹಿಳೆಯರು 18 ವಷರ್ಕ್ಕಿಂತ ಮುಂಚೆ ಮತ್ತು ನಗರ ಪ್ರದೇಶಗಳಲ್ಲಿ ಶೇ.16ರಷ್ಟು ಮಹಿಳೆಯರು 18 ವಷರ್ಕ್ಕೆ ಮುಂಚಿತವಾಗಿ ಮದುವೆಯಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಫಲವತ್ತತೆಯ ದರ (ಪ್ರತಿ ಮಹಿಳೆಗಿರುವ ಮಗು) ಶೇ.1.8 ಇದ್ದರೆ ನಗರ ಪ್ರದೇಶಗಳಲ್ಲಿ ಫಲವತ್ತತೆಯ ದರ ಶೇ.1.5 ಎನ್ನಲಾಗಿದೆ. ಗ್ರಾಮೀಣ ಪರೀಕ್ಷೆಗಳಲ್ಲಿ ಶೇ.6.6 ಮತ್ತು ನಗರ ಪ್ರದೇಶಗಳಲ್ಲಿ ಶೇ.3.4 ಹೆಣ್ಣುಮಕ್ಕಳು 15-19 ವಯಸ್ಸಿನ ಮಧ್ಯೆ ಗರ್ಭಧರಿಸಿದ್ದಾರೆ!. ಈ ವರದಿ ಪ್ರಕಾರ ನವಜಾತ ಶಿಶುವಿನ ಮರಣ ಪ್ರಮಾಣವು ಗ್ರಾಮೀಣ ಪ್ರದೇಶಗಳಲ್ಲಿ ಶೇ.16 ಇದ್ದು ನಗರ ಪ್ರದೇಶದಲ್ಲಿ ಶೇ.27 ಇರುವುದು ಕಂಡುಬಂದಿದೆ. ಶಿಶು ಮರಣ ಪ್ರಮಾಣ ಗ್ರಾಮೀಣ ಪ್ರದೇಶಗಳಲ್ಲಿ ಶೇ.27 ಇದ್ದು ನಗರ ಪ್ರದೇಶಗಳಲ್ಲಿ ಶೇ.21.4 ಇರುವುದು ಕಂಡುಬಂದಿದೆ. ಅಲ್ಲದೆ 5 ವಷರ್ದ ಒಳಗಿನ ಮಕ್ಕಳ ಸಾವಿನ ದರವು ಗ್ರಾಮೀಣ ಪರಿಸರದಲ್ಲಿ 32.5 ಇದ್ದು ನಗರ ಪ್ರದೇಶದಲ್ಲಿ 24.5 ಇರುವುದು ಕಂಡು ಬಂದಿದೆ.
ಸಂತಾನ ನಿಯಂತ್ರಣ ವಿಚಾರದಲ್ಲಿ ಶೇ.67ರಷ್ಟು ಗ್ರಾಮೀಣ ಜನರು ಆಧುನಿಕ ವಿಧಾನವನ್ನು ಬಳಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ. 58ರಷ್ಟು ಮಹಿಳೆಯರು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಅದರ ಪ್ರಮಾಣ ನಗರ ಪ್ರದೇಶಗಳಲ್ಲಿ ಶೇ. 55 ಇರುವುದು ಕಂಡುಬಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಾಂಡೋಮ್ ಗಳ ಬಳಕೆ ಶೇ.3 ಮತ್ತು ನಗರ ಪ್ರದೇಶಗಳಲ್ಲಿ ಶೇ. 6ರಷ್ಟು ಇರುವುದು ಕಂಡುಬಂದಿದೆ. ಕುಟುಂಬ ನಿಯಂತ್ರಣದ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಶೇ.35 ಮಂದಿ ಮಾತ್ರ ಆರೋಗ್ಯ ಕಾರ್ಯಕರ್ತರೊಂದಿಗೆ ಮಾತನಾಡಲು ಬಯಸುತ್ತಾರೆ. ಇಂದಿಗೂ ಈ ವಿಚಾರಗಳು ಮಡಿವಂತಿಕೆ ಹೊಂದಿರುವುದು ಇಲ್ಲಿ ಕಂಡುಬರುತ್ತದೆ. ಗ್ರಾಮೀಣ ಪ್ರದೇಶದ ಶೇ.70 ಮಂದಿ ಮಹಿಳೆಯರು ಪ್ರಸವ ಪೂರ್ವ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದ 92 ಮಂದಿ ಮಕ್ಕಳು ಧನುರ್ವಾಯು ಚುಚ್ಚುಮದ್ದನ್ನು ಪಡೆದಿದ್ದಾರೆ. ಆದರೆ ಶೇ. 40ರಷ್ಟು ಗ್ರಾಮೀಣ ಗರ್ಭಿಣಿಯರು ಗರ್ಭಧಾರಣೆ ಅವಧಿಯಲ್ಲಿ ಫೋಲಿಕ್ ಮಾತ್ರೆಗಳನ್ನು ಬಳಸಿದ್ದಾರೆ. ಇದು ಬಹಳ ಗಂಭೀರ ಸಮಸ್ಯೆಯಾಗಿದ್ದು ಇದರ ಪ್ರಮಾಣ ಹೆಚ್ಚಾಗಬೇಕಿದೆ. ಫೋಲಿಕ್ ಅಂಶದ ಕೊರತೆಯಿಂದ ಮಕ್ಕಳು ಮುಂದೆ ಗಂಭೀರವಾದ ಸಮಸ್ಯೆಗಳನ್ನು ಅನುಭವಿಸುತ್ತವೆ. ಈ ವರದಿಯ ಪ್ರಕಾರ ಗ್ರಾಮೀಣ ಭಾಗದಲ್ಲಿ ಕುಟುಂಬಗಳು ಸರಾಸರಿ ರೂ. 4,911 ಸ್ವಂತ ಹಣವನ್ನು ಹೆರಿಗೆಯ ಸಂದರ್ಭದಲ್ಲಿ ಆಸ್ಪತ್ರೆ ಮತ್ತು ಔಷಧಿಗಳಿಗೆ ಖರ್ಚು ಮಾಡಿದ್ದಾರೆ.
ಇನ್ನೊಂದು ಗಂಭೀರ ವಿಚಾರವೆಂದರೆ ಗ್ರಾಮೀಣ ಪರೀಕ್ಷೆಗಳಲ್ಲಿ ಶೇ. 1.5 ಮಂದಿ ಮಹಿಳೆಯರು ಮನೆಯಲ್ಲೇ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಂತಹ ಮಹಿಳೆಯರಿಗಿರುವ ಹಲವಾರು ಸರಕಾರಿ ಕಾರ್ಯಕ್ರಮಗಳನ್ನು ಅವರು ಬಳಸಿಕೊಂಡಿರುವುದು ಅನುಮಾನ. ಶೇ. 70ರಷ್ಟು ಮಹಿಳೆಯರು ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ಆದರೆ ನಗರ ಪ್ರದೇಶಗಳಲ್ಲಿ ಇವರ ಪ್ರಮಾಣ ಕೇವಲ ಶೇ. 56 ಇದೆ. ಶೇ. 29ರಷ್ಟು ಗ್ರಾಮೀಣ ಮಹಿಳೆಯರು ಸಿಸೇರಿಯನ್ ಮೂಲಕ ಮಗುವಿಗೆ ಜನ್ಮ ನೀಡಿದ್ದಾರೆ. ಹೆಚ್ಚಿನ ಸಿಸೇರಿಯನ್ ಆಪರೇಷನ್‌ಗಳು ಖಾಸಗಿ ಆಸ್ಪತ್ರೆಯಲ್ಲಿ ನಡೆದಿರುವುದು ಗಮನಿಸಬೇಕಾದ ವಿಚಾರ. ಗ್ರಾಮೀಣ ಪ್ರದೇಶಗಳಲ್ಲಿ ಶೇ. 86ರಷ್ಟು ನವಜಾತ ಶಿಶುಗಳು ಹುಟ್ಟಿದ ತಕ್ಷಣವೇ ವಿವಿಧ ರೀತಿಯ ಲಸಿಕೆಗಳನ್ನು ಪಡೆದುಕೊಂಡಿವೆ. ಇದರ ಪ್ರಮಾಣ ನಗರ ಪ್ರದೇಶಗಳಲ್ಲಿ ಶೇ. 80 ಇದರ ಪ್ರಮಾಣ ಇನ್ನೂ ಹೆಚ್ಚಾಗಬೇಕಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಶೇ. 90ರಷ್ಟು ಮಕ್ಕಳು ಪೋಲಿಯೊ ಲಸಿಕೆಯನ್ನು ಪಡೆದುಕೊಂಡಿವೆ. ಶೇ. 90ರಷ್ಟು ಮಕ್ಕಳು ಡಿಪಿಟಿ ಪಡೆದುಕೊಂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ. 97 ಮಕ್ಕಳು ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆದುಕೊಂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ. 67ರಷ್ಟು ಮಕ್ಕಳು ಮತ್ತು ನಗರ ಪ್ರದೇಶಗಳಲ್ಲಿ ಶೇ. 79ರಷ್ಟು ಮಕ್ಕಳು ಹುಟ್ಟಿದ ಒಂದು ವರ್ಷದ ಒಳಗೆ ಡಯಾರಿಯಾ ಸಮಸ್ಯೆಯಿಂದ ಬಳಲಿರುವುದು ಕಂಡುಬಂದಿದೆ. ಗ್ರಾಮೀಣ ಪ್ರದೇಶದ ಶೇ. 1.7 ಮತ್ತು ನಗರಪ್ರದೇಶದ 1.2 ಶಿಶುಗಳು ವಿವಿಧ ರೀತಿಯ ಉಸಿರಾಟ ಸಮಸ್ಯೆಯನ್ನು ಅನುಭವಿಸಿರುವುದು ಕಂಡುಬಂದಿದೆ. ಗ್ರಾಮೀಣ ಪ್ರದೇಶದ ಶೇ. 20ರಷ್ಟು ಮಹಿಳೆಯರು ಸಾಮಾನ್ಯಕ್ಕಿಂತ ಅತ್ಯಂತ ಕಡಿಮೆ ಬಿಎಂಐ (ಬಾಡಿ ಮಾಸ್ ಇಂಡೆಕ್ಸ್)ಹೊಂದಿದ್ದಾರೆ. ಪುರುಷರಲ್ಲಿ ಇದರ ಪ್ರಮಾಣ ಶೇ. 16 ಇದೆ. ಶೇ. 25ರಷ್ಟು ಗ್ರಾಮೀಣ ಮಹಿಳೆಯರು ಹೆಚ್ಚಿನ ತೂಕವನ್ನು ಹೊಂದಿದ್ದರೆ ನಗರ ಪ್ರದೇಶದ ಶೇ.37 ಮಹಿಳೆಯರು ಹೆಚ್ಚಿನ ತೂಕವನ್ನು ಹೊಂದಿದ್ದಾರೆ. ಗ್ರಾಮೀಣ ಪ್ರದೇಶದ ಶೇ. 44ರಷ್ಟು ಮಹಿಳೆಯರು ಗಂಭೀರ ಎನಿಸುವ ಮಟ್ಟಿಗೆ ದೈಹಿಕ ಸುತ್ತಳತೆಯನ್ನು ಹೊಂದಿದ್ದಾರೆ (ಒಬೆಸಿಟಿ). ನಗರ ಪ್ರದೇಶಗಳಲ್ಲಿ ಇವರ ಪ್ರಮಾಣ ಶೇ. 47 ಇರುವುದು ಕಂಡುಬಂದಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಶೇ. 67 ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ಶೇ. 50ರಷ್ಟು ಅವಿವಾಹಿತ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದು ನಗರ ಪ್ರದೇಶಗಳಲ್ಲಿ ಶೇ. 44ರಷ್ಟಿದೆ. ಅಲ್ಲಿಗೆ ಒಟ್ಟು ಸರಾಸರಿ ಶೇ. 50ರಷ್ಟು ಗ್ರಾಮೀಣ ಮಹಿಳೆಯರು ಮತ್ತು ಶೇ. 48ರಷ್ಟು ನಗರ ಪ್ರದೇಶದ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದಾಯಿತು. ಇನ್ನೊಂದು ಪ್ರಮುಖ ಅಂಶವೆಂದರೆ ಗ್ರಾಮೀಣ ಪ್ರದೇಶದ ಶೇ. 12 ಮತ್ತು ನಗರ ಪ್ರದೇಶದ ಶೇ. 16 ಮಹಿಳೆಯರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಲ್ಲದೆ ಗ್ರಾಮೀಣ ಪ್ರದೇಶದ ಶೇ. 14 ಮಂದಿ ಮತ್ತು ನಗರಪ್ರದೇಶದ ಶೇ. 18 ಮಹಿಳೆಯರು ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಗ್ರಾಮೀಣ ಪುರುಷರಲ್ಲಿ ಶೇ. 25.5 ಮತ್ತು ನಗರ ಪ್ರದೇಶಗಳಲ್ಲಿ ಶೇ. 20.2 ಇರುವುದು ಕಂಡುಬಂದಿದೆ. ಇನ್ನೊಂದು ಮುಖ್ಯವಿಚಾರವೆಂದರೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿವಿಧ ರೀತಿಯ ಕ್ಯಾನ್ಸರ್ ಮುಂಜಾಗ್ರತಾ ಪರೀಕ್ಷೆಗಳ ಪ್ರಮಾಣ ಹೆಚ್ಚು ಕಡಿಮೆ ಶೂನ್ಯ!.
ಸಂಕೀರ್ಣ ಸಮಾಜದಲ್ಲಿ ಆರೋಗ್ಯ ವಿಚಾರವು ಇತ್ತೀಚಿನ ದಿನಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿವಷರ್ 5,85,000 ಮಹಿಳೆಯರು ವಿವಿಧ ಸಮಸ್ಯೆಗಳಿಂದ ಮೃತರಾಗುತ್ತಿದ್ದಾರೆ ಮತ್ತು ಪ್ರತಿದಿನ 1,600ಕ್ಕೂ ಹೆಚ್ಚು ಮಹಿಳೆಯರು ಗರ್ಭಧಾರಣೆ ಮತ್ತು ಹೆರಿಗೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ವಿಶೇಷವಾಗಿ ಗುಣಮಟ್ಟದ ಆರೋಗ್ಯ ರಕ್ಷಣೆಗೆ ಬಂದಾಗ, ಅಪೌಷ್ಟಿಕತೆ, ಮೂಲಭೂತ ನೈರ್ಮಲ್ಯದ ಕೊರತೆ, ಮತ್ತು ರೋಗಗಳಿಗೆ ತಡವಾಗಿ ಚಿಕಿತ್ಸೆ ನೀಡುವುದು, ಆರೋಗ್ಯ ಸೇವೆಗಳ ಕೊರತೆ ಇತ್ಯಾದಿ ಮಹಿಳೆಯರನ್ನು ಕಾಡುತ್ತಿದೆ. ಭಾರತದಲ್ಲಿ ಗ್ರಾಮೀಣ, ಕಳಪೆ ಸಾಮಾಜಿಕ, ಆರ್ಥಿಕ ಕಾರಣಗಳು ಸಹ ಉತ್ತಮ ಆರೋಗ್ಯ ಸೇವೆಗೆ ಅಡ್ಡಿಯಾಗುತ್ತವೆ. ಗ್ರಾಮೀಣ ಭಾರತದಲ್ಲಿ ಬಡತನ, ಅವೈಜ್ಞಾನಿಕ ಆರೋಗ್ಯ ಸಂಸ್ಕೃತಿ, ಕಳಪೆ ಆರೋಗ್ಯ ವರ್ತನೆಗಳ ಕಾರಣದಿಂದ ಶಿಶುಗಳ ಮತ್ತು ತಾಯಂದಿರ ಮರಣ ಇನ್ನೂ ಹೆಚ್ಚಾಗುತ್ತಿದೆ.
ಈ ಸಮೀಕ್ಷೆಯು ಪ್ರಕಾರ ಕ್ಯಾನ್ಸರ್, ಪಾರ್ಶ್ವವಾಯು, ಹೃದ್ರೋಗ, ಮಾನಸಿಕ ಆರೋಗ್ಯ ಸಮಸ್ಯೆಗಳು, ನ್ಯುಮೋನಿಯಾ, ಕ್ಷಯರೋಗ ಮತ್ತು ಶ್ವಾಸಕೋಶದ ಕಾಯಿಲೆಯಿಂದ ಗ್ರಾಮೀಣ ಮಹಿಳೆಯರು ಬಳಲುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿನ ಮಹಿಳೆಯರ ಆರೋಗ್ಯ ಸಮಸ್ಯೆಗಳಲ್ಲಿ ಲಿಂಗ(ಜಂಡರ್) ಮತ್ತು ಆಕೆಯ ಮನೆಯವರು ಪ್ರಮುಖ ಪಾತ್ರ ವಹಿಸುತ್ತಾರೆ. ಸಾಮಾನ್ಯವಾಗಿ ಮನೆಯ ಪುರುಷ ಸದಸ್ಯ, ಆಕೆಯ ಪತಿ ಅಥವಾ ಅತ್ತೆ, ಆ ಮಹಿಳೆಯ ಆರೋಗ್ಯ ವಿಚಾರದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಮಹಿಳೆಗೆ ತನ್ನ ಆರೋಗ್ಯದ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ ಸಹ ಇರುವುದಿಲ್ಲ!. ಗ್ರಾಮೀಣ ಮಹಿಳೆಯರ ಆರೋಗ್ಯದ ಕಳಪೆ ಸ್ಥಿತಿಗೆ ಇದೂ ಒಂದು ಕಾರಣವಾಗಿದೆ.
ಈ ವರದಿಯ ಪ್ರಕಾರ ಅಪೌಷ್ಟಿಕತೆ, ರಕ್ತಹೀನತೆಯಂತಹ ಅಂಶಗಳು ತಾಯಂದಿರ ಆರೋಗ್ಯವನ್ನು ಮಾತ್ರವಲ್ಲದೆ ಕಡಿಮೆ ತೂಕದ ಶಿಶುಗಳ ಹುಟ್ಟಿಗೂ ಕಾರಣವಾಗುತ್ತವೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಗ್ರಾಮೀಣ ಮಹಿಳೆಯರ ಗರಿಷ್ಠ ದರವನ್ನು ಹೊಂದಿರುವ ದೇಶಗಳಲ್ಲಿ ಭಾರತ ಸಹ ಒಂದು ಎಂದು ಭಾವಿಸಲಾಗಿದೆ. ಆರ್ಥಿಕ ಅಸಮಾನತೆಯ ಕಾರಣದಿಂದ ಗ್ರಾಮೀಣ ಭಾಗಗಳಲ್ಲಿ ಪೌಷ್ಟಿಕ ಆಹಾರ ಪಡೆಯಲು ಸಾಧ್ಯವಾಗುವುದಿಲ್ಲ. ಅಪೌಷ್ಟಿಕತೆಯು ಸಹ ಮಹಿಳೆಯರನ್ನು ಬೇರೆ ಬೇರೆ ಕಾಯಿಲೆಗಳಿಗೆ ಗುರಿಯಾಗಿಸುತ್ತದೆ. ಗಂಭೀರ ವಿಚಾರವೆಂದರೆ ಮುಟ್ಟಿನ ಆರೈಕೆಗೆ ಸಂಬಂಧಿಸಿದಂತೆ ಅಲ್ಪಪ್ರಮಾಣದ ಮಹಿಳೆಯರಿಗೆ ಮಾತ್ರ ನ್ಯಾಪ್ಕಿನ್‌ಗಳನ್ನು ಬಳಸುವ ಅವಕಾಶವಿದೆ ಎನ್ನುವ ಅಂಶದಿಂದ ಭಾರತದ ಗ್ರಾಮೀಣ ಮಹಿಳೆಯರು ತಮ್ಮ ಆರೋಗ್ಯ ಹಕ್ಕುಗಳು ಮತ್ತು ಅಗತ್ಯಗಳಿಂದ ಹೇಗೆ ವಂಚಿತರಾಗಿದ್ದಾರೆ ಎನ್ನುವುದು ಗೊತ್ತಾಗುತ್ತದೆ.