ಉಡುಪಿ ಜಿಲ್ಲೆಯಲ್ಲಿ ಒಬ್ಬನಲ್ಲಿ ಮಾತ್ರ ಕೋವಿಡ್ ಸೋಂಕು ದೃಢ
ಉಡುಪಿ, ಡಿ.27: ಜಿಲ್ಲೆಯಲ್ಲಿ ರವಿವಾರ ಕೇವಲ ಒಬ್ಬ ಪುರುಷನಲ್ಲಿ ಮಾತ್ರ ಕೋವಿಡ್ ಸೋಂಕು ಪತ್ತೆಯಾಗಿದೆ. ಐವರು ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, ಸದ್ಯ ಕೋವಿಡ್ಗೆ ಸಕ್ರಿಯರಾಗಿರುವವರ ಸಂಖ್ಯೆ 60 ಮಾತ್ರ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದವರು ಪುರುಷರಾಗಿದ್ದು, ಇವರಲ್ಲಿ ರೋಗದ ಯಾವುದೇ ಲಕ್ಷಣ ಕಂಡುಬಂದಿಲ್ಲ. ಇವರು ಉಡುಪಿ ತಾಲೂಕಿನ ವರಾಗಿದ್ದು, ಹೋಮ್ ಐಸೋಲೇಷನ್ನಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಐವರು ಗುಣಮುಖ: ಶನಿವಾರ ಜಿಲ್ಲೆಯಲ್ಲಿ ಐವರು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ ಮುಕ್ತರಾದ ವರ ಒಟ್ಟು ಸಂಖ್ಯೆ ಈಗ 22,759ಕ್ಕೇರಿದೆ. ಸದ್ಯ 60 ಮಂದಿ ಜಿಲ್ಲೆಯಲ್ಲಿ ಕೆವಿಡ್ಗೆ ಸಕ್ರಿಯರಿದ್ದಾರೆ ಎಂದರು.
1248 ನೆಗೆಟಿವ್: ಶನಿವಾರ ಒಟ್ಟು 1249 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 1248 ಮಂದಿ ನೆಗೆಟಿವ್ ಫಲಿತಾಂಶ ಪಡೆದಿದ್ದಾರೆ. ಕೇವಲ ಒಬ್ಬನಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 23,007 ಆಗಿದೆ ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಶನಿವಾರದವರೆಗೆ ಒಟ್ಟು 2,80,528 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಇವರಲ್ಲಿ 2,57,521 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. ಒಟ್ಟು 23,007 ಮಂದಿ ಪಾಸಿಟಿವ್ ಬಂದಿದ್ದರೆ, 22,759 ಮಂದಿ ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೋವಿಡ್ಗೆ ಬಲಿಯಾದ ವರ ಸಂಖ್ಯೆ 188 ಮಾತ್ರ ಎಂದು ಇಲಾಖೆ ತಿಳಿಸಿದೆ.