ಡಾ.ವಿಜಯ ಬಲ್ಲಾಳರ ಮೇಲ್ಮನವಿ ಅರ್ಜಿ ವಜಾ; ಸಾರ್ವಜನಿಕ ಕ್ಷೇತ್ರವಾಗಿ ಉಳಿದ ಅಂಬಲಪಾಡಿ ದೇವಸ್ಥಾನ
ಉಡುಪಿ, ಡಿ.30: ಅಂಬಲಪಾಡಿ ಶ್ರೀಮಹಾಕಾಳಿ ಮತ್ತು ಜನಾರ್ದನ ದೇವಸ್ಥಾನವನ್ನು ತಮ್ಮ ಸ್ವಾಧೀನಕ್ಕೆ ನೀಡಬೇಕೆಂದು ಕೋರಿ ದೇವಸ್ಥಾನದ ಆಡಳಿತ ಮೊಕ್ತೇಸರ, ಮಾಧ್ವ ತುಳು ಶಿವಳ್ಳಿ ಬ್ರಾಹ್ಮಣರಾದ ಡಾ.ನೀ.ಬೀ. ವಿಜಯ ಬಲ್ಲಾಳರು 2014ರಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಚಾರಣೆಯ ಬಳಿಕ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಡಿ.23ರಂದು ವಜಾಗೊಳಿಸಿದೆ.
ಅಂಬಲಪಾಡಿ ಶ್ರೀಮಹಾಕಾಳಿ ಮತ್ತು ಜನಾರ್ದನ ದೇವರು ತಮ್ಮ ಮನೆ ದೇವರಾಗಿದ್ದು, ಹೀಗಾಗಿ ತಮ್ಮ ಹಿರಿಯರು ನಿರ್ಮಿಸಿದ ಈ ದೇವಸ್ಥಾನ ವನ್ನು ತಮ್ಮ ಕುಟುಂಬವೇ ನಿರ್ವಹಿಸಿಕೊಂಡು ಬಂದಿದ್ದು, ಹೀಗಾಗಿ ಇದನ್ನು ತಮಗೆ ಹಸ್ತಾಂತರಿಸಬೇಕು ಎಂದು ಡಾ.ವಿಜಯ ಬಲ್ಲಾಳರು ಮೇಲ್ಮನವಿ ಅರ್ಜಿಯಲ್ಲಿ ಮನವಿ ಮಾಡಿದ್ದರು.
ತಮ್ಮ ತಂದೆ ನೀ.ಬೀ.ಅಣ್ಣಾಜಿ ಬಲ್ಲಾಳರ ನಿಧನಾನಂತರ ಡಾ.ವಿಜಯ ಬಲ್ಲಾಳರು 2003ರಲ್ಲಿ ಉಡುಪಿಯ ಸಿವಿಲ್ ನ್ಯಾಯಾಲಯದಲ್ಲಿ ಇದೇ ಕೋರಿಕೆಯ ಅರ್ಜಿಯನ್ನು ಸಲ್ಲಿಸಿದ್ದು, ಅದನ್ನು ವಿಚಾರಣೆಯ ಬಳಿಕ 2013ರಲ್ಲಿ ಸಿವಿಲ್ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ ಡಾ.ಬಲ್ಲಾಳರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜೆ.ಎನ್.ಸುಬ್ರಹ್ಮಣ್ಯ ಅವರು ಡಿ.23ರಂದು ಅರ್ಜಿಯನ್ನು ವಜಾಗೊಳಿಸಿ ತಮ್ಮ ತೀರ್ಪನ್ನು ನೀಡಿದರು.
ವಾರ್ಷಿಕ ಏಳು ಕೋಟಿ ರೂ.ಗೂ ಅಧಿಕ ವರಮಾನವಿರುವ ಈ ದೇವಸ್ಥಾನ ಈಗ ಮುಜುರಾಯಿ ಇಲಾಖೆಯ ಅಧೀನದಲ್ಲಿದೆ. ಇದನ್ನು ತಮ್ಮ ಸ್ವಾಧೀನಕ್ಕೆ ನೀಡಬೇಕೆಂಬುದು ವಿಜಯ ಬಲ್ಲಾಳರ ಕೋರಿಕೆಯಾಗಿತ್ತು. ಆದರೆ ಈ ದೇವಸ್ಥಾನ ಹಿಂದಿನಿಂದಲೂ ಸಾರ್ವಜನಿಕ ದೇವಸ್ಥಾನ ವಾಗಿದ್ದು, ಶ್ರೀಮಹಾಕಾಳಿಗೆ ಅಂಬಲಪಾಡಿ ಆಸುಪಾಸಿನ ಏಳು ಮಾಗಣೆಯ ಸಾರ್ವಜನಿಕರು ಜಾತಿ, ಮತ ಬೇಧವಿಲ್ಲದೇ ಹಿಂದಿನಿಂದಲೂ ಪೂಜೆ ಸಲ್ಲಿಸುತಿದ್ದು ಎಂದು ಸಾರ್ವಜನಿಕರ ವಾದವಾಗಿದೆ.
ಸ್ವಾಮೀಜಿಯಿಂದ ದೂರವಾಣಿ ಕರೆ: ತಮ್ಮ 76 ಪುಟಗಳ ತೀರ್ಪಿನಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ವೊಂದು ಗಂಭೀರವಾದ ವಿಷಯಗಳನ್ನು ದಾಖಲಿಸಿದ್ದಾರೆ.
ನ್ಯಾಯಾಲಯದಲ್ಲಿ ಪ್ರಕರಣವೊಂದು ವಿಚಾರಣೆಯಲ್ಲಿರುವಾಗ ಪ್ರಕರಣಕ್ಕೆ ಸಂಬಂಧಿಸಿದ ಕಕ್ಷಿದಾರರಾಗಲೀ, ವಕೀಲರಾಗಲೇ, ಸಾರ್ವಜನಿಕರು ಸೇರಿದಂತೆ ಯಾರೇ ಆಗಲಿ ನ್ಯಾಯಾಧೀಶರಿಗೆ ಪತ್ರ ಬರೆಯುವ ಕ್ರಮವಿಲ್ಲ. ಆದರೆ ಈ ಪ್ರಕರಣದಲ್ಲಿ ಶೀಘ್ರವೇ ತೀರ್ಪು ನೀಡುವಂತೆ ಸೆಪ್ಟಂಬರ್ 8ರಂದು ತನ್ನ ಹೆಸರಿಗೆ ಪತ್ರವೊಂದು ಬಂದಿತ್ತು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಎರಡೂ ಕಡೆಯ ವಾದಗಳನ್ನು ಆಲಿಸಿ, ವಿಚಾರಣೆ ಮುಗಿಸಿ ಕೇಸಿನ ತೀರ್ಪನ್ನು ಕಾದಿರಿಸಿದಾಗ ಸ್ವಾಮೀಜಿಯೊಬ್ಬರು ದೂರವಾಣಿ ಕರೆ ಮಾಡಿ ತನ್ನೊಂದಿಗೆ ಕೇಸಿನ ಬಗ್ಗೆ ಮಾತನಾಡಲು ಪ್ರಯತ್ನಿಸಿದ್ದರು. ಇಂಥ ವಿಷಯಗಳನ್ನು ದೂರವಾಣಿಯಲ್ಲಿ ಮಾತನಾಡಬಾರದೆಂದು ಸ್ವಾಮೀಜಿ ಯವರಿಗೆ ಸೂಕ್ತವಾಗಿ ಉತ್ತರಿಸಿ ಕರೆಯ ಸಂಪರ್ಕವನ್ನು ಕಡಿತಮಾಡಿದ್ದಾಗಿ ಅವರು ದಾಖಲಿಸಿದ್ದಾರೆ.
ಅಲ್ಲದೇ ಪ್ರಕರಣದ ತೀರ್ಪನ್ನು ಅರ್ಜಿದಾರರ ಪರವಾಗಿ ನೀಡುವ ನಿರೀಕ್ಷೆಯನ್ನು ವ್ಯಕ್ತಪಡಿಸಿ ಐದು ಅನಾಮಧೇಯ ಪತ್ರಗಳು ತಮಗೆ ಬಂದಿರು ವುದಾಗಿಯೂ ನ್ಯಾಯಾಧೀಶರು ಸ್ವತಹ ತೀರ್ಪಿನಲ್ಲಿ ದಾಖಲಿಸಿದ್ದಾರೆ. ಈ ಎಲ್ಲಾ ಪತ್ರಗಳು ಫೈಲ್ನಲ್ಲಿದೆ. ಈ ಯಾವುದೇ ಘಟನೆ ತಮ್ಮ ಮೇಲೆ ಯಾವುದೇ ಪ್ರಭಾವ ಬೀರದಂತೆ, ಅರ್ಜಿಯನ್ನು ಅವರ ಮೆರಿಟ್ ಮೇಲೆ ನಿರ್ಧರಿಸಿ ತೀರ್ಪು ನೀಡಿದ್ದಾಗಿ ಅವರು ದಾಖಲಿಸಿದ್ದಾರೆ.