ಸಿರೋಸಿಸ್ ಕಾರಣಗಳು ಮತ್ತು ಲಕ್ಷಣಗಳು
ಸಿರೋಸಿಸ್ ಯಕೃತ್ತಿನ ದೀರ್ಘಕಾಲಿಕ ರೋಗವಾಗಿದ್ದು,ಯಕೃತ್ತಿನಲ್ಲಿ ವ್ಯಾಪಕವಾಗಿ ಕಚ್ಚುಗಳು ಅಥವಾ ಗಾಯದ ಗುರುತುಗಳು ಉಂಟಾಗುತ್ತವೆ ಮತ್ತು ನಾರಿನಿಂದ ಕೂಡಿದ ಅಂಗಾಂಶಗಳು ಯಕೃತ್ ಕೋಶಗಳ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತವೆ. ಇದರಿಂದ ಕ್ರಮೇಣ ಯಕೃತ್ತಿನ ಆರೋಗ್ಯವು ಹಾಳಾಗುತ್ತದೆ ಮತ್ತು ಅದು ತನ್ನ ಕಾರ್ಯವನ್ನು ಮಾಡಲು ಸಾಧ್ಯವಾಗುವುದಿಲ್ಲ. ಅಂತಿಮವಾಗಿ ವ್ಯಕ್ತಿಯ ಸಾವು ಸಂಭವಿಸುತ್ತದೆ.
ಕಾರಣಗಳು
ಸುದೀರ್ಘ ಕಾಲ ಅತಿಯಾದ ಮದ್ಯಪಾನದ ಚಟ ಸಿರೋಸಿಸ್‌ಗೆ ಮುಖ್ಯ ಕಾರಣವಾಗಿದೆ. ಭಾರತದಲ್ಲಿ ಯಕೃತ್ತಿನ ವೈರಾಣು ಸೋಂಕುಗಳು ಅಂದರೆ ಹೆಪಟೈಟಿಸ್(ಯಕೃತ್ತಿನ ಉರಿಯೂತ) -ನಿರ್ದಿಷ್ಟವಾಗಿ ಹೆಪಟೈಟಿಸ್ ಬಿ ಮತ್ತು ಸಿ ಹಾಗೂ ಪಿತ್ತರಸದ ಹರಿವಿಗೆ ಅಡ್ಡಿಗಳಿಂದಾಗಿ ಪಿತ್ತನಾಳದ ರೋಗಗಳು ಸಿರೋಸಿಸ್ ಉಂಟು ಮಾಡಬಹುದು.
ಲಕ್ಷಣಗಳು
ನಿಶ್ಶಕ್ತಿ,ತೂಕ ಇಳಿಕೆ, ಅಜೀರ್ಣ,ವಾಕರಿಕೆ ಮತ್ತು ಲೈಂಗಿಕ ನಿರಾಸಕ್ತಿಯಂತಹ ಲಕ್ಷಣಗಳು ಆರಂಭದಲ್ಲಿ ಕಂಡುಬರುತ್ತವಾದರೂ ಇವು ಖಚಿತವಾಗಿ ಸಿರೋಸಿಸ್‌ನ್ನು ಸೂಚಿಸುವುದಿಲ್ಲ. ಬಳಿಕ ಯಕೃತ್ತು ಕೋಶಗಳ ವೈಫಲ್ಯಗಳ ಲಕ್ಷಣಗಳು ಗೋಚರಿಸುತ್ತವೆ. ಕಾಮಾಲೆ, ರಕ್ತವಾಂತಿ,ಷಂಡತನ,ಪುರುಷರಲ್ಲಿ ಸ್ತನ ಬೆಳವಣಿಗೆ ಮತ್ತು ಶರೀರದಾದ್ಯಂತ ಊತ ಇವು ಈ ಲಕ್ಷಣಗಳಲ್ಲಿ ಸೇರಿವೆ. ಶರೀರದಲ್ಲಿ ಪ್ರೋಟಿನ್‌ಗಳ ಮಟ್ಟ ಕುಸಿಯುವುದು ಶರೀರದಲ್ಲಿ ದ್ರವ ತುಂಬಿಕೊಳ್ಳಲು ಕಾರಣವಾಗುತ್ತದೆ. ಯಕೃತ್ತಿಗೆ ರಕ್ತವನ್ನು ಪೂರೈಸುವ ರಕ್ತನಾಳದಲ್ಲಿ ಹೆಚ್ಚಿನ ಒತ್ತಡದಿಂದ ಅನ್ನನಾಳದಲ್ಲಿಯ ರಕ್ತನಾಳಗಳು ಉಬ್ಬಿಕೊಳ್ಳುತ್ತವೆ. ಹೀಗೆ ಉಬ್ಬಿಕೊಂಡ ರಕ್ತನಾಳಗಳು ಒಡೆದಾಗ ರಕ್ತವಾಂತಿಯ ಮೂಲಕ ರಕ್ತವು ನಷ್ಟಗೊಳ್ಳುತ್ತದೆ. ರಕ್ತವನ್ನು ಹೆಪ್ಪುಗಟ್ಟಿಸುವ ಘಟಕಗಳನ್ನು ಯಕೃತ್ತು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸುವುದಿಲ್ಲವಾದ್ದರಿಂದ ರಕ್ತದ ಹೆಪ್ಪುಗಟ್ಟುವಿಕೆಗೂ ಅಡಚಣೆಯಾಗುತ್ತದೆ. ವಿಫಲಗೊಳ್ಳುತ್ತಿರುವ ಯಕೃತ್ತು ಶರೀರದಲ್ಲಿ ಸಂಗ್ರಹವಾಗುವ ವಿಷವಸ್ತುಗಳನ್ನು ಹೊರಗೆ ಹಾಕಲು ಅಸಮರ್ಥವಾಗುತ್ತದೆ ಮತ್ತು ಮಿದುಳಿನ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಇದು ಮಂಪರಿಗೆ ಮತ್ತು ಬಳಿಕ ಪ್ರಜ್ಞಾಹೀನ ಸ್ಥಿತಿಗೆ ಕಾರಣವಾಗುತ್ತದೆ. ಇದನ್ನು ಲಿವರ್ ಎನ್ಸಿಫಾಲೊಪತಿ ಎಂದು ಕರೆಯಲಾಗುತ್ತದೆ. ರೋಗನಿರ್ಧಾರ ಹೇಗೆ ಮಾಡುತ್ತಾರೆ?
ಯಕೃತ್ತಿನ ಕಾರ್ಯ ನಿರ್ವಹಣೆಯು ಯಾವ ಸ್ಥಿತಿಯಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳಲು ವೈದ್ಯರು ರಕ್ತಪರೀಕ್ಷೆಗಳನ್ನು ಕೈಗೊಳ್ಳುತ್ತಾರೆ. ಸಿರೋಸಿಸ್‌ಗೆ ಕಾರಣಗಳನ್ನು ಖಚಿತಪಡಿಸಿಕೊಳ್ಳಲು ಇತರ ಪರೀಕ್ಷೆಗಳೂ ಅಗತ್ಯವಾಗಬಹುದು. ಸಿರೋಸಿಸ್ ದೃಢಪಡಿಸಿಕೊಳ್ಳಲು ಯಕೃತ್ತಿನ ಬಯಾಪ್ಸಿಯನ್ನು ನಡೆಸಬಹುದು. ಈ ಪ್ರಕ್ರಿಯೆಯಲ್ಲಿ ಸೂಜಿಯನ್ನು ಯಕೃತ್ತಿನಲ್ಲಿ ತೂರಿಸಿ ಪರೀಕ್ಷೆಗಾಗಿ ಅದರ ಸಣ್ಣ ತುಂಡನ್ನು ತೆಗೆದುಕೊಳ್ಳಲಾಗುತ್ತದೆ. ಯಾವುದೇ ಅರಿವಳಿಕೆ ನೀಡದೆ ಸುರಕ್ಷಿತವಾಗಿ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಮತ್ತು ರೋಗಿಗೆ ಹೆಚ್ಚು ತೊಂದರೆಯಾಗುವುದಿಲ್ಲ.
ಚಿಕಿತ್ಸೆ ಹೇಗೆ?
ಸಿರೋಸಿಸ್ ಯಕೃತ್ತಿನಲ್ಲಿಯ ಕಾಯಂ ಬದಲಾವಣೆಯಾಗಿದೆ. ಮದ್ಯಪಾನವನ್ನು ನಿರ್ಬಂಧಿಸುವ ಮೂಲಕ ಅಥವಾ ವೈರಸ್ ನಿರೋಧಕ ಔಷಧಿಗಳನ್ನು ಸೇವಿಸುವ ಮೂಲಕ ಅದನ್ನು ತಡೆಗಟ್ಟಬಹುದು ಮತ್ತು ತಡೆಗಟ್ಟುವುದು ಅಗತ್ಯವೂ ಹೌದು. ಒಮ್ಮೆ ಸಿರೋಸಿಸ್ ಜೊತೆಯಾಯಿತೆಂದರೆ ಜೀವನಶೈಲಿ ಬದಲಾವಣೆಯು ಅನಿವಾರ್ಯವಾಗುತ್ತದೆ. ಉತ್ತಮ ಸಮತೋಲಿತ ಆಹಾರ,ಸಾಕಷ್ಟು ವಿಟಾಮಿನ್ ಪೂರಕಗಳ ಸೇವನೆಯ ಮೂಲಕ ತೊಂದರೆಗಳು ಮತ್ತು ಅಂತಿಮವಾಗಿ ಯಕೃತ್ತು ವೈಫಲ್ಯವನ್ನು ವಿಳಂಬಗೊಳಿಸಬ ಹುದು. ರೋಗಿಯ ಆಯುಷ್ಯವನ್ನು ಹೆಚ್ಚಿಸುವಲ್ಲಿ ಅನ್ನನಾಳದಲ್ಲಿಯ ಉಬ್ಬಿದ ರಕ್ತನಾಳಗಳಿಂದ ರಕ್ತಸ್ರಾವವನ್ನು ತಡೆಯಲು ಎಂಡೋಸ್ಕೋಪಿಕ್ ಚಿಕಿತ್ಸೆಯು ಮುಖ್ಯವಾಗಿದೆ. ಆದರೆ ಯಕೃತ್ತು ವೈಫಲ್ಯದ ಅಂತಿಮ ಹಂತದ ಲಕ್ಷಣಗಳು ಗೋಚರಿಸತೊಡಗಿದರೆ ರೋಗಿಯ ಜೀವವನ್ನು ಉಳಿಸಲು ಯಕೃತ್ತು ಕಸಿ ಮಾಡುವುದು ಏಕಮೇವ ಚಿಕಿತ್ಸೆಯಾಗಿರುತ್ತದೆ. ಇಂತಹ ಪ್ರಕರಣಗಳಲ್ಲಿ ಮಿದುಳು ಸಾವನ್ನಪ್ಪಿದ ವ್ಯಕ್ತಿಯ ಯಕೃತ್ತನ್ನು ಅಥವಾ ಸಜೀವ ದಾನಿಯಿಂದ ಪಡೆದ ಯಕೃತ್ತನ್ನು ಕಸಿ ಮಾಡಲಾಗುತ್ತದೆ.