ಪಡೆದು ಬಂದ ಗುರುದೇವ
ಡಾ. ಎಂ.ಎಸ್. ಆಶಾದೇವಿ
ಅನುವಾದಕಿ, ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಅವರು, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ., ಡಿ.ಆರ್. ನಾಗರಾಜ್ ಮಾರ್ಗದರ್ಶನದಲ್ಲಿ ನವೋದಯ ವಿಮರ್ಶೆ ಮೇಲೆ ಪಾಶ್ಚಾತ್ಯ ವಿಮರ್ಶೆಯ ಪ್ರಭಾವ ಕುರಿತು ಪಿಎಚ್‌ಡಿ ಪಡೆದವರು. ಸ್ತ್ರೀಮತವನುತ್ತರಿಸಲಾಗದೇ (ಸಾಹಿತ್ಯ, ಸಂಸ್ಕೃತಿ ಕುರಿತ ಲೇಖನಗಳು), ಉರಿಚಮ್ಮಾಳಿಗೆ (ಡಿ.ಆರ್.ನಾಗರಾಜ್ ಅವರ ದಿ ಫ್ಲೇಮಿಂಗ್ ಫೀಟ್ ಕೃತಿಯ ಅನುವಾದ), ವಚನ ಪ್ರವೇಶ (ಸಂಪಾದನೆ), ಭಾರತದ ಬಂಗಾರ ಪಿ.ಟಿ.ಉಷಾ, ನಡುವೆ ಸುಳಿವ ಆತ್ಮ (ವಿಮರ್ಶಾ ಕೃತಿ), ಗೌರಿ ಲಂಕೇಶ್ ಕಂಡಹಾಗೆ-4, ಡಿ.ಆರ್.ನಾಗರಾಜ್ ಅವರ ಬೆಲೆಬಾಳುವ ಬರಹಗಳು (ಸಂಪಾದಿತ ಕೃತಿ) ಇವರ ಪ್ರಮುಖ ಕೃತಿಗಳು. ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರರಾಗಿರುವ ಆಶಾದೇವಿ ಅವರು ಪ್ರಸ್ತುತ ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಿಆರ್‌ಎನ್ ತಮ್ಮನ್ನು ಬೌದ್ಧಿಕ ನೇಕಾರ ಎಂದು ಒಂದು ಕಡೆ ಕರೆದುಕೊಂಡಿದ್ದಾರೆ. ಅದು ರೂಪಕವಾಗಿಯೂ ನಿಜ. ಅವರು ಅಳವಡಿಸಿಕೊಂಡ ತಾತ್ವಿಕ ವಿನ್ಯಾಸವಾಗಿಯೂ ನಿಜ. ಒಂದೇ ಗುಣದ, ಒಂದೇ ಬಣ್ಣದ ನೇಯ್ಗೆಯ ಸಾಂಪ್ರದಾಯಿಕತೆಯನ್ನು ಬಿಟ್ಟುಕೊಟ್ಟು ಅನೇಕದ ಏಕತೆಯ ನೇಯ್ಗೆಯ ಹೊಸ ವ್ಯಾಖ್ಯಾನವನ್ನೇ ಕಟ್ಟಲು ಹೊರಟ ಸಾಹಸಿ ಡಿಆರ್‌ಎನ್. ಅದರ ಮಿತಿಗಳು ಮತ್ತು ಸವಾಲುಗಳ ಬಗ್ಗೆ ನಮಗೆ ತಕರಾರುಗಳು ಇರಲು ಸಾಧ್ಯ ಮತ್ತು ಇವೆ. ಆದರೆ, ಇದರ ಮೂಲಕ ಅವರು ಸಾಧಿಸಿದ್ದೂ ಅಪಾರ ಎನ್ನುವುದನ್ನು ಇಂದಿಗೂ ಅವರ ವಿಚಾರಗಳ ಚರ್ಚೆ ನಡೆಯುತ್ತಲೇ ಇರುವುದು ಸಾಬೀತು ಪಡಿಸುತ್ತದೆ. ಈ ಹೆಣಿಗೆಯನ್ನು ಪ್ರಸ್ತುತ ಪಡಿಸಲು ಅವರು ಬಳಸಿದ ಶೈಲಿ ಕೂಡ ಇಂದು ಮಾನವಿಕ ಮತ್ತು ಸಾಮಾಜಿಕ ಅಧ್ಯಯನಗಳಲ್ಲಿ ತುಂಬ ಪ್ರಚಲಿತವಾಗಿದೆ.
ನಕ್ಷೆ ಹಿಡಿದು ತಡಕಾಡಬೇಡ ನಕ್ಷತ್ರಲೋಕವನ್ನು
ತೊಂಡು ಮೇವರಿಗೆ ಹಾದಿ ಕೇಳದಿರು
ಹತ್ತು ದುರ್ಗವನ್ನು
-ಬೇಂದ್ರೆ
ಕನ್ನಡ ಜಗತ್ತಿಗೆಷ್ಟೋ ಅಷ್ಟೇ ಭಾರತೀಯ ಬೌದ್ಧಿಕ ಜಗತ್ತನ್ನೂ ವಿಸ್ತರಿಸಿದ ಡಿ.ಆರ್. ನಾಗರಾಜ್ ಅವರನ್ನು ಅನೇಕ ಶೀರ್ಷಿಕೆಗಳ ಅಡಿಯಲ್ಲಿ ಗುರುತಿಸುವುದು ಸಾಧ್ಯವಿದೆ. ಆದರೆ, ಆ ಎಲ್ಲವೂ ಅವರ ಪಾರ್ಶ್ವಿಕ ನೋಟಗಳಾಗುತ್ತವೆ ಎನ್ನುವುದೂ ಅಷ್ಟೇ ನಿಜ. ಬಿಡಿಯಾಗಿ ಆರಂಭವಾದ ಡಿಆರ್‌ಎನ್ ಅವರ ಚಿಂತನಾ ಪ್ರಕ್ರಿಯೆ ಇಡಿಯಾಗುವುದರ ಕಡೆಗೆ ಚಲಿಸಿತು. ಆ ತನಕ ಸಮಾನಾಂತರ ಎನ್ನುವಂತೆ ಭಾಸವಾಗುತ್ತಿದ್ದ ಜ್ಞಾನಶಿಸ್ತುಗಳು, ಅಧ್ಯಯನ ಮಾದರಿಗಳು ಒಂದು ಇನ್ನೊಂದಕ್ಕೆ ಪೂರಕವಾಗುವ, ಈ ಎಲ್ಲ ಮಾದರಿಗಳೂ ಒಂದು ಇನ್ನೊಂದರೊಂದಿಗೆ ಬೆರೆತು ‘ಅಖಂಡ ಸಮುದಾಯ ಮೀಮಾಂಸೆ’ಯಾಗುವ ಪ್ರಕ್ರಿಯೆಯೊಂದು ತಾತ್ವಿಕತೆ ಮತ್ತು ಸೃಜನಶೀಲತೆಗಳ ಅಪೂರ್ವ ಸಮಾಗಮದಂತೆ ಇವರಲ್ಲಿ ಘಟಿಸಿತು. ಆಧುನಿಕ ಭಾರತದ ಅಗತ್ಯಗಳು ಮತ್ತು ಸವಾಲುಗಳಿಗೆ ಸ್ಫೋಟಕ ಪ್ರತಿಭೆಯ ವ್ಯಕ್ತಿತ್ವವೊಂದು ಪ್ರತಿಕ್ರಿಯಿಸಿದ, ಅದನ್ನು ನಿಭಾಯಿಸಲು ಯತ್ನಿಸಿದ ಅತಿಮುಖ್ಯ ಚಿಂತನಾಕ್ರಮವೊಂದನ್ನು ಡಿ.ಆರ್. ನಾಗರಾಜ್ ಅವರಲ್ಲಿ ನಾವು ಕಾಣಬಹುದು.
ಸಾಹಿತ್ಯದಿಂದ ಆರಂಭವಾದ ಈ ಪ್ರಯಾಣ ಸಂಸ್ಕೃತಿ ಮೀಮಾಂಸೆ, ದಲಿತ ಮೀಮಾಂಸೆ, ಸ್ತ್ರೀವಾದಗಳನ್ನು ಪ್ರವೇಶಿಸಿತು. ದಲಿತ ಮೀಮಾಂಸೆಯ ಮೂಲಕವೇ ಭಾರತದ ನವದರ್ಶನ ಮಾಡಲು ಹೊರಟ ಡಿಆರ್‌ಎನ್ ವಸಾಹತೋತ್ತರ ಚಿಂತನೆಯ ಮೂಲಕ ಇದನ್ನು ಬಲಪಡಿಸಿಕೊಳ್ಳಲು ಹಂಬಲಿಸಿದರು. ಇದು ಮುಂದುವರಿದು ಓರಿಯೆಂಟಲಿಸಂನ ಮೂಲಕ ದೇಶೀವಾದವನ್ನು ತಲುಪಿತು. ಇದರ ಆರಂಭದಲ್ಲಿ ತಳ ಸಂಸ್ಕೃತಿಯ ಮೂಲಕ, ವಿಸ್ಮತಿಯ ನೆಲೆಯಲ್ಲಿ ಭಾರತವನ್ನು ಕಾಣಲು ಹವಣಿಸಿ, ದಲಿತ ಲೋಕವೂ ಸೇರಿದಂತೆ ಇಡೀ ಭಾರತವೇ ಹೊಚ್ಚ ಹೊಸದಾದ ಚಹರೆಯಲ್ಲಿ ಕಾಣತೊಡಗಿದ್ದನ್ನು ಬೆರಗಿನಿಂದ ಕಂಡು, ಬಹುಮುಖಿ ಭಾರತೀಯ ಸಮುದಾಯವನ್ನು ಬಹುತ್ವಗಳ ಸಮಾನ ಪಾತಳಿಯಲ್ಲಿ ಗ್ರಹಿಸಬೇಕಾದ್ದೇ ಸಮಕಾಲೀನ ಭಾರತದ ಮೂಲ ಅಗತ್ಯವೆಂದು ಕಂಡುಕೊಂಡು, ಅದೇ ಭಾರತದ ಮುಂದಿನ ಚಲನೆಯಾಗಬೇಕು ಎನ್ನುವ ದಾರ್ಶನಿಕ ನೆಲೆಯನ್ನು ಪ್ರತಿಪಾದಿಸುತ್ತಿರುವಾಗಲೇ ನಮ್ಮಿಂದ ಕಣ್ಮರೆಯಾದರು.
ನನಗೆ ಆಳದಲ್ಲಿ ಯಾವಾಗಲೂ ಅನ್ನಿಸುವುದೆಂದರೆ, ಅರಿವಿನ ಹಿಂಸೆಯನ್ನು, ಅರಿವಿನಿಂದಲೇ ಮೀರುವ ಮಹಾ ಪಯಣದ ಪಥಿಕರು ಇವರು ಎಂದು. ರೂಪಕಗಳ ಕಡುಮೋಹಿಯಾದ ಇವರನ್ನು ಒಂದು ರೂಪಕದ ಮೂಲಕವೇ ಅರ್ಥ ಮಾಡಿಕೊಳ್ಳಲು ಯತ್ನಿಸುವುದಾದರೆ, ಇವರ ಬದುಕು ಮತ್ತು ವ್ಯಕ್ತಿತ್ವಗಳೆರಡೂ ‘ಹುಲಿ ಸವಾರಿ’. ಹತ್ತುವುದು ಮಹಾ ಸಾಹಸವಾದರೆ, ಅದರಿಂದ ಇಳಿಯಲು ಸಾಧ್ಯವಿಲ್ಲದೇ ಇರುವುದು, ಸದಾ ಸವಾರಿ ಮಾಡುತ್ತಲೇ ಇರಬೇಕಾದ್ದು ಹುಲಿ ಸವಾರಿಯ ಶಕ್ತಿಯೂ ಹೌದು, ಅನಿವಾರ್ಯತೆಯೂ ಹೌದು. ಅದೊಂದು ವಿಧಿಯಂತೆ. ತಪ್ಪಿಸಿಕೊಳ್ಳುವುದು ಅಸಾಧ್ಯ.
ಡಿಆರ್‌ಎನ್ ತಮ್ಮನ್ನು ಬೌದ್ಧಿಕ ನೇಕಾರ ಎಂದು ಒಂದು ಕಡೆ ಕರೆದುಕೊಂಡಿದ್ದಾರೆ. ಅದು ರೂಪಕವಾಗಿಯೂ ನಿಜ. ಅವರು ಅಳವಡಿಸಿಕೊಂಡ ತಾತ್ವಿಕ ವಿನ್ಯಾಸವಾಗಿಯೂ ನಿಜ. ಒಂದೇ ಗುಣದ, ಒಂದೇ ಬಣ್ಣದ ನೇಯ್ಗೆಯ ಸಾಂಪ್ರದಾಯಿಕತೆಯನ್ನು ಬಿಟ್ಟುಕೊಟ್ಟು ಅನೇಕದ ಏಕತೆಯ ನೇಯ್ಗೆಯ ಹೊಸ ವ್ಯಾಖ್ಯಾನವನ್ನೇ ಕಟ್ಟಲು ಹೊರಟ ಸಾಹಸಿ ಡಿಆರ್‌ಎನ್ ಅದರ ಮಿತಿಗಳು ಮತ್ತು ಸವಾಲುಗಳ ಬಗ್ಗೆ ನಮಗೆ ತಕರಾರುಗಳು ಇರಲು ಸಾಧ್ಯ ಮತ್ತು ಇವೆ. ಆದರೆ, ಇದರ ಮೂಲಕ ಅವರು ಸಾಧಿಸಿದ್ದೂ ಅಪಾರ ಎನ್ನುವುದನ್ನು ಇಂದಿಗೂ ಅವರ ವಿಚಾರಗಳ ಚರ್ಚೆ ನಡೆಯುತ್ತಲೇ ಇರುವುದು ಸಾಬೀತು ಪಡಿಸುತ್ತದೆ. ಈ ಹೆಣಿಗೆಯನ್ನು ಪ್ರಸ್ತುತ ಪಡಿಸಲು ಅವರು ಬಳಸಿದ ಶೈಲಿ ಕೂಡ ಇಂದು ಮಾನವಿಕ ಮತ್ತು ಸಾಮಾಜಿಕ ಅಧ್ಯಯನಗಳಲ್ಲಿ ತುಂಬ ಪ್ರಚಲಿತವಾಗಿದೆ. ‘ಕಥನ’ದ ಮಾದರಿಯನ್ನು ಆರಂಭಿಸುವ ಮೂಲಕ ವಿಮರ್ಶೆಯ ಭಾಷೆ ಮತ್ತು ಶೈಲಿಯಲ್ಲಿಯೇ ಕ್ರಾಂತಿಕಾರಕವಾದ ಬದಲಾವಣೆಗಳನ್ನು ತರುವುದು ಇವರಿಗೆ ಸಾಧ್ಯವಾಯಿತು. ಕನ್ನಡದ ವಿದ್ವಾಂಸರೊಬ್ಬರು ಇವರ ಶಕ್ತಿ ಶಾರದೆಯ ಮೇಳ ಕೃತಿಯ ಬಗ್ಗೆ, ಒಳ್ಳೆಯ ಸಂಗೀತ ಕೇಳಿದ ಹಾಗಾಗುತ್ತೆ ಕಣಯ್ಯ ನಿನ್ನ ಪುಸ್ತಕ ಓದಿದರೆ ಎಂದದ್ದನ್ನು ಅದೆಷ್ಟು ಸಂತೋಷದಿಂದ, ಅಭಿಮಾನದಿಂದ ಮತ್ತೆ ಮತ್ತೆ ಹೇಳುತ್ತಲೇ ಇರುತ್ತಿದ್ದರು ಎನ್ನುವುದನ್ನು ನೆನೆದರೆ ಈಗಲೂ ಕಣ್ಣು ತುಂಬುತ್ತದೆ. (ನಮ್ಮ ಸಿದ್ಧಾಂತವನ್ನು ಪ್ರತಿಪಾದಿಸುವ ಸಣ್ಣ ಅವಕಾಶವನ್ನೂ ಬಿಡಬಾರದು ಎನ್ನುವುದು ಸ್ತ್ರೀವಾದಿಗಳ ವ್ರತ ಮತ್ತು ಅದು ನಮ್ಮ ಅನಿವಾರ್ಯತೆಯೂ ಹೌದು. ಈ ಹೆಣಿಗೆ ಮತ್ತು ಕಥನ ಮಾದರಿಗಳು ಸ್ತ್ರೀವಾದಿಗಳು ಕಳೆದ ಶತಮಾನದ ಉತ್ತರಾರ್ಧದಿಂದ ಚಾಲ್ತಿಗೆ ತಂದಿರುವ ಮುಖ್ಯ ಪ್ರಯೋಗಗಳು. ಇವು ಕಂಡಿರುವ ಯಶಸ್ಸು ಅಗಾಧವಾದುದು. ಈ ಎರಡೂ ಹೆಣ್ಣಿನ ಆದಿಮ ಗುಣಗಳು. ಇವುಗಳನ್ನು ಪುರುಷರ ಶಾಸ್ತ್ರ ಮಾದರಿಯ ಎದುರಿಗೆ ಮಂಡಿಸುವುದು ಸ್ತ್ರೀವಾದಿ ಮೀಮಾಂಸೆಯ ಅನನ್ಯತೆಯ ದೃಷ್ಟಿಯಿಂದಲೂ, ಮೀಮಾಂಸೆಯ ಏಕತಾನತೆಯನ್ನು ಮುರಿಯುವ ದೃಷ್ಟಿಯಿಂದಲೂ ಮುಖ್ಯ ಎಂದು ತಿಳಿಯಲಾಗುತ್ತದೆ. ಚರಿತ್ರೆಯುದ್ದಕ್ಕೂ ಮುಚ್ಚುತ್ತಲೇ ಬಂದಿರುವ ಸ್ತ್ರೀಕಥನಗಳನ್ನು ಮರು ಇತಿಹಾಸದಲ್ಲಿ ನಿರೂಪಿಸಲು ಕಥನ ಮತ್ತು ಹೆಣಿಗೆಗಳು ಮಾತ್ರ ನಮ್ಮ ನೆರವಿಗೆ ಬರಲು ಸಾಧ್ಯ ಎನ್ನುವ ವಾಸ್ತವವೂ ಇಲ್ಲಿದೆ. ಆದರೆ ಡಿ.ಆರ್. ಇದನ್ನು ಯಥಾವತ್ತಾಗಿ ಎನ್ನುವಂತೆ ಅಳವಡಿಸಿಕೊಂಡಿದ್ದು, ಈಗಲೂ ನನಗೆ ಬೆರಗಿನ ಸಂಗತಿಯಾಗಿಯೇ ಉಳಿದಿದೆ. ಸಬಾಲ್ಟ್ರನ್ ಸಿದ್ಧಾಂತವಾಗಿಯೂ ಇದನ್ನು ನೋಡಲು ಸಾಧ್ಯವಿದೆ. ವಂಚಿತ ಸಮುದಾಯಗಳು ಎಲ್ಲೆಡೆ ಆಶ್ರಯಿಸಲೇ ಬೇಕಾದ ದಾರಿಯೂ ಇದಾಗಿರಬಹುದು. ಆದರೆ, ಡಿಆರ್‌ಎನ್ ಕೇವಲ ಕಣ್ಮರೆಯಾದ ತಳವರ್ಗದ ಸಾಂಸ್ಕೃತಿಕ ಕಥನಕ್ಕೆ ಮಾತ್ರವಲ್ಲ ಒಟ್ಟು ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನೇ ಈ ಮಾದರಿಯ ಮೂಲಕ ಮರು ನಿರೂಪಣೆ ಮಾಡಲು ನಡೆಸಿದ ಪ್ರಯತ್ನಗಳು ಇತಿಹಾಸವನ್ನು ನೋಡುವ ಬಗೆಯನ್ನೇ ತಿರುವು ಮುರುವು ಮಾಡಬಲ್ಲ ಘನ ಉದ್ದೇಶದವು. ಮೀಮಾಂಸೆಯ ಮಾದರಿಗಳನ್ನೇ ಹೀಗೆ ಮುರಿದು ಕಟ್ಟಿದ ಈ ಪರಿಯು ವಂಚಿತ ಸಮುದಾಯದವರನ್ನು ಎಲ್ಲ ಬಗೆಯಲ್ಲಿಯೂ ಮುನ್ನೆಲೆಗೆ ತರಬಲ್ಲ ಸಾಮರ್ಥ್ಯದವು ಎನ್ನುವ ಅಂಶ, ಡಿ.ಆರ್.ಅವರ ನಿರ್ಣಾಯಕ ಯಶಸ್ಸುಗಳಲ್ಲಿ ಒಂದು).
ಡಿ.ಆರ್. ಅವರ ಬಹುಚರ್ಚಿತ ‘ವಿಸ್ಮತಿ’ ಪರಿಕಲ್ಪನೆಯನ್ನೇ ನೋಡಿ. ಇದನ್ನು ಕನ್ನಡದಲ್ಲೂ ಭಾರತದಲ್ಲೂ ತಮ ತಮಗೆ ಬೇಕಾದಂತೆ ವ್ಯಾಖ್ಯಾನಿಸಿಕೊಳ್ಳುತ್ತಿದ್ದಾರೆ. ಗಣೇಶ್ ದೇವಿಯವರು ಮೊದಲಿಗೆ ಈ ಪರಿಕಲ್ಪನೆಯನ್ನು ಬಳಸಿದರು. ಆದರೆ, ಈ ಇಡೀ ಪರಿಕಲ್ಪನೆಗೆ ಸಾಧ್ಯತೆಯ ಶಕ್ತಿಯನ್ನು ತುಂಬಿದ್ದು ಮಾತ್ರ ಡಿ.ಆರ್. ಭಾರತದ ಬಹುತ್ವವನ್ನು ಅದರ ವೈವಿಧ್ಯತೆ, ಜೀವಂತಿಕೆ ಮತ್ತು ಸಂವಾದದ ಸ್ವರೂಪವನ್ನು ಬಿಚ್ಚಿ ಹರಡಬಲ್ಲ, ಅವೈದಿಕರ ಮತ್ತು ವೈದಿಕರ ಕಣ್ಣುಗಳನ್ನು ಏಕಕಾಲಕ್ಕೆ ತೆರೆಯಿಸಬಲ್ಲ ಕೃತಿಗಳನ್ನು ಅಕ್ಷರ ಚಿಂತನ ಮಾಲೆಯಲ್ಲಿ ಪ್ರಕಟಿಸಿದರು. ಅವೈದಿಕ ದರ್ಶನಗಳ ಕುರಿತಂತೆ ಹೆಗ್ಗೋಡಿನಲ್ಲಿ ನಡೆದ ಕಾರ್ಯಾಗಾರವು ಬೌದ್ಧಿಕ ಊಳಿಗಮಾನ್ಯತೆಯನ್ನು ಭಾರತೀಯ ಮನಸ್ಸು ಉದ್ದಕ್ಕೂ ವಿರೋಧಿಸುತ್ತಲೇ ಬಂದಿರುವುದರ ಹೆಜ್ಜೆಗುರುತುಗಳನ್ನು ಸ್ಪಷ್ಟವಾಗಿ ದಾಖಲಿಸುವ ಯತ್ನವಾಗಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳು ಇದಕ್ಕೆ ತದ್ವಿರುದ್ಧ ಎನ್ನುವಂತೆ ನಡೆಯುತ್ತಾ ವಿಸ್ಮತಿ ಪರಿಕಲ್ಪನೆಯನ್ನೇ ತಿರುಚುತ್ತಿವೆ. ಬಾಲಗಂಗಾಧರ ಮೊದಲಾದವರು ವಿಸ್ಮತಿಯಿಂದ ಹೊರಬಂದ ಪಠ್ಯಗಳನ್ನು ಮತ್ತೆ ವಿಸ್ಮತಿಗೆ ವಾಪಸ್ ಕಳುಹಿಸಲು ನಡೆಸುತ್ತಿರುವ ಹರಸಾಹಸಗಳು ಹಾಸ್ಯಾಸ್ಪದ ಹಾಗೂ ಅಪಾಯಕಾರಿ.
ನನಗೆ ಆಳದಲ್ಲಿ ಯಾವಾಗಲೂ ಅನ್ನಿಸುವುದೆಂದರೆ, ಅರಿವಿನ ಹಿಂಸೆಯನ್ನು, ಅರಿವಿನಿಂದಲೇ ಮೀರುವ ಮಹಾ ಪಯಣದ ಪಥಿಕರು ಇವರು ಎಂದು. ರೂಪಕಗಳ ಕಡುಮೋಹಿಯಾದ ಇವರನ್ನು ಒಂದು ರೂಪಕದ ಮೂಲಕವೇ ಅರ್ಥ ಮಾಡಿಕೊಳ್ಳಲು ಯತ್ನಿಸುವುದಾದರೆ, ಇವರ ಬದುಕು ಮತ್ತು ವ್ಯಕ್ತಿತ್ವಗಳೆರಡೂ ‘ಹುಲಿ ಸವಾರಿ’. ಹತ್ತುವುದು ಮಹಾ ಸಾಹಸವಾದರೆ, ಅದರಿಂದ ಇಳಿಯಲು ಸಾಧ್ಯವಿಲ್ಲದೇ ಇರುವುದು, ಸದಾ ಸವಾರಿ ಮಾಡುತ್ತಲೇ ಇರಬೇಕಾದ್ದು ಹುಲಿ ಸವಾರಿಯ ಶಕ್ತಿಯೂ ಹೌದು, ಅನಿವಾರ್ಯತೆಯೂ ಹೌದು. ಅದೊಂದು ವಿಧಿಯಂತೆ. ತಪ್ಪಿಸಿಕೊಳ್ಳುವುದು ಅಸಾಧ್ಯ. ಅರಿವಿನ ಹಿಂಸೆ ಎಂದೆ. ಅವರು ಮತ್ತೆ ಮತ್ತೆ ಹೇಳುತ್ತಿದ್ದ ಮಾತೊಂದಿತ್ತು, ‘ಈ ದೇಶದಲ್ಲಿ ಒಬಿಸಿಯಾಗಿ ಮಾತ್ರ ಹುಟ್ಟಬಾರದು ಕಣ್ರಿ, ಅದರಂಥ ದುರಂತ ಮತ್ತೊಂದಿಲ್ಲ’ ಎನ್ನುವುದು. ಭಾರತೀಯ ಸಮುದಾಯ ರಚನೆಯ ದೋಷಗಳ, ಮಿತಿಗಳ ಅರಿವೇ ಶ್ರೇಣೀಕೃತ ವ್ಯವಸ್ಥೆಯ ಅಂಚಿನಲ್ಲಿರುವವರಿಗೆ ಅರಿವಿನ ಹಿಂಸೆಯಾಗಿ ಕಾಡತೊಡಗುತ್ತದೆ. ಅದರಿಂದ ಪಾರಾಗುವ, ಈ ಸಮುದಾಯವನ್ನು ಸಂವೇದನಾಶೀಲವಾಗಿಸುವ, ಕೇಂದ್ರ ಮತ್ತು ಅಂಚಿನಲ್ಲಿರುವವರಿಬ್ಬರಿಗೂ ಮದ್ದಾಗಬಲ್ಲ ದಾರಿಯೊಂದರ ಹುಡುಕಾಟವನ್ನು ಇವರು ಅದೆಷ್ಟು ಉತ್ಕಟವಾಗಿ ಮಾಡಿದರೆಂದರೆ, ಚರಿತ್ರೆ, ಜ್ಞಾನಮಾದರಿಗಳು, ಕಲಾ ಮಾದರಿಗಳು ಈ ಎಲ್ಲವನ್ನೂ ಇದಕ್ಕಾಗಿ ದುಡಿಸಿಕೊಳ್ಳಲು ಅವರು ನಿರಂತರವಾಗಿ ಪ್ರಯತ್ನಿಸಿದರು.
ಸಣ್ಣ ಉದಾಹರಣೆಯೊಂದನ್ನು ಕೊಡುತ್ತೇನೆ,
‘ಶಿವನು ಭಿಕ್ಷಕ್ಕೆ ಬಂದ ನೀಡು ಬಾರೆ ತಂಗಿ
ಇವನಂಥ ಚೆಲ್ವರಿಲ್ಲ ನೋಡು ಬಾರೆ ತಂಗಿ’
ಎನ್ನುವ ಜನಪದ ಗೀತೆಯನ್ನೇ ಅವರು ತಾತ್ವಿಕ ನೆಲೆಯಾಗಿ ಕಟ್ಟುತ್ತಾರೆ. ಇದು ಅವರ ಮಟ್ಟಿಗೆ ತಳ ವರ್ಗದವರ ಆತ್ಮಘನತೆಯ, ಜೀವನ ಪ್ರೀತಿಯ, ದೈವ ಸಖ್ಯದ ಸೌಂದರ್ಯಮೀಮಾಂಸೆಯ ದಿಕ್ಸೂಚಿಯಾಗಿ ಕಾಣುತ್ತಲೇ ವ್ಯವಸ್ಥೆಯ ಆಚೆಗಿರುವವರ ‘ಅರಿವಿನ ದಾರಿ’ಯೂ ಆಗಬೇಕಲ್ಲವೆ ಎನ್ನುವ ಪ್ರಶ್ನೆಯನ್ನು ಎತ್ತುತ್ತಾರೆ. ಯಾವುದು ಸ್ವಮರುಕದ ನಿರೂಪಣೆಯಾಗಿ ಮುಂದೆ ಸಹಜವಾಗಿ ವ್ಯಗ್ರ ಹೋರಾಟವಾಗಬಹುದೋ ಅದನ್ನು ಬೇರೆ ದಿಕ್ಕಿಗೆ ಹೊರಳಿಸಲು ಸಾಧ್ಯವೆ ಎನ್ನುವ ಹುಡುಕಾಟ ಇಲ್ಲಿದೆ. ಸರಳ ಜನಪದ ಕತೆಯೊಂದನ್ನು, ಕಲಾ ಪ್ರಕಾರವೊಂದನ್ನು ರಾಜಕೀಯ ಮತ್ತು ಸಾಮಾಜಿಕ ಪ್ರಶ್ನೆಯಾಗಿ ಅವರು ಇಲ್ಲಿ ವಿಸ್ತರಿಸುತ್ತಿದ್ದಾರೆ. ಅದು ಕಾವ್ಯದ ತುಣುಕು ಮಾತ್ರವಾಗದೆ ವಂಚಿತ ಸಮುದಾಯವು ನಡೆಸುತ್ತಿರುವ ವ್ಯಕ್ತ ಹೋರಾಟವಾಗಿದೆ ಎಂದು ಅವರು ವ್ಯಾಖ್ಯಾನಿಸುತ್ತಾರೆ. ವಂಚಿತ ಸಮುದಾಯವಾಗಿದ್ದೂ ಅದು ತನ್ನ ಬದುಕನ್ನು ಸಮೃದ್ಧಗೊಳಿಸಿಕೊಳ್ಳುತ್ತಿರುವ ಜೀವನ್ಮುಖಿ ಸೆಲೆಯಾಗಿ, ಅವರು ಆತ್ಮ ಮರುಕವನ್ನು ನೀಗಿಸಿಕೊಳ್ಳುತ್ತಿರುವ ಅಪೂರ್ವ ಪರಿಯಾಗಿದೆಯಲ್ಲವೆ ಎಂದು ಕೇಳಿಕೊಳ್ಳುತ್ತಾರೆ. ಇದನ್ನು ನಾವು ಮತ್ತು ಅವರು ಒಳಗೊಳ್ಳಬೇಕು ಎನ್ನುವ ತಾತ್ವಿಕ ವಿನ್ಯಾಸವೊಂದು ನಿಧಾನವಾಗಿ ರೂಪುಗೊಳ್ಳತೊಡಗುತ್ತದೆ. ಇದು ಡಿ.ಆರ್. ಅವರ ಉತ್ತರಾರ್ಧದ ಪಯಣ ಎನ್ನುವುದು ನಿಜ. ಮೊದಲ ಹಂತದಲ್ಲಿ ಅವರು ಪ್ರಖರ ಹೋರಾಟದ ದಾರಿಯನ್ನೇ ನೆಚ್ಚಿದ್ದವರು. ತೀರಾ ಆರಂಭದ ದಿನಗಳಲ್ಲಿ ಅವರನ್ನು ಒಂದು ಪ್ರಶ್ನೆ ಕೇಳಿದ್ದೆ, ‘‘ನೀವು ಯಾಕೆ ಮಾರ್ಕ್ಸ್ ವಾದದಿಂದ ದೂರವಾದಿರಿ’’. ‘‘ನಾನು ಮಾರ್ಕ್ಸ್‌ವಾದಿ ಯಾವಾಗ ಆಗಿದ್ದೆ?’’ ಎನ್ನುವ ಉತ್ತರ ಕೇಳಿ ದಂಗಾ ಗಿದ್ದೆ. ಆಮೇಲೆ ನಿಧಾನವಾಗಿ ಬಂತು ವಿವರಣೆ, ‘ನಾನು ಮಾರ್ಕ್ಸ್ ವಾದದಿಂದ ಎಷ್ಟು ದೂರ ಬಂದಿದ್ದೀನಿ ಅಂದರೆ, ಅದರ ಬಗ್ಗೆ ಯೋಚಿಸೋದೇ ಬೇಡ ಅನ್ನಿಸುತ್ತೆ’. ಮೇಲಿನ ಕತೆಯ ಉದಾಹರಣೆಗೂ ಈ ಮಾತಿಗೂ ಸಂಬಂಧವಿದೆ.
ಈ ಮಹಾ ಪಯಣ ವಿಕಾಸಶೀಲ ಮಾನವಿಕ ಅಧ್ಯಯನದ ಅನನ್ಯ ಮಾದರಿ. ಈ ಮಾದರಿಯ ಗುಣ ಲಕ್ಷಣವೆಂದರೆ, ಇದರ ‘ಹೆಣಿಗೆ’ಯ ವಿನ್ಯಾಸದ್ದು. ಒಂದನ್ನು ಇನ್ನೊಂದರ ಪಕ್ಕ ಇಡದೆ, ಎದುರು ಬದುರಾಗಿಸದೆ, ಅವುಗಳ ಸಮೀಕರಣಕ್ಕಾಗಿ ನಡೆಸಿದ ಪ್ರಯತ್ನಗಳು ಡಿ.ಆರ್. ಅವರ ಕಾಲಕ್ಕಿಂತ ಮುಂದಿದ್ದುದನ್ನು ಹೇಳುತ್ತವೆ. ಇಷ್ಟು ಮಹತ್ವಾಕಾಂಕ್ಷೆ ಮತ್ತು ವಿಸ್ತಾರದಲ್ಲದಿದ್ದರೂ ಅವರ ಮೊದಲ ಕೃತಿಯಲ್ಲಿಯೇ ಇದರ ಹೊಳಹುಗಳು ಸ್ಪಷ್ಟವಾಗಿವೆ. ಕುವೆಂಪು ಕೃತಿಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷ ಲೇಖನವು ಕುವೆಂಪು ಅವರನ್ನು ಅವರ ಕಾಲದಾಚೆ ತರುವ, ಸಮಕಾಲೀನಗೊಳಿಸುವ ಮತ್ತು ಭವಿಷ್ಯದ ಕಾಲಕ್ಕೂ ಸಂಗತಗೊಳಿಸುತ್ತದೆ. ಎಲ್ಲ ಮಹತ್ವದ ಲೇಖಕರನ್ನೂ ಒಡ್ಡುವ ನಿಕಷವೊಂದರ ನಿರ್ಮಾಣದಲ್ಲಿ ಡಿ.ಆರ್. ಇದ್ದಾರೆ. ಕುವೆಂಪು ಅವರನ್ನು ರಸೋವೈಸಃದಿಂದ ಹೊರತಂದು, ಕರ್ನಾಟಕದ ಮತ್ತು ಭಾರತದ ಸ್ಥಾಪಿತ ಸಾಂಸ್ಥಿಕ ಸಂರಚನೆಗಳ ಶೋಧಕ್ಕಾಗಿ ಬಳಸುವ ಈ ಕ್ರಮವು ಕುವೆಂಪು ಅವರನ್ನು ಸಾಹಿತ್ಯದ ಪರಿಧಿಯಿಂದ ಹೊರತಂದು ಸಮುದಾಯದ ಪರಿಧಿಗೆ ವಿಸ್ತರಿಸುವ ಹರಹಿನದ್ದು. ಕಲಾ ಪಠ್ಯವನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ಪಠ್ಯವಾಗಿಸುವ ಮೂಲಕ, ಕುವೆಂಪು ಅವರನ್ನು ಓದುವ ಬಗೆಯನ್ನು ವಿಸ್ತರಿಸುತ್ತಿರುವಂತೆ ಕಂಡರೂ ಆಳದಲ್ಲಿ ಇದು ಹೊರಚಾಚುಗಳ ಗ್ರಹಿಕೆಯಲ್ಲ, ಈ ಸಾಧ್ಯತೆ ಮತ್ತು ಶಕ್ತಿ ಅವರ ಕೃತಿಗಳಲ್ಲೇ ಇದೆ. ಸಮಕಾಲೀನ ಸಂದರ್ಭದಲ್ಲಿ ಕುವೆಂಪು ಅವರನ್ನು ಲೇಖಕರಾಗಿ ಮಾತ್ರವಲ್ಲ, ಸಾಮಾಜಿಕ ಪಲ್ಲಟಗಳ ಹರಿಕಾರರಾಗಿ ಅವರನ್ನು ಪ್ರಸ್ತುತ ಪಡಿಸಿದ ಕ್ರಮವು ಆ ತನಕ ಕುವೆಂಪು ಅವರನ್ನು ಉದಾರವಾದಿ ಮಾನವತಾವಾದದ ಸ್ಥೂಲ ಭಿತ್ತಿಯಿಂದ, ಸುಧಾರಣಾವಾದದ ಪ್ರಭಾವಳಿಯಿಂದ ಮುಕ್ತವಾಗಿಸಿ ನೇರ ಸಾಮಾಜಿಕ ಸಂಘರ್ಷದ ಭೂಮಿಕೆಗೆ ತಂದದ್ದು, ಕುವೆಂಪು ಅವರನ್ನು ಮುಂದಿನ ದಮನಿತ ವರ್ಗಗಳ ಹೋರಾಟಗಳ ನೈತಿಕ ಶಕ್ತಿಯನ್ನಾಗಿಸಿತು. ಈ ಹೋರಾಟದ ನೇತೃತ್ವವನ್ನೇ ಕುವೆಂಪುಗೆ ವಹಿಸಿದ ಈ ನಿರೂಪಣೆ ಕುವೆಂಪು ಬಗೆಗಿನ ಕರ್ನಾಟಕದ ಗೋಚರ, ಅಗೋಚರ ನೆಲೆಯ ಆರಾಧನೆಗೆ ಅಧಿಕೃತತೆಯನ್ನು ತಂದುಕೊಟ್ಟಿತು. ಕಾಡು ಮತ್ತು ಮರಗಳ ರೂಪಕವು ವಿಮರ್ಶೆಯಲ್ಲಿ ಸದಾ ಕಾಲ ಪ್ರಚಲಿತ. ಈ ಎರಡೂ ಅವರಿಗೆ ಕರಗತವಾಗಿತ್ತೆಂದೇ ಅವರಿಗೆ ಆ ಎತ್ತರ ಬಿತ್ತರಗಳು ಸಾಧ್ಯವಾಯಿತು. ಕಾನೂರು ಹೆಗ್ಗಡತಿಯ ಹೂವಯ್ಯನ ಬಗ್ಗೆ ಬರೆಯುತ್ತಾ ಕುವೆಂಪು ಹೂವಯ್ಯನ ಆನುಭಾವಿಕ ಆಸಕ್ತಿ ಮತ್ತು ವಿಶ್ವಮಾನವ ಆದರ್ಶದ ವ್ಯಕ್ತಿತ್ವವನ್ನು ಚಿತ್ರಿಸುವಾಗಲೂ ಸಂಜೆ ಮಳೆಯಲ್ಲಿ ಕುರಿಯ ಮೈಯಿಂದ ಏಳುವ ಮಂಜಿನ ಹೊಗೆಯ ಬಗ್ಗೆಯೂ ಆಸಕ್ತರಾಗಿರುತ್ತಾರೆ ಎನ್ನುವ ಡಿ.ಆರ್.ರ ಮಾತು ಸ್ವತಃ ಅವರಿಗೂ ಅನ್ವಯಿಸುತ್ತದೆ. ಕವಿ ರೂಪಕ ಪ್ರತಿಭೆ ಮತ್ತು ಪಂಡಿತನ ಗಾಂಭೀರ್ಯಗಳ ಅಖಂಡ ವ್ಯಕ್ತಿತ್ವ ಡಿಆರ್‌ಎನ್ ಅವರದ್ದು. ಇವರ ಒಳಗೊಬ್ಬ ಕವಿ ಸದಾ ಜೀವಂತನಾಗಿರುತ್ತಿದ್ದ. ಇವರ ಆಲೋಚನೆ, ಬರವಣಿಗೆ, ಭಾಷೆ ಎಲ್ಲದರಲ್ಲೂ ಇದರ ಹೊಳಹುಗಳಿವೆ. ಕಾವ್ಯದೊಂದಿಗೆ ಇವರದ್ದು ಆತ್ಮಸಾಂಗತ್ಯದಂತಹ ಸಂಬಂಧ.
‘The Flaming Feet’ ಡಿ.ಆರ್. ಅವರ ಬದಲಾದ ದೃಷ್ಟಿಕೋನದ ಪ್ರಣಾಳಿಕೆ. ಗಾಂಧಿ ಮತ್ತು ಅಂಬೇಡ್ಕರ್ ಪರಸ್ಪರ ಸಂಧಿಸುವುದು ಸಾಧ್ಯವಿಲ್ಲ ಎಂದು ಗಾಂಧಿವಾದಿಗಳೂ ಅಂಬೇಡ್ಕರ್‌ವಾದಿಗಳೂ ನಂಬಿದ್ದ ಕಾಲಘಟ್ಟ ಅದು. ಪರಸ್ಪರರನ್ನು ವಿರೋಧಿಸುವುದರಲ್ಲೇ ಅವರನ್ನು ಸರಿಯಾಗಿ ಗ್ರಹಿಸಲು ಸಾಧ್ಯ ಎನ್ನುವ ಅಭಿಪ್ರಾಯವೂ ದಟ್ಟವಾಗಿಯೇ ಇದ್ದ ಕಾಲ ಅದು. ಆದರೆ, ಡಿ.ಆರ್. ಅದನ್ನು ಒಡೆಯುವ ಕೆಲಸವನ್ನು ಈ ಕೃತಿಯಲ್ಲಿ ಯಶಸ್ವಿಯಾಗಿಯೇ ಮಾಡಿದರು. ಆಧುನಿಕ ಭಾರತದ ಎರಡು ನಿರ್ಣಾಯಕ ವ್ಯಕ್ತಿತ್ವಗಳನ್ನು ಸಂಯೋಜಿಸಿ ಸಮಕಾಲೀನ ಭಾರತಕ್ಕೆ ಅಗತ್ಯವಿದ್ದ ತಾತ್ವಿಕತೆಯನ್ನು ಮತ್ತು ಲೋಕದೃಷ್ಟಿಯನ್ನು ರೂಪಿಸುವ ಮಹತ್ವದ ಪ್ರಯತ್ನ ಇಲ್ಲಿದೆ. ಇಬ್ಬರಲ್ಲಿ ಒಬ್ಬರನ್ನು ಮಾತ್ರ ಆರಿಸಿಕೊಳ್ಳಬೇಕಾದ ಇಬ್ಬಂದಿತನದಿಂದ ಪಾರಾಗಿ, ಆ ಇಬ್ಬರೂ ಭಾರತದ ಭವಿಷ್ಯಕ್ಕೆ ಅನಿವಾರ್ಯ ಅಗತ್ಯದವರು ಎನ್ನುವ ಸತ್ಯದ ದರ್ಶನ ಇಲ್ಲಿದೆ. ಇಬ್ಬರ ಶಕ್ತಿ ಮತ್ತು ಸವಾಲುಗಳನ್ನು ಅಪಾರ ಎಚ್ಚರಿಕೆ ಮತ್ತು ಜವಾಬ್ದಾರಿಯಲ್ಲಿ ಗುರುತಿಸುವ ಡಿಆರ್‌ಎನ್ ಇಬ್ಬರ ದೃಷ್ಟಿಕೋನಗಳೂ ಬೆರೆತಾಗ ಸಮಗ್ರ ತಾತ್ವಿಕತೆ ಸಿದ್ಧಿಸುತ್ತದೆ, ಯಾರನ್ನು ಪರಸ್ಪರ ವಿರುದ್ಧ ದೃವಗಳೆಂದು ತಿಳಿಯಲಾಗಿದೆಯೋ ಅವರು ಪೂರಕವಾಗಿದ್ದಾರೆಯಲ್ಲವೆ ಎನ್ನುವುದನ್ನು ಸಮಾಜ ವಿಜ್ಞಾನಿಯ ವಾಸ್ತವ ಪ್ರಜ್ಞೆಯಲ್ಲೂ ಸಾಹಿತ್ಯಕಾರನ ಒಳನೋಟದಲ್ಲೂ ಡಿಆರ್‌ಎನ್ ಕಟ್ಟಿಕೊಡುತ್ತಾರೆ. ಇಲ್ಲಿ ಸ್ವತಃ ಡಿಆರ್‌ಎನ್‌ಗೆ ಆದ ಸಾಕ್ಷಾತ್ಕಾರವೂ ಇದೆ. ಅದು ಸಮಗ್ರ ಭಾರತದ ಕಲ್ಪನೆ. ಆ ತನಕ ದಲಿತರ ಅಧಿಕೃತ ವಕ್ತಾರರಂತಿದ್ದ ಡಿಆರ್‌ಎನ್ ಎಲ್ಲವನ್ನೂ ಎಲ್ಲರನ್ನೂ ಒಳಗೊಳ್ಳುವ ಭಾರತದ ಚಿತ್ರವೊಂದನ್ನು ತಮ್ಮ ಬುದ್ಧಿ ಭಾವಗಳಲ್ಲಿ ಚಿತ್ರಿಸಿಕೊಂಡರು. ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆ ಬದಲಾಯಿತು ಎನ್ನುವುದು ಇದರರ್ಥವಲ್ಲ. ಸಾಮಾಜಿಕ ನ್ಯಾಯ ಅವರ ಆದ್ಯತೆಗಳಲ್ಲಿ ಸದಾ ಮೊದಲನೆಯದಾಗಿಯೇ ಉಳಿದಿಕೊಂಡಿತು. ಅದು ದಲಿತೇತರ ಭಾರತದ ನಿರಾಕರಣೆಯಾಗಲಿಲ್ಲ.
‘Flaming Feet’ ಡಿ.ಆರ್. ಅವರ ಬದಲಾದ ದೃಷ್ಟಿಕೋನದ ಪ್ರಣಾಳಿಕೆ. ಗಾಂಧಿ ಮತ್ತು ಅಂಬೇಡ್ಕರ್ ಪರಸ್ಪರ ಸಂಧಿಸುವುದು ಸಾಧ್ಯವಿಲ್ಲ ಎಂದು ಗಾಂಧಿವಾದಿಗಳೂ ಅಂಬೇಡ್ಕರ್‌ವಾದಿಗಳೂ ನಂಬಿದ್ದ ಕಾಲಘಟ್ಟ ಅದು. ಪರಸ್ಪರರನ�