ರಾಜಕೀಯ ಬಿರುಗಾಳಿ ಮತ್ತು ಸಾಂಸ್ಕೃತಿಕ ಸುಳಿ
ಡಾ. ಬಂಜಗೆರೆ ಜಯಪ್ರಕಾಶ್
ಕವಿ, ಚಿಂತಕ, ವಿಮರ್ಶಕ, ಅಂಕಣಕಾರ, ಅನುವಾದಕ ಮತ್ತು ಜನಪರ ಹೋರಾಟಗಾರರಾಗಿ ಗುರುತಿಸಿಕೊಂಡ ಡಾ.ಬಂಜಗೆರೆ ಜಯಪ್ರಕಾಶ್ ಮೂಲತಃ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನವರು. ಹಲವು ದಶಕಗಳಿಂದ ಜನಪರ ಚಳವಳಿಗಳಲ್ಲಿ ಅವರು ಸಕ್ರಿಯವಾಗಿದ್ದಾರೆ. ಕನ್ನಡ ವಿಶ್ವವಿದ್ಯಾನಿಲಯವು ಆರಂಭಿಸಿರುವ ದೇಸಿ ಸಂಸ್ಕೃತಿ ಅಧ್ಯಯನ ಮಂಡಳಿ ಸದಸ್ಯರಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಸ್ಕೃತಿ ಅಧ್ಯಯನದ ಬಗ್ಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.
ತನ್ನ ಹಿಂದುತ್ವವಾದ ಅಥವಾ ನವ-ಹಿಂದುತ್ವವಾದದ ಮೂಲಕ ದೇಶದ ಎಲ್ಲ ಜನರನ್ನು ಹಿಂದೂ ಎಂದು ಕರೆದುಕೊಳ್ಳಲು ಒತ್ತಡ ನಿರ್ಮಾಣ ಮಾಡಲಾಗುತ್ತಿದೆ. ತಮ್ಮನ್ನು ಹಿಂದೂಗಳ ಭಾಗವೆಂದು ಕರೆದುಕೊಳ್ಳಲು ಸಿದ್ಧವಿಲ್ಲದ ಸಮುದಾಯಗಳನ್ನು ಜನ ವಿರೋಧಿಗಳೆಂದು, ಏಕತೆಯನ್ನು ಇಚ್ಛಿಸದವರೆಂದು, ದೇಶಾಭಿಮಾನ ಇರದ ದ್ರೋಹಿಗಳೆಂದು ಹಣೆಪಟ್ಟಿ ಕಟ್ಟಲು ನೋಡಲಾಗುತ್ತಿದೆ. ಧರ್ಮಕ್ಕೂ ದೇಶಾಭಿಮಾನಕ್ಕೂ ಕುತರ್ಕದ ನಂಟು ತರಲಾಗಿದೆ. ಹಿಂದೂಗಳಲ್ಲದವರು ದೇಶಕ್ಕೆ ಕಂಟಕ ತರುವ ಭಯೋತ್ಪಾದಕರೆಂಬಂತೆ ಬಿಂಬಿಸುವ ಪ್ರಯತ್ನ ನಡೆಸಲಾಗುತ್ತಿದೆ.
ಇಂದು ಕರ್ನಾಟಕದಲ್ಲಿ ಹಲವಾರು ಹೊಸ ತಲೆಮಾರಿನ ಯುವಕರ ಸಂಘಟನೆಗಳು ಅಸ್ತಿತ್ವದಲ್ಲಿವೆ. ಆ ಸಂಘಟನೆಗಳು ಹಲವು ರೀತಿಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ ಮತ್ತು ಜನಮುಖಿ ಚಿಂತನೆಗಳಲ್ಲಿ ಪಾಲ್ಗೊಳ್ಳುತ್ತಿವೆ. ಆದರೆ, ಅಂತಹ ಸಂಘಟನೆಗಳ ಸಂಘಟನಾ ಸ್ವರೂಪ ಬಹಳ ಸಡಿಲವಾಗಿದ್ದು ಕಾರ್ಯಕ್ರಮಾತ್ಮಕ ಗುರಿಗಳನ್ನು ನಿಶ್ಚಿತಗೊಳಿಸಿಕೊಂಡಂತಿಲ್ಲ. ಈ ಸಂದರ್ಭದಲ್ಲಿ ಉಂಟಾಗಿರುವ ನಿರ್ವಾತ ಅಥವಾ ಶೂನ್ಯದ ನಿವಾರಣೆಗೆ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಾತಾವರಣದ ಕ್ರಿಯಾಶೀಲತೆಗೆ ಹೊಸ ಮಾದರಿಯ ಹೋರಾಟಗಳನ್ನು ರೂಪಿಸುವ ಅಗತ್ಯ ಅವುಗಳೆದುರಿಗಿರುವಂತೆಯೇ ನಮ್ಮೆದುರಿಗೂ ಇದೆ.
ಇಂದು ದೇಶದ ರಾಜಕಾರಣ ತೆಗೆದುಕೊಂಡಿರುವ ಮುಖ್ಯವಾದ ತಿರುವಿನಲ್ಲಿ ಸಾಂಸ್ಕೃತಿಕ ಕ್ಷೇತ್ರದವರಾದ ನಾವು ಕೆಲವು ಮುಖ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸಬೇಕಿರುವುದು ಅನಿವಾರ್ಯವಾಗಿದೆ. ಇಷ್ಟೊಂದು ಬಹುಮತದ ಮೂಲಕ ಗೆದ್ದಿರುವ ಬಿಜೆಪಿ ತಾನು ಚುನಾವಣೆಯ ಸಮಯದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಲಾಗುತ್ತಿಲ್ಲ. ಅಭಿವೃದ್ಧಿಯ ಹಾದಿಯಲ್ಲಿ ದೇಶವನ್ನು ನಡೆಸಲು ಅದಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಯಥಾಪ್ರಕಾರ ಸಾಂಸ್ಕೃತಿಕ ಏಕಘನಾಕೃತಿಯನ್ನು ನಿರ್ಮಿಸುವ ಕೆಲವು ಕಲಾಪಗಳನ್ನು ಮುಂದಿಡುವ ಮೂಲಕ ಅದು ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ಚಾರಿತ್ರಿಕವಾಗಿ ಫ್ಯಾಶಿಸ್ಟ್ ಧೋರಣೆಯ ಸರಕಾರಗಳು ಎಲ್ಲೆಲ್ಲಿ ಸ್ಥಾಪನೆಗೊಂಡಿಮೋ ಅಲ್ಲೆಲ್ಲ ಅವು ಮಾಡಿರುವ ಕೆಲಸ ಇದೇ ಬಗೆಯದು. ಯಾವುದಾದರೊಂದು ಭಾವೋದ್ವೇಗದ ವಿಷಯವನ್ನು ಮುಂದಿಟ್ಟು ಜನರನ್ನು ಅದರಲ್ಲಿ ತಲ್ಲೀನರನ್ನಾಗಿಸಿ, ತಮ್ಮ ಸರಕಾರದ ಅಸಮರ್ಥತೆಯನ್ನು ಮರೆಮಾಚುವುದೆಂಬುದು ಈ ರಾಜಕೀಯ ತಂತ್ರದ ಭಾಗ. ನಮ್ಮಲ್ಲೂ ಅದಕ್ಕೆ ಬೇಕಾದ ಭೂಮಿಕೆಯನ್ನು ಸಿದ್ಧಮಾಡಲಾಗುತ್ತಿದೆ. ರಾಮ ಮಂದಿರದ ವಿವಾದ ಮುಗಿಯಿತೆಂದರೆ ಮತ್ತೊಂದು ಮಂದಿರದ ವಿಷಯವನ್ನೆತ್ತಿಕೊಳ್ಳಲಾಗುತ್ತದೆ ಅಥವಾ ಲವ್ ಜಿಹಾದ್ ನಿಷೇಧ ಎಂದು ವಿವಾದವೆಬ್ಬಿಸಲಾಗುತ್ತದೆ. ಮಂದಿರ, ಗೋವು, ಗಂಗಾ, ಭಯೋತ್ಪಾದಕರು ಇತ್ಯಾದಿಗಳೆಲ್ಲಾ ಈ ರಾಜಕೀಯ ತಂತ್ರದ ಭಾಗವಾಗಿದ್ದು ಅಗತ್ಯಾನುಸಾರ ಮುನ್ನೆಲೆಗೆ ತರಲಾಗುತ್ತದೆ.
ತನ್ನ ಹಿಂದುತ್ವವಾದ ಅಥವಾ ನವ-ಹಿಂದುತ್ವವಾದದ ಮೂಲಕ ದೇಶದ ಎಲ್ಲ ಜನರನ್ನು ಹಿಂದೂ ಎಂದು ಕರೆದುಕೊಳ್ಳಲು ಒತ್ತಡ ನಿರ್ಮಾಣ ಮಾಡಲಾಗುತ್ತಿದೆ. ತಮ್ಮನ್ನು ಹಿಂದೂಗಳ ಭಾಗವೆಂದು ಕರೆದುಕೊಳ್ಳಲು ಸಿದ್ಧವಿಲ್ಲದ ಸಮುದಾಯಗಳನ್ನು ಜನ ವಿರೋಧಿಗಳೆಂದು, ಏಕತೆಯನ್ನು ಇಚ್ಛಿಸದವರೆಂದು, ದೇಶಾಭಿಮಾನ ಇರದ ದ್ರೋಹಿಗಳೆಂದು ಹಣೆಪಟ್ಟಿ ಕಟ್ಟಲು ನೋಡಲಾಗುತ್ತಿದೆ. ಧರ್ಮಕ್ಕೂ ದೇಶಾಭಿಮಾನಕ್ಕೂ ಕುತರ್ಕದ ನಂಟು ತರಲಾಗಿದೆ. ಹಿಂದೂಗಳಲ್ಲದವರು ದೇಶಕ್ಕೆ ಕಂಟಕ ತರುವ ಭಯೋತ್ಪಾದಕರೆಂಬಂತೆ ಬಿಂಬಿಸುವ ಪ್ರಯತ್ನ ನಡೆಸಲಾಗುತ್ತಿದೆ. ಕೊರೋನ ಹರಡಲು ತಬ್ಲೀಗಿಗಳು ಕಾರಣ ಎಂಬ ಅಪಪ್ರಚಾರವನ್ನು ವ್ಯವಸ್ಥಿತವಾಗಿ ನಡೆಸಲಾಯಿತು. ಗ್ರಾಮೀಣ ಭಾಗಗಳ ಜನಸಾಮಾನ್ಯರ ನಡುವೆ ಕೋಮು ಪ್ರತ್ಯೇಕೀಕರಣ ಭಾವನೆ ತುಂಬಲು ನಡೆಸಿದ ಹುನ್ನಾರದ ಭಾಗ ಇದು. ಜನಸಮುದಾಯಗಳನ್ನು ಒಡೆದು ಆಳುವುದಕ್ಕೆ ಬೇಕಾದ ಸುಳ್ಳುಗಳನ್ನು ಹರಡುವುದರಲ್ಲಿ ಮಾಧ್ಯಮಗಳು ಅದರಲ್ಲೂ ವಿದ್ಯುನ್ಮಾನ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು ಬಳಕೆಗೊಂಡ ರೀತಿ ಆತಂಕವನ್ನು ಹುಟ್ಟಿಸುವಂತಿತ್ತು. ಇದೆಲ್ಲವೂ ನಾವು ಎದುರಿಸುತ್ತಿರುವ ಬಿಕ್ಕಟ್ಟಿನ ಸಂಕೀರ್ಣತೆಯನ್ನು ಸೂಚಿಸುತ್ತಿದೆ.
ರಾಮಮಂದಿರಕ್ಕಾಗಿ ರಥಯಾತ್ರೆ ನಡೆಸಿದ ಲಾಲ್‌ಕೃಷ್ಣ ಅಡ್ವಾಣಿಗಳಿದ್ದಾಗಲೂ ತನಗೆ ಬೇಕಾಗುವಷ್ಟು ಬಹುಮತ ಗಳಿಸಿಕೊಳ್ಳುವ ಶಕ್ತಿ ಬಿಜೆಪಿಗೆ ಬಂದಿರಲಿಲ್ಲ. ಆಗ ಬಿಜೆಪಿ ಆಯಾ ರಾಜ್ಯಗಳಲ್ಲಿನ ಪ್ರಾದೇಶಿಕ ಪಕ್ಷಗಳನ್ನು ಅವಲಂಬಿಸಲೇಬೇಕಿತ್ತು. ಬಹುಪಾಲು ಪ್ರಾದೇಶಿಕ ಪಕ್ಷಗಳಿಗೆ ಸಾಂಸ್ಕೃತಿಕ ಅಥವಾ ರಾಜಕೀಯವಾಗಿಯಾಗಲಿ ತಾತ್ವಿಕ ಸ್ಪಷ್ಟತೆ ಇಲ್ಲ. ಇದನ್ನು ಸರಳವಾಗಿ ಹೇಳಬೇಕೆಂದರೆ, ಕರ್ನಾಟಕದಲ್ಲಿ ಜಾತ್ಯತೀತ ಜನತಾದಳ ಮತ್ತು ಬಿಜೆಪಿ ಒಂದಾಗಿ ಅಧಿಕಾರಕ್ಕೆ ಬಂದ ಮಾದರಿಯೇ ದೇಶದ ಬೇರೆ ಕಡೆಗಳಲ್ಲಿಯೂ ಪುನರಾವರ್ತಿತಗೊಳ್ಳುತ್ತಿರುವ ನಿದರ್ಶನಗಳನ್ನು ಕಾಣುತ್ತಿದ್ದೇವೆ. ಇದಕ್ಕೆ ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷಗಳಿಗಿರುವ ಜಾತಿ ಬೆಂಬಲದ ನೆಲೆಗಳೇ ಕಾರಣವೆನ್ನಬೇಕಾಗುತ್ತದೆ. ಅವುಗಳ ನಡುವೆ ಇರುವ ಮೂಲಭೂತ ಸಮಾನ ಗುಣವೆಂದರೆ ಜಾತಿ ವ್ಯವಸ್ಥೆಯ ಬಗ್ಗೆ ಅವುಗಳಿಗೆ ಇರುವ ನಂಬಿಕೆಯೇ ಆಗಿದೆ. ಇದನ್ನೊಂದು ರೀತಿಯಲ್ಲಿ ಸಮಾನ ಮನಸ್ಕತೆ ಎನ್ನಬಹುದಾಗಿದೆ.
ಬಿಜೆಪಿಗೆ ಮೋದಿಯಂತಹ ದೊಡ್ಡ ನಾಯಕ ಸಿಕ್ಕಿರುವುದರಿಂದ ತನ್ನ ಗುಪ್ತ ಅಜೆಂಡಾದಲ್ಲಿದ್ದ ಹಲವು ಅಂಶಗಳನ್ನು ಕಾರ್ಯಗತಗೊಳಿಸಲು ಸಂಘ ಪರಿವಾರಕ್ಕೆ ಅವಕಾಶ ದೊರೆತಿದೆ. ಬಲಪಂಥೀಯರಲ್ಲೇ ಉದಾರವಾದಿಯಾಗಿದ್ದು, ಬೇರೆ ಬೇರೆ ರಾಜಕೀಯ ವಲಯಗಳಲ್ಲಿ ಸಾಕಷ್ಟು ಗೌರವ ಗಳಿಸಿಕೊಂಡಿದ್ದ ವಾಜಪೇಯಿ ಮತ್ತು ರಾಮಮಂದಿರಕ್ಕಾಗಿ ರಥಯಾತ್ರೆ ನಡೆಸಿದ ಲಾಲ್‌ಕೃಷ್ಣ ಅಡ್ವಾಣಿಗಳಿದ್ದಾಗಲೂ ತನಗೆ ಬೇಕಾಗುವಷ್ಟು ಬಹುಮತ ಗಳಿಸಿಕೊಳ್ಳುವ ಶಕ್ತಿ ಬಿಜೆಪಿಗೆ ಬಂದಿರಲಿಲ್ಲ. ಆಗ ಬಿಜೆಪಿ ಆಯಾ ರಾಜ್ಯಗಳಲ್ಲಿನ ಪ್ರಾದೇಶಿಕ ಪಕ್ಷಗಳನ್ನು ಅವಲಂಬಿಸಲೇಬೇಕಿತ್ತು. ಬಹುಪಾಲು ಪ್ರಾದೇಶಿಕ ಪಕ್ಷಗಳಿಗೆ ಸಾಂಸ್ಕೃತಿಕ ಅಥವಾ ರಾಜಕೀಯವಾಗಿಯಾಗಲಿ ತಾತ್ವಿಕ ಸ್ಪಷ್ಟತೆ ಇಲ್ಲ. ಇದನ್ನು ಸರಳವಾಗಿ ಹೇಳಬೇಕೆಂದರೆ, ಕರ್ನಾಟಕದಲ್ಲಿ ಜಾತ್ಯತೀತ ಜನತಾದಳ ಮತ್ತು ಬಿಜೆಪಿ ಒಂದಾಗಿ ಅಧಿಕಾರಕ್ಕೆ ಬಂದ ಮಾದರಿಯೇ ದೇಶದ ಬೇರೆ ಕಡೆಗಳಲ್ಲಿಯೂ ಪುನರಾವರ್ತಿತಗೊಳ್ಳುತ್ತಿರುವ ನಿದರ್ಶನಗಳನ್ನು ಕಾಣುತ್ತಿದ್ದೇವೆ. ಇದಕ್ಕೆ ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷಗಳಿಗಿರುವ ಜಾತಿ ಬೆಂಬಲದ ನೆಲೆಗಳೇ ಕಾರಣವೆನ್ನಬೇಕಾಗುತ್ತದೆ. ಅವುಗಳ ನಡುವೆ ಇರುವ ಮೂಲಭೂತ ಸಮಾನ ಗುಣವೆಂದರೆ ಜಾತಿ ವ್ಯವಸ್ಥೆಯ ಬಗ್ಗೆ ಅವುಗಳಿಗೆ ಇರುವ ನಂಬಿಕೆಯೇ ಆಗಿದೆ. ಇದನ್ನೊಂದು ರೀತಿಯಲ್ಲಿ ಸಮಾನ ಮನಸ್ಕತೆ ಎನ್ನಬಹುದಾಗಿದೆ.
ಪ್ರಾದೇಶಿಕ ಪಕ್ಷಗಳನ್ನು ಗಮನಿಸಿದರೆ ಅವು ಅಲ್ಲಿನ ಭೂಹಿಡುವಳಿದಾರ ಜಾತಿಗಳ ಹಿಡಿತದಲ್ಲಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಮುಖ್ಯವಾಗಿ ಆ ಶಕ್ತಿಗಳು ಭಾರತದಲ್ಲಿ ಪ್ರತಿನಿಧಿಸುತ್ತಿರುವುದು ಮೀಸಲಾತಿ ವಿರೋಧಿ ಹಾಗೂ ಮಹಿಳೆಯರ ಮುನ್ನಡೆ ಕುರಿತು ಸ್ವಲ್ಪವೂ ಸಹನೆ ಇಲ್ಲದೆ ಇರುವ ಧೋರಣೆಯನ್ನು. ಮೊದಲಿನಿಂದಲೂ ಸಂಪತ್ತು ಹಾಗೂ ಭೂಮಿಯ ಒಡೆತನ ಹೊಂದಿರುವ ಬಲಿಷ್ಠ ಮಧ್ಯಮ ಜಾತಿಗಳಾಗಿರುವುದರಿಂದ ಅವಕ್ಕೂ ಮತ್ತು ಬಿಜೆಪಿ ಪಕ್ಷಕ್ಕೂ ಕೆಲವು ಸಮಾನ ಸುಪ್ತ ಭಾವನೆಗಳಿವೆ. ದಲಿತರು, ಅತಿ ಹಿಂದುಳಿದ ವರ್ಗಗಳು ಹಾಗೂ ಮಹಿಳೆಯರು ಮೀಸಲಾತಿ ಮೂಲಕ ಮುನ್ನಡೆಯುವುದರ ಕುರಿತು ಇರುವ ಸುಪ್ತ ಅಸಮಾಧಾನಗಳು ಒಂದೇ ರೀತಿಯಾಗಿವೆ. ಮೀಸಲಾತಿಯನ್ನು ವಿರೋಧಿಸುವುದು ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷಗಳ ಹಿಡನ್ ಅಜೆಂಡಾಗಳಾಗಿವೆ. ಹಾಗಾಗಿ ಅವೆರಡೂ ಶಕ್ತಿಗಳು ಸಂದರ್ಭ ಸಿಕ್ಕಾಗಲೆಲ್ಲ ಬಹುಬೇಗ ಕೈ ಜೋಡಿಸಲು ಸಾಧ್ಯವಾಗುತ್ತದೆ.
ನಮ್ಮ ರಾಜ್ಯದಲ್ಲಿ ಜಾತ್ಯತೀತ ಎಂದು ತನ್ನ ಹೆಸರಿನೊಂದಿಗೆ ಜೋಡಿಸಿಕೊಂಡಿದ್ದರೂ ಬಹಳ ಬೇಗ ಬಿಜೆಪಿಯ ಜೊತೆಗೆ ಹೋಗಲು ಜೆಡಿಎಸ್‌ಗೆ ಸಾಧ್ಯವಾಯಿತು. ಆಗ ವ್ಯಕ್ತಗೊಂಡ ದೇವೇಗೌಡರ ಅಸಮಾಧಾನವನ್ನು ಆ ಪಕ್ಷದ ಯಾವ ಶಾಸಕನೂ ಲೆಕ್ಕಕ್ಕಿಡಲಿಲ್ಲ ಎನ್ನುವುದು ಏನನ್ನು ಸೂಚಿಸುತ್ತಿದೆ. ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ಚಂದ್ರಶೇಖರರಾವ್ ಮುಂತಾದವರು ಯಾವಾಗಲೂ ಎರಡು ಮುಖಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಒಂದು ಕಡೆ ಮುಸ್ಲಿಮರ ಓಟುಗಳನ್ನು ಉಳಿಸಿಕೊಳ್ಳಲು ಎನ್‌ಡಿಎಯಿಂದ ದೂರವಾದಂತೆ ಆಡುತ್ತಾರೆ. ಚುನಾವಣೆ ಆದ ಮೇಲೆ ಮತ್ತೊಂದು ಕಡೆಯಿಂದ ಬಿಜೆಪಿ ಜೊತೆ ಕೈಜೋಡಿಸುತ್ತಾರೆ. ಇಲ್ಲಿ ಪರಸ್ಪರರು ಮೇಲುನೋಟಕ್ಕೆ ಮುನಿಸಿಕೊಳ್ಳುವ ಹಾಗೂ ಸಮಾಧಾನಪಡಿಸುವ ಹಲವು ತಂತ್ರಗಳನ್ನು ಬಳಸುತ್ತಾ ಅಧಿಕಾರ ಪಡೆಯುವ ಹವಣಿಕೆಯಲ್ಲಿರುತ್ತಾರೆ. ಈ ದ್ವಂದ್ವಗುಣ ಭಾರತದ ಬಹುಪಾಲು ಪ್ರಾದೇಶಿಕ ಪಕ್ಷಗಳ ವಿಷಯದಲ್ಲಿ ಒಂದು ಮಟ್ಟಿಗೆ ನಿಜ.
ಇಂತಹ ಸಂದರ್ಭದಲ್ಲಿ ಸಾಂಸ್ಕೃತಿಕ ಬಹುತ್ವವನ್ನು ಕಾಪಾಡಿಕೊಳ್ಳಲು, ಪ್ರತಿಪಾದಿಸಲು ಹಾಗೂ ಬೆಳೆಸಲು ಬಿಡಿ ಬಿಡಿ ಸಂಘಟನೆಗಳನ್ನು ಒಳಗೊಂಡ ವೇದಿಕೆಯ ಅಥವಾ ಒಕ್ಕೂಟ ಸ್ವರೂಪದ ಸಂಘಟನಾತ್ಮಕ ಶಕ್ತಿಗಳನ್ನು ರೂಪಿಸಿಕೊಳ್ಳುವ ಅನಿವಾರ್ಯತೆ ನಮ್ಮ ಮುಂದಿರುವ ದಾರಿಯಾಗಿದೆ. ಯಾಕೆಂದರೆ ವ್ಯಕ್ತಿಗಳಾಗಿ ಬಿಡಿಬಿಡಿಯಾಗಿದ್ದರೆ ಆಗುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾದ ಕೆಲಸವನ್ನು ಮಾಡಲು ವೇದಿಕೆಗಳ ಮೂಲಕ ಸಾಧ್ಯವಾಗುತ್ತದೆ.
ಬಿಜೆಪಿ ದಲಿತರು ಹಾಗೂ ಹಿಂದುಳಿದ ವರ್ಗಗಳ ಜನರನ್ನು ಸೆಳೆಯುವ ಹಲವು ತಂತ್ರಗಳನ್ನು ರೂಪಿಸಿಕೊಂಡಿದೆ. ಎಲ್ಲಾ ಜಾತಿಯವರ ಜೊತೆಯಲ್ಲಿ ಸೇರಿ ಊಟ ಮಾಡುವುದು; ದಲಿತರಿಗೆ ಫ್ರೀ ಟ್ಯೂಷನ್ ಕಾರ್ಯಕ್ರಮಗಳನ್ನು ನಡೆಸುವುದು; ಬಲಿಷ್ಠ ಹಾಗೂ ಬದಲಾವಣೆಯ ಭಾರತಕ್ಕಾಗಿ ಒಂದಾಗಬೇಕು ಮತ್ತು ಅದಕ್ಕಾಗಿ ಎಲ್ಲ ಭೇದಗಳನ್ನು ಮರೆಯಬೇಕು ಎಂದು ಎಲ್ಲಾ ಕಡೆ ಪ್ರಚಾರ ಮಾಡಲಾಗುತ್ತಿದೆ; ಹಳ್ಳಿಗಳ ಮಧ್ಯಮ ಜಾತಿಗಳು ಈ ತಕ್ಷಣಕ್ಕೆ ಜಾತಿಗಳನ್ನು ಬಿಡಲು ತಯಾರಿಲ್ಲದಿರುವುದನ್ನು ತನ್ನ ಹತಾರವಾಗಿ ಬಳಸಿಕೊಂಡು ಆ ಜಾತಿಗಳನ್ನು ವಿಲನ್ ಎಂದು ಬಿಂಬಿಸುವುದನ್ನು ಒಂದು ದಿಕ್ಕಿನಿಂದ ಗುಪ್ತವಾಗಿ ಪ್ರಯತ್ನ ಮಾಡುತ್ತಲೇ ಅದೇ ಜಾತಿಗಳನ್ನು ತನ್ನ ಬೆಂಬಲ ನೆಲೆಯಾಗಿಯೂ ಬಳಸಿಕೊಳ್ಳುತ್ತಿದೆ. ದೂರಗಾಮಿಯಾದ ರಾಜಕಾರಣವನ್ನು ಮತ್ತು ಸಾಂಸ್ಕೃತಿಕ ರಾಜಕಾರಣವನ್ನು ತನ್ನ ಗುರಿಯಾಗಿ ಇಟ್ಟುಕೊಂಡಿಲ್ಲದ ದಲಿತರು ಮತ್ತು ಹಿಂದುಳಿದ ಸಮುದಾಯಗಳು ಕೋಮುವಾದಿ ಪಕ್ಷದ ಜೊತೆ ಕೈ ಜೋಡಿಸುವ ಮುಂಚೆ ಸಾದ್ಯಂತವಾಗಿ ಯೋಚಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ವಿದ್ಯಾವಂತರಾಗಿರುವ ಹಾಗೂ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಕ್ರಿಯಾಶೀಲರಾಗಿರುವವರು ಒಟ್ಟಾಗಿ ಕೆಲಸ ಮಾಡುವುದು ಬಹಳ ಮುಖ್ಯ. ಇಂದು ನಮ್ಮ ಎದುರಿಗೆ ಎರಡು ಸವಾಲುಗಳಿವೆ. ಅವುಗಳಲ್ಲಿ ಮೊದಲನೆಯದು: ಭಾರತದ ಸಾಂಸ್ಕೃತಿಕ ಬಹುತ್ವವನ್ನು ಉಳಿಸಿಕೊಳ್ಳುವ ಉದ್ದೇಶಕ್ಕಾಗಿ ಯುವಜನರನ್ನು ಹಾಗೂ ಸಾಂಸ್ಕೃತಿಕ ರಂಗದಲ್ಲಿ ಕ್ರಿಯಾಶೀಲರಾಗಿರುವವರನ್ನು ಸಂಘಟಿಸುವುದು. ಇದಕ್ಕೆ ದೊಡ್ಡಮಟ್ಟದ ಶ್ರಮವನ್ನು ಹಾಕಬೇಕಿದೆ. ಎರಡನೆಯದು: ನಮ್ಮ ಸಂವಿಧಾನವನ್ನು ಕಾಪಾಡಿಕೊಳ್ಳಲು ಬಹು ದೊಡ್ಡ ಹೋರಾಟವನ್ನು ಮಾಡಬೇಕಾಗಿರುವುದು. ಕೋಮುವಾದಿಗಳ ಬಹು ದೊಡ್ಡ ಗುರಿ ಸಾಂಸ್ಕೃತಿಕ ಬಹುತ್ವವನ್ನು ನಾಶಮಾಡುವುದು ಮತ್ತು ಸಂವಿಧಾನವನ್ನು ದುರ್ಬಲಗೊಳಿಸುವುದಾಗಿದೆ. ಸಾಮಾಜಿಕ ಹಾಗೂ ಸಾಂಸ್ಕೃತಿಕ ನ್ಯಾಯವನ್ನು, ಸಮಾನತೆಯನ್ನು, ಬಹುಮುಖೀಯತೆಯನ್ನು, ವಿವಿಧತೆಯನ್ನು ತನ್ನ ತತ್ವದಲ್ಲಿ ಪ್ರತಿಪಾದಿಸುವ, ಸಮಾಜವಾದಿ ಪ್ರಜಾಪ್ರಭುತ್ವದ ಆಶಯಗಳನ್ನು ಹೊಂದಿರುವ ಸಂವಿಧಾನವನ್ನು ಫ್ಯಾಶಿಸ್ಟ್‌ರಿಗೆ ಸಹಿಸಲಾಗುತ್ತಿಲ್ಲ. ಬಹುಪಾಲು ಜನ ಶೋಷಿತರು, ದಮನಿತರು ಭರವಸೆ ಇಟ್ಟಿರುವುದು ಹಾಗೂ ಸ್ವಲ್ಪವಾದರೂ ತಲೆ ಎತ್ತಿ ತಮ್ಮ ಅಭಿಪ್ರಾಯಗಳನ್ನು ಹೇಳಲು ಸಾಧ್ಯವಾಗಿರುವುದು ಈ ಸಂವಿಧಾನದಿಂದಲೇ.
ಇಪ್ಪತ್ತು ವರ್ಷಗಳ ಹಿಂದೆ ಈ ಸಂವಿಧಾನವು ನಮ್ಮಲ್ಲಿ ಕೆಲವರಿಗೆ ಸುಧಾರಣಾವಾದಿ ಅಸ್ತ್ರವಾಗಿ ಮಾತ್ರ ಕಾಣುತ್ತಿತ್ತು. ಸಂವಿಧಾನ ಒಂದು ಸಣ್ಣ ಪ್ರಮಾಣದ ಬಿಡುಗಡೆಯನ್ನು ಮಾತ್ರ ಕೊಡುತ್ತಿದೆ; ಪೂರ್ತಿ ಬದಲಾವಣೆಗೆ ತರಲು ಇದರಿಂದ ಸಾಧ್ಯವಿಲ್ಲ ಎನಿಸುತ್ತಿತ್ತು. ಆದರೆ, ಇಂದು ನಮ್ಮ ಸಂವಿಧಾನವನ್ನು ಕಾಪಾಡಿಕೊಳ್ಳುವುದೇ ಅತ್ಯಂತ ತುರ್ತಿನ ಕೆಲಸವಾಗಿ ಬದಲಾಗಿದೆ. ಒಂದು ಕಾಲದಲ್ಲಿ ಚುನಾವಣೆಗಳನ್ನು ಬಹಿಷ್ಕರಿಸಿ ಎಂದು ಪ್ರಚಾರ ಮಾಡುತ್ತಿದ್ದ ಸಂಘಟನೆಗಳು ಮುಂದಿನ ಹತ್ತು ವರ್ಷಗಳಲ್ಲಿ ಚುನಾವಣೆಗಳು ನಡೆಯಲೇಬೇಕೆಂಬ ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದರೆ ಆಶ್ಚರ್ಯವಿಲ್ಲ. ಏಕೆಂದರೆ ಚುನಾವಣೆ, ಬಹುಮತ ಇತ್ಯಾದಿಗಳು ಕೋಮುವಾದಿಗಳಿಗೆ ತಮಗೆ ಬೇಕಾಗಿರುವ ಜನವಿರೋಧಿ ಕೆಲಸಗಳನ್ನು ಮಾಡಲು ಇರುವ ಅಡೆತಡೆಗಳಂತೆ ಕಾಣುತ್ತವೆ. ಆದ್ದರಿಂದ ರಾಜಕಾರಣವನ್ನು ಅಧ್ಯಕ್ಷೀಯ ಮಾದರಿಗೆ ಬದಲಿಸುವ ತಂತ್ರಗಳನ್ನು ಹುಡುಕಲಾಗುತ್ತಿದೆ. ಇದು ಸರ್ವಾಧಿಕಾರಕ್ಕೆ ಒಂದು ಹಾದಿಯನ್ನು ಒದಗಿಸುತ್ತದೆ ಎಂಬುದು ಅವರ ಅಪೇಕ್ಷೆ.
ಇದಕ್ಕೆ ಪೂರಕವಾದ ಸಾಮಾಜಿಕ ಮನಸ್ಥಿತಿ ಬೆಳೆಸುವ ಪ್ರಚಾರಗಳನ್ನು ಪರೋಕ್ಷವಾಗಿ ನಡೆಸಲಾಗುತ್ತಿದೆ. ನೆಹರೂ ಮಾದರಿಗೆ ಪರ್ಯಾಯ ಎಂಬಂತೆ ಉಕ್ಕಿನ ಮನುಷ್ಯನೆಂಬ ಬಿರುದಿರುವ ಸರ್ದಾರ್ ಪಟೇಲರನ್ನು ಮುಂದಿಡಲಾಗುತ್ತಿದೆ. ಅವರ ಅತಿ ಎತ್ತರದ ಪ್ರತಿಮೆಯನ್ನೂ ಮಾಡಿಸಿಯಾಯಿತು. ಪ್ರಧಾನಿ ಮೋದಿಯವರೂ ಕೂಡ ಉಕ್ಕಿನ ಮನುಷ್ಯ ಎಂಬ ವರ್ಚಸ್ಸು ಬೆಳೆಸಲು ಪ್ರಯತ್ನಗಳು ಸಾಗಿವೆ. ಮಿಲಿಟರಿ ಹಾಗೂ ಸಶಸ್ತ್ರ ಪಡೆಗಳ ಕಾರ್ಯಾಚರಣೆಗಳಿಂದ ಈ ವರ್ಚಸ್ಸು ಬೆಳೆಸುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಪಟೇಲರು ಸಂಸ್ಥಾನಗಳನ್ನು ಭಾರತದೊಳಕ್ಕೆ ವಿಲೀನ ಮಾಡಿದ ಹಾಗೆ ಯಾವ ಸಮಾಲೋಚನೆಗಳನ್ನೂ ನಡೆಸದೆ ಕಾಶ್ಮೀರ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದು ಮೋದಿಯವರ ಉಕ್ಕಿನ ವ್ಯಕ್ತಿತ್ವಕ್ಕೆ ನಿದರ್ಶನ ಎಂದು ಬಿಂಬಿಸಲಾಗುತ್ತಿದೆ. ಇದು ಅಪ್ರಜಾತಾಂತ್ರಿಕ ನಡೆ ಎಂದು ಟೀಕಿಸಿದವರ ಮಾತುಗಳು ಲೆಕ್ಕಕ್ಕೇ ಬರಲಿಲ್ಲ. ಕಾಶ್ಮೀರದ ಬಗ್ಗೆ ಗಟ್ಟಿಯಾಗಿ ಮಾತನಾಡುವುದು ಕೂಡ ದೇಶವಿರೋಧಿ ಧೋರಣೆ ಎಂಬಂತಹ ವಾತಾವರಣ ಬಹಳ ಜನರ ಬಾಯಿ ಕಟ್ಟಿಸಿತು.
ನೂತನ ಶಿಕ್ಷಣ ನೀತಿಯ ಹೆಸರಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಕ್ಕಿರುವ ಪಾತ್ರವನ್ನು ಗೌಣಗೊಳಿಸಲಾಗಿದೆ. ಸಂಸ್ಕೃತ, ಹಿಂದಿ, ಇಂಗ್ಲಿಷ್ ಭಾಷೆಗಳಿಗೆ ರಾಜ್ಯ ಭಾಷೆಗಳಿಗಿಂತ ಹೆಚ್ಚಿನ ಪಾರಮ್ಯ ಸಿಗುವಂತೆ ಹುನ್ನಾರ ಮಾಡಲಾಗಿದೆ. ಪುರಾತನ ಭಾರತೀಯ ಇತಿಹಾಸವನ್ನು ಪುನಾರಚಿಸಲು ಬ್ರಾಹ್ಮಣ ವಿದ್ವಾಂಸರೇ ತುಂಬಿಕೊಂಡಿರುವ ಸಮಿತಿಯೊಂದನ್ನು ಕೇಂದ್ರ ಸರಕಾರ ರಚಿಸಿದೆ. ಬಹುಮುಖೀಯ ಇತಿಹಾಸದ ವಸ್ತುಸ್ಥಿತಿಯನ್ನು ಏಕಮುಖೀಯವಾಗಿಸಲು, ಸಿಂಧೂ ನಾಗರಿಕತೆಯ ಹಿರಿಮೆಯನ್ನು ಆರ್ಯರ ತಲೆಗೆ ತೊಡಿಸಲು, ಅವರು ಇಲ್ಲಿನ ಮೂಲ ನಿವಾಸಿಗಳೆಂದು ಪ್ರತಿಪಾದಿಸಲು ಈ ಸಮಿತಿಯನ್ನು ಬಳಸಿಕೊಳ್ಳಬಹುದೆನ್ನುವ ಅನುಮಾನಗಳು ಹುಟ್ಟತೊಡಗಿವೆ. ಇಂದು ನಾವು ರಾಜಕೀಯ ಬಿರುಗಾಳಿಯಿಂದ ಪ್ರೇರಿತವಾಗಿರುವ ಸಾಂಸ್ಕೃತಿಕ ಸುಳಿಯೊಳಕ್ಕೆ ಸಿಲುಕಿದಂತಾಗಿದ್ದೇವೆ. ನಮ್ಮ ನಮ್ಮ ಸಂಸ್ಕೃತಿಗಳು, ಭಾಷೆಗಳು, ಪ್ರಾದೇಶಿಕ ಅಸ್ಮಿತೆಗಳು, ಆಚಾರ ವಿಚಾರಗಳು ಹಾಗೂ ಬದುಕಿನ ಅಸ್ತಿವಾರಗಳು ಈ ಸುಳಿಗೆ ಸಿಲುಕಿ ಮುಳುಗದಂತೆ ಕಾಪಾಡಿಕೊಳ್ಳಲು ಸಂವಿಧಾನವೊಂದೆ ನಮಗಿರುವ ಆಧಾರ. ಸಂವಿಧಾನ ಮತ್ತು ಸಾಂಸ್ಕೃತಿಕ ಬಹುತ್ವವನ್ನು ಕಾಪಾಡುವುದೆಂದರೆ ಭಾರತದ ನಿಜ ಚಹರೆಯನ್ನು ಕಾಪಾಡಿದಂತೆ. ಮೈಮರೆತು ಕೂತರೆ ಈ ಕೆಲಸ ಆಗುವುದಿಲ್ಲ.