ಜ.6ರಂದು ಬಿ.ಸಿ.ರೋಡಿನಲ್ಲಿ ಕೆಪಿಸಿಸಿ ಪ್ರಥಮ ವಿಭಾಗೀಯ ಸಮ್ಮೇಳನ: ರಮಾನಾಥ ರೈ
ಮಂಗಳೂರು, ಜ.2: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವತಿಯಿಂದ ನಾಲ್ಕು ವಿಭಾಗಗಳಲ್ಲಿ ಸಮ್ಮೇಳನ ಆಯೋಜಿಸಲಾಗಿದ್ದು, ಈ ಪೈಕಿ ಪ್ರಥಮ ವಿಭಾಗೀಯ ಸಮ್ಮೇಳನ(ಮೈಸೂರು ವಿಭಾಗ)ವು ದ.ಕ. ಜಿಲ್ಲೆಯ ಬಂಟ್ವಾಳದಲ್ಲಿ ನಡೆಯಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬಂಟ್ವಾಳ ಬಿ.ಸಿ.ರೋಡಿನ ಸಾಗರ್ ಆಡಿಟೋರಿಯಂನಲ್ಲಿ ಜನವರಿ 6ರಂದು ಪ್ರತಿನಿಧಿ ಸಮ್ಮೇಳನ ಆಯೋಜಿಸಲಾಗಿದೆ ಎಂದರು.
ಮೈಸೂರು ವಿಭಾಗಕ್ಕೆ ಒಳಪಡುವ ಮೈಸೂರು, ಚಾಮರಾಜನಗರ, ದ.ಕ., ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಸೇರಿಸಿಕೊಂಡು ಪಕ್ಷದ ಪ್ರತಿನಿಧಿ ಸಮ್ಮೇಳನದಲ್ಲಿ ಆಹ್ವಾನಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪಕ್ಷದ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಚ್.ಕೆ. ಪಾಟೀಲ್, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರೊಂದಿಗೆ ಒಟ್ಟು 677 ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಸಮ್ಮೇಳನದ ಸಿದ್ಧತೆಗಳು ನಡೆಯುತ್ತಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಜ.3ರಂದು ಮಂಗಳೂರಿಗೆ ಆಗಮಿಸಿ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜ.5ರಂದು ಆಗಮಿಸಿ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ ಎಂದು ರಮಾನಾಥ ರೈ ತಿಳಿಸಿದರು.
ಸಮ್ಮೇಳನವು ಜ.6ರಂದು ಪೂರ್ವಾಹ್ನ 11 ಗಂಟೆಯಿಂದ ಸಂಜೆ 7:30ರವರೆಗೆ ನಡೆಯಲಿದೆ. ಪಕ್ಷದ ಬಲವರ್ಧನೆಯ ನಿಟ್ಟಿನಲ್ಲೂ ಈ ಸಮ್ಮೇಳನ ಮಹತ್ವಪೂರ್ಣದ್ದಾಗಿದೆ ಎಂದು ಅವರು ಹೇಳಿದರು.
ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, ಸಮ್ಮೇಳನದಲ್ಲಿ ಪಕ್ಷದ ಕುರಿತಂತೆ ಚರ್ಚೆಯ ಜತೆಗೆ, ಬಿಜೆಪಿ ಸರಕಾರದ ವೈಫಲ್ಯ, ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಎಐಸಿಸಿ ಸದಸ್ಯೆ ಕವಿತಾ ಸನಿಲ್, ಮನಪಾ ಸದಸ್ಯ ಶಶಿಧರ ಹೆಗ್ಡೆ, ಯುವ ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ವಿಥುನ್ ರೈ, ನಾಯಕರಾದ ಸದಾಶಿವ ಉಳ್ಳಾಲ್, ಇಬ್ರಾಹೀಂ ಕೋಡಿಜಾಲ್ ಉಪಸ್ಥಿತರಿದ್ದರು