ತಥಾಕಥಿತ ದೇಶದ್ರೋಹದ ಪ್ರಕರಣಗಳು ಮತ್ತು ಕೆಲವು ಐತಿಹಾಸಿಕ ಸತ್ಯಗಳು
ಇತ್ತೀಚಿನ ವರ್ಷಗಳಲ್ಲಿ ದಲಿತರು, ಅಲ್ಪಸಂಖ್ಯಾತರು, ಪ್ರಗತಿಪರರು, ಮಾನವ ಹಕ್ಕು ಹೋರಾಟಗಾರರು ಮತ್ತು ಇದೀಗ ರೈತರ ವಿರುದ್ಧವೂ ‘ದೇಶ ವಿರೋಧಿ’ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಅಥವಾ ಘೋಷಣೆಗಳನ್ನು ಕೂಗಿದ್ದಾರೆಂಬ ಆರೋಪಗಳು ಹೆಚ್ಚಾಗುತ್ತಿವೆ; ಅನೇಕರನ್ನು ದೇಶದ್ರೋಹಕ್ಕೆ ಸಂಬಂಧಿಸಿದ ಕಠಿಣ ಕಾಯ್ದೆಗಳಡಿ ಬಂಧಿಸಿ ವರ್ಷಾನುಗಟ್ಟಲೆ ಕಾರಾಗೃಹದಲ್ಲಿರಿಸಲಾಗುತ್ತಿದೆ. ಆದರೆ ವಾಸ್ತವ ತದ್ವಿರುದ್ಧವಿದೆ. ಉದಾಹರಣೆಯಾಗಿ ಭೀಮಾ ಕೋರೆಗಾಂವ್, ಕನ್ಹಯ್ಯಿ ಕುಮಾರ್, ಸಿಎಎ ಪ್ರತಿಭಟನೆಗಳು, ಪ್ರಸಕ್ತ ರೈತ ಚಳವಳಿ ಮುಂತಾದ ಪ್ರಕರಣಗಳನ್ನು ಹೆಸರಿಸಬಹುದು.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ವರವರರಾವ್, ಸುಧಾ ಭಾರದ್ವಾಜ್, ಆನಂದ್ ತೇಲ್ತುಂಬ್ಡೆ ಮುಂತಾದ ಮಾನವ ಹಕ್ಕು ಹೋರಾಟಗಾರರು ಜೈಲುಪಾಲಾಗಿದ್ದರೆ ಅಸಲಿ ಆರೋಪಿಗಳಾದ ಮಿಲಿಂದ್ ಎಕ್‌ಬೋಟೆ, ಸಂಭಾಜಿ ಭಿಡೆ ಮುಂತಾದ ಸಂಘಪರಿವಾರಿಗರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಜವಾಹರ್‌ಲಾಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕನ್ಹಯ್ಯಾ ಕುಮಾರ್ ಪ್ರಕರಣದಲ್ಲಿ ತಿರುಚಿದ ವೀಡಿಯೊ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದ ಶಿಲ್ಪಿತಿವಾರಿ ಎಂಬಾಕೆ ಓರ್ವ ಮೋದಿ ಭಕ್ತೆಯಾಗಿದ್ದು ಅಂದು ಸ್ಮತಿ ಇರಾನಿಯವರ ಮಾನವ ಸಂಪನ್ಮೂಲ ಸಚಿವಾಲಯದಲ್ಲಿ ಸಲಹಾಗಾರ್ತಿಯಾಗಿ ಕೆಲಸ ಮಾಡುತ್ತಿದ್ದುದಾಗಿ ತಿಳಿದುಬಂದಿದೆ. (http://www.jantakareporter.com/india/smriti-iranis-former-aide-doctored-kanhaiya-video/39260)
ಶಾಹೀನ್‌ಬಾಗ್ ಪ್ರಕರಣದಲ್ಲಿ ತನ್ನನ್ನು ಮೋದಿ ಕಾಲಾಳು ಎಂದು ಕರೆದುಕೊಳ್ಳುವ ಗುಂಜಾ ಕಪೂರ್ ಎಂಬಾಕೆ ಬುರ್ಖಾ ಧರಿಸಿ ಸಿಎಎ ಪ್ರತಿಭಟನೆಯೊಳಗೆ ನುಸುಳಲೆತ್ನಿಸಿದಾಗ ಸಿಕ್ಕಿಬಿದ್ದಿದ್ದಳು. ಸಾಮಾಜಿಕ ಮಾಧ್ಯಮಗಳಲ್ಲಿ ಈಕೆಯ ಹಿಂಬಾಲಕರ ಪೈಕಿ ನರೇಂದ್ರ ಮೋದಿ, ಕಪಿಲ್ ಮಿಶ್ರಾ ಮೊದಲಾದ ಬಿಜೆಪಿ ಮುಖಂಡರುಗಳಿದ್ದಾರೆ.
ಕಳೆದ ಡಿಸೆಂಬರ್ 2ರಂದು ರೈತ ಚಳವಳಿಯೊಳಗೆ ನುಸುಳಿ ಪಾಕ್ ಪರ ಘೋಷಣೆಗಳನ್ನು ಕೂಗಿದ್ದ ಬಿಜೆಪಿ ರಾಜಕಾರಣಿ ಎನ್ನಲಾದ ಉಮೇಶ್ ಸಿಂಗ್ ಎಂಬಾತನನ್ನು ರೈತರೇ ಹಿಡಿದು ಪೊಲೀಸರ ವಶಕ್ಕೊಪ್ಪಿಸಿದ್ದರು. (https://sabrangindia.in/article/farmers-catch-trouble-mongering-infiltrator-protest-site-hand-him-over-police)
ಆಮೇಲೆ ಡಿಸೆಂಬರ್ 20ರಂದು ರೈತ ಚಳವಳಿಯನ್ನು ಬೆಂಬಲಿಸಬೇಡಿ ಎಂಬಿತ್ಯಾದಿ ಘೋಷಣೆಗಳಿದ್ದ ಕರಪತ್ರಗಳನ್ನು ಹಂಚಿದ್ದ ವ್ಯಕ್ತಿಯೊಬ್ಬನನ್ನು ಹಿಡಿದಾಗ ಆತನ ಹೆಸರು ವಿಕಾಸ್ ಪ್ರಸಾದ್ ಮಂಡಲ್ ಎಂದೂ ಆತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯ ಎಂದೂ ತಿಳಿದುಬಂದಿತ್ತು. ತನ್ನ ಮುಖ್ಯಸ್ಥನ ಆಣತಿಯ ಮೇರೆಗೆ ಕರಪತ್ರಗಳನ್ನು ಹಂಚಿದ್ದ ಆತನನ್ನು ಬಂಧಿಸಲಾಗಿತ್ತು. (https://sabrangindia.in/article/rss-worker-confesses-he-spread-anti-farmer-protests-content-singhu-border)
ಇವೆಲ್ಲಾ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಆರೋಪಪಟ್ಟಿ ದಾಖಲಾಗಲಿದೆಯೋ ಇಲ್ಲವೋ ಎಂಬುದನ್ನು ಊಹಿಸಲು ಹೆಚ್ಚು ಕಷ್ಟಪಡಬೇಕಾಗಿಲ್ಲ. ಇತಿಹಾಸದಲ್ಲಿ ಇನ್ನೂ ಸ್ವಲ್ಪಹಿಂದಕ್ಕೆ ಹೋಗಿ ನೋಡಿದರೆ ಸಂಘ ಪರಿವಾರಿಗರು ಅಂದು ಕೂಡಾ ಇದೇ ತೆರನಾದ ಚಟುವಟಿಕೆಗಳಲ್ಲಿ ನಿರತರಾಗಿದ್ದುದನ್ನು ಕಾಣಬಹುದು. ಕೆಲವು ನಿದರ್ಶನಗಳು ಈ ಕೆಳಗಿನಂತಿವೆ:
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಪ್ರಕಾಶನ ಸಂಸ್ಥೆಯಾದ ಸುರುಚಿ ಪ್ರಕಾಶನ್ 1997ರಲ್ಲಿ‘ ಪರಮ್ ವೈಭವ್ ಕೆ ಪಥ್ ಪರ್’ ಎಂಬ ಹಿಂದಿ ಪುಸ್ತಕವನ್ನು ಪ್ರಕಟಿಸಿದೆ. ಸದಾನಂದ ಡಿ. ಸಪ್ರೆ ಬರೆದಿರುವ ಈ ಪುಸ್ತಕದಲ್ಲಿ ಆರೆಸ್ಸೆಸ್‌ನ 40ಕ್ಕೂ ಅಧಿಕ ಅಂಗಸಂಸ್ಥೆಗಳ ವಿವರಗಳನ್ನು ನೀಡಲಾಗಿದೆ. ಸದರಿ ಪುಸ್ತಕದ ಪುಟ 86ರಲ್ಲಿ ದೇಶ ವಿಭಜನೆಯಾದೊಡನೆ ದಿಲ್ಲಿಯಲ್ಲಿ ನಡೆದ ಘಟನೆಯೊಂದರ ಬಗ್ಗೆ ಹೊರಗೆಡಹಲಾಗಿರುವ ಈ ಮಾಹಿತಿಯನ್ನು ಗಮನಿಸಿ:
ದಿಲ್ಲಿಯ ಮುಸ್ಲಿಂಲೀಗ್‌ನ ಷಡ್ಯಂತ್ರಗಳನ್ನು ತಿಳಿಯುವ ಉದ್ದೇಶವನ್ನಿಟ್ಟು ಕೊಂಡ ಸ್ವಯಂಸೇವಕರು ಮುಸ್ಲಿಂ ಲೀಗ್‌ನ ವಿಶ್ವಾಸ ಗಳಿಸುವ ಸಲುವಾಗಿ ತಾವು ಮುಸಲ್ಮಾನ ಧರ್ಮವನ್ನು ಸ್ವೀಕರಿಸಿರುವುದಾಗಿ ನಟಿಸಿದ್ದರು. ಮುಸ್ಲಿಮರ ಸೋಗು ಹಾಕಿದ ಈ ಸ್ವಯಂಸೇವಕರು ಭಾರತ ಸ್ವತಂತ್ರಗೊಳ್ಳುವುದಕ್ಕೆ ಮುನ್ನ ಏನು ಮಾಡುತ್ತಿದ್ದರು ಎಂಬುದನ್ನು ಆಮೇಲೆ ಭಾರತೀಯ ಗಣತಂತ್ರದ ಪ್ರಥಮ ರಾಷ್ಟ್ರಪತಿಯಾದ ಡಾ. ರಾಜೇಂದ್ರ ಪ್ರಸಾದರೇ ಸ್ಪಷ್ಟವಾಗಿ ಹೇಳಿದ್ದಾರೆ. ಅಂದು ಗೃಹಸಚಿವರಾಗಿದ್ದ ಸರ್ದಾರ್ ಪಟೇಲರಿಗೆ ಬರೆದ ಮಾರ್ಚ್ 14, 1948ರ ಪತ್ರದಲ್ಲಿ ಪ್ರಸಾದರು ‘‘ಆರೆಸ್ಸೆಸ್ ಮಂದಿ ಗಲಭೆ ಸೃಷ್ಟಿಸುವ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆಂದು ನನಗೆ ತಿಳಿಸಲಾಗಿದೆ. ಅವರು ಹಲವಾರು ಮಂದಿಗೆ ಮುಸ್ಲಿಮರ ವೇಷ ತೊಡಿಸಿ ಮುಸ್ಲಿಮರ ಹಾಗೆ ಕಾಣುವಂತೆ ಮಾಡಿದ್ದಾರೆ. ಇವರಿಗೆಲ್ಲ ಹಿಂದೂಗಳ ಮೇಲೆ ದಾಳಿ ನಡೆಸಿ ಗಲಭೆ ಹುಟ್ಟುಹಾಕಿ ಹಿಂದೂಗಳನ್ನು ಚಿತಾಯಿಸುವ ಕಾರ್ಯವನ್ನು ವಹಿಸಲಾಗಿದೆ. ಇವರ ನಡುವಿನಲ್ಲಿರುವ ಕೆಲವು ಹಿಂದೂಗಳು ಇದೇ ರೀತಿಯಾಗಿ ಮುಸ್ಲಿಮರ ಮೇಲೆ ದಾಳಿ ನಡೆಸಿ ಅವರನ್ನೂ ಚಿತಾಯಿಸಲಿದ್ದಾರೆ. ಹಿಂದೂಗಳು ಮತ್ತು ಮುಸ್ಲಿಮರ ಮಧ್ಯದ ಈ ತೆರನಾದ ಗಲಭೆ ಒಂದು ದಳ್ಳುರಿಯನ್ನೇ ಹುಟ್ಟುಹಾಕಲಿದೆ’’ ಎಂದಿದ್ದರು. (ಇದನ್ನು ನೀರ್ಜಾ ಸಿಂಗ್ (ಸಂ), Nehru-Patel: Agreement Within Difference—Select Documents & Correspondences 1933-1950, ಎನ್‌ಬಿಟಿ, ದಿಲ್ಲಿ, ಪುಟ 43ರಲ್ಲಿ ಉಲ್ಲೇಖಿಸಲಾಗಿದೆ)
ದಾಖಲೆಪತ್ರಗಳಿರದ ರಹಸ್ಯ ಸಂಘಟನೆಗಳ ಸದಸ್ಯತ್ವ ಕುರಿತು ಮಾಹಿತಿ ಸಂಗ್ರಹಿಸುವುದು ತುಂಬಾ ಕಷ್ಟವಿದೆ ಎಂದು ಸರ್ದಾರ್ ಪಟೇಲರು ಅಂದೇ ಒಪ್ಪಿಕೊಂಡಿದ್ದರು. ದಾಖಲೆಪತ್ರ, ದಾಖಲೆಪಟ್ಟಿ ಇತ್ಯಾದಿಗಳಿಲ್ಲದ ಆರೆಸ್ಸೆಸ್ ಥರದ ರಹಸ್ಯ ಸಂಘಟನೆಯ ಸಂದರ್ಭದಲ್ಲಿ ನಿರ್ದಿಷ್ಟ ವ್ಯಕ್ತಿಯೊಬ್ಬ ಅದರ ಸಕ್ರಿಯ ಕಾರ್ಯಕರ್ತನೇ ಅಲ್ಲವೇ ಎಂಬ ಬಗ್ಗೆ ವಿಶ್ವಾಸಾರ್ಹ ಮಾಹಿತಿಯನ್ನು ಕಲೆಹಾಕುವುದೆಂದರೆ ತುಂಬಾ ಕಷ್ಟದ ಕೆಲಸ ಎಂದು ಪ್ರಧಾನಿ ನೆಹರೂರಿಗೆ ಬರೆದ ಪತ್ರವೊಂದರಲ್ಲಿ ಪಟೇಲರು ಹೇಳಿದ್ದರು. (ವಿ.ಶಂಕರ್ (ಸಂ), Sardar Patel: Select Correspondence 1945-50, ನವಜೀವನ್ ಪಬ್ಲಿಷಿಂಗ್ ಹೌಸ್, ಅಹಮದಾಬಾದ್, 1977, ಪುಟ 285)
ಇದೀಗ 2020ರ ಡಿಸೆಂಬರ್ 30ರಂದು ದ.ಕ.ಜಿಲ್ಲೆಯ ಉಜಿರೆ ಎಂಬಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ ಪ್ರಕಟವಾಗು ತ್ತಿದ್ದಂತೆ ಅಲ್ಪಸಂಖ್ಯಾತರ ರಾಜಕೀಯ ಪಕ್ಷವೊಂದರ ಸದಸ್ಯರು ವಿಜಯೋತ್ಸವ ಆಚರಿಸುತ್ತಿದ್ದ ವೇಳೆ ಪಾಕ್‌ಪರ ಘೋಷಣೆಗಳು ಕೇಳಿಬಂದಿವೆ ಎನ್ನಲಾಗಿದೆ. ಸತ್ಯ ಏನೆಂದು ನಿಷ್ಪಕ್ಷಪಾತ ತನಿಖೆಯೊಂದೇ ತಿಳಿಸಬಲ್ಲುದು. ಆದರೆ ಮೋದಿ ಸರಕಾರದ ದುರಾಡಳಿತದಡಿ ಭಾರತೀಯ ಪ್ರಜಾತಂತ್ರದ ನಾಲ್ಕೂ ಆಧಾರಸ್ತಂಭಗಳು ತೀರ ದುರ್ಬಲಗೊಂಡು ಆಗಲೋ ಈಗಲೋ ಕುಸಿದುಬೀಳುವಂತಹ ಸ್ಥಿತಿಯಲ್ಲಿರುವಾಗ ಅದು ಸಾಧ್ಯವಿದೆಯೇ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ.
****
(ಕೃಪೆ: jantakareporter.com; sabrangindia.in; ಪ್ರೊ. ಸಂಶುಲ್ ಇಸ್ಲಾಮ್‌ರ RSS As a Terror Outfit)