varthabharthi


ವಾರ್ತಾಭಾರತಿ 18ನೇ ವಾರ್ಷಿಕ ವಿಶೇಷಾಂಕ

ವಸ್ತುನಿಷ್ಠ ಮಾಧ್ಯಮ ಬೇಕಿದ್ದರೆ ಓದುಗರು, ವೀಕ್ಷಕರೇ ಹಣ ಪಾವತಿಸಬೇಕು ಮನೀಷಾ ಪಾಂಡೆ

ವಾರ್ತಾ ಭಾರತಿ : 3 Jan, 2021
ಸಂದರ್ಶನ: ಫಾತಿಮಾ ಯಹ್ಯಾ ಅಹ್ಮದ್

ಬ್ಯುಝಿನೆಸ್ ಸ್ಟ್ಯಾಂಡರ್ಡ್, ಡಿಎನ್‌ಎ ಮತ್ತಿತರ ದೇಶದ ಪ್ರಮುಖ ಇಂಗ್ಲಿಷ್ ದೈನಿಕಗಳಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸಿರುವ ಮನೀಷಾ ಪಾಂಡೆ ಇಂದು ಪತ್ರಕರ್ತರ ಇಬ್ಬಂದಿತನ ಹಾಗೂ ಮಾಧ್ಯಮ ಸಂಸ್ಥೆಗಳ ದ್ವೇಷ ಪತ್ರಿಕೋದ್ಯಮವನ್ನು ದಿಟ್ಟವಾಗಿ ಪ್ರಶ್ನಿಸುವ ವಿಭಿನ್ನ ಪತ್ರಕರ್ತೆ. ‘‘ಅಮಲು ಏರಿಸಲು ಕೆಲವರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ, ನಾನು ರಿಪಬ್ಲಿಕ್ ಟಿವಿ ವೀಕ್ಷಿಸುತ್ತೇನೆ’’ ಎಂದು ಮುಲಾಜಿಲ್ಲದೆ ಹೇಳುವ ಗಟ್ಟಿಗಿತ್ತಿ ಈಕೆ. ಎಲ್ಲರನ್ನೂ ಪ್ರಶ್ನಿಸುವ ಮಾಧ್ಯಮಗಳ ಹುಳುಕನ್ನೂ ಹುಡುಕಿ ತಿದ್ದಬೇಕು ಎಂಬ ಧ್ಯೇಯದೊಂದಿಗೆ ಕಾರ್ಯಾಚರಿಸುತ್ತಿರುವ newslaundry.comನ ಕಾರ್ಯನಿರ್ವಾಹಕ ಸಂಪಾದಕಿ. ಇವರು ನಡೆಸಿಕೊಡುವ TV Newsance ಕಾರ್ಯಕ್ರಮ ಪ್ರಮುಖ ಹಿಂದಿ ಹಾಗೂ ಇಂಗ್ಲಿಷ್ ಟಿವಿ ‘ನ್ಯೂಸ್’ ಚಾನೆಲ್‌ಗಳು ಹೇಗೆ ಆಡಳಿತ ಪಕ್ಷದ ತುತ್ತೂರಿಗಳಾಗಿವೆ ಹಾಗೂ ಟೀಕಾಕಾರರ ಬಾಯಿ ಮುಚ್ಚಿಸುತ್ತಿವೆ ಎಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ಹಾಗೂ ಅಷ್ಟೇ ತಮಾಷೆಯಾಗಿ ತೋರಿಸುತ್ತದೆ. ಮಾಧ್ಯಮಗಳು ನಿಜವಾದ ಪ್ರತಿಪಕ್ಷವಾಗಿರಬೇಕಾದರೆ ಅವುಗಳು ಓದುಗರು, ವೀಕ್ಷಕರ ದುಡ್ಡಿನಲ್ಲೇ ನಡೆಯಬೇಕು ಎಂಬುದನ್ನು ಬಲವಾಗಿ ಪ್ರತಿಪಾದಿಸುವ ಮನೀಷಾ ಪಾಂಡೆ ಈಗಿನ ಪರಿಸ್ಥಿತಿಯಲ್ಲಿ ಅದು ಯಾಕೆ ಬಹಳ ಮುಖ್ಯ ಎಂದು ‘ವಾರ್ತಾಭಾರತಿ’ಗೆ ಈ ಸಂದರ್ಶನದಲ್ಲಿ ವಿವರಿಸಿದ್ದಾರೆ.

► ನೀವು ನ್ಯೂಸ್ ಲಾಂಡ್ರಿಗೆ ಬರುವ ಮೊದಲು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಕೆಲಸ ಮಾಡಿದವರು. ಈ ಬದಲಾವಣೆಗೆ ಕಾರಣವಾದ ಅಂಶಗಳ ಬಗ್ಗೆ ತಿಳಿಸಿ.

 ನಾನು ಫೈನಾನ್ಷಿಯಲ್ ಪತ್ರಿಕೆಯೊಂದರ ಮೂಲಕ ನನ್ನ ವೃತ್ತಿ ಜೀವನ ಪ್ರಾರಂಭಿಸಿದೆ. ಮುಖ್ಯವಾಹಿನಿ ಮಾಧ್ಯಮದಲ್ಲಿ ನನ್ನ ಕೊನೆಯ ಉದ್ಯೋಗ ಡಿಎನ್‌ಎ ಪತ್ರಿಕೆಯಲ್ಲಿ. ಆ ಬಳಿಕ 2014ರಲ್ಲಿ ನಾನು ನ್ಯೂಸ್ ಲಾಂಡ್ರಿ ಸೇರಿದೆ. ಪತ್ರಕರ್ತರು ಆಡಳಿತದ ಎಲ್ಲ ಆಯಾಮಗಳ ಬಗ್ಗೆ ವರದಿ ಮಾಡುತ್ತಾರೆ ಮಾತ್ರವಲ್ಲ ರಾಜಕಾರಣಿಗಳು, ನ್ಯಾಯಾಂಗ ಎಲ್ಲರನ್ನೂ ಪ್ರಶ್ನಿಸುತ್ತಾರೆ. ಆದರೆ, ಸ್ವತಃ ನಾವು ಪತ್ರಕರ್ತರು ಯಾರಿಗೂ ಉತ್ತರದಾಯಿಗಳಲ್ಲ. ಮಾಧ್ಯಮಗಳ ಬಗ್ಗೆಯೂ ವರದಿಯಾಗಬೇಕು ಹಾಗೂ ಪತ್ರಕರ್ತರನ್ನೂ ಪ್ರಶ್ನಿಸಬೇಕು ಎಂಬ ಭಾವನೆ ನನ್ನಲ್ಲಿ ಬೆಳೆಯಿತು. ಇಂತಹ ಕೆಲಸ ಮಾಡುತ್ತಿದ್ದ ಏಕೈಕ ವೆಬ್ ಸೈಟ್ ನ್ಯೂಸ್ ಲಾಂಡ್ರಿ. ಹಾಗಾಗಿ ಸಹಜವಾಗಿಯೇ ಅಲ್ಲಿಗೇ ಸೇರಿಬಿಟ್ಟೆ.

 ►ಗೋದಿ ಮೀಡಿಯಾ ಹಾಗೂ ಅದರ ವಿಶ್ವಾಸಾರ್ಹತೆಯನ್ನು ಬಯಲುಗೊಳಿಸಿದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನೀವೇನು ಹೇಳುತ್ತೀರಿ?

 ಎಲ್ಲ ಪತ್ರಕರ್ತರನ್ನೂ ಒಂದೇ ರೀತಿ ಬಣ್ಣಿಸುವ ‘ಗೋದಿ ಮೀಡಿಯಾ’ ಹೆಸರು ಬಳಕೆ ನನಗೆ ಇಷ್ಟವಿಲ್ಲ. ಎಲ್ಲ ಚಾನೆಲ್‌ಗಳಲ್ಲೂ ವೃತ್ತಿ ನಿಷ್ಠೆ ಉಳಿಸಿಕೊಂಡಿರುವ, ಜನಸಾಮಾನ್ಯರ ಬಗ್ಗೆ ಕಾಳಜಿ ಇರುವ ವರದಿಗಾರರು ಈಗಲೂ ಇದ್ದಾರೆ. ಆದರೆ, ಕಳೆದ ಸುಮಾರು ಆರು ವರ್ಷಗಳಲ್ಲಿ ಮಾಧ್ಯಮದ ಒಂದು ವರ್ಗ ತಾನು ನಿಷ್ಠೆ ತೋರಿಸಬೇಕಾದ ಜನರ ವಿರುದ್ಧವೇ ಕೆಲಸ ಮಾಡುತ್ತಿರುವುದು ಈಗ ಸ್ಪಷ್ಟವಾಗಿದೆ. ಈ ವರ್ಗ ರೈತರು, ಅಲ್ಪಸಂಖ್ಯಾತರು ಮಾತ್ರವಲ್ಲ ಬಹುಸಂಖ್ಯಾತ ಜನರಿಗೂ ವಿರುದ್ಧವಾಗಿಯೇ ಕೆಲಸ ಮಾಡುತ್ತಿದೆ. ಮಾಧ್ಯಮದ ಈ ವರ್ಗ ಜನಜೀವನದ ಮೇಲೆ ಭಾರೀ ಪರಿಣಾಮ ಬೀರುವ ಸರಕಾರದ ಕ್ರಮಗಳ ಬಗ್ಗೆ ಮಾತಾಡುವುದೇ ಇಲ್ಲ. ಅಧಿಕಾರದಲ್ಲಿದ್ದವರನ್ನು ನಾವು ಪ್ರಶ್ನಿಸಿದರೆ ನಮ್ಮನ್ನು ದೇಶದ್ರೋಹಿಗಳು ಎಂದು ಈ ಮಾಧ್ಯಮಗಳು ಬಣ್ಣಿಸುತ್ತವೆ. ಭಾರತೀಯರು ವಿಮರ್ಶಕ ನೋಟವನ್ನು ಕಳಕೊಂಡು ಒಂದು ರೀತಿಯ ಅಮಲಿನ ಸ್ಥಿತಿಯಲ್ಲಿರಬೇಕು. ಮತ್ತೆ ಉಳಿದವರನ್ನು ದೇಶದ್ರೋಹಿ ಹಣೆಪಟ್ಟಿ ಹಚ್ಚಿ ಸುಮ್ಮನಾಗಿಸುವುದು ಇವರ ಉದ್ದೇಶ.

► ಇತ್ತೀಚಿಗಿನ ಬೆಳವಣಿಗೆಗಳನ್ನು ನೋಡಿದರೆ ಇಂತಹ ಆಡಳಿತ ಪರ ಮಾಧ್ಯಮಗಳ ಬಲೆಯಿಂದ ಜನರು ಹೊರಬರಲಿದ್ದಾರೆ ಎಂಬ ಆಶಾಭಾವನೆ ಮೂಡುತ್ತಿದೆಯೇ?

 ಜನರು ಜಾಣರು. ಅವರ ಪಾರ್ಟಿ ಸಿದ್ಧಾಂತ ಅಥವಾ ಬೆಂಬಲ ಯಾರಿಗೇ ಇರಲಿ, ಮಾಧ್ಯಮಗಳು ನಮಗೆ ಸರಿಯಾದ ಸುದ್ದಿ, ಮಾಹಿತಿ ಕೊಡಬೇಕು ಎಂದು ಜನರು ಬಯಸುತ್ತಾರೆ. ಟಿವಿ ಮಾಧ್ಯಮ ಆ ಕೆಲಸ ಮಾಡುತ್ತಿಲ್ಲ ಎಂದು ಈಗ ದೊಡ್ಡ ಸಂಖ್ಯೆಯ ಜನರಿಗೆ ಅರಿವಾಗಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತ ಸುದ್ದಿ ಮಾಡಿದ ಶೈಲಿಯಲ್ಲಿ ಜನರು ಇದನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ. ದಿಲ್ಲಿಯಲ್ಲಿ ಕೇಂದ್ರದ ನೀತಿಗಳ ವಿರುದ್ಧ ಹೋರಾಟಕ್ಕಿಳಿದಿರುವ ರೈತರಲ್ಲಿ ನೀವು ಕೇಳಿದರೆ ಅವರಿಗೆ ಮಾಧ್ಯಮಗಳ ವಿರುದ್ಧ ಎಷ್ಟು ಆಕ್ರೋಶವಿದೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅವರ ಕಷ್ಟಕಾರ್ಪಣ್ಯಗಳನ್ನು ಮಾಧ್ಯಮಗಳು ಸರಕಾರದ ಮುಂದಿಡುತ್ತಿಲ್ಲ ಎಂದು ಅವರಿಗೆ ಮನವರಿಕೆಯಾಗಿದೆ.

 ಕಳೆದ ಸುಮಾರು ಆರು ವರ್ಷಗಳಲ್ಲಿ ಮಾಧ್ಯಮದ ಒಂದು ವರ್ಗ ತಾನು ನಿಷ್ಠೆ ತೋರಿಸಬೇಕಾದ ಜನರ ವಿರುದ್ಧವೇ ಕೆಲಸ ಮಾಡುತ್ತಿರುವುದು ಈಗ ಸ್ಪಷ್ಟವಾಗಿದೆ. ಈ ವರ್ಗ ರೈತರು, ಅಲ್ಪಸಂಖ್ಯಾತರು ಮಾತ್ರವಲ್ಲ ಬಹುಸಂಖ್ಯಾತ ಜನರಿಗೂ ವಿರುದ್ಧವಾಗಿಯೇ ಕೆಲಸ ಮಾಡುತ್ತಿದೆ. ಮಾಧ್ಯಮದ ಈ ವರ್ಗ ಜನಜೀವನದ ಮೇಲೆ ಭಾರೀ ಪರಿಣಾಮ ಬೀರುವ ಸರಕಾರದ ಕ್ರಮಗಳ ಬಗ್ಗೆ ಮಾತಾಡುವುದೇ ಇಲ್ಲ. ಅಧಿಕಾರದಲ್ಲಿದ್ದವರನ್ನು ನಾವು ಪ್ರಶ್ನಿಸಿದರೆ ನಮ್ಮನ್ನು ದೇಶದ್ರೋಹಿಗಳು ಎಂದು ಈ ಮಾಧ್ಯಮಗಳು ಬಣ್ಣಿಸುತ್ತವೆ. ಭಾರತೀಯರು ವಿಮರ್ಶಕ ನೋಟವನ್ನು ಕಳಕೊಂಡು ಒಂದು ರೀತಿಯ ಅಮಲಿನ ಸ್ಥಿತಿಯಲ್ಲಿರಬೇಕು. ಮತ್ತೆ ಉಳಿದವರನ್ನು ದೇಶದ್ರೋಹಿ ಹಣೆ ಪಟ್ಟಿ ಹಚ್ಚಿ ಸುಮ್ಮನಾಗಿಸುವುದು ಇವರ ಉದ್ದೇಶ.

► ನೀವು ಮಾಡುತ್ತಿರುವ ಪತ್ರಿಕೋದ್ಯಮದ ಶೈಲಿಗೆ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತಿದೆ ?

 ಬಹಳ ಚೆನ್ನಾಗಿದೆ. ಮಾಧ್ಯಮಗಳು ಉತ್ತರದಾಯಿಯಾಗಿರಬೇಕು ಎಂಬುದನ್ನು ಜನರು ಈಗ ತಿಳಿದುಕೊಂಡಿದ್ದಾರೆ. ಹಾಗಾಗಿ ಕೇವಲ ರಾಜಕಾರಣಿಗಳನ್ನು ಮತ್ತು ಅಧಿಕಾರದಲ್ಲಿರುವವರನ್ನು ಮಾತ್ರ ಪ್ರಶ್ನಿಸದೆ ಪ್ರಭಾವಿ ಮಾಧ್ಯಮ ಸಂಸ್ಥೆಗಳನ್ನೂ ಪ್ರಶ್ನಿಸುವ ನ್ಯೂಸ್ ಲಾಂಡ್ರಿಯ ಪತ್ರಿಕೋದ್ಯಮಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.

► ಈ ‘ಗೋದಿ ಮೀಡಿಯಾ’ ಎಂದು ಆಡಳಿತ ಪರ ಮಾಧ್ಯಮಗಳನ್ನು ಜನರು ಲೇವಡಿ ಮಾಡುವುದು, ಜೊತೆಗೆ ಖ್ಯಾತ ಕಾಮಿಡಿಯನ್‌ಗಳು ಹಾಗೂ ವಿಡಂಬನಕಾರರೂ ಇಂತಹ ಮಾಧ್ಯಮಗಳ ಬಣ್ಣ ಬಯಲು ಮಾಡುವುದರಿಂದ ಏನಾದರೂ ಧನಾತ್ಮಕ ಬದಲಾವಣೆ ಆದಂತೆ ಕಾಣುತ್ತಿದೆಯೇ?

 ‘ಗೋದಿ ಮೀಡಿಯಾ’ ಎಂಬ ಹೆಸರನ್ನು ಮೊದಲು ಚಲಾವಣೆಗೆ ತಂದಿದ್ದು ಎನ್‌ಡಿಟಿವಿಯಲ್ಲಿ ರವೀಶ್ ಕುಮಾರ್ ಇರಬೇಕು. ಆನಂತರ ಅದು ಬಹಳ ಖ್ಯಾತಿ ಪಡೆದಿದೆ. ಆದರೆ, ಕೇವಲ ಹೀಗೆ ಲೇವಡಿ ಮಾಡುವುದಕ್ಕೆ ಸೀಮಿತವಾಗದೆ ಜನರು ಜನಪರ ಮಾಧ್ಯಮಗಳಿಗೆ ಆರ್ಥಿಕ ಬೆಂಬಲ ನೀಡಲು ಮುಂದಾಗಬೇಕು. ನಿಮಗೆ ವಸ್ತುನಿಷ್ಠ, ಜನಪರ ಮಾಧ್ಯಮ ಬೇಕು ಎಂದಾದರೆ ನೀವು ಅದಕ್ಕೆ ಹಣ ಪಾವತಿಸಲು ಪ್ರಾರಂಭಿಸಬೇಕು. ಯಾವ ಮಾಧ್ಯಮ ಒಳ್ಳೆಯ ಕೆಲಸ ಮಾಡುತ್ತಿದೆ ಅದಕ್ಕೆ ಚಂದಾದಾರರಾಗಿ ಹಣ ಪಾವತಿಸಿ ಆ ಸಂಸ್ಥೆಯನ್ನು ಪ್ರೋತ್ಸಾಹಿಸಬೇಕು. ವರದಿಗಾರಿಕೆಗೆ ಬಹಳ ಖರ್ಚು ತಗಲುತ್ತದೆ. ಹಾಗಾಗಿ ಸುದ್ದಿ ಓದುವವರು ಆ ಸುದ್ದಿ ಮಾಡುವವರಿಗೆ ಹಣ ಪಾವತಿಸುವ ಮೂಲಕ ಮಾಧ್ಯಮ ಸಂಸ್ಥೆಗಳು ಸರಕಾರಗಳು ಹಾಗೂ ಕಾರ್ಪೊರೇಟ್‌ಗಳ ಹಂಗಿನಿಂದ ಬಚಾವಾಗುವಂತೆ ಮಾಡಬೇಕು.

► ದೇಶದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಸಂಪೂರ್ಣ ಸ್ವಾಮ್ಯ ಸಾಧಿಸಿದ್ದ ಬಲಪಂಥೀಯರು ಈಗ ನಿಧಾನವಾಗಿ ಆ ಹಿಡಿತ ಕಳೆದುಕೊಳ್ಳುತ್ತಿದ್ದಾರೆಯೇ?

ಈ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಬೇಕಾಗುತ್ತದೆ. ನಾನು ಹೀಗೇ ಅದರ ಬಗ್ಗೆ ಕಮೆಂಟ್ ಮಾಡಲು ಸಾಧ್ಯವಿಲ್ಲ.

► ಟಿವಿ ಮಾಧ್ಯಮದಲ್ಲಿ ಹೊಸ, ಶಾಂತಚಿತ್ತ, ಜಾತ್ಯತೀತ ನಿಲುವಿನ ಹಾಗೂ ಜವಾಬ್ದಾರಿಯುತ ಮುಖಗಳು ಬರುವ ಸಾಧ್ಯತೆ ಕಂಡು ಬರುತ್ತಿದೆಯೇ ?

 ಖಂಡಿತ. ಈಗ ಎಲ್ಲ ಚಾನೆಲ್‌ಗಳಲ್ಲಿರುವ ಯುವ ವರದಿಗಾರರಿಗೆ ಸ್ಟುಡಿಯೋದಲ್ಲಿ ಕುಳಿತ ಆ್ಯಂಕರ್‌ಗಳು ಹೇಳಿದಂತೆ ವರದಿ ಮಾಡುವುದು ಇಷ್ಟವಾಗುತ್ತಿಲ್ಲ. ಈಗಿರುವ ಪರಿಸ್ಥಿತಿ ಬದಲಾವಣೆಯಾಗಲಿದೆ. ಹೊಸ ಪರ್ಯಾಯಗಳು ಬರಲಿವೆ. ಅದು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಅಲ್ಲದಿದ್ದರೆ ಡಿಜಿಟಲ್ ಮಾಧ್ಯಮಗಳಲ್ಲಿ ಬರಲಿದೆ.

 ► ಈಗ ದ್ವೇಷ ಹರಡುತ್ತಿರುವ ಮಾಧ್ಯಮ ಸಂಸ್ಥೆಗಳನ್ನು ಕುರುಡಾಗಿ ಬೆಂಬಲಿಸುತ್ತಿರುವ ಪ್ರಭಾವಿ ಕಾರ್ಪೊರೇಟ್ ಸಂಸ್ಥೆಗಳಿಗೆ ಈ ಬಗ್ಗೆ ಅರಿವು ಮೂಡಿಸಿ ಸಾಮಾಜಿಕ ಜವಾಬ್ದಾರಿಯಿಂದ ವರ್ತಿಸುವ ಹಾಗೂ ಮಾನವೀಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವವರಿಗೆ ಮಾತ್ರ ಜಾಹೀರಾತು ನೀಡುವಂತೆ ಮನವೊಲಿಸಲು ಸಾಧ್ಯವಿಲ್ಲವೇ?

ಹೌದು. ನಾವು ನ್ಯೂಸ್ ಲಾಂಡ್ರಿಯಿಂದ ಇದೇ ಉದ್ದೇಶದಿಂದ ಒಂದು ಪ್ರತ್ಯೇಕ ಕಾರ್ಯಕ್ರಮವನ್ನೇ ಮಾಡುತ್ತಿದ್ದೇವೆ. ಬ್ಲಡ್ ಲಸ್ಟ್ ಟಿವಿ (ರಕ್ತದಾಹಿ ಟಿವಿ) ಹೆಸರಿನ ಈ ಕಾರ್ಯಕ್ರಮದಲ್ಲಿ ಪೂರ್ವಾಗ್ರಹ ಪೀಡಿತ, ದ್ವೇಷ ಹರಡುವ ವರದಿಗಾರಿಕೆ, ವಿಶ್ಲೇಷಣೆಯ ಟಿವಿ ಕಾರ್ಯಕ್ರಮಗಳನ್ನು ಗುರುತಿಸಿ ಅವುಗಳಿಗೆ ಜಾಹೀರಾತು ನೀಡುತ್ತಿರುವ ಕಂಪೆನಿಗಳನ್ನು ಪ್ರಶ್ನಿಸುತ್ತೇವೆ. ಈ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವುದು ಬಹಳ ಅಗತ್ಯ. ಹಾಗಾದಾಗ ಸುದ್ದಿ ಮಾಧ್ಯಮಗಳು ಜವಾಬ್ದಾರಿಯುತವಾಗಿ ಹಾಗೂ ಮಾನವೀಯ ಮೌಲ್ಯಗಳಿಗೆ ಬದ್ಧರಾಗಿರುವಂತೆ ಮಾಡುವಲ್ಲಿ ನಿಮ್ಮ ಪಾತ್ರವೂ ಇದೆ ಎಂದು ನಾವು ಜಾಹೀರಾತು ನೀಡುವ ಬ್ರ್ಯಾಂಡ್‌ಗಳಿಗೆ ಮನವರಿಕೆ ಮಾಡಿಸಬಹುದು.

►  ಜಾಹೀರಾತು ಮುಕ್ತ ಮಾಧ್ಯಮ ಸಂಸ್ಥೆ ನ್ಯೂಸ್ ಲಾಂಡ್ರಿಯಲ್ಲಿ ನಿಮ್ಮ ಅನುಭವವೇನು? ಇಂತಹ ಪ್ರಯೋಗ ಸುದೀರ್ಘ ಸಮಯ ಬಾಳಿಕೆ ಬರಲಿದೆಯೇ? ದೊಡ್ಡ ಸಂಖ್ಯೆಯ ಓದುಗರು ನಿಮ್ಮ ವೆಬ್ ಸೈಟ್‌ನ ಸುದ್ದಿ, ಲೇಖನ, ವೀಡಿಯೊಗಳನ್ನು ಓದುತ್ತಾರೆ, ನೋಡುತ್ತಾರೆ. ಅದರ ಬದಲಿಗೆ ಒಂದು ರೂಪಾಯಿಯನ್ನೂ ಕೊಡುವುದಿಲ್ಲ. ಅಂತಹ ಓದುಗರನ್ನು ಹಣ ಪಾವತಿಸಿ ಬೆಂಬಲಿಸಿ ಎಂದು ಮನವೊಲಿಸಲು ಸಾಧ್ಯವೇ?

ನ್ಯೂಸ್ ಲಾಂಡ್ರಿಯಲ್ಲಿ ನಮಗೆ ಜನರಿಂದ ಬಹಳ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ನಮ್ಮ ಚಂದಾದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದು ಹೀಗೇ ಹೆಚ್ಚಾಗುತ್ತಾ ಹೋಗುವ ನಿರೀಕ್ಷೆ ನಮಗಿದೆ. ನಮ್ಮ ಚಂದಾದಾರರು ಸದಾ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ನಮಗೆ ಆರ್ಥಿಕ ಬೆಂಬಲ ನೀಡುವುದರ ಜೊತೆಗೆ ನಿರಂತರ ಪ್ರೋತ್ಸಾಹ ನೀಡುತ್ತಾರೆ. ನಮ್ಮ ಚಂದಾ ಯೋಜನೆಯ ಬಗ್ಗೆ ನಮಗೆ ಬಹಳ ಭರವಸೆ ಹಾಗೂ ನಿರೀಕ್ಷೆ ಇದೆ. ಇನ್ನು ಮಾಧ್ಯಮ ಸಂಸ್ಥೆಗಳಿಗೆ ಉಳಿದಿರುವುದು ಇದೊಂದೇ ದಾರಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)